ಯಾರೋ ಸುಮ್ಮನೆ ಹೆಸರಿಟ್ಟುಬಿಟ್ಟರೆ ಅದಕ್ಕೆ ಜಾಗತಿಕ ಮನ್ನಣೆ ಸಿಗುವುದು ಹೇಗೆ?
ಯಾರೋ ಸುಮ್ಮನೆ ಹೆಸರಿಟ್ಟುಬಿಟ್ಟರೆ ಅದಕ್ಕೆ ಜಾಗತಿಕ ಮನ್ನಣೆ ಸಿಗುವುದು ಹೇಗೆ? 
ಕೊರೊನಾಲಜಿ

ರೋಗಗಳಿಗೆ ಹೆಸರಿಡುವವರು ಯಾರು?

ಟಿ. ಜಿ. ಶ್ರೀನಿಧಿ

ಪ್ರತಿ ರೋಗಕ್ಕೂ ಒಂದೊಂದು ಹೆಸರಿರುವುದು ನಮಗೆ ಗೊತ್ತು. ಕೆಲವು ರೋಗಗಳಿಗೆ ಸ್ಥಳೀಯ ಹೆಸರುಗಳು ಇರಬಹುದಾದರೂ, ಬಹುತೇಕ ರೋಗಗಳನ್ನು ವಿಶ್ವದೆಲ್ಲೆಡೆ ಒಂದೇ ಹೆಸರಿನಿಂದ ಗುರುತಿಸಲಾಗುತ್ತದೆ. ಏಡ್ಸ್, ಸಾರ್ಸ್, ಮರ್ಸ್, ಎಬೋಲ, ಚಿಕುನ್‌ಗುನ್ಯಾ, ಡೆಂಗಿ ಮುಂತಾದವುಗಳಿಂದ ಈಗಿನ ಕೋವಿಡ್-೧೯ವರೆಗೆ ಇಂತಹ ಹಲವು ಹೆಸರುಗಳನ್ನು ನಾವು ಕೇಳಿದ್ದೇವೆ.

ರೋಗ ಹರಡುವ ವಿಧಾನ, ಅದರ ತೀವ್ರತೆ, ಲಭ್ಯವಿರುವ ಚಿಕಿತ್ಸೆ ಹಾಗೂ ರೋಗವನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ವಿಚಾರವಿನಿಮಯ ಸಾಧ್ಯವಾಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಅದಕ್ಕೊಂದು ಹೆಸರಿಡಲಾಗುತ್ತದೆ. ಯಾರೋ ಸುಮ್ಮನೆ ಹೆಸರಿಟ್ಟುಬಿಟ್ಟರೆ ಅದಕ್ಕೆ ಜಾಗತಿಕ ಮನ್ನಣೆ ಸಿಗುವುದು ಹೇಗೆ? ಅದಕ್ಕಾಗಿಯೇ ಈ ಜವಾಬ್ದಾರಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗಿದೆ.

ಮನುಷ್ಯರನ್ನು ಕಾಡುವ ಸಾಂಕ್ರಾಮಿಕ ರೋಗಗಳಿಗೆ ಹೆಸರಿಡಲು ವಿಶ್ವ ಆರೋಗ್ಯ ಸಂಸ್ಥೆ (WHO), ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (OIE) ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳ (FAO) ಸಹಯೋಗದಲ್ಲಿ ಮಾರ್ಗಸೂಚಿಯನ್ನು ರೂಪಿಸಿದೆ. ಅದಕ್ಕೆ ಅನುಗುಣವಾಗಿ ಯಾವುದೇ ಹೊಸ ರೋಗಕ್ಕೆ ನೀಡಲಾಗುವ ಹೆಸರನ್ನು ಅಂತಾರಾಷ್ಟ್ರೀಯ ರೋಗಗಳ ವರ್ಗೀಕರಣ (ಇಂಟರ್‌ನ್ಯಾಶನಲ್ ಕ್ಲಾಸಿಫಿಕೇಶನ್ ಆಫ್ ಡಿಸೀಸಸ್, ICD) ಎಂಬ ಸಂಗ್ರಹಕ್ಕೆ ಸೇರಿಸಲಾಗುತ್ತದೆ.

ರೋಗಗಳನ್ನು ಪ್ರತ್ಯೇಕವಾಗಿ ಗುರುತಿಸಿದಂತೆ ರೋಗಕಾರಕಗಳನ್ನೂ ಪ್ರತ್ಯೇಕವಾಗಿ ಗುರುತಿಸಬೇಕಾಗುತ್ತದಲ್ಲ, ಅದಕ್ಕೂ ಜಾಗತಿಕ ಮಟ್ಟದ ವ್ಯವಸ್ಥೆ ಇದೆ. ಈ ಪೈಕಿ ವೈರಸ್‌ಗಳಿಗೆ ಹೆಸರಿಡುವ ಜವಾಬ್ದಾರಿ 'ವೈರಸ್‌ಗಳ ಜೀವಿವರ್ಗೀಕರಣ ವಿಜ್ಞಾನ ಕುರಿತ ಅಂತಾರಾಷ್ಟ್ರೀಯ ಸಮಿತಿ'ಯದು (ಇಂಟರ್‌ನ್ಯಾಶನಲ್ ಕಮಿಟಿ ಆನ್ ಟ್ಯಾಕ್ಸಾನಮಿ ಆಫ್ ವೈರಸಸ್, ICTV). ಕೋವಿಡ್-೧೯ ರೋಗವನ್ನು ಉಂಟುಮಾಡುವ ವೈರಸ್‌ಗೆ ಅದು ನೀಡಿರುವ ಅಧಿಕೃತ ಹೆಸರು 'severe acute respiratory syndrome coronavirus 2 (SARS-CoV-2)'.

ಸೌಜನ್ಯ: ವಿಜಯ ಕರ್ನಾಟಕ