ಕೋವಿಡ್-೧೯ರ ಉದಾಹರಣೆ ತೆಗೆದುಕೊಂಡರೆ, ರೋಗಿಯೊಬ್ಬ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಸಣ್ಣ ಹನಿಗಳಲ್ಲಿ ಕೊರೊನಾವೈರಸ್ ಇರುವುದು ಸಾಧ್ಯ.
ಕೋವಿಡ್-೧೯ರ ಉದಾಹರಣೆ ತೆಗೆದುಕೊಂಡರೆ, ರೋಗಿಯೊಬ್ಬ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಸಣ್ಣ ಹನಿಗಳಲ್ಲಿ ಕೊರೊನಾವೈರಸ್ ಇರುವುದು ಸಾಧ್ಯ.  
ಕೊರೊನಾಲಜಿ

ರೆಸ್ಪಿರೇಟರಿ ಹೈಜೀನ್ ಅಂದರೇನು?

ಟಿ. ಜಿ. ಶ್ರೀನಿಧಿ

ಕೋವಿಡ್-೧೯ ಸೋಂಕು ತಗುಲದಿರಲು ಅನುಸರಿಸಬೇಕಾದ ಕ್ರಮಗಳ ಪ್ರಸ್ತಾಪ ಬಂದಾಗ ಕೇಳಸಿಗುವ ಸಲಹೆಗಳಲ್ಲಿ 'ರೆಸ್ಪಿರೇಟರಿ ಹೈಜೀನ್', ಅಂದರೆ ಉಸಿರಾಟ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದೂ ಒಂದು. ಇದಕ್ಕೆ ಕೆಮ್ಮುವ ಶಿಷ್ಟಾಚಾರವೆಂಬ (ಕಾಫ್ ಎಟಿಕೆಟ್) ಇನ್ನೊಂದು ಹೆಸರೂ ಇದೆ.

ಉಸಿರಾಟದ ಕಾಯಿಲೆಗಳು ಹರಡುವುದನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಸೋಂಕು ತಡೆ ಕ್ರಮಗಳನ್ನು ಇದು ಪ್ರತಿನಿಧಿಸುತ್ತದೆ. ಉಸಿರಾಟದ ಕಾಯಿಲೆಗಳು ಹರಡುವುದು ಹೇಗೆಂಬ ಅರಿವನ್ನು ಜನರಲ್ಲಿ ಮೂಡಿಸುವುದು, ಅವು ಹರಡದಂತೆ ತಡೆಯಲು ಅನುಸರಿಸಬೇಕಾದ ಕ್ರಮಗಳನ್ನು ಸೂಚಿಸುವುದು - ಇವೆಲ್ಲ ರೆಸ್ಪಿರೇಟರಿ ಹೈಜೀನ್ ವ್ಯಾಪ್ತಿಯಲ್ಲೇ ಬರುತ್ತವೆ.

ಕೋವಿಡ್-೧೯ರ ಉದಾಹರಣೆ ತೆಗೆದುಕೊಂಡರೆ, ರೋಗಿಯೊಬ್ಬ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಸಣ್ಣ ಹನಿಗಳಲ್ಲಿ ಕೊರೊನಾವೈರಸ್ ಇರುವುದು ಸಾಧ್ಯ. ಅದು ಆರೋಗ್ಯವಂತರ ಸಂಪರ್ಕಕ್ಕೆ ಬಂದರೆ ಅವರಿಗೂ ಕೋವಿಡ್-೧೯ ಸೋಂಕು ತಗಲುವುದು ಸಾಧ್ಯ. ಉಸಿರಾಟ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ನಾವು ಈ ಸಾಧ್ಯತೆಯಿಂದ ಪಾರಾಗಬಹುದು.

ಕೆಮ್ಮುವಾಗ ಮಡಚಿದ ಮೊಣಕೈ ಭಾಗದಿಂದ ಅಥವಾ ಅಥವಾ ಟಿಶ್ಯೂವಿನಿಂದ ಮೂಗು-ಬಾಯಿ ಮುಚ್ಚಿಕೊಳ್ಳುವುದು, ಹಾಗೆ ಬಳಸಿದ ಟಿಶ್ಯೂವನ್ನು ತಕ್ಷಣ ಸುರಕ್ಷಿತವಾಗಿ ವಿಲೇವಾರಿ ಮಾಡುವುದು, ಕೈತೊಳೆಯುವ ಮುನ್ನ ನಮ್ಮ ಮೂಗು-ಬಾಯಿಗಳನ್ನು ಮುಟ್ಟದಿರುವುದು, ಹೊರಗೆ ಹೋದಾಗ ಮಾಸ್ಕ್ ಧರಿಸುವುದು, ಬೇರೆಯವರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು - ಇವೆಲ್ಲವೂ ಉಸಿರಾಟ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ, ಹಾಗೂ ಆ ಮೂಲಕ ಕೋವಿಡ್-೧೯ರಿಂದ ಪಾರಾಗುವ ಕ್ರಮಗಳೇ ಆಗಿವೆ.

ಈ ಕ್ರಮಗಳನ್ನು ಅನುಸರಿಸುವ ಮೂಲಕ ಉಸಿರಾಟ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ನೀರು-ಸೋಪು ಇಲ್ಲವೇ ಸ್ಯಾನಿಟೈಸರ್ ಬಳಸಿ ನಮ್ಮ ಕೈಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುವ ಮೂಲಕ ಕೈಗಳ ನೈರ್ಮಲ್ಯವನ್ನೂ (ಹ್ಯಾಂಡ್ ಹೈಜೀನ್) ಪಾಲಿಸುವುದು ಅನಿವಾರ್ಯ.

ಸೌಜನ್ಯ: ವಿಜಯ ಕರ್ನಾಟಕ