ಕೋವಿಡ್-೧೯ ಬಾಧಿತರು ಕೆಮ್ಮಿದಾಗ, ಸೀನಿದಾಗ ಅವರ ಮೂಗು-ಬಾಯಿಯಿಂದ ಹೊರಬಂದ ಸಣ್ಣ ಹನಿಗಳು ಅಕ್ಕಪಕ್ಕದ ವಸ್ತುಗಳ ಮೇಲೆ ಬೀಳುವುದು ಸಾಧ್ಯ.
ಕೋವಿಡ್-೧೯ ಬಾಧಿತರು ಕೆಮ್ಮಿದಾಗ, ಸೀನಿದಾಗ ಅವರ ಮೂಗು-ಬಾಯಿಯಿಂದ ಹೊರಬಂದ ಸಣ್ಣ ಹನಿಗಳು ಅಕ್ಕಪಕ್ಕದ ವಸ್ತುಗಳ ಮೇಲೆ ಬೀಳುವುದು ಸಾಧ್ಯ. 
ಕೊರೊನಾಲಜಿ

ಕೈತೊಳೆಯುವುದು ಏಕೆ? ಹೇಗೆ?

ಟಿ. ಜಿ. ಶ್ರೀನಿಧಿ

ಕೋವಿಡ್-೧೯ ಬಾಧಿತರು ಕೆಮ್ಮಿದಾಗ, ಸೀನಿದಾಗ ಅವರ ಮೂಗು-ಬಾಯಿಯಿಂದ ಹೊರಬಂದ ಸಣ್ಣ ಹನಿಗಳು ಅಕ್ಕಪಕ್ಕದ ವಸ್ತುಗಳ ಮೇಲೆ ಬೀಳುವುದು ಸಾಧ್ಯ. ನಾವು ಅಂತಹ ವಸ್ತುಗಳನ್ನು ಮುಟ್ಟಿದರೆ ಅಲ್ಲಿರಬಹುದಾದ ಕೊರೊನಾವೈರಸ್ ನಮ್ಮ ಕೈಗೆ ಅಂಟಿಕೊಳ್ಳಬಹುದು, ಮತ್ತು ನಮ್ಮ ಕಣ್ಣುಗಳನ್ನೋ ಮೂಗು-ಬಾಯಿಯನ್ನೋ ಮುಟ್ಟಿದಾಗ ನಮಗೂ ರೋಗವನ್ನು ಅಂಟಿಸಬಹುದು. ಇದನ್ನು ತಡೆಯುವ ಅತ್ಯಂತ ಅಗ್ಗದ, ಸುಲಭದ ಮತ್ತು ಪ್ರಮುಖ ಮಾರ್ಗವೆಂದರೆ ಸೋಪು ಹಾಕಿ ಕೈತೊಳೆಯುವುದು!

ಕೈಗಳನ್ನು ನೀರಿನಿಂದ ಒದ್ದೆಮಾಡಿಕೊಂಡು, ಸೋಪು ಹಾಕಿ ಪ್ರತಿಯೊಂದು ಭಾಗವನ್ನೂ ಚೆನ್ನಾಗಿ ಉಜ್ಜಿ, ಮತ್ತೆ ನೀರಿನಿಂದ ತೊಳೆಯುವುದು, ತಕ್ಷಣ ಒರೆಸಿಕೊಳ್ಳುವುದು ಕೈತೊಳೆದುಕೊಳ್ಳುವ ಸರಿಯಾದ ವಿಧಾನ (ನಡುವೆ ನೀರು ಬೇಕಿಲ್ಲದಾಗ ನಲ್ಲಿಯನ್ನು ನಿಲ್ಲಿಸುವುದೂ ಅಗತ್ಯ). ಈ ಪ್ರಕ್ರಿಯೆ ಕನಿಷ್ಠ ಸುಮಾರು ಇಪ್ಪತ್ತು ಸೆಕೆಂಡುಗಳವರೆಗೆ, ಅಂದರೆ, ಹ್ಯಾಪಿ ಬರ್ತ್‌ಡೇ ಹಾಡನ್ನು ಎರಡು ಸಲ ಹೇಳಲು ಬೇಕಿರುವಷ್ಟು ಸಮಯ, ನಡೆಯಬೇಕಂತೆ!

ಕಸ ವಿಲೇವಾರಿ ಮಾಡಿದಾಗ, ಶೌಚಾಲಯ ಬಳಸಿದಾಗ, ಪ್ರಾಣಿಗಳನ್ನು ಮುಟ್ಟಿದಾಗಲೆಲ್ಲ ಕೈತೊಳೆಯುವುದು ಸಾಮಾನ್ಯ ಅಭ್ಯಾಸ. ಇದರ ಜೊತೆಗೆ ಕೆಮ್ಮಿದಾಗ, ಸೀನಿದಾಗ ಅಥವಾ ಮೂಗು ಒರೆಸಿಕೊಂಡಾಗ, ಹೊರಗಿನವರ ಅಥವಾ ಹೊರಗಿನ ವಸ್ತುಗಳ ಸಂಪರ್ಕಕ್ಕೆ ಬಂದಾಗಲೂ ತಕ್ಷಣ ಸೋಪು ಹಾಕಿ ಕೈತೊಳೆಯುವುದು ಒಳ್ಳೆಯದು.

ಕನಿಷ್ಠ ಶೇ. ೬೦ರಷ್ಟು ಆಲ್ಕೋಹಾಲ್ ಅಂಶವಿರುವ ಹ್ಯಾಂಡ್ ಸ್ಯಾನಿಟೈಸರ್ ಬಳಸಿಯೂ ಕೈಗಳನ್ನು ಸ್ವಚ್ಛಮಾಡಿಕೊಳ್ಳಬಹುದು, ನಿಜ. ಆದರೆ ಅದರ ಪ್ರಭಾವ ನೀರು-ಸೋಪಿನಿಂದ ಕೈತೊಳೆಯುವಷ್ಟು ಪರಿಣಾಮಕಾರಿಯಲ್ಲ. ನೀರು-ಸೋಪು ಬಳಸಿ ಕೈತೊಳೆಯಲು ಸಾಧ್ಯವಿಲ್ಲದಾಗ ಮಾತ್ರ ಈ ವಿಧಾನ ಬಳಸುವುದು ಅಪೇಕ್ಷಣೀಯ. ನೀರು ಮತ್ತು ಸೋಪಿನಿಂದ ಕೈ ತೊಳೆಯುವುದೇ ಹೆಚ್ಚಿನ ಸಂದರ್ಭಗಳಲ್ಲಿ ರೋಗಾಣುಗಳನ್ನು ತೊಡೆದುಹಾಕುವ ಉತ್ತಮ ಮಾರ್ಗ ಎಂದು ತಜ್ಞರು ಹೇಳುತ್ತಾರೆ.

ಸೌಜನ್ಯ: ವಿಜಯ ಕರ್ನಾಟಕ