ನಮ್ಮ ಮೊಬೈಲ್ ಫೋನಿನ ಅಂತರಜಾಲ ಸಂಪರ್ಕವನ್ನು ಇತರರೊಡನೆ ಹಂಚಿಕೊಳ್ಳಲು ಅದನ್ನು 'ಹಾಟ್‌ಸ್ಪಾಟ್' ಮಾಡಿಕೊಳ್ಳುವುದು ನಮಗೆ ಗೊತ್ತು. ಆದರೆ ಈ ಪದಕ್ಕೆ ಇನ್ನೂ ಒಂದು ಅರ್ಥ ಇದೆ!
ನಮ್ಮ ಮೊಬೈಲ್ ಫೋನಿನ ಅಂತರಜಾಲ ಸಂಪರ್ಕವನ್ನು ಇತರರೊಡನೆ ಹಂಚಿಕೊಳ್ಳಲು ಅದನ್ನು 'ಹಾಟ್‌ಸ್ಪಾಟ್' ಮಾಡಿಕೊಳ್ಳುವುದು ನಮಗೆ ಗೊತ್ತು. ಆದರೆ ಈ ಪದಕ್ಕೆ ಇನ್ನೂ ಒಂದು ಅರ್ಥ ಇದೆ!  
ಕೊರೊನಾಲಜಿ

ಹಾಟ್‌ಸ್ಪಾಟ್ ಅಂದರೇನು?

ಟಿ. ಜಿ. ಶ್ರೀನಿಧಿ

ನಮ್ಮ ಮೊಬೈಲ್ ಫೋನಿನ ಅಂತರಜಾಲ ಸಂಪರ್ಕವನ್ನು ಇತರರೊಡನೆ ಹಂಚಿಕೊಳ್ಳಲು ಅದನ್ನು 'ಹಾಟ್‌ಸ್ಪಾಟ್' ಮಾಡಿಕೊಳ್ಳುವುದು ನಮಗೆ ಗೊತ್ತು. ಆದರೆ ಈ ಪದಕ್ಕೆ ಇನ್ನೂ ಒಂದು ಅರ್ಥ ಇದೆ: ಮಹತ್ವದ ಯಾವುದಾದರೂ ಘಟನೆ, ಅಪಾಯ ಅಥವಾ ಹಿಂಸಾಚಾರ ನಡೆದಿರುವ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಕರೆಯುತ್ತಾರೆ.

ಕೋವಿಡ್-೧೯ ಜಾಗತಿಕ ಸೋಂಕಿನ ಸಂದರ್ಭದಲ್ಲಿ, ಆ ರೋಗ ಕಾಣಿಸಿಕೊಂಡಿರುವ ಅಥವಾ ಹರಡುತ್ತಿರುವ ಪ್ರದೇಶಗಳನ್ನು 'ಹಾಟ್‌ಸ್ಪಾಟ್' ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ.

ಹೀಗೆ ರೋಗ ಕಾಣಿಸಿಕೊಂಡಿರುವ ಪ್ರದೇಶದ ಆಸುಪಾಸಿನಲ್ಲಿ ಅದು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದಕ್ಕಾಗಿ, ಕೋವಿಡ್-೧೯ ರೋಗಿಗಳು ಕಂಡುಬಂದಿರುವ ಸ್ಥಳದ ಸುತ್ತಲಿನ ನಿರ್ದಿಷ್ಟ ಪ್ರದೇಶವನ್ನು 'ಕಂಟೈನ್‌ಮೆಂಟ್ ಜ಼ೋನ್' (ನಿಯಂತ್ರಿತ ವಲಯ) ಎಂದು ಪರಿಗಣಿಸಲಾಗುತ್ತದೆ. ರೋಗಪೀಡಿತರು ಎಲ್ಲಿ ಪತ್ತೆಯಾಗಿದ್ದಾರೆ (ಅಪಾರ್ಟ್‌ಮೆಂಟ್, ಪ್ರತ್ಯೇಕ ಮನೆ, ಕೊಳೆಗೇರಿ ಇತ್ಯಾದಿ) ಎನ್ನುವುದರ ಆಧಾರದ ಮೇಲೆ ಈ ವಲಯದ ವಿಸ್ತೀರ್ಣವನ್ನು ನಿಗದಿಪಡಿಸಲಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಬರಲು, ವಾಹನಗಳು ಓಡಾಡಲು ಅವಕಾಶ ಇರುವುದಿಲ್ಲ. 'ಸೀಲ್ ಡೌನ್' ಎಂದು ಕರೆಯಲಾಗುತ್ತಿರುವ ಪರಿಸ್ಥಿತಿ ಇಂತಹ ವಲಯಗಳಿಗೆ ಅನ್ವಯವಾಗುತ್ತದೆ.

ನಿಯಂತ್ರಿತ ವಲಯದ ಸುತ್ತ ಇರುವ ಪ್ರದೇಶದಲ್ಲೂ ರೋಗ ಹರಡದಂತೆ ನಿಗಾ ವಹಿಸುವುದು ಅನಿವಾರ್ಯ. ಇದಕ್ಕಾಗಿ ಅದರ ಸುತ್ತಲಿನ ನಿರ್ದಿಷ್ಟ ವಿಸ್ತೀರ್ಣದ ಪ್ರದೇಶವನ್ನು 'ಬಫರ್ ಜ಼ೋನ್' ಎಂದು ಗುರುತಿಸಲಾಗುತ್ತದೆ. ಕೋವಿಡ್-೧೯ ಸೋಂಕು ಹರಡದಂತೆ ತಡೆಯಲು ಈ ಪ್ರದೇಶದಲ್ಲಿ ಕಣ್ಗಾವಲು ಮತ್ತು ಸಾಮಾಜಿಕ ಅಂತರದ ಕ್ರಮಗಳು ಸದಾ ಜಾರಿಯಲ್ಲಿರಬೇಕು. ಕಂಟೈನ್‌ಮೆಂಟ್ ಜ಼ೋನ್‌ಗೆ ಹೊಂದಿಕೊಂಡಂತಿರುವ ಬಫರ್ ಜ಼ೋನ್‌ನ ಭಾಗದಲ್ಲಿ (ಒಂದು ಕಿಮೀ ವ್ಯಾಪ್ತಿ) ಪ್ರತಿ ಮನೆಯಲ್ಲೂ ತಪಾಸಣೆ ನಡೆಸಬೇಕಾಗುತ್ತದೆ ಎಂದು ಸರಕಾರ ಹೇಳುತ್ತದೆ.

ಸೌಜನ್ಯ: ವಿಜಯ ಕರ್ನಾಟಕ