ಯಾವುದೇ ರೋಗದಿಂದ ಚೇತರಿಸಿಕೊಂಡ ವ್ಯಕ್ತಿಗಳ ಪ್ಲಾಸ್ಮಾದಲ್ಲಿ ಆ ರೋಗಕಾರಕದ ವಿರುದ್ಧ ಹೋರಾಡುವ ಪ್ರತಿಕಾಯಗಳೂ ಇರುವುದು ಸಾಧ್ಯ.
ಯಾವುದೇ ರೋಗದಿಂದ ಚೇತರಿಸಿಕೊಂಡ ವ್ಯಕ್ತಿಗಳ ಪ್ಲಾಸ್ಮಾದಲ್ಲಿ ಆ ರೋಗಕಾರಕದ ವಿರುದ್ಧ ಹೋರಾಡುವ ಪ್ರತಿಕಾಯಗಳೂ ಇರುವುದು ಸಾಧ್ಯ.

ಪ್ಲಾಸ್ಮಾ ಚಿಕಿತ್ಸೆ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ
Published on

ಯಾವುದೇ ರೋಗಕಾರಕ (ಪ್ಯಾಥೋಜೆನ್) ದಾಳಿಮಾಡಿದಾಗ ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆಯು (ಇಮ್ಯೂನ್ ಸಿಸ್ಟಂ) ಪ್ರತಿಕಾಯವೆಂಬ (ಆಂಟಿಬಾಡಿ) ದೇಹರಕ್ಷಕ ಪದಾರ್ಥವನ್ನು ಉತ್ಪಾದಿಸುತ್ತದೆ. ದಾಳಿಮಾಡಿರುವ ರೋಗಕಾರಕದ ವಿರುದ್ಧ ಹೋರಾಡಿ ನಮ್ಮ ಆರೋಗ್ಯ ಕಾಪಾಡುವುದು ಇದರ ಕೆಲಸ. ಪ್ರತಿಕಾಯಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾದರೆ, ರೋಗಕಾರಕದಿಂದ ಉಂಟಾದ ರೋಗವು ನಿವಾರಣೆಯಾಗುತ್ತದೆ ಹಾಗೂ ರೋಗಪೀಡಿತ ವ್ಯಕ್ತಿ ಚೇತರಿಸಿಕೊಳ್ಳುತ್ತಾನೆ.

ಪ್ಲಾಸ್ಮಾ ಎನ್ನುವುದು ನಮ್ಮ ದೇಹದಲ್ಲಿರುವ ರಕ್ತದ ಜೀವರಸ. ಇದು ರಕ್ತದ ದ್ರವ ಭಾಗವಾಗಿದ್ದು, ರಕ್ತಕೋಶಗಳು (ಬ್ಲಡ್ ಸೆಲ್ಸ್) ಇದರಲ್ಲಿ ತೇಲುತ್ತಿರುತ್ತವೆ. ಯಾವುದೇ ರೋಗದಿಂದ ಚೇತರಿಸಿಕೊಂಡ ವ್ಯಕ್ತಿಗಳ ಪ್ಲಾಸ್ಮಾದಲ್ಲಿ ಆ ರೋಗಕಾರಕದ ವಿರುದ್ಧ ಹೋರಾಡುವ ಪ್ರತಿಕಾಯಗಳೂ ಇರುವುದು ಸಾಧ್ಯ.

ಅನಾರೋಗ್ಯದ ನಂತರ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯನ್ನು 'convalescent' ಎಂದು ಕರೆಯುತ್ತಾರೆ. Convalescent plasma ಎನ್ನುವುದು ಇಂತಹ ವ್ಯಕ್ತಿಗಳ ದೇಹದಿಂದ ತೆಗೆದ ಪ್ಲಾಸ್ಮಾದ ಹೆಸರು. ಕೋವಿಡ್-೧೯ರಿಂದ ಚೇತರಿಸಿಕೊಂಡಿರುವವರ ದೇಹದಿಂದ ಪ್ಲಾಸ್ಮಾ ಸಂಗ್ರಹಿಸಿ ಅದನ್ನು ಇನ್ನಿತರ ಕೋವಿಡ್-೧೯ ರೋಗಿಗಳಿಗೆ ನೀಡುವುದೇ convalescent plasma therapy, ಅಂದರೆ ಪ್ಲಾಸ್ಮಾ ಚಿಕಿತ್ಸೆ. Convalescent ಹಂತದಲ್ಲಿರುವ ವ್ಯಕ್ತಿಯ ಪ್ಲಾಸ್ಮಾದಲ್ಲಿ ಹೇರಳವಾಗಿರುವ ಪ್ರತಿಕಾಯಗಳು ಇತರ ರೋಗಿಗಳ ದೇಹದಲ್ಲಿರುವ ರೋಗಕಾರಕಗಳ ವಿರುದ್ಧವೂ ಹೋರಾಡುತ್ತವೆ ಮತ್ತು ಅವರು ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ ಎನ್ನುವುದು ಇದರ ಉದ್ದೇಶ.

ಈಗಿನ್ನೂ ಪ್ರಾಯೋಗಿಕ ಹಂತದಲ್ಲಿರುವ ಈ ಚಿಕಿತ್ಸಾ ವಿಧಾನವನ್ನು ಪರೀಕ್ಷಿಸಲು ಸದ್ಯದ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಗಳ ಸೀಮಿತ ಅನುಮತಿಯಷ್ಟೇ ದೊರೆತಿದೆ. ಹೆಚ್ಚಿನ ಪರೀಕ್ಷೆಗಳು ನಡೆದಂತೆ ಇದರ ಉಪಯುಕ್ತತೆ, ಅಡ್ಡಪರಿಣಾಮ ಇತ್ಯಾದಿಗಳು ಸ್ಪಷ್ಟವಾಗಬಹುದು. ಕೋವಿಡ್-೧೯ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವವರ ಪ್ರತಿರಕ್ಷಣ ವ್ಯವಸ್ಥೆ ಬಲಪಡಿಸುವುದಕ್ಕೂ ಈ ವಿಧಾನವನ್ನು ಬಳಸುವುದು ಸಾಧ್ಯ ಎನ್ನಲಾಗಿದೆ.

ಸೌಜನ್ಯ: ವಿಜಯ ಕರ್ನಾಟಕ

logo
ಇಜ್ಞಾನ Ejnana
www.ejnana.com