ಏಪ್ರಿಲ್ 26, ವಿಶ್ವ ಬೌದ್ಧಿಕ ಆಸ್ತಿ ದಿನ
ಏಪ್ರಿಲ್ 26, ವಿಶ್ವ ಬೌದ್ಧಿಕ ಆಸ್ತಿ ದಿನ|www.wipo.int
ವೈವಿಧ್ಯ

ಬೌದ್ಧಿಕ ಆಸ್ತಿ ದಿನ ವಿಶೇಷ: ಬೌದ್ಧಿಕ ಆಸ್ತಿಯ ಹುಟ್ಟು, ಬೆಳವಣಿಗೆ ಮತ್ತು ಹಿಮ್ಮುಖ ಹರಿವು!

ಇಂದು, ಏಪ್ರಿಲ್ 26, ವಿಶ್ವ ಬೌದ್ಧಿಕ ಆಸ್ತಿ ದಿನ. ಇದರ ಆಚರಣೆಯ ಈ ವರ್ಷದ ಶೀರ್ಷಿಕೆ, 'Innovate for a Green Future', ಅಂದರೆ ಹಸಿರು ಭವಿಷ್ಯಕ್ಕಾಗಿ ಆವಿಷ್ಕಾರ.

ಎನ್.‌ ರವಿ ಶಂಕರ್‌

ಇಂದು, ಏಪ್ರಿಲ್ 26, ವಿಶ್ವ ಬೌದ್ಧಿಕ ಆಸ್ತಿ ದಿನ. ಇದರ ಆಚರಣೆಯ ಈ ವರ್ಷದ ಶೀರ್ಷಿಕೆ, 'Innovate for a Green Future', ಅಂದರೆ ಹಸಿರು ಭವಿಷ್ಯಕ್ಕಾಗಿ ಆವಿಷ್ಕಾರ. ಇದನ್ನು ನೋಡಿದಾಗ ಜಿಜ್ಞಾಸೆ ಮೂಡಿತು. ಇದರಲ್ಲೇನೋ ವಿರೋಧಾಭಾಸವಿದೆ ಎನಿಸಿತು. ಹಾಗಿದ್ದರೆ ಈವರೆಗಿನ ಆವಿಷ್ಕಾರಗಳಲ್ಲಿ ಹಸಿರು ಭವಿಷ್ಯದ ಚಿಂತನೆ ಇರಲಿಲ್ಲವೇ? ಹಾಗೊಮ್ಮೆ ನಾವು ಹಸಿರು ಭವಿಷ್ಯದಿಂದ ವಿಮುಖರಾಗಿ ಯೋಚಿಸಿದ್ದರೆ, ಅದರ ಹಿಂದಿನ ಕಥೆಯೇನು? ಹಸಿರು ಹೋಗಲು, ಮತ್ತು ಈ ಹೊತ್ತು ಹಸಿರಿನ ಬಗ್ಗೆ ಕಾಳಜಿ ಬರಲು ಕಾರಣವೇನು? ಆದ ತಪ್ಪೇನು ಮತ್ತು ತಪ್ಪಿತಸ್ಥರ್ಯಾರು? ಇದರಲ್ಲಿ ʼಬೌದ್ಧಿಕ ಆಸ್ತಿʼಯನ್ನು ಅರಸಿ ಹೋದವರ ಪಾಲೂ ಇದೆಯೇ? ಇದೊಂದು ವರ್ತುಲವೇ? ಈ ವರ್ತುಲದಲ್ಲಿ ನಾವು ಮತ್ತೆ ಅದೇ ಜಾಗಕ್ಕೆ ಬಂದು ನಿಂತಿದ್ದೇವೆಯೇ?

ಒಂದು ಕಾಲಕ್ಕೆ ಎಲ್ಲ ಸಂಪತ್ತೂ ಸಮುದಾಯಕ್ಕೆ ಸೇರಿದ ಸಂಪತ್ತೇ (community wealth) ಆಗಿತ್ತು! ಬೌದ್ಧಿಕ ಸಂಪತ್ತೂ ಇದಕ್ಕೆ ಹೊರತಾಗಿರಲಿಲ್ಲ. ಈ ಪ್ರಶ್ನೆಗಳು ಉದ್ಭವಿಸಿದ್ದರಿಂದ, ಬೌದ್ಧಿಕ ಆಸ್ತಿಯ ಬಗ್ಗೆ ಬರೆಯಲು ಹೊರಟವನಿಗೆ, ದುರಾಸೆಯಿಂದಾಗಿ ಹಸಿರು ಭವಿಷ್ಯದ ವಿಚಾರದಲ್ಲಿ ನಾವು ಮಾಡಿಕೊಂಡಿರುವ ಎಡವಟ್ಟಿನ ಬಗ್ಗೆ ಬರೆಯುವ ಮನಸ್ಸಾಯಿತು. ಇದು ಅರ್ಥವಾಗಬೇಕಾದರೆ, ಬೌದ್ಧಿಕ ಆಸ್ತಿಯನ್ನು ಸ್ವಲ್ಪಹೊತ್ತು ಬದಿಗಿಟ್ಟು, ಅದಕ್ಕಿಂತಲೂ ಮೂಲಭೂತವಾದ ʼಆಹಾರʼದ ವಿಷಯದಲ್ಲಾದ ಅನರ್ಥವನ್ನು ಅರಗಿಸಿಕೊಂಡು, ಅದೇ ತರ್ಕವನ್ನು ಇಲ್ಲಿಗೂ ವಿಸ್ತರಿಸಬೇಕು. ಏಕೆಂದರೆ, ಭೌದ್ಧಿಕ ಆಸ್ತಿಯ, ಅಥವ ಯಾವುದೇ ಆಸ್ತಿಯ ಆಲೋಚನೆ ಪ್ರಾರಂಭವಾದದ್ದು, ಆಹಾರ ಉಳ್ಳವರ ಸ್ವತ್ತಾದಾಗಿನಿಂದ!

ಆಹಾರ ಉಳ್ಳವರ ಸ್ವತ್ತಾದದ್ದು ಹೇಗೆ?

ಪ್ರಾಣಿಗಳಾದ ನಮಗೆ, ಗಾಳಿ-ನೀರುಗಳಷ್ಟೇ ಅವಶ್ಯಕವಾದ ಆಹಾರ, ಗಾಳಿ ನೀರುಗಳಂತೆ ಎಲ್ಲರಿಗೂ ಏಕೆ ಮುಕ್ತವಾಗಿ ಲಭ್ಯವಾಗುವುದಿಲ್ಲ? ವಿಪರ್ಯಾಸವೆಂದರೆ, ಮನುಷ್ಯನ ಇತಿಹಾಸದಲ್ಲಿ, ಇತ್ತೀಚಿನವರೆಗೂ ಆಹಾರವನ್ನು ಎಲ್ಲರ ಹಕ್ಕು ಎಂದೇ ಪರಿಗಣಿಸಲಾಗಿತ್ತು. ಕೆಲವು ಶತಮಾನಗಳ ಕೆಳಗೂ ವಿಶ್ವದ ಬಹುತೇಕ ಎಲ್ಲ ಭಾಗಗಳಲ್ಲಿ ಆಹಾರವನ್ನು ಇದೇ ರೀತಿ ಪರಿಭಾವಿಸಲಾಗಿತ್ತು. ಅಲ್ಲಿಂದ ಈಗಿನವರೆಗೆ ಆಗಿರುವ ಬದಲಾವಣೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಅದಕ್ಕೆ ಮೂಲ ಕಾರಣವಾದ `ಅರ್ಥಶಾಸ್ತ್ರ' ಬೆಳೆದು ಬಂದ ಬಗೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಜಗದ್ವಿಖ್ಯಾತ ಅರ್ಥಶಾಸ್ತ್ರಜ್ಞರೂ, ಅಜೀಮ್ ಪ್ರೇಮ್‌ಜಿ ವಿಶ್ವದ ಎರಡನೆಯ ಅತಿ ಹೆಚ್ಚು ಶ್ರೀಮಂತ ವ್ಯಕ್ತಿ ಆಗಿದ್ದ ಕಾಲದಲ್ಲಿ, ವಿಪ್ರೋನ ಕಾರ್ಪೊರೆಟ್ ಟ್ರೆಷರರ್ ಆಗಿ ಆ ಸಂಸ್ಥೆಯ ಹಣಕಾಸು ಉಸ್ತುವಾರಿಯನ್ನೆಲ್ಲ ನೋಡಿಕೊಂಡ ಅಪಾರ ಅನುಭವಿ ಶಂಕರ್ ಜಗನ್ನಾಥನ್ ತಮ್ಮ 'ವಿಸ್ಡಮ್ ಆಫ್ ದಿ ಆಂಟ್ಸ್' ಪುಸ್ತಕದಲ್ಲಿ ಆಹಾರ ಬೆಳೆದು ಬಂದ ಬಗೆಯನ್ನು ಚೆನ್ನಾಗಿ ಕಟ್ಟಿಕೊಡಲಿದ್ದಾರೆ. ಅವರದ್ದೇ ಮಾತಿನಲ್ಲಿ -

ಕಥೆಯೊಂದರಲ್ಲಿ ಓದಿರುವಂತೆ ಬೇಸಿಗೆಯಲ್ಲಿ ಇರುವೆಗಳು ಕಷ್ಟಪಟ್ಟು ಆಹಾರವನ್ನು ಶೇಖರಿಸಿಡುತ್ತಿದ್ದವು. ಆದರೆ, ಮಿಡತೆಗಳು ಅಂದಿನ ಆಹಾರವನ್ನು ಮಾತ್ರ ಬೇಟೆಯಾಡಿ ತಿಂದು ಮಜವಾಗಿದ್ದವು. ಚಳಿಗಾಲ ಬಂದು ಆಹಾರ ದಕ್ಕದಂತಾದಾಗ ಇರುವೆಗಳು ತಾವು ಶೇಖರಿಸಿಟ್ಟಿದ್ದ ಆಹಾರವನ್ನು ಉಂಡು ಸುಖವಾಗಿದ್ದರೆ, ಮಿಡತೆಗಳು ಹಸಿವಿನಿಂದ ಬಳಲಬೇಕಾಯಿತು. ಸಾವಿರಾರು ವರ್ಷಗಳ ಕಾಲ ಮಿಡತೆಯಂತೆ ಬೇಟೆಗಾರನ ಜೀವನ ನಡೆಸಿದ ಮಾನವ, ಇರುವೆಯಂತೆ ಆಹಾರವನ್ನು ಶೇಖರಿಸಿಡುವುದನ್ನು ಕಲಿತದ್ದು ಸುಮಾರು ೧೨,೦೦೦ ವರ್ಷಗಳ ಹಿಂದೆಯಷ್ಟೇ! ಆದರೆ, ಮಾನವನ ಶೇಖರಿಸಿಡುವ ಬುದ್ಧಿ, ಕೇವಲ ಆಹಾರವನ್ನು ಶೇಖರಿಸಿಡುವುದಕ್ಕೆ ಮಾತ್ರ ಸೀಮಿತವಾಗಲಿಲ್ಲ. ಅದು, ಇತರ ವಸ್ತುಗಳಿಗೂ ವಿಸ್ತರಿಸಿ, ಅರ್ಥಶಾಸ್ತ್ರ ಹುಟ್ಟಲು ಮತ್ತು ಅದು ಮಾನವ ಜೀವನದಲ್ಲಿ ಇಷ್ಟೊಂದು ವಿಸ್ತಾರವಾದ ವಿಷಯವಾಗಲು ನಾಂದಿಯಾಯಿತು.

ಏಕೆಂದರೆ, ಆರ್ಥಿಕತೆಯ ಹುಟ್ಟಿಗೆ ಮೂಲವಾದ 'ಖಾಸಗಿ ಆಸ್ತಿ'ಯ ಪರಿಕಲ್ಪನೆ ಆರಂಭವಾದದ್ದು ಆಹಾರವನ್ನು ಶೇಖರಿಸಿಡುವ ಪ್ರವೃತ್ತಿ ಆರಂಭವಾದಾಗಿನಿಂದ! ಹಾಗೆಯೇ, ಬೇಟೆಯನ್ನು ಆಧರಿಸಿ ಜೀವನ ನಡೆಸುತ್ತಿದ್ದ ಮನುಷ್ಯ, ಆಹಾರಕ್ಕಾಗಿ ಕೃಷಿ ಮಾಡಲು ಆರಂಭಿಸಿದಾಗ ಖಾಸಗಿ ಆಸ್ತಿ ಅನಿವಾರ್ಯವೂ ಆಯಿತು. ಏಕೆಂದರೆ, ಮನುಷ್ಯನಿಗೆ ತನ್ನ ಪರಿಶ್ರಮದ ಫಲ ತನಗೇ ದೊರೆಯುತ್ತದೆ ಎನ್ನುವುದು ಖಾತ್ರಿಯಾಗಬೇಕಿತ್ತು. ಅಂತೂ, ಮನುಷ್ಯರ ವಿಕಾಸದಲ್ಲಿ ಅತಿದೊಡ್ಡ ಮೈಲಿಗಲ್ಲುಗಳಲ್ಲೊಂದಾದ ಖಾಸಗಿ ಆಸ್ತಿ ಮಾಡಿಕೊಳ್ಳುವ ಪ್ರವೃತ್ತಿಗೆ, ಮನುಷ್ಯ ಆಹಾರದ ಶೇಖರಣೆ ಮಾಡುವುದನ್ನು ಕಲಿತದ್ದೇ ಮೂಲಕಾರಣವಾಯಿತು.

ಅಲ್ಲಿಂದಾಚೆಗೆ, ವಿಶ್ವಾದ್ಯಂತ ಆಗಿರುವ ಆರ್ಥಿಕ ಪ್ರಗತಿಯನ್ನು ಅವಲೋಕಿಸಿದಾಗ ಆಹಾರ ಶೇಖರಣೆಯ ಮಹತ್ವ ನಮಗೆ ಗೊತ್ತಾಗುತ್ತದೆ. ವಿಚಿತ್ರವೆಂದರೆ, ಮನುಷ್ಯನ ಆರ್ಥಿಕ ವಿಕಸನ ಪ್ರಕ್ರಿಯೆಯಲ್ಲಿನ ಮುಂದಿನ ದೊಡ್ಡ ಮೈಲಿಗಲ್ಲು ಕೂಡ ಆಹಾರಕ್ಕೆ ಸಂಬಂಧಿಸಿದ್ದೇ ಆಗಿತ್ತು!

ಈ ವಿಷಯವಾಗಿ, ಮುಂದುವರೆದು, ಶಂಕರ್ ಜಗನ್ನಾಥನ್ ಹೇಳುತ್ತಾರೆ - ಎಲ್ಲ ಧರ್ಮಗಳಲ್ಲೂ ಅನ್ನವನ್ನು ಮಾರುವುದು ಪಾಪ ಎನ್ನುವ ಪರಿಕಲ್ಪನೆ ಇತ್ತು. ಎಷ್ಟೇ ಬಡತನವಿದ್ದರೂ, ಆಹಾರದ ವಿಷಯದಲ್ಲಿ ಅಂತಹ ರಾಜಿ ಮಾಡಿಕೊಳ್ಳಬೇಕಾಗಿರಲಿಲ್ಲ. ಏಕೆಂದರೆ, ಆಹಾರವನ್ನು ಇತರರೊಂದಿಗೆ ಹಂಚಿಕೊಂಡು ತಿನ್ನಬೇಕಾದ್ದು ತಮ್ಮ ಕರ್ತವ್ಯ ಎಂದು ಬಹುತೇಕ ಎಲ್ಲ ದೇಶ-ಧರ್ಮಗಳವರು ನಂಬಿದ್ದರು. ಹಸಿದು ಬಂದವರಿಗೆ ಯಾರಾದರೂ, ಹೇಗಾದರೂ ಅನ್ನ ಹಾಕಿಯೇ ಹಾಕುತ್ತಿದ್ದರು. ತಾವು ತಿನ್ನುವುದನ್ನೇ ಬೇಧ ಮಾಡದೆ ಬಡಿಸುತ್ತಿದ್ದರು. ನಮ್ಮಲ್ಲಿ ಓದುವ ಹುಡುಗರಿಗೆ ವಾರಾನ್ನ (ವಾರದ ಒಂದೊಂದು ದಿನ ಒಂದೊಂದು ಮನೆಯಲ್ಲಿ ಉಚಿತ ಊಟಕ್ಕೆ ಗೊತ್ತುಮಾಡಲಾಗಿರುತ್ತಿದ್ದ, ೨೦-೩೦ ವರ್ಷಗಳಷ್ಟು ಹಿಂದೆಯೂ ಜಾರಿಯಲ್ಲಿದ್ದ ವ್ಯವಸ್ಥೆ) ದೊರೆಯುತ್ತಿದ್ದಂತೆ, ಬೇರೆ ದೇಶ-ಧರ್ಮಗಳಲ್ಲಿಯೂ ಆಹಾರದ ಖಾತ್ರಿ ಇದ್ದೇ ಇತ್ತು.

ಹಣದ ಕಲ್ಪನೆ ಚಾಲ್ತಿಗೆ ಬಂದು, ಇತರ ವಸ್ತುಗಳನ್ನು ದುಡ್ಡು-ಕಾಸಿಗೆ ಮಾರುತ್ತಿದ್ದ ಹಿಂದಿನ ಅನೇಕ ಶತಮಾನಗಳಲ್ಲಿ ಆಹಾರವನ್ನು ಮಾತ್ರ ಯಾರೂ ಹಣಕ್ಕಾಗಿ ಮಾರುತ್ತಿರಲಿಲ್ಲ. ತಮ್ಮ ತಮ್ಮ ಧರ್ಮಪಾಲನೆಯೇ ಇದಕ್ಕೆ ಮೂಲ ಕಾರಣವಾಗಿತ್ತು. ಆದರೆ, ಖ್ಯಾತ ಫ್ರೆಂಚ್ ತತ್ವಜ್ಞಾನಿ ವಾಲ್ಟೇರ್ ಹದಿನೇಳನೆಯ ಶತಮಾನದಲ್ಲಿಯೇ ಹೇಳಿರುವಂತೆ, "ಹಣದ ವಿಷಯಕ್ಕೆ ಬಂದಾಗ ನಾವೆಲ್ಲರೂ ಒಂದೇ ಧರ್ಮಕ್ಕೆ ಸೇರಿದವರು!" ವಾಲ್ಟೇರ್‌ನ ನುಡಿಯಂತೆ ೧೮ನೆಯ ಶತಮಾನದಲ್ಲಿ ಯುರೋಪ್‌ನಿಂದ ಮೊದಲುಗೊಂಡು ಆಹಾರವನ್ನು ಮಾರುವುದು ತಪ್ಪೇನಲ್ಲ ಎನ್ನುವ ಭಾವನೆ ಮೂಡಿತು. ಹಾಗಾಗಿಯೇ, ವಿಶ್ವಾದ್ಯಂತ ಹೋಟೆಲ್ / ರೆಸ್ಟೊರೆಂಟ್ ಎನ್ನುವುದು ತೀರಾ ಇತ್ತೀಚಿನ, ಕೇವಲ ಎರಡು-ಮೂರು ಶತಮಾನದಷ್ಟು ಹಿಂದಿನ ಎಣಿಕೆ.

ಅನ್ನವನ್ನು ಮಾರುವುದು ಪರವಾಗಿಲ್ಲ ಎನ್ನುವ ಮಾನವ ಇತಿಹಾಸದಲ್ಲಾದ ಮಹತ್ವದ ಬದಲಾವಣೆಯನ್ನು `ಸೋಷಿಯಲ್ ಸ್ಯಾಂಕ್ಷನ್ ಫಾರ್ ದಿ ಸೆಲ್ಫ-ಸೆಂಟರ್ಡ್ ಇಂಡಿವಿಜ್ಯುಅಲ್' (ಸ್ವಯಂ-ಕೇಂದ್ರಿತ ವ್ಯಕ್ತಿಗೆ ದೊರೆತ ಸಾಮಾಜಿಕ ಮನ್ನಣೆ) ಎಂದು ಕರೆಯುತ್ತಾರೆ. ಈ ಪ್ರವೃತ್ತಿಯೇ ಜಗತ್ತಿನ ಎಲ್ಲ ಸಂಕಷ್ಟಗಳಿಗೂ ಕಾರಣ ಎಂದರೆ ಉತ್ಪ್ರೇಕ್ಷೆಯಲ್ಲ. ಉದಾಹರಣೆಗೆ, ಇಂದು, ಹಸಿದಿರುವ ವ್ಯಕ್ತಿಯೊಬ್ಬನ ಮುಂದೆ, ಅವನಿಗೆ ಒಂದು ಅಗಳನ್ನು ಕೊಡದೆಯೇ ಶ್ರೀಮಂತ ವ್ಯಕ್ತಿಯೊಬ್ಬ ಭೂರಿಭೋಜನವನ್ನು ಉಂಡರೆ, ಅದು ಯಾವ ಸಮಾಜದಲ್ಲೂ ಕಾನೂನು-ರೀತ್ಯ ಅಪರಾಧವಲ್ಲ. ಆದರೆ, ಇದು ಉಂಟುಮಾಡುವ ಅಡ್ಡಪರಿಣಾಮಗಳಿಗೆ ಎಣೆಯೇ ಇಲ್ಲ.

ಮಾನವ ಇತಿಹಾಸದಲ್ಲಿ, ಆಹಾರವು ಹಣಕ್ಕೆ ಸಮಾನಗೊಂಡಾರಭ್ಯ ಕಳ್ಳತನ, ಸುಲಿಗೆ, ದರೋಡೆಗಳ ಸಂಖ್ಯೆ ಹೆಚ್ಚಿದೆ. ಮೂಲದಲ್ಲಿ ಬೇಟೆಗಾರನಾದ ಮನುಷ್ಯ ಸಾವಿರಾರು ವರ್ಷ ಆಹಾರಕ್ಕಾಗಿ ಬೇಟೆ ಆಡಿದ. ಈಗ ಆಹಾರವೆಂದರೆ ಹಣ ಎಂದು ಅರಿವಾಗಿರುವುದರಿಂದ, ಹಣದ ಬೇಟೆ ಆರಂಭಿಸಿದ್ದಾನೆ. ಕೆಲವೊಮ್ಮೆ ಅದು, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಬೇಟೆಯಾಡುವ ಅತಿರೇಕಕ್ಕೂ ಹೋಗುತ್ತದೆ. ಇದನ್ನು ನಾವು ಆ ಅತಿರೇಕ ಎಸಗಿದ ವ್ಯಕ್ತಿಯ ಮೇಲೆ ಮಾತ್ರ ದೂಷಿಸುತ್ತೇವೆ! ಆದರೆ, ಇದಕ್ಕೆ ನಿಜಕ್ಕೂ ಹೊಣೆಗಾರರು ಹಣವನ್ನು ಅನ್ನವನ್ನಾಗಿಸಿರುವ ನಾವೆಲ್ಲರೂ! ಪರಿಣಾಮವಾಗಿ, ಆಹಾರದ ವಿಷಯದಲ್ಲಿ, ಮಿಡತೆಯಿಂದ ಇರುವೆಯಾದ ಮನುಷ್ಯ, ಇಂದು ರಕ್ತ ಹೀರುವ ಜಿಗಣೆಯಾಗಿದ್ದಾನೆ.

ಶಂಕರ್ ಜಗನ್ನಾಥನ್ ಹೇಳಿರುವ ಮೂರನೆಯ ಪ್ರವೃತ್ತಿ, ಮೇಲಿನ ಎರಡು ಪ್ರವೃತ್ತಿಗಳಿಗಿಂತಲೂ ಹೆಚ್ಚು ಆತಂಕಕಾರಿಯಾದದ್ದು. ಅದೇನೆಂದರೆ, `ಮೆಟೀರಿಯಲ್ ಕನ್ಸಂಪ್ಷನ್ ಈಕ್ವಲ್ಸ್ ಹ್ಯೂಮನ್ ವೆಲ್ಫೇರ್'. ಅರ್ಥಾತ್, ಮನುಷ್ಯರು ಲೌಕಿಕ ವಸ್ತುಗಳ ಬಳಕೆ ಮತ್ತು ಕಬಳಿಕೆಯನ್ನೇ ತಮ್ಮ ಸೌಖ್ಯದ ಮಾಪಕವನ್ನಾಗಿಸಿಕೊಂಡಿರುವುದು.

ಇದು, ಸ್ವಯಂ-ಕೇಂದ್ರಿತ ವ್ಯಕ್ತಿಗೆ ದೊರೆತ ಸಾಮಾಜಿಕ ಮನ್ನಣೆಗಿಂತಲೂ ಹೆಚ್ಚು ಮಾರಕವಾದದ್ದು. ಏಕೆಂದರೆ, ಇಲ್ಲಿ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಆಹಾರ ಮತ್ತು ವಸ್ತುಗಳನ್ನು ಪಡೆದುಕೊಳ್ಳಲು ಹವಣಿಸುವುದು ಮಾತ್ರವಲ್ಲ, ಹಾಗೆ ಮಾಡುವುದನ್ನೇ ತನ್ನ ಸುಖದ ಸಂಕೇತ ಎಂದು ಪರಿಭಾವಿಸಲಾರಂಭಿಸಿದ್ದಾನೆ. ಹಾಗಾಗಿ, ವಸ್ತುಗಳ ಅನುಭೋಗ ಮಾತ್ರವಲ್ಲ, ಅದನ್ನು ಅನುಭವಿಸುತ್ತಿರುವುದನ್ನು ಇತರರಿಗೆ ತೋರಿಸುವುದು ಕೂಡ ಅವನಿಗೆ ಮುಖ್ಯವಾಗುತ್ತದೆ. ತಾನು ಏನನ್ನು ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೇನೆ / ಕಬಳಿಸುತ್ತಿದ್ದೇನೆ ಎನ್ನುವುದರ ಆಧಾರದ ಮೇಲೆ ಇತರರು ನನ್ನನ್ನು ಅಳೆಯುತ್ತಾರೆ ಎನ್ನುವುದು ಅವನ ಗ್ರಹಿಕೆಗೆ ಬಂದಿರುವುದರಿಂದ - ತನ್ನ ಲೌಕಿಕ ವಸ್ತುಗಳ ಬಳಕೆಯನ್ನು ಪ್ರಪಂಚಕ್ಕೆ ತೋರಿಸುವುದು ಮುಖ್ಯವಾಗುತ್ತದೆ. ಇದು ದುರಾಸೆಗೆ ಎಡೆ ಮಾಡಿಕೊಟ್ಟು, ಎಷ್ಟು ಇದ್ದರೂ ಸಾಲದು ಎನ್ನುವ ಪರಿಸ್ಥಿತಿ ತಲೆದೋರುತ್ತದೆ. ಲೌಕಿಕ ವಸ್ತುಗಳ ಕಬಳಿಕೆಗಾಗಿ ಇತರರೊಡನೆ ಸ್ಪರ್ಧೆಗಿಳಿಯಲು ಇದೇ ಮೂಲ ಪ್ರಚೋದನೆಯಾಗುತ್ತದೆ. ಈ ಸ್ಪರ್ಧೆಯಲ್ಲಿ, ಸಹಜವಾಗಿಯೇ, ಉಳ್ಳ ವ್ಯಕ್ತಿ ಗೆಲ್ಲುತ್ತಾನೆ. ಇದರಿಂದಾಗಿ, ಇರುವವರ ಮತ್ತು ಇರದವರ ನಡುವಿನ ಅಂತರ ಇನ್ನೂ ಹೆಚ್ಚುತ್ತದೆ.

ಬೇಟೆಗಾರನಾದ ಮನುಷ್ಯ ಈ ಅಂತರವನ್ನು ಕಾಯ್ದುಕೊಳ್ಳಲು ಸದಾ ಯತ್ನಿಸುತ್ತಾನೆ. ಭೌತಿಕ ಆಸ್ತಿಯಿಂದ ಪ್ರಾರಂಭಗೊಂಡ ಈ ಹವಣಿಕೆ ನಿಧಾನವಾಗಿ ಭೌದ್ಧಿಕ ಆಸ್ತಿಗೂ ವಿಸ್ತರಿಸುತ್ತದೆ. ಬೌದ್ಧಿಕ ಆಸ್ತಿ ಎಂಬುದೂ ಒಂದು ರೀತಿಯ ಬೇಟೆಯ ಸಾಧನ. ತನ್ನ ಆರ್ಥಿಕ ಮುಂದುವರಿಕೆಗೆ ಅದನ್ನು ಬಳಸುತ್ತಾನೆ. ಅದಕ್ಕೆ ಪೇಟೆಂಟ್, ಕಾಪಿರೈಟ್, ಟ್ರೇಡ್ಮಾರ್ಕ್ ಇತ್ಯಾದಿ ಹೆಸರುಗಳು ಬರುತ್ತವೆ. ಒಂದು ಕಾಲಕ್ಕೆ ಸಮುದಾಯದ ಜ್ಞಾನವಾಗಿದ್ದ ಎಲ್ಲವೂ ʼಸೋಷಿಯಲ್ ಸ್ಯಾಂಕ್ಷನ್ ಫಾರ್ ದಿ ಸೆಲ್ಫ್ ಸೆಂಟರ್ಡ್ ಇಂಡಿವಿಜ್ಯುಅಲ್ʼ ದೊರೆತದ್ದರ ಪರಿಣಾಮವಾಗಿ, ಇಂದು ಶೇಖರಿಸಿಟ್ಟುಕೊಂಡು ಮುಂದೆ commercial leverage ಮಾಡಬಹುದಾದ ಬೌದ್ಧಿಕ ಆಸ್ತಿಯಾಗುತ್ತದೆ.

ಹಾಗಾದರೆ, ಬೌದ್ಧಿಕ ಆಸ್ತಿಯನ್ನು ಹೊಂದುವುದು ತಪ್ಪು ಎಂದು ಪ್ರತಿಪಾದಿಸಿದಂತಾಯಿತೇ? ಖಂಡಿತ ಇಲ್ಲ. ಇದು ಇಲ್ಲಿಯವರೆಗೆ ನಾವು ಹೇಗೆ ಬಂದೆವು ಎನ್ನುವುದರ ಕಥನ, ಅಷ್ಟೆ! ಎಲ್ಲವೂ ಸರಿಯಿದೆಯೆಂದಲ್ಲ, ಆದರೆ ಆವತ್ತಿನ ನೆಲೆಗಟ್ಟಿನಲ್ಲಿ ನೋಡಿದರೆ, ಸ್ವಹಿತಾಸಕ್ತಿಯ ಚಿಂತನೆ ಮನುಷ್ಯನ ಅಸ್ತಿತ್ವದ ಪ್ರಶ್ನೆಯೂ ಆಗಿದ್ದುದರಿಂದ, ಎಲ್ಲ ಬಗೆಯ ಭೌತಿಕ ಮತ್ತು ಬೌದ್ಧಿಕ ಆಸ್ತಿಯ ಶೇಖರಣೆ ಆರಂಭವಾಯ್ತು ಎನ್ನುವುದನ್ನು ಹೇಳಬೇಕಾಯ್ತು. ಅದರ ಹಿಂದೆ ದುರಾಸೆಯೂ ಇದ್ದುದರಿಂದ – ಬೌದ್ಧಿಕ ಆಸ್ತಿಯನ್ನು ಬಳಸಿ ಅರ್ಥ ವ್ಯವಸ್ಥೆಯನ್ನು ಕಟ್ಟುವುದರ ಜೊತೆಗೆ ಸಾಕಷ್ಟು ಅನರ್ಥಗಳೂ ಆದವು. ಹಾಗಾಗಿ ಇಂದು ಬೌದ್ಧಿಕ ಆಸ್ತಿಯನ್ನು ಬಳಸಿ ಹಸಿರು ಭವಿಷ್ಯವನ್ನು ಕಂಡುಕೊಳ್ಳುವ ಕೆಲಸವನ್ನು ಪ್ರಯತ್ನಪೂರ್ವಕವಾಗಿ ಮಾಡಬೇಕಾಗಿ ಬಂದಿದೆ.

ವಿಶ್ವ ಬೌದ್ಧಿಕ ಆಸ್ತಿ ದಿನ ಆಚರಣೆಯ ಈ ವರ್ಷದ ಶೀರ್ಷಿಕೆ, 'ಹಸಿರು ಭವಿಷ್ಯಕ್ಕಾಗಿ ಆವಿಷ್ಕಾರ'
ವಿಶ್ವ ಬೌದ್ಧಿಕ ಆಸ್ತಿ ದಿನ ಆಚರಣೆಯ ಈ ವರ್ಷದ ಶೀರ್ಷಿಕೆ, 'ಹಸಿರು ಭವಿಷ್ಯಕ್ಕಾಗಿ ಆವಿಷ್ಕಾರ'www.wipo.int

ಇದೀಗ ಹಿಮ್ಮುಖ ಹರಿವು ಆರಂಭವಾಗುತ್ತಿದೆಯೇ?

ಬೌದ್ಧಿಕ ಆಸ್ತಿಯ ಈಚಿನ ಟ್ರೆಂಡ್‌ಗಳನ್ನು ನೋಡಿದರೆ ಹಾಗೆನಿಸುತ್ತದೆ. ಯೋಚಿಸಿ ನೋಡಿ, ಒಂದು ಕಾಲಕ್ಕೆ ʼಸಮುದಾಯ ಜ್ಞಾನʼ ಆಗಿದ್ದುದು ಬರುಬರುತ್ತಾ ಸೃಷ್ಟಿಸಿದವನ ಸ್ವತ್ತಾಯ್ತು. ಮುಂದೆ, ಆತ ಆ ಸ್ವತ್ತನ್ನು ಎಷ್ಟು ಕಾಲ commercially exploit ಮಾಡಬಹುದು ಎನ್ನುವುದು ಚರ್ಚೆಗೆ ಬಂತು. ಬೌದ್ಧಿಕ ಆಸ್ತಿಗೆ ಕಾಲಮಿತಿ, ಭೌಗೋಳಿಕ ಪರಿಧಿಗಳು ಬಂದವು. ಕೆಲವರು ಅದನ್ನೂ ಧಿಕ್ಕರಿಸಿ ನಿಂತು, ಕೆಲವು ತಂತ್ರಜ್ಞಾನ ಸಾಧನಗಳನ್ನು open Source ಮಾಡಿಟ್ಟು, ಇಂಥವುಗಳನ್ನು ಯಾರು ಬೇಕಾದರೂ ಬಳಸಿ ಅಭಿವೃದ್ಧಿಪಡಿಸಿ ಮತ್ತೆ ಮುಕ್ತವಾಗಿ ಬಿಡಬಹುದು ಎಂದರು.

ಅಲ್ಲಿಂದ ಪ್ರಾರಂಭವಾಯ್ತು ಹಿಂದಿನ ಎರಡು ಶತಮಾನಗಳಲ್ಲಿ ಕೇಂದ್ರೀಕರಿಸಿಟ್ಟುಕೊಂಡಿದ್ದ ಬೌದ್ಧಿಕ ಆಸ್ತಿಯ ಕ್ರೋಡೀಕರಣ. ಇದು Shared Economy ಅಥವ ಹಂಚಿಕೊಂಡು ಬಾಳುವ ಆರ್ಥಿಕತೆಗೆ ನಾಂದಿಯಾಯ್ತು. ಇಂದಿನ ನಾವಿನ್ಯ ಪಟುಗಳು ಹೊಸ ಆವಿಷ್ಕಾರಗಳನ್ನು ಮಾಡಿದಾಗಲೇ ಅದನ್ನು ಬೇರೊಬ್ಬರು ಹೇಗೆ ಬಳಸಬಹುದು ಎನ್ನುವುದರ ಮಾರ್ಗಸೂಚಿಗಳನ್ನೂ ಬರೆದಿಡುತ್ತಾರೆ. ತಮ್ಮ commercial interestಗೆ ಚ್ಯುತಿ ಬಾರದ ರೀತಿಯಲ್ಲಿ ತಂತ್ರಜ್ಞಾನದ ಪ್ರಯೋಜನಗಳನ್ನು ಜಗತ್ತಿಗೆ ಹಂಚುವುದು ಸಾಧ್ಯವಾಗಿದೆ. ಉದಾಹರಣೆಗೆ – ಮಾಹಿತಿ ತಂತ್ರಜ್ಞಾನದಲ್ಲಿ API ಮತ್ತು SDKಗಳ ಬಳಕೆಯಿಂದಾಗಿ ಮೂಲ ಹಕ್ಕಿಗೆ ಧಕ್ಕೆ ಬಾರದಂತೆ ಆವಿಷ್ಕಾರದ ಉಪಲಬ್ಧಿಗಳನ್ನು ಬಳಸಿಕೊಳ್ಳಬಹುದಾಗಿದೆ. ಇದನ್ನು ಹಿಮ್ಮುಖ ಹರಿವು ಎಂದೇ ಕರೆಯಬಹುದು – ಸಮಷ್ಟಿಯಿಂದ ಸ್ವಾರ್ಥದೆಡೆಗೆ ಬಂದು, ಆರ್ಥಿಕತೆಯಾಗಿ ರೂಪುಗೊಂಡು, ಅದರ ಅಡ್ಡಪರಿಣಾಮಗಳನ್ನು ಮನಗಂಡು ಮತ್ತೆ ಸ್ವಾರ್ಥದಿಂದ ಸಮಷ್ಟಿಯೆಡೆಗೆ ಹರಿಯುತ್ತಿರುವ ಪ್ರಬುದ್ಧ ಬೌದ್ಧಿಕ ಆಸ್ತಿ!

ಇಂದು ವಿಶ್ವ ಬೌದ್ಧಿಕ ಆಸ್ತಿ ದಿನದ ಜೊತೆಗೆ ಬಸವ ಜಯಂತಿಯೂ ಅಕ್ಷಯ ತದಿಗೆಯೂ ಬಂದೊದಗಿವೆ. ಈ ಮೂರರ ತತ್ವಗಳೂ ಮೇಳೈಸಿ ಜಗತ್ತಿನ ಭವಿಷ್ಯ ಹಸಿರಾಗಲಿ. ಬೌದ್ಧಿಕ ಆಸ್ತಿ ಸ್ಥಾವರವಾಗುವ ಬದಲು, ಊರಾಡಿ ಉದ್ಧಾರ ಮಾಡುವ ಜಂಗಮವಾಗಲಿ. ಒಬ್ಬರ ಮೆದುಳಲ್ಲಿ ಜನಸಿದ ನಾವೀನ್ಯ ಮತ್ತೊಬ್ಬರ ಪ್ರಾವೀಣ್ಯದಲ್ಲಿ ಪುಟಿದು ಅಕ್ಷಯವಾಗುವ ಬಂಗಾರವಾಗಲಿ!

ಎನ್.‌ ರವಿ ಶಂಕರ್‌, ಸಂವಹನ ಸಲಹೆಗಾರರು. ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ಸಂವಹನ ಸಲಹೆ ನೀಡುವಲ್ಲಿ ಮುಂಚೂಣಿಯಲ್ಲಿರುವ ʼಏಮ್‌ ಹೈ ಕನ್ಸಲ್ಟಿಂಗ್ʼನ ಸಿಇಓ. ಭಾರತದ ಅತಿಶ್ರೇಷ್ಠ ನವೋದ್ಯಮಗಳನ್ನು ಹತ್ತಿರದಿಂದ ಕಂಡಿದ್ದಾರೆ.

ಇಜ್ಞಾನ Ejnana
www.ejnana.com