ತಮ್ಮ ಪ್ರಯೋಗಪೆಟ್ಟಿಗೆಯ ಮುಂದೆ ಪ್ರೊಫೆಸರ್‌ ರಾಘವೇಂದ್ರ ಗದಗಕರ್‌
ತಮ್ಮ ಪ್ರಯೋಗಪೆಟ್ಟಿಗೆಯ ಮುಂದೆ ಪ್ರೊಫೆಸರ್‌ ರಾಘವೇಂದ್ರ ಗದಗಕರ್‌ ತ್ರೆಸಿಯಮ್ಮ ವರ್ಗೀಸ್

ಟಾಟಾ ಮಂದಿರದಲ್ಲಿ ವಿಜ್ಞಾನ ಪೂಜೆ

ವಿಜ್ಞಾನ ನಗರಿ ಬೆಂಗಳೂರಿನಲ್ಲಿ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌‌ನ ಸ್ಥಾನ ಹಿರಿದು. ಈ ಸಂಸ್ಥೆಯ ಇಡೀ ಆವರಣವೇ ಒಂದು ಪ್ರಯೋಗಾಲಯ ಎನ್ನುತ್ತಾರೆ, ಅಲ್ಲಿ ೫೦ ವರ್ಷಗಳನ್ನು ಕಳೆದಿರುವ ಖ್ಯಾತ ಸಂಶೋಧಕ ಪ್ರೊ. ರಾಘವೇಂದ್ರ ಗದಗಕರ್. ‌

ಅದು ೧೯೬೩ನೇ ಇಸವಿ. ನಾನು ಬೆಂಗಳೂರಿಗೆ ಬಂದು ಒಂದು ವಾರವಷ್ಟೆ ಆಗಿತ್ತು. ಹತ್ತು ವರ್ಷ ವಯಸ್ಸು. ನನ್ನ ಅಪ್ಪ-ಅಮ್ಮ ಹಾಗೂ ನನ್ನಿಬ್ಬರು ಅಕ್ಕ, ತಮ್ಮಂದಿರ ಜೊತೆಗೆ ಬಿಟಿಎಸ್‌ ನಂ ೧೧ ರಲ್ಲಿ ಜಯನಗರದಲ್ಲಿದ್ದ ನಮ್ಮ ಅಜ್ಜನ ಮನೆಯಿಂದ ಯಶವಂತಪುರದಲ್ಲಿದ್ದ ನಮ್ಮ ಹೊಸ ಮನೆಗೆ ಹೋಗುತ್ತಿದ್ದೆ. ಬಸ್ಸಿನಲ್ಲಿದ್ದ ಕಂಡಕ್ಟರು ಉತ್ಸಾಹಿ ಯುವ ಕಂಡಕ್ಟರು, ಇಡೀ ಬಸ್ಸಿನಲ್ಲಿ ಓಡಾಡುತ್ತಾ, ಬಸ್‌ ನಿಲ್ದಾಣ ಬಂದಾಗ ಜೋರಾಗಿ ಅದರ ಹೆಸರನ್ನು ಅಪ್ಪಟ ಕನ್ನಡದಲ್ಲಿ ಹೇಳುತ್ತಾ ಎಚ್ಚರಿಸುತ್ತಿದ್ದ. ಕೊನೆಯ ನಿಲ್ದಾಣಕ್ಕೆ ಹಿಂದಿನ ನಿಲ್ದಾಣ ಬಂದಾಗ ಕಂಡಕ್ಟರು “ಟಾಟಾರವರ ವಿಜ್ಞಾನ ಮಂದಿರ” ಎಂದು ಜೋರಾಗಿ ಕೂಗಿದ. ನನಗೆ ಅಚ್ಚರಿ ಆಯಿತು. ಆಗಾಗಲೇ ನಾನು ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೆ. ನಾನು ಪಯಣಿಸುತ್ತಿದ್ದ ಬಸ್ಸಿನ ಮೇಲೆ ಟಾಟಾ ಎನ್ನುವ ಹೆಸರೂ ಇತ್ತು. ಅದನ್ನು ತಯಾರಿಸಿದ್ದು ಟಾಟಾ ಸಂಸ್ಥೆ. ಈ ವಾಣಿಜ್ಯ ಸಂಸ್ಥೆಗೂ ವಿಜ್ಞಾನಕ್ಕೂ ಏನು ಸಂಬಂಧವೋ? ತಿಳಿಯಲು ಆಗ ಗೂಗಲ್‌ ಇರಲಿಲ್ಲವೆನ್ನಿ. ಆದರೆ ಅಲ್ಪ ಸಮಯದಲ್ಲಿಯೇ ಮೈಸೂರಿನ ಮಹಾರಾಜರು ದಾನವಾಗಿ ಕೊಟ್ಟ ಒಂದೂವರೆ ಚದರ ಕಿಲೋಮೀಟರು ಪ್ರದೇಶದಲ್ಲಿ ಟಾಟಾ ಕುಟುಂಬ ೧೯೦೯ರಲ್ಲಿ ಸ್ಥಾಪಿಸಿದ ಸಂಸ್ಥೆ ಇದು ಎಂದು ತಿಳಿಯಿತು. ಈಗಲೂ ಇಂಡಿಯನ್‌ ಇನಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಸಂಸ್ಥೆಯನ್ನು ಟಾಟಾರವರ ನೆನಪಿನಲ್ಲಿ ಟಾಟಾ ಇನಸ್ಟಿಟ್ಯೂಟ್‌ ಎಂದು ಕರೆಯುವುದು ವಾಡಿಕೆ. ಆದರೆ ಟಾಟಾರಿಗೆ ಇದನ್ನು ತಾವು ಬದುಕಿದ್ದಾಗ ಕಟ್ಟಲು ಆಗಲಿಲ್ಲವಾಗಿ ಅದಕ್ಕಾಗಿ ಬೇಕಾದ ಹಣವನ್ನು ಉಯಿಲಿನಲ್ಲಿ ಬರೆದಿಟ್ಟಿದ್ದರಂತೆ. ಇದು ಬಿವಿ ಸುಬ್ಬರಾಯಪ್ಪನವರು ಬರೆದ ಪರ್ಸೂಟ್‌ ಆಫ್‌ ಎಕ್ಸೆಲೆನ್ಸ್:‌ ಎ ಹಿಸ್ಟರಿ ಆಫ್‌ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಪುಸ್ತಕದಲ್ಲಿ ನಮೂದಾಗಿದೆ. ಆದರೆ ನನ್ನದೆಂಥ ಅದೃಷ್ಟ! ಭಾರತದ ಈ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ಯಶವಂತಪುರದಲ್ಲಿದ್ದ ನಮ್ಮ ಮನೆಯಿಂದ ಕೇವಲ ಒಂದೇ ಕಿಲೋಮೀಟರು ದೂರದಲ್ಲಿತ್ತು! ಕೆಲವೇ ದಿನಗಳಲ್ಲಿ ಈ ವಿಜ್ಞಾನಾಸಕ್ತಿ ಇರುವ ದೊಡ್ಡವರ ಈ ಶಾಲೆಯೊಳಗೆ ನಡೆದಾಡುತ್ತಾ, ಅಲ್ಲಿರುವುದನ್ನು ನೋಡಬಹುದು ಎನ್ನುವುದನ್ನೂ ಕಂಡುಕೊಂಡೆ. ಜೊತೆಗೆ ಈ ಸಂಸ್ಥೆಯ ಜೊತೆಗೆ ನೋಬೆಲ್‌ ಪ್ರಶಸ್ತಿ ವಿಜೇತರಾದ ಸರ್‌ ಸಿವಿ ರಾಮನ್ನರ ಹೆಸರೂ ಜೋಡಿಸಿಕೊಂಡಿತ್ತು. ಹಾಗೆಯೇ ಸಂಸ್ಥೆಯಲ್ಲಿದ್ದ ದೊಡ್ಡವರು ಟೆನಿಸ್‌ ಆಡುವಷ್ಟು ಶ್ರೀಮಂತರೂ ಎಂದೂ, ಆಟ ಆಡಿದ ನಂತರ ಹಳೆಯ ಚೆಂಡುಗಳನ್ನು ಬಿಸಾಡುತ್ತಾರೆ ಎಂದೂ ತಿಳಿಯಿತು. ಈ ಚೆಂಡುಗಳು ಇನ್ನೂ ಕೆಲವು ತಿಂಗಳು ಕ್ರಿಕೆಟ್‌ ಆಡುವಷ್ಟು ಚೆನ್ನಾಗಿರುತ್ತಿದ್ದುವು. ಇವನ್ನು ಇಪ್ಪತ್ತೈದು ಪೈಸೆಗೆ ಒಂದರಂತೆ ಮಾರುತ್ತಿದ್ದರು. ಅದನ್ನು ಕೊಂಡು ನಾವು ರಸ್ತೆಯ ಇನ್ನೊಂದು ಬದಿಗೆ ಇದ್ದ ಮೈದಾನದಲ್ಲಿ ಕ್ರಿಕೆಟ್‌ ಆಡಬಹುದಿತ್ತು. ಈ ಮೈದಾನವನ್ನು ಸಂಸ್ಥೆಯವರು ಈಗ ಜಿಮಖಾನಾ ಎನ್ನುತ್ತಾರೆ. ಈ ಸಂಸ್ಥೆಯ ಜೊತೆಗೆ ನನ್ನ ಒಡನಾಟ ಮೊದಲಾಗಿದ್ದು ಹೀಗೆ. ‌

ಎರಡನೆಯ ಬಾರಿ ಸಂಸ್ಥೆಯ ಜೊತೆಗೆ ನಾನು ಒಡನಾಡಿದ್ದು ೧೯೬೮ರಲ್ಲಿ. ಆಗ ನನಗೆ ಹದಿನೈದು ವಯಸ್ಸು. ಸೈಂಟ್‌ ಜೋಸೆಫ್ಸ್‌ ಕಾಲೇಜಿನಲ್ಲಿ ಪೀಯೂಸಿ ಓದುತ್ತಿದ್ದೆ. ಜೊತೆಗೆ ಮನೆಯಲ್ಲಿ ನಾನೇ ಸಾಕಿದ್ದ ಇಲಿಗಳ ಋತುಚಕ್ರವನ್ನು ಅಧ್ಯಯನ ಮಾಡಲೂ ಪ್ರಯತ್ನಿಸುತ್ತಿದ್ದೆ. ಇದರ ಬಗ್ಗೆ ತಿಳಿದುಕೊಳ್ಳಲು ನಾನು ಒಮ್ಮೆ ಸಂಸ್ಥೆಯ ಗ್ರಂಥಾಲಯಕ್ಕೆ ಹೋದೆ. ಇದೇ ಜೆಆರ್‌ಡಿ ಟಾಟಾ ಸ್ಮಾರಕ ಗ್ರಂಥಾಲಯ. ಆದರೆ ಅಲ್ಲಿ ನನ್ನನ್ನು ಒಳಗೆ ಬಿಡಲೇ ಇಲ್ಲ. ಕಾವಲುಗಾರನ ಜೊತೆಗೆ ನಾನು ಜರ್ನಲ್‌ ಆಫ್‌ ಎಂಡೋಕ್ರೈನಾಲಜಿ ಓದಬೇಕಿತ್ತು ಎಂದು ವಾದಿಸಿದೆ. ಬಹುಶಃ ಇದರಿಂದ ಗೊಂದಲವಾಯಿತೋ ಏನೋ. ಅವರು ನೇರವಾಗಿ ನನ್ನನ್ನು ಗ್ರಂಥಪಾಲಕರಾಗಿದ್ದ ಶ್ರೀ ಟಿಕೆಎಸ್‌ ಐಯಂಗಾರ್‌ ಬಳಿಗೆ ಕರೆದೊಯ್ದರು. ಆತ ಒಂದು ಹುಳ್ಳನೆಯ ನಗೆ ನಕ್ಕು ನನಗೆ ಅನುಮತಿ ಕೊಟ್ಟರು. ಅವರು ಹಾಗೆ ನಕ್ಕಿದ್ದು ಏಕೆ ಎಂದು ಆಮೇಲೆ ಅರ್ಥವಾಯಿತು. ಏಕೆಂದರೆ ಜರ್ನಲ್‌ ಆಫ್‌ ಎಂಡೋಕ್ರೈನಾಲಜಿಯನ್ನು ಓದಿದ ನನಗೆ ಒಂದೇ ಒಂದು ಪದವೂ ಅರ್ಥವಾಗಿರಲಿಲ್ಲ. ಆದರೂ ಈ ಭೇಟಿ ವ್ಯರ್ಥವಾಗಲಿಲ್ಲ ಬಿಡಿ. ಏಕೆಂದರೆ ನಾನು ರಾಷ್ಟ್ರೀಯ ವಿಜ್ಞಾನ ಪ್ರತಿಭಾನ್ವೇಷಣೆಯ ವಿದ್ಯಾರ್ಥಿವೇತನ ಪರೀಕ್ಷೆಯ ತಯಾರಿಗಾಗಿ ಈ ಸಂಶೋಧನೆ ನಡೆಸುತ್ತಿದ್ದೆ. ಹೀಗಾಗಿ ಸಂಸ್ಥೆ ಹಾಗೂ ನಾನು ಮೂರನೆಯ ಬಾರಿ ಮುಖಾಮುಖಿಯಾದೆವು. ಈ ಬಾರಿ ಅಲ್ಲಿನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪ್ರೊಫೆಸರ್‌ ಪಿ ಎಸ್‌ ಶರ್ಮಾ ಅವರ ನೇತೃತ್ವದಲ್ಲಿ ಒಂದು ಭಾರೀ ವಿಜ್ಞಾನಿಗಳ ತಂಡದ ಮುಂದೆ ಸಂದರ್ಶನಕ್ಕೆ ಹಾಜರಾದೆ. ವಿದ್ಯಾರ್ಥಿ ವೇತನವನ್ನು ದಕ್ಕಿಸಿಕೊಂಡೆ.

ನಾಲ್ಕನೆಯ ಬಾರಿ ನಾನು ಸಂಸ್ಥೆಗೆ ಹೋಗಿದ್ದು ೧೯೭೧ರಲ್ಲಿ. ಆಗ ನನಗೆ ೧೮ ವರ್ಷ ವಯಸ್ಸು. ನಾನು ಸೆಂಟ್ರಲ್‌ ಕಾಲೇಜಿನಲ್ಲಿ ಸ್ನಾತಕ ಪದವಿಯ ಕೊನೆಯ ವರ್ಷ ವ್ಯಾಸಂಗ ಮಾಡುತ್ತಿದ್ದೆ. ಎರಡು ವಿಷಯಗಳು ನನ್ನನ್ನು ಮರುಳುಗೊಳಿಸಿಬಿಟ್ಟಿದ್ದುವು. ಮೊದಲನೆಯದು ಜೀವಿಗಳ ನಡವಳಿಕೆ ಹಾಗೂ ಎರಡನೆಯದು ಕಣಜೀವವಿಜ್ಞಾನ ಅಥವಾ ಮಾಲಿಕ್ಯುಲಾರ್‌ ಬಯಾಲಜಿ. ಆದರೆ ಈ ವಿಷಯಗಳನ್ನು ಆಸಕ್ತಿಕರವಾಗಿ ಬೋಧಿಸುವವರು ಕಾಲೇಜಿನಲ್ಲಿ ಯಾರೂ ಇರಲಿಲ್ಲ. ಈ ತೊಂದರೆ ಇದ್ದರೂ ಕಾಲೇಜಿನಲ್ಲಿ ಒಂದು ಉತ್ಕೃಷ್ಟ ಗ್ರಂಥಾಲಯವಿತ್ತು. ಅಲ್ಲಿ ಒಳ್ಳೆಯ ತಿಳುವಳಿಕಸ್ತ ಗ್ರಂಥಪಾಲಕರೂ ಇದ್ದರು. ಜೀವಿಗಳ ನಡವಳಿಕೆಯ ಬಗ್ಗೆ ನನಗೆ ಆಸಕ್ತಿ ಮೊಳೆಯಲು ಕಾರಣ ಅಲ್ಲಿ ನಾನು ಓದಿದ ನೋಬೆಲ್‌ ಪ್ರಶಸ್ತಿ ವಿಜೇತ ಕಾನ್ರಾಡ್‌ ಲೋರೆಂಜರ ಕಿಂಗ್‌ ಸಾಲೋಮನ್ಸ್‌ ರಿಂಗ್‌ ಎನ್ನುವ ಪುಸ್ತಕ. ಈ ಆಸಕ್ತಿಗೆ ಅಲ್ಲಿನ ಪ್ರಾಣಿವಿಜ್ಞಾನ ಹಾಗೂ ಸಸ್ಯವಿಜ್ಞಾನ ವಿಭಾಗಗಳ ಕಿಟಕಿಗಳಲ್ಲಿ ಗೂಡುಕಟ್ಟಿದ್ದ ಪೇಪರ್‌ ವಾಸ್ಪ್‌ ಎನ್ನುವ ಕಣಜದ ಗೂಡುಗಳು ನೀರೆರೆದು ಬೆಳೆಸಿದುವು. ಈ ಕಣಜವನ್ನು ರೋಪಾಲೀಡಿಯಾ ಮಾರ್ಜಿನೇಟ ಎನ್ನುತ್ತೇವೆ. ಮಾಲಿಕ್ಯುಲಾರ್‌ ಬಯಾಲಜಿಯಲ್ಲಿ ನನ್ನ ಆಸಕ್ತಿಗೆ ಮತ್ತೊಬ್ಬ ನೋಬೆಲ್‌ ಪ್ರಶಸ್ತಿ ವಿಜೇತ ಜೇಮ್ಸ್‌ ಡಿ ವಾಟ್ಸನ್‌ ಬರೆದ ದಿ ಡಬಲ್‌ ಹೆಲಿಕ್ಸ್‌ ಎನ್ನುವ ಪುಸ್ತಕ ಕಾರಣ. ಹಾಗೂ ಇದಕ್ಕೆ ನೀರೆರೆದದ್ದು ಲ್ಯಾಂಬ್ಡ ಬ್ಯಾಕ್ಟಿರೀಯೋಫಾಜ್‌ ಎನ್ನುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ವೈರಸ್ಸು. ಆದರೆ ದುರದೃಶ್ಟವಶಾತ್‌ ನಾನು ಇವನ್ನು ಕಂಡಿದ್ದು ಪುಸ್ತಕಗಳ ಪುಟಗಳಲ್ಲಿ ಅಷ್ಟೆ. ಆದರೆ ಇದರ ಇನ್ನೊಂದು ಅವತಾರ ನನಗೆ ಕಾಣಲು ಹೆಚ್ಚು ದಿನಗಳಾಗಲಿಲ್ಲ. ಒಂದು ದಿನ ನಾನು ಅಕ್ಟೋಬರ್‌ ೧೭, ೧೯೭೦ರ ನೇಚರ್‌ ಪತ್ರಿಕೆಯನ್ನು ಓದುತ್ತಿದ್ದೆ. ಅದರಲ್ಲಿ ಐಐಎಸ್ಸಿಯ ಮೈಕ್ರೊಬಯಾಲಜಿ ಮತ್ತು ಫಾರ್ಮಾಕಾಲಜಿ ವಿಭಾಗದ ಸಿವಿ ಸುಂದರ ರಾಜ್‌ ಎನ್ನುವವರು ನಮ್ಮದೇ ಆದ ಭಾರತೀಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಲಾಂಬ್ಡ ಬ್ಯಾಕ್ಟಿರೀಯೋಫಾಜನ್ನು ಪತ್ತೆ ಮಾಡಿದ್ದಾರೆ ಎಂದು ಬರೆದಿದ್ದು ಕೇಳಿ ಕುಣಿದಾಡಿದೆ. ನಾನು ಸುಂದರರಾಜರನ್ನು ನೋಡಲು ಹೋದೆ. ಆತ ತಾನು ಪತ್ತೆ ಮಾಡಿದ್ದ ಐ೩ ಎನ್ನುವ ಬ್ಯಾಕ್ಟೀರಿಯೋಫಾಜು, ಪೆಟ್ರಿ ತಟ್ಟೆಗಳಲ್ಲಿ ಹುಲುಸಾಗಿ ಬೆಳೆದಿದ್ದ ಮೈಕೊಬ್ಯಾಕ್ಟೀರಿಯಾದ ಹಾಸಿನಲ್ಲಿ ಪಾರದರ್ಶಕವಾದ ರಂಧ್ರವನ್ನು ಕೊರೆದಿದ್ದನ್ನು ತೋರಿಸಿದರು. ಐ ೩ ಎಂಬ ಹೆಸರಿನಲ್ಲಿ ಇರುವ ಐ ಎಂಬುದು ಮೂರನೆಯ ಐಸೊಲೇಟು ಎಂಬುದಾಗಿ ಇದ್ದರೂ, ಅದನ್ನು ನಾನು ಇಂಡಿಯನ್‌ ಎಂದು ನಿಸ್ಸಂಕೋಚವಾಗಿ ಅರ್ಥೈಸಿಕೊಂಡೆ.‌

ಸಂಸ್ಥೆಯ ಆವರಣದಲ್ಲಿರುವ ನನ್ನ ಆಪ್ತ ಕೀಟಗಳು. ಎಡದಿಂದ ಬಲಕ್ಕೆ ರೋಪಾಲೀಡಿಯ ಸಯಾಥಿಫಾರ್ಮಿಸ್‌, ರೋ. ಮಾರ್ಜಿನೇಟಾ ಮತ್ತು ಏಪಿಸ್‌ ಫ್ಲೋರಿಯಾ
ಸಂಸ್ಥೆಯ ಆವರಣದಲ್ಲಿರುವ ನನ್ನ ಆಪ್ತ ಕೀಟಗಳು. ಎಡದಿಂದ ಬಲಕ್ಕೆ ರೋಪಾಲೀಡಿಯ ಸಯಾಥಿಫಾರ್ಮಿಸ್‌, ರೋ. ಮಾರ್ಜಿನೇಟಾ ಮತ್ತು ಏಪಿಸ್‌ ಫ್ಲೋರಿಯಾತ್ರೆಸಿಯಮ್ಮ ವರ್ಗೀಸ್‌ ಮತ್ತು ರಾಘವೇಂದ್ರ ಗದಗಕರ್

ಸಂಸ್ಥೆಯ ಜೊತೆಗೆ ನನ್ನ ಕೊನೆಯ ಹಾಗೂ ಐದನೆಯ ಒಡನಾಟ ಆರಂಭವಾಗಿದ್ದು ೧೯೭೪ರಲ್ಲಿ, ನಾನು ಇಪ್ಪತ್ತೊಂದನೆಯ ವಯಸ್ಸಿನವನಾಗಿದ್ದಾಗ. ಮಾಲಿಕ್ಯುಲಾರ್‌ ಬಯಾಲಜಿ ಎನ್ನುವ ಬಹುವಿಷಯಕ ವಿಭಾಗದಲ್ಲಿ ಇದ್ದ ಒಂದೇ ಒಂದು ಪಿಎಚ್ ಡಿ ಸ್ಥಾನಕ್ಕೆ ನಾನು ಆಯ್ಕೆಯಾಗಿದ್ದೆ. ಈಗ ಆ ವಿಭಾಗವನ್ನು ಮೈಕ್ರೊಬಯಾಲಜಿ ಮತ್ತು ಸೆಲ್‌ ಬಯಾಲಜಿ ಪ್ರಯೋಗಾಲಯ ಎನ್ನುತ್ತಾರೆ. ಮುಂದಿನ ಐದು ವರ್ಷಗಳು ಲ್ಯಾಂಬ್ಡ ಬ್ಯಾಕ್ಟಿರಿಯೋಫಾಜಿನ ಮತ್ತೊಂದು ಅವತಾರವಾದ, ನಮ್ಮದೇ ಸ್ವದೇಶೀ ಐ೩ ಬ್ಯಾಕ್ಟೀರಿಯೋಫಾಜಿನ ಅಧ್ಯಯನದಲ್ಲಿ ಕಳೆಯಿತು. ಅದೇ ಸಂದರ್ಭದಲ್ಲಿ ಸಂಸ್ಥೆಯ ಆವರಣದಲ್ಲಿ ನನ್ನ ಇನ್ನೊಂದು ಆಸಕ್ತಿಯ ವಿಷಯವಾದ ನನ್ನ ಶೈಕ್ಷಣಿಕ ಅಧ್ಯಯನದ ವಸ್ತುವಾಯಿತು. ಅದೇ ಸಮಯದಲ್ಲಿ ರೋಪಾಲೀಡಿಯ ಮಾರ್ಜಿನೇಟಾ ಆ ಖುಷಿಯ ಐದು ವರ್ಷಗಳಲ್ಲಿ ನನ್ನ ಹವ್ಯಾಸಿ ಅಧ್ಯಯನದ ಕೇಂದ್ರಬಿಂದುವಾಯಿತು.

ಹೀಗೆ ಐ೩ ಬ್ಯಾಕ್ಟೀರಿಯೋಫಾಜು ಹಾಗೂ ರೋಪಾಲಿಡಿಯ ಮಾರ್ಜಿನೇಟಾ ಗಳೆರಡರ ಮೇಲೂ ಅಕ್ಕರೆ ಬೆಳೆದಿದ್ದ ನನಗೆ ಪಿಎಚ್‌ಡಿ ಅಧ್ಯಯನದ ಕೊನೆಗೊಳ್ಳುತ್ತಿದ್ದಂತೆ ಸಂದಿಗ್ಧ ಎದುರಾಯಿತು. ಪಿಎಚ್‌ಡಿ ಮಾಡುವಾಗ ಭಾರತದಲ್ಲಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಕಣಜೀವಿವಿಜ್ಞಾನದಲ್ಲಿ ಉತ್ಕೃಷ್ಟ ಸಂಶೋಧನೆಗಳನ್ನು ಕೈಗೊಳ್ಳುವುದು ಎಷ್ಟು ಕಷ್ಟ, ಅಲ್ಲಲ್ಲ ಅಸಾಧ್ಯ, ಎನ್ನುವುದು ನನಗೆ ನಿತ್ಯ ಮನವರಿಕೆಯಾಗುತ್ತಿತ್ತು.

ಕಣಜೀವಿವಿಜ್ಞಾನದಲ್ಲಿಯೇ ತೊಡಗಿಕೊಂಡು ಮುಂದುವರೆದರೆ, ನಾನು ಅಮೆರಿಕೆಗೋ ಇನ್ಯಾವುದೋ ಅಭಿವೃದ್ಧ ದೇಶಕ್ಕೆ ಹೋಗಬೇಕಾಗುತ್ತಿತ್ತು. ಹಾಗೆ ಮಾಡಿದ್ದಲ್ಲಿ ನಾನು ಕೇವಲ ಲ್ಯಾಂಬ್ಡ ಬ್ಯಾಕ್ಟೀರಿಯೋಫಾಜಿನ ಮೇಲಷ್ಟೆ ಸಂಶೋಧನೆ ಕೈಗೊಳ್ಳುತ್ತಿದ್ದೆ. ಈ ಸಾಧ್ಯತೆ, ಅಂದರೆ ಅಮೆರಿಕೆಗೆ ಹೋಗುವುದಲ್ಲ, ಲ್ಯಾಂಬ್ಡ ಬ್ಯಾಕ್ಟೀರಿಯೋಫಾಜಿನ ಸಂಶೋಧನೆ ಬಲು ಆಕರ್ಷಕವಾಗಿತ್ತು. ಅದೇ ಪ್ರಾಣಿ ನಡವಳಿಕೆಯ ಹವ್ಯಾಸವನ್ನೇ ಹುದ್ದೆಯನ್ನಾಗಿಸಿಕೊಂಡು, ಕಣಜೀವಿವಿಜ್ಞಾನವನ್ನು ಹವ್ಯಾಸವನ್ನಾಗಿಸಿಕೊಂಡುಬಿಟ್ಟರೆ, ಆಗ ನಾನು ಭಾರತದಲ್ಲಿಯೇ ಉಳಿಯಬಹುದಿತ್ತು. ಪೇಪರ್‌ ಕಣಜ ರೋಪಾಲೀಡಿಯ ಮಾರ್ಜಿನೇಟ ಕಣಜದ ಮೇಲೆ ಜೀವಮಾನಪರ್ಯಂತ ಸಂಶೋಧನೆ ಮಾಡಬಹುದಿತ್ತು. ಹೀಗಾಗಿ ನಾನು ಎರಡನೆಯ ಆಯ್ಕೆಯನ್ನೇ ಬಯಸಿದೆ. ಪಿಎಚ್‌ಡಿ ನಂತರದ ತರಬೇತಿಗೂ ವಿದೇಶಕ್ಕೆ ಹೋಗಬಾರದೆಂದು ನಿರ್ಧರಿಸಿದೆ. ಸಂಸ್ಥೆಯಲ್ಲಿಯೇ ಇದ್ದು, ಕಣಜೀವಿವಿಜ್ಞಾನದ ನನ್ನ ಸ್ನೇಹಿತರು ಹೇಳುವ ಹಾಗೆ, ಅಲ್ಪ ಧನದಲ್ಲಿಯೇ ಸಂಶೋಧನೆಯಲ್ಲಿ ಮುಂದುವರೆದೆ. ಕಣಜೀವಿವಿಜ್ಞಾನದಿಂದ ಪ್ರಾಣಿ ನಡವಳಿಕೆಯ ಕಡೆಗೆ ಹಿನ್ನಡೆದೆ! ಇದಕ್ಕಾಗಿ ನನಗೆ ಖಂಡಿತ ವಿಷಾದವಿಲ್ಲ!‌

ಆಗಸದಿಂದ ಕಾಣುವ ಐಐಎಸ್ಸಿ ಆವರಣ
ಆಗಸದಿಂದ ಕಾಣುವ ಐಐಎಸ್ಸಿ ಆವರಣಉಪಗ್ರಹ ಚಿತ್ರ

ನಾನು ಭಾರತದಲ್ಲಿ ಉಳಿದುಕೊಳ್ಳಲೂ, ಪ್ರಾಣಿ ನಡವಳಿಕೆಯ ಕಡೆಗೆ ಹೊರಳಲೂ ಉತ್ಕೃಷ್ಟ ಸಂಶೋಧನೆ ಮಾಡಬೇಕೆನ್ನುವ ಉದ್ದೇಶದಿಂದ ಎನ್ನುವುದನ್ನು ನಾನು ಎಂದಿಗೂ ಮರೆಯಲಿಲ್ಲ. ಕೆಲವೇ ಸಮಯದಲ್ಲಿ ಪ್ರಾಣಿ ನಡವಳಿಕೆಯ ಸಂಶೋಧನೆಗಳನ್ನೂ ಅತಿ ಸುಸಜ್ಜಿತವಾದಂತಹ, ದುಬಾರಿ ಪ್ರಯೋಗಾಲಯಗಳಲ್ಲಿ, ಬೃಹತ್‌ ಧನಸಹಾಯ ಹಾಗೂ ಕಣಜೀವಿವಿಜ್ಞಾನದ ತಂತ್ರಗಳ ನೆರವಿನಿಂದ ನಡೆಸುವುದು ಒಂದು ಫ್ಯಾಶನ್ನಾಗಿ ಬೆಳೆಯಿತು. ಹಾಗಿದ್ದೂ ನಾನು ನನ್ನ ಸಂಶೋಧನೆಗಳಿಗೆ ಕಡಿಮೆ ವೆಚ್ಚ, ಹಾಗೂ ಸುಲಭ ತಂತ್ರಜ್ಞಾನಗಳು ಸಾಕಾಗುವಂತೆ ಎಚ್ಚರ ವಹಿಸಿದೆ. ಇದು ಸಾಧ್ಯವಾಗುವುದಕ್ಕೆ ಕಾರಣ ಈ ಸಂಸ್ಥೆ. ಅದರ ಆವರಣವೇ ಒಂದು ಅದ್ಭುತ ಪ್ರಯೋಗಶಾಲೆ. ನನ್ನ ನಲವತ್ತು ವರ್ಷಗಳ ದೀರ್ಘಾವಧಿಯ ಸಂಶೋಧನೆಗಳಿಗೆಲ್ಲ, ನಿಸರ್ಗ ಸಹಜವಾಗಿಯೇ ಸಂಸ್ಥೆಯ ಆವರಣದಲ್ಲಿ ಸಿಗುವ ಇರುವೆಗಳು, ಜೇನ್ನೊಣಗಳು ಮತ್ತು ಕಣಜಗಳನ್ನೇ ಉಪಯೋಗಿಸಿಕೊಂಡಿದ್ದೇನೆ. ಇದರಲ್ಲಿ ಭಾರತೀಯ ಕಣಜ ರೋಪಾಡೀಲಿಯ ಮಾರ್ಜಿನೇಟಾದ್ದೇ ಸಿಂಹಪಾಲು. ಈ ಸಾಮಾಜಿಕ ಕಣಜದ ಬಗ್ಗೆ ಏನೆಲ್ಲ ಸಾಧ್ಯವೋ ಅದನ್ನೆಲ್ಲ ತಿಳಿದುಕೊಳ್ಳಬೇಕೆನ್ನುವುದು ನನ್ನ ಗುರಿಯಾಗಿತ್ತು. ಹಾರ್ವರ್ಡ್‌ ಪ್ರೆಸ್‌ ಪ್ರಕಟಿಸಿರುವ ನನ್ನ ಪುಸ್ತಕ ರೋಪಾಡೀಲಿಯ ಮಾರ್ಜಿನೇಟಾದ ಸಮಾಜಜೀವಿವಿಜ್ಞಾನ – ದಿ ಸೋಶಿಯಲ್‌ ಬಯಾಲಜಿ ಆಫ್‌ ರೋಪಾಡೀಲಿಯ ಮಾರ್ಜಿನೇಟ ಎನ್ನುವ ಪುಸ್ತಕದಲ್ಲಿ ನಾನು ಬರೆದಿರುವುದೂ ಇದನ್ನೇ.

ಸೆಂಟ್ರಲ್‌ ಕಾಲೇಜಿನಲ್ಲಿ ಇದ್ದಾಗ ಆಕಸ್ಮಿಕವಾಗಿ ಅದನ್ನು ಕಂಡು ಎಲ್ಲರಂತೆ ಅಚ್ಚರಿಗೊಂಡಿದ್ದ ನನಗೆ, ಇನ್ಸಟಿಟ್ಯೂಟಿನಲ್ಲಿ ಅಸಂಖ್ಯವಾಗಿದ್ದ ಅದರ ಗೂಡುಗಳನ್ನು ಕಂಡು ಡಾಕ್ಟೊರೇಟಿನ ನಂತರದ ನನ್ನ ಜೀವನ ಪರ್ಯಂತದ ಸಂಶೋಧನೆಗೆ ಈ ಜೀವಿಯೇ ಕೇಂದ್ರವಾಯಿತು. ನಮ್ಮ ಸಾಮಾಜಿಕ ನಡತೆಗಳು ವಿಕಾಸಗೊಂಡ ಬಗೆಯನ್ನು ರೂಪಿಸಿದ ನಿಸರ್ಗದ ಪ್ರಭಾವಗಳನ್ನು ಅರ್ಥ ಮಾಡಿಕೊಳ್ಳಲು ರೋಪಾಡೀಲಿಯದ ನಡವಳೀಕೆಗಳನ್ನು ತಿಳಿಯುವುದು ಬಲು ಮುಖ್ಯ ಎಂದು ವಿಜ್ಞಾನಿಗಳು ಹೇಳುವುದು ನನಗೆ ಸಂತಸ ತಂದಿದೆ. ನಾನು ಮಾರ್ಗದರ್ಶನ ಮಾಡಿದ ಇಪ್ಪತ್ತೆರಡು ವಿದ್ಯಾರ್ಥಿಗಳಲ್ಲಿ ಇಪ್ಪತ್ತು ಮಂದಿ ಕೇವಲ ಈ ಒಂದು ಕಣಜವನ್ನೇ ಅಧ್ಯಯನ ಮಾಡಿದ್ದಾರೆ. ಇವು ಸಹಜವಾಗಿ ಎಲ್ಲೆಲ್ಲಿ ನೆಲೆಸಿವೆಯೋ, ಅಲ್ಲಿಯೇ ನಾವು ಇವುಗಳನ್ನು ಅಧ್ಯಯನ ಮಾಡಿದ್ದೇವೆ. ಸಂಸ್ಥೆಯಲ್ಲಿರುವ ವಿವಿಧ ಕಟ್ಟಡಗಳು, ಗಿಡ, ಮರಗಳಲ್ಲಿ ಬೆಳೆಯುವ ಇವನ್ನು ಕ್ಲಿಷ್ಟವೆನ್ನಿಸಿದ ಪ್ರಯೋಗಗಳಿಗಾಗಿ ಮಾತ್ರ ಪ್ರಯೋಗಾಲಯಕ್ಕೆ ತಂದಿದ್ದೇವೆ.

ವೆಸ್ಪಿಯರಿ ಅಥವಾ ಕಣಜದ ಗೂಡು ಎಂದು ಕರೆಯುವ ನಮ್ಮ ಪ್ರಯೋಗಶಾಲೆ ಎಂದರೆ ಇನ್ನೇನಲ್ಲ. ನಾಲ್ಕೂ ಬದಿಯಲ್ಲಿಯೂ ತಂತಿಯ ಬಲೆಯ ಗೋಡೆಯಿರುವ ಒಂದು ದೊಡ್ಡ ಕೋಣೆ ಅಷ್ಟೆ. ಹೀಗಾಗಿ ಇದರಲ್ಲಿರುವ ಕಣಜಗಳು ಯಾವಾಗ ಬೇಕಾದರೂ ಹೊರಗೆ ಹೋಗಿ ಹಾರಾಡಿ ಮರಳಬಹುದು. ಇವುಗಳ ಸಹಜ ನೆಲೆಯಲ್ಲಿಯೇ ಕಂಡು ನಡವಳಿಕೆಗಳನ್ನು ಅಧ್ಯಯನ ಮಾಡಿದ ಎಲ್ಲ ಸಂಶೋಧನೆಗಳನ್ನೂ ನಾವು ಇನ್ಸಟಿಟ್ಯೂಟಿನ ಆವರಣದಲ್ಲಿಯೇ ಕೈಗೊಂಡಿದ್ದೇವೆ. ಪ್ರಯೋಗಶಾಲೆಗೆ ಕೊಂಡೊಯ್ದು ಅಧ್ಯಯನ ಮಾಡಿದ ಕಣಜಗಳೂ ಈ ಆವರಣದಲ್ಲಿಯೇ ಹುಟ್ಟಿದವು. ನಾವೆಲ್ಲಿ ಸಂಸ್ಥೆಯ ಆವರಣದಲ್ಲಿರುವ ಕಣಜಗಳನ್ನು ಅಳಿಸಿಬಿಡುತ್ತೇವೋ ಎನ್ನುವ ಆತಂಕದಿಂದ ನಾವು ಕೆಲವೊಮ್ಮೆ ಸಂಸ್ಥೆಯ ಆವರಣದಾಚೆಗಿಂದಲೂ ಇವನ್ನು ತಂದಿದ್ದುಂಟು. ಕೆಲವೊಮ್ಮೆ ರೋಪಾಡೀಲಿಯಾದ್ದೇ ಇನ್ನೊಂದು ಪ್ರಭೇದವಾದ ರೋಪಾಲೀಡಿಯ ಸಿಯಾಥಿಫಾರ್ಮಿಸನ್ನೂ ಗಮನಿಸಿದ್ದುಂಟು. ಅದೇಕೋ ಈ ಎರಡನೆಯ ಪ್ರಭೇದ ಪ್ರಯೋಗಾಲಯದಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ. ಕಾರಣವೇನೆಂಬುದು ನಮಗೆ ಇನ್ನೂ ಗೊತ್ತಿಲ್ಲ. ಹೀಗಾಗಿ ನಮ್ಮ ಎಲ್ಲ ಸಂಶೋಧನೆಗಳೂ ಸಂಸ್ಥೆಯ ಆವರಣದಲ್ಲಿಯೇ ಬೆಳೆದ ಕಣಜದ ಗೂಡುಗಳ ಮೇಲೇ ನಡೆದಿವೆ. ಕಣಜದ ಅಧ್ಯಯನ ಮಾಡೆವು ಎಂದವರು ಕೇವಲ ಇಬ್ಬರೇ ಇಬ್ಬರು ವಿದ್ಯಾರ್ಥಿಗಳು. ಇವರಲ್ಲಿಯೂ ಒಬ್ಬರು ಸಂಸ್ಥೆಯ ಆವರಣದಲ್ಲಿಯೇ ಇರುವ ಏಶಿಯಾದ ಕಿರುಜೇನು ಏಪಿಸ್‌ ಫ್ಲೋರಿಯಾವನ್ನು ಅಧ್ಯಯನ ಮಾಡಿದರು. ಮತ್ತೊಬ್ಬರು ರಾಣಿಯೇ ಇಲ್ಲದ ಡಿಯಾಕಾಮಾ ಎನ್ನುವ ಇರುವೆಗಳನ್ನು ಅಧ್ಯಯನ ಮಾಡಿದರು. ನಾವು ಡಯಾಕಾಮಾ ಸಿಲೋನೀಸ್‌ ಎನ್ನುವ ಇರುವೆಯ ಮೇಲೆ ಕೈಗೊಂಡ ದೀರ್ಘಾವಧಿಯ ಸಂಶೋಧನೆ ಸಂಪೂರ್ಣವಾಗಿ ಸಂಸ್ಥೆಯ ಜುಬಿಲೀ ಗಾರ್ಡನ್ನಿನಲ್ಲಿಯೇ ನಡೆಯಿತು. ಇರುವೆಗಳ ವರ್ಣತಂತುಗಳು ಎಷ್ಟು ಅಸ್ಥಿರವೆನ್ನುವುದು ತಿಳೀದದ್ದೇ ಈ ಅಧ್ಯಯನದ ವೇಳೆ. ಇತ್ತೀಚೆಗೆ ನನ್ನ ಇನ್ನೊಬ್ಬ ವಿದ್ಯಾರ್ಥಿ ಕಣಜವನ್ನು ಅವುಗಳ ಗೂಡಿನಲ್ಲಿಯೇ ಅಧ್ಯಯನ ಮಾಡಬಾರದೆಂದು ತೀರ್ಮಾನಿಸಿದ. ಬದಲಿಗೆ ಅವುಗಳ ಹಾರಾಟ ಹಾಗೂ ಸ್ವಸ್ಥಾನಕ್ಕೆ ಮರಳುವ ಸಾಮರ್ಥ್ಯದ ಬಗ್ಗೆ ಸಂಶೋಧನೆ ನಡೆಸಿದ್ದಾನೆ. ಇವನ ಈ ಎಲ್ಲ ವಿನೂತನ ಅಧ್ಯಯನಗಳೂ ನಮ್ಮ ಸಂಸ್ಥೆಯ ಆವರಣದಲ್ಲಿಯೇ ಸಂಪೂರ್ಣವಾಗಿ ನಡೆದಿವೆ. ನಾವು ಪಶ್ಚಿಮ ಘಟ್ಟಗಳಲ್ಲಿ ಇರುವ ಕೀಟಗಳ ವೈವಿಧ್ಯತೆ ಹಾಗೂ ಬಾಹುಳ್ಯದ ಬಗ್ಗೆ ಎರಡು ವರ್ಷಗಳ ಸುದೀರ್ಘ ಅಧ್ಯಯನವನ್ನೂ ನಡೆಸಿದ್ದೇವೆ. ನಾವು ಸಂಸ್ಥೇಯ ಆವರಣದಲ್ಲಿರುವ ಇರುವೆಗಳ ವಿಸ್ತೃತವಾದ ಸರ್ವೆ ನಡೆಸಿದ್ದೇವೆ. ಈ ಸಂಸ್ಥೆಯ ಆವರಣದಲ್ಲಿ ೧೧೨ ಇರುವೆಯ ಪ್ರಭೇದಗಳನ್ನು ಗುರುತಿಸಿದ್ದೇವೆ.

ಡಯಾಕಾಮ ಸಿಲೋನೀಸ್‌ ಇರುವೆಗಳ ಮೇಲೆ ಸುದೀರ್ಘ ಅಧ್ಯಯನ ನಡೆಸಿದ ಸ್ಥಳ. ಜುಬಿಲೀ ಗಾರ್ಡನ್ಸ್
ಡಯಾಕಾಮ ಸಿಲೋನೀಸ್‌ ಇರುವೆಗಳ ಮೇಲೆ ಸುದೀರ್ಘ ಅಧ್ಯಯನ ನಡೆಸಿದ ಸ್ಥಳ. ಜುಬಿಲೀ ಗಾರ್ಡನ್ಸ್ತ್ರೆಸಿಯಮ್ಮ ವರ್ಗೀಸ್

ನನಗೆ ಬಲು ಮೆಚ್ಚಿನ ವಿಷಯಗಳಾದ ರೋಪಾಡೀಲಿಯ ಮಾರ್ಜಿನೇಟ ಹಾಗೂ ರೋಪಾಡೀಲಿಯ ಸಯಾಥಿಫಾರ್ಮಿಸ್‌ ಜೊತೆಗೇ ಅವುಗಳ ವೈರಿಗಳೂ ಈ ಸಂಸ್ಥೆಯಲ್ಲಿವೆ. ಇವೇ ವೆಸ್ಪಾ ಟ್ರಾಪಿಕಾ ಹಾಗೂ ವೆಸ್ಪಾ ಅಫಿನಿಸ್‌ ಎನ್ನುವ ಕಣಜಗಳು. ಇವುಗಳ ಬಲು ಸಂಕೀರ್ಣವಾದ ಬಹುಮಹಡಿ ಕಟ್ಟಡದಂತಹ ಗೂಡುಗಳನ್ನು ಕಟ್ಟುತ್ತವೆ. ನಮ್ಮ ತೋಟದ ಮುಂಭಾಗದಲ್ಲಿದ್ದ ಮರವೊಂದರಲ್ಲಿ ನೇತಾಡುತ್ತಿದ್ದ ಇಂತಹ ಗೂಡೊಂದನ್ನು ಕೀಳಲು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆಯನ್ನು ನಾನು ಮರೆಯಲಾರೆ. ಅಂದ ಹಾಗೆ ನಮ್ಮ ವೆಸ್ಪಿಯರಿಯ ಗೋಡೆಗಳಾಗಿರುವ ತಂತಿ ಜಾಲರಿಗಳು ಈ ಬೇಟೆಗಾರರು ಒಳಬಾರದಂತೆ, ಆದರೆ ರೋಪಾಡೀಲಿಯ ಕಣಜಗಳು ಒಳಗೂ, ಹೊರಗೂ ಸರಾಗವಾಗಿ ಅಡ್ಡಾಡುವಂತೆ ಇವೆ. ಇತ್ತೀಚೆಗೆ ಸಂಸ್ಥೆಯ ಪದವಿ ವಿದ್ಯಾರ್ಥಿಗಳಿಗೆ ಆರುವರ್ಷಗಳ ಕಾಲ ಜೀವಿವಿಜ್ಞಾನವನ್ನು ಪಾಠ ಮಾಡಬೇಕಾಗಿ ಬಂದಿತ್ತು. ಇವರಿಗೆ ನೀಡಿದ ಪ್ರಾಯೋಗಿಕ ತರಬೇತಿಯೆಲ್ಲವೂ ಸಂಸ್ಥೆಯ ಆವರಣದಲ್ಲಿಯೇ ನಡೆದವು. ಅವುಗಳಲ್ಲಿ ಬಲು ವಿಶೇಷವಾದದ್ದು ಎಂದರೆ “ಇರುವೆ-ಚಾರಣ”. ಈ ಚಾರಣದ ವೇಳೆ ವಿದ್ಯಾರ್ಥಿಗಳು ಇರುವೆಗಳನ್ನು ಸಂಗ್ರಹಿಸುವ ರೀತಿಯನ್ನೂ, ಅವುಗಳ ಸಾಂದ್ರತೆ ಹಾಗೂ ವೈವಿಧ್ಯವನ್ನು ಲೆಕ್ಕ ಹಾಕುವ ಬಗೆಯನ್ನೂ ಅರ್ಥ ಮಾಡಿಕೊಂಡರು. ಜೀವನದ ಬಹುತೇಕ ಸಮಯವನ್ನು ಈ ಸಂಸ್ಥೆಯ ಆವರಣದಲ್ಲಿಯೇ ಕಳೆಯುವ ಸೌಭಾಗ್ಯ ನನಗೆ ದೊರಕಿದೆ. ವಿದ್ಯಾರ್ಥಿಯಾಗಿ ಇಲ್ಲಿನ ವಿದ್ಯಾರ್ಥಿನಿಲಯಗಳ ಡಿ೯ ಮತ್ತು ಎನ್‌ ೧೭ರಲ್ಲಿ ಇದ್ದೆ. ಅನಂತರ ವಿವಾಹಿತರ ನಿವಾಸ ಕಾವೇರಿಗೆ ಬಂದೆ. ಅಲ್ಲಿಂದ ಸಿಬ್ಬಂದಿಗಳ ನಿವಾಸ ಡಿ-೨೪೦, ಇ-೩೫, ಡಿಕ್ಯೂ೧೮ರಲ್ಲಿ ವಾಸವಿದ್ದೆ. ನಾನು ೧೯೭೪ರಲ್ಲಿ ಸಂಸ್ಥೆಗೆ ಬಂದಂದಿನಿಂದ ಯಾವುದೇ ಸಂದರ್ಭದಲ್ಲಿಯೂ ಮೂರು ತಿಂಗಳಿಗಿಂತ ಹೆಚ್ಚು ಸಮಯ ನಾನು ಈ ಸಂಸ್ಥೆಯ ಆವರಣದಿಂದ ಹೊರಗೆ ಇದ್ದುದಿಲ್ಲ. ವಾಸ್ತವವಾಗಿ ೧೯೬೩ರಲ್ಲಿ ಬೆಂಗಳೂರಿಗೆ ಬಂದಾಗಿನಿಂದಲೂ ನಾನು ಹೊರಗೆ ಹೋಗಿದ್ದೇ ಕಡಿಮೆ. ಕುಟುಂಬಗಳಿಗೆ ಇದಕ್ಕಿಂತ ಸೊಗಸಾದ ಸ್ಥಳ ದೊರಕದು. ನನ್ನ ಮಗ ವಿಕ್ರಮ ಕೂಡ ಈ ಸಂಸ್ಥೆಯ ಆವರಣದಲ್ಲಿನ ಜೀವಿವೈವಿಧ್ಯವನ್ನು ನೋಡುತ್ತಲೇ ಬೆಳೆದ. ಈಗ ಹೈಸ್ಕೂಲಿನಲ್ಲಿರುವಾಗಲೇ ಒಬ್ಬ ಪಕ್ಷಿವೀಕ್ಷಕನಾಗಿ, ಸಂಸ್ಥೆಯಲ್ಲಿರುವ ಪಕ್ಷಿಗಳ ಬಗ್ಗೆ ಸಂಶೋಧನಾ ಪ್ರಬಂಧಗಳನ್ನೂ ಬರೆದಿದ್ದಾನೆ. ಹೈಸ್ಕೂಲು ಕೂಡ ಸಂಸ್ಥೆಯ ಆವರಣದಲ್ಲಿಯೇ ಇದೆ. ಈಗ ಪ್ರತಿ ಪಕ್ಷಿ ಪ್ರಭೇದವೂ ವಿಶಿಷ್ಟ ಹಾಡು ಹಾಡುವುದೇಕೆ ಎನ್ನುವುದನ್ನು ತಿಳಿಯಲು ಪಕ್ಷಿಗಳ ಮಿದುಳನ್ನು ಅಧ್ಯಯನ ಮಾಡುತ್ತಿದ್ದಾನೆ.

ನಮ್ಮ ಪರಿಸರ ವಿಜ್ಞಾನ ವಿಭಾಗದ ಸಹೋದ್ಯೋಗಿಗಳು ಅಷ್ಟೋ ಇಷ್ಟು ಅಧ್ಯಯನಗಳಿಗಾಗಿ ಆವರಣವನ್ನು ಬಳಸುವುದರ ಹೊರತಾಗಿ ಪಾಠ ಕಲಿಸಲಾಗಲಿ, ಸಂಶೋಧನೆಗಾಗಲಿ ಇಲ್ಲಿರುವ ಸಸ್ಯ ಹಾಗೂ ಪ್ರಾಣಿ ಜಗತ್ತಿನ ಲಾಭವನ್ನೇಕೆ ಪಡೆಯುವುದಿಲ್ಲ ಎನ್ನುವ ಅಚ್ಚರಿ ನನ್ನನ್ನು ಸದಾ ಕಾಡುತ್ತದೆ. ನಮ್ಮ ಈ ಸಂಸ್ಥೆಯ ಈ ವೈಶಿಷ್ಟ್ಯವನ್ನು ಬಹಳಷ್ಟು ಜನ ಗಮನಿಸುವುದಿಲ್ಲ ಎನ್ನುವುದೂ ನನಗೆ ದುಃಖದ ವಿಷಯ. ಕೆಲವರಿಗೆ ಇದರ ಅರಿವು ಎಷ್ಟು ಕಡಿಮೆ ಎಂದರೆ ಅವರು ಇಡೀ ಸಂಸ್ಥೆಯ ಆವರಣಕ್ಕೆ ಹೊಸ ರೂಪ ಕೊಡಬೇಕು ಎಂದು ವಾದಿಸುತ್ತಾರೆ. ಇಲ್ಲಿರುವ ಜೈವಿಕ ವೈವಿಧ್ಯವೇ ನಮ್ಮ ಸಂಸ್ಥೆಯ ವಿಶಿಷ್ಟ ಗುರುತು, ಅದರ ಬ್ರ್ಯಾಂಡ್‌. ಕೋಟಿಗಟ್ಟಲೆ ವರ್ಷಗಳ ವಿಕಾಸದ ಫಲವಾಗಿ ನಿಸರ್ಗ ಕೊಟ್ಟಿರುವ ಹಾಗೂ ಜೆ.ಎನ್.‌ ಟಾಟಾ, ಒಡೆಯರುಗಳ ಮುಂದಾಲೋಚನೆಯ ಕೊಡುಗೆ. ಸರ್‌ ಸಿವಿ ರಾಮನ್‌, ಸತೀಶ್‌ ಧವನ್‌, ಸಿಎನ್‌ಆರ್‌ ರಾವ್‌ ಮೊದಲಾದ ಹಿಂದಿನ ನಿರ್ದೇಶಕರುಗಳು ಪಾಲಿಸಿ, ಉಳಿಸಿಹೋದ ಬ್ರ್ಯಾಂಡ್‌ ಇದು ಎನ್ನುವುದನ್ನು ಹಲವರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಸುಮಾರು ೧೧೨ ಇರುವೆಯ ಪ್ರಭೇದಗಳು, ಇಪ್ಪತ್ತೈದು ಬಗೆಯ ಜೇನ್ನೊಣಗಳು, ನೂರಾನಲವತ್ತು ಚಿಟ್ಟೆಯ ಪ್ರಭೇದಗಳು, ಈ ಸಂಸ್ಥೆಯ ಮೇಲೆ ಕೋಟಿಗಟ್ಟಲೆ ವರ್ಷಗಳ ವಿಕಾಸದ ಫಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ನೂರಹತ್ತು ಪಕ್ಷಿ ಪ್ರಭೇದಗಳು, ಹದಿನೇಳು ಹಾವಿನ ಪ್ರಭೇದಗಳು, ಇಪ್ಪತ್ತು ಏರೋಪ್ಲೇನು ಚಿಟ್ಟೆ ಹಾಗೂ ಸೂಜಿಚಿಟ್ಟೆಗಳು, ಅರವತ್ತು ಜೇಡನ ಪ್ರಭೇದಗಳು, ನೂರಾಹನ್ನೆರಡು ಪ್ರಭೇದಗಳ ಮರಗಳು ಇರುವ ಈ ಸಂಸ್ಥೆಯ ಆವರಣದಲ್ಲಿ ನವೀನ ಜೀವಿವಿಜ್ಞಾನದ ಸಂಶೋಧನೆಗಳನ್ನು ಕೈಗೊಳ್ಳಲಾಗದು ಎಂದರೆ ಅದು ನಮ್ಮ ತಪ್ಪು ಅಥವಾ ಈ ನೂತನ ಜೀವಿವಿಜ್ಞಾನದ ಕೊರತೆಯಷ್ಟೆ. ನನ್ನ ಹಾಗೆ ವೈಯಕ್ತಿಕ ಹಾಗೂ ಪ್ರೊಫೆಶನಲ್‌ ಬದುಕೆರಡೂ ಹೀಗೊಂದು ಸುಪ್ರಸಿದ್ಧ, ಅಮೋಘ ಸಂಸ್ಥೆಯೊಂದಿಗೆ ತಳುಕಿಕೊಂಡಿರುವ ಅದೃಷ್ಟ ಯಾರಿಗೆ ತಾನೇ ಸಿಗುತ್ತದೆ? ಈ ಟಾಟಾ ಮಂದಿರದಲ್ಲಿ ನಡೆಸಿದ ಐವತ್ತು ಸಂವತ್ಸರಗಳ ಪೂಜೆಗಿಂತ ಬೇರೆ ಬದುಕನ್ನು ಕಲ್ಪಿಸಿಕೊಳ್ಳುವುದೂ ನನಗೆ ಸಾಧ್ಯವಿಲ್ಲ.

ಮೂಲ: ಐಐಎಸ್ಸಿ ಕನೆಕ್ಟ್‌, ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆಂಗಳೂರು. ಲೇಖಕರು: ಪ್ರೊ. ರಾಘವೇಂದ್ರ ಗದಗಕರ್‌, ಅನುವಾದ: ಕೊಳ್ಳೇಗಾಲ ಶರ್ಮ

ಈ ಬರಹವನ್ನು ನೀವು ಕೇಳಲೂಬಹುದು! ಇದರ ಎರಡು ಭಾಗಗಳನ್ನು ಕೇಳಲು ಕೆಳಗಿನ ಕೊಂಡಿಗಳನ್ನು ಕ್ಲಿಕ್ ಮಾಡಿ (ಸೌಜನ್ಯ: ಜಾಣಸುದ್ದಿ)

logo
ಇಜ್ಞಾನ Ejnana
www.ejnana.com