ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವ ಪ್ರಕ್ರಿಯೆಗೆ ಇನ್‌ಕ್ಯುಬೇಶನ್ ಎಂಬ ಹೆಸರಿದೆ.
ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವ ಪ್ರಕ್ರಿಯೆಗೆ ಇನ್‌ಕ್ಯುಬೇಶನ್ ಎಂಬ ಹೆಸರಿದೆ. 
ಕೊರೊನಾಲಜಿ

ಇನ್‌ಕ್ಯುಬೇಶನ್ ಪೀರಿಯಡ್

ಟಿ. ಜಿ. ಶ್ರೀನಿಧಿ

ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವ ಪ್ರಕ್ರಿಯೆಗೆ ಇನ್‌ಕ್ಯುಬೇಶನ್ ಎಂಬ ಹೆಸರಿದೆ. ಈ ಪ್ರಕ್ರಿಯೆಗೆ ಬೇಕಾಗುವ ಅವಧಿಯೇ ಇನ್‌ಕ್ಯುಬೇಶನ್ ಪೀರಿಯಡ್. ಹೊಸ ಅಭಿಪ್ರಾಯ-ಆಲೋಚನೆಗಳ ಮನನಕಾಲವನ್ನೂ ಇದೇ ಹೆಸರಿನಿಂದ ಗುರುತಿಸುತ್ತಾರೆ. ಪ್ರಾರಂಭಿಕ ಹಂತದಲ್ಲಿ ಅಗತ್ಯವಿರುವ ನೆರವು ನೀಡುವ ಮೂಲಕ ನವೋದ್ಯಮಗಳನ್ನು ಬೆಳೆಸುವುದಕ್ಕೂ ಇನ್‌ಕ್ಯುಬೇಶನ್ ಎಂದೇ ಹೆಸರು.

ಸಾಂಕ್ರಾಮಿಕ ರೋಗಗಳ ವಿಷಯದಲ್ಲೂ ಈ ಹೆಸರಿನ ಬಳಕೆ ಇದೆ. ನಿರ್ದಿಷ್ಟ ರೋಗದ ಸೋಂಕು ವ್ಯಕ್ತಿಯೊಬ್ಬರಿಗೆ ತಾಗಿದಂದಿನಿಂದ ಅವರಲ್ಲಿ ರೋಗಲಕ್ಷಣಗಳು ಪ್ರಕಟವಾಗುವವರೆಗಿನ ಕಾಲಾವಧಿಯನ್ನು ಇನ್‌ಕ್ಯುಬೇಶನ್ ಪೀರಿಯಡ್ (ಪರಿಪಾಕ ಅವಧಿ) ಎಂದು ಕರೆಯುತ್ತಾರೆ. ಯಾವುದೇ ರೋಗಕಾರಕವು ರೋಗಿಯ ದೇಹದಲ್ಲಿ ರೋಗಲಕ್ಷಣಗಳನ್ನು ಉಂಟುಮಾಡುವ ಮಟ್ಟಕ್ಕೆ ಬೆಳೆಯಲು ಬೇಕಾದ ಅವಧಿ ಇದು.

ಬೇರೆಬೇರೆ ರೋಗಗಳ ಇನ್‌ಕ್ಯುಬೇಶನ್ ಪೀರಿಯಡ್ ಬೇರೆಬೇರೆ ಇರಬಹುದು. ಒಂದೇ ರೋಗದ ಇನ್‌ಕ್ಯುಬೇಶನ್ ಪೀರಿಯಡ್ ಬೇರೆಬೇರೆ ವ್ಯಕ್ತಿಗಳಲ್ಲಿ ಬೇರೆಬೇರೆಯಾಗಿರುವುದೂ ಸಾಧ್ಯ. ಈ ಕಾರಣದಿಂದಲೇ ರೋಗವೊಂದರ ಇನ್‌ಕ್ಯುಬೇಶನ್ ಪೀರಿಯಡ್ ಅನ್ನು ನಿರ್ದಿಷ್ಟ ಸಂಖ್ಯೆಯ ಬದಲು ಇಷ್ಟರಿಂದ ಇಷ್ಟು ದಿನಗಳೆಂಬ ಶ್ರೇಣಿಯ (ರೇಂಜ್) ರೂಪದಲ್ಲಿ ನೀಡಲಾಗುತ್ತದೆ. ಈ ಅವಧಿಯಲ್ಲಿ ರೋಗಿಯು ಸೋಂಕನ್ನು ಇತರರಿಗೆ ಹರಡಿಸುತ್ತಾನೋ ಇಲ್ಲವೋ ಎನ್ನುವುದು ಕೂಡ ಆಯಾ ರೋಗದ ಸ್ವರೂಪವನ್ನು ಅವಲಂಬಿಸಿರುತ್ತದೆ.

ಕೋವಿಡ್-೧೯ ಉಂಟುಮಾಡುವ ಕೊರೊನಾವೈರಸ್ಸಿನ ಸಂಪರ್ಕಕ್ಕೆ ಬಂದ ನಂತರ ಆ ವ್ಯಕ್ತಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಒಂದರಿಂದ ಹದಿನಾಲ್ಕು ದಿನ ಬೇಕಾಗಬಹುದು (ಸರಾಸರಿ ೫-೬ ದಿನ) ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೋವಿಡ್-೧೯ ಸೋಂಕು ತಗುಲಿದ್ದರೂ ಕೆಮ್ಮು-ಸೀನು ಮುಂತಾದ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲದ ರೋಗಿಗಳಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ ಎನ್ನುವುದು ತಜ್ಞರ ಅಭಿಪ್ರಾಯ.

ಸೌಜನ್ಯ: ವಿಜಯ ಕರ್ನಾಟಕ