ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸವಾಲಿನ ಕೆಲಸ!
ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸವಾಲಿನ ಕೆಲಸ!

ಸೂಪರ್ ಸ್ಪ್ರೆಡರ್ ಅಂದರೆ ಯಾರು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ
Published on

ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸವಾಲಿನ ಕೆಲಸ. ಸೋಂಕುಪೀಡಿತ ವ್ಯಕ್ತಿಯಿಂದ ಆ ಸೋಂಕು ಬೇರೆಯವರಿಗೆ ಹರಡುವ ಸಾಧ್ಯತೆ ಜಾಸ್ತಿ ಇದ್ದರಂತೂ ಪರಿಸ್ಥಿತಿಯನ್ನು ನಿಭಾಯಿಸುವುದು ಇನ್ನಷ್ಟು ಕಷ್ಟವಾಗುತ್ತದೆ.

ಒಂದು ಗುಂಪಿನಲ್ಲಿರುವ ಎಲ್ಲರೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇದ್ದಾಗ, ಆ ಸೋಂಕು ಒಬ್ಬ ರೋಗಿಯಿಂದ ಬೇರೆ ಎಷ್ಟು ಜನಕ್ಕೆ ನೇರವಾಗಿ ಹರಡಬಲ್ಲದು ಎನ್ನುವುದರ ಅಂದಾಜನ್ನು ಅದರ 'ಬೇಸಿಕ್ ರೀಪ್ರೊಡಕ್ಷನ್ ನಂಬರ್' (R0) ಸೂಚಿಸುತ್ತದೆ. ಈ ಸಂಖ್ಯೆ ಜಾಸ್ತಿಯಿದ್ದಷ್ಟೂ ರೋಗ ಹರಡುವ ಸಾಧ್ಯತೆ ಹೆಚ್ಚು.

ಕೆಲವೊಮ್ಮೆ, ಇಂತಹ ಎಲ್ಲ ಲೆಕ್ಕಾಚಾರಗಳನ್ನೂ ಮೀರಿ, ಒಬ್ಬನೇ ರೋಗಿ ದೊಡ್ಡ ಸಂಖ್ಯೆಯ ವ್ಯಕ್ತಿಗಳಿಗೆ ಸೋಂಕು ತಗುಲಿಸಿಬಿಡಬಹುದು. ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ರೋಗದ ಸೋಂಕನ್ನು ಇತರರಿಗೆ ತಗುಲಿಸುವ ಇಂತಹ ರೋಗಿಗಳನ್ನು 'ಸೂಪರ್ ಸ್ಪ್ರೆಡರ್'ಗಳೆಂದು ಗುರುತಿಸಲಾಗುತ್ತದೆ. ಇವರನ್ನು ಕನ್ನಡದಲ್ಲಿ 'ಮಹಾ ಸೋಂಕಿಗ'ರೆಂದು ಕರೆಯಬಹುದು.

ಯಾವುದೋ ರೋಗ ಒಬ್ಬ ರೋಗಿಯಿಂದ ಸರಾಸರಿ ೨-೩ ವ್ಯಕ್ತಿಗಳಿಗೆ ಹರಡುತ್ತಿದೆ ಎಂದುಕೊಂಡರೆ, ಸೂಪರ್ ಸ್ಪ್ರೆಡರ್‌ಗಳು ಅದನ್ನು ಇನ್ನೂ ಹೆಚ್ಚಿನ ಜನಕ್ಕೆ ವರ್ಗಾಯಿಸಬಹುದು. ಬಹುಪಾಲು ಸನ್ನಿವೇಶಗಳಲ್ಲಿ, ತಾವು ಹೀಗೆ ಮಾಡುತ್ತಿದ್ದೇವೆ ಎನ್ನುವುದೇ ಅವರಿಗೆ ಗೊತ್ತಿರುವುದಿಲ್ಲ.

ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲದಿರುವುದು, ಹೆಚ್ಚು ಜನರ ಸಂಪರ್ಕಕ್ಕೆ ಬರುವುದು ಸೇರಿದಂತೆ ಸೋಂಕು ಹೆಚ್ಚು ಜನರಿಗೆ ವರ್ಗಾವಣೆಯಾಗಲು ಅನೇಕ ಕಾರಣಗಳಿರಬಹುದು. ಆದರೆ ಯಾವುದೇ ರೋಗಿ ಸೂಪರ್ ಸ್ಪ್ರೆಡರ್ ಆಗಲು ನಿಖರವಾದ ಕಾರಣಗಳೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. "೮೦% ಫಲಿತಾಂಶಗಳು ೨೦% ಕಾರಣಗಳಿಂದ ಬರುತ್ತವೆ" ಎನ್ನುವ ಗಣಿತ ಜಗತ್ತಿನ ೮೦-೨೦ ಸೂತ್ರವನ್ನು (ಪರೇಟೋ ಪ್ರಿನ್ಸಿಪಲ್) ಈ ಸನ್ನಿವೇಶಕ್ಕೂ ಅನ್ವಯಿಸಲು ಪ್ರಯತ್ನಿಸಲಾಗಿದೆಯಾದರೂ ಎಲ್ಲ ಉದಾಹರಣೆಗಳಿಗೂ ಅದು ಅನ್ವಯವಾಗುತ್ತದೆ ಎನ್ನುವಂತಿಲ್ಲ.

ಸೌಜನ್ಯ: ವಿಜಯ ಕರ್ನಾಟಕ

logo
ಇಜ್ಞಾನ Ejnana
www.ejnana.com