ಹಸಿರುಹಾವಿನ ಕುಲದ ಅಹೇತುಲಾ ನಸುಟಾ ಎನ್ನುವ ಹಾವೇ ಭಾರತದ ಎಲ್ಲೆಡೆಯೂ ಇದೆ ಎಂದು ನಂಬಲಾಗಿತ್ತು
ಹಸಿರುಹಾವಿನ ಕುಲದ ಅಹೇತುಲಾ ನಸುಟಾ ಎನ್ನುವ ಹಾವೇ ಭಾರತದ ಎಲ್ಲೆಡೆಯೂ ಇದೆ ಎಂದು ನಂಬಲಾಗಿತ್ತುDavidvraju, CC BY-SA 4.0, via Wikimedia Commons

ಪಶ್ಚಿಮ ಘಟ್ಟಗಳ ಹಸಿರು ಹಾವುಗಳೆಲ್ಲವೂ ಒಂದೇ ಅಲ್ಲ!

ನೋಡಲು ಒಂದೇ ರೀತಿ ಇದ್ದರೂ ದಕ್ಷಿಣಭಾರತದಲ್ಲಿ ಒಟ್ಟು ಆರು ಬಗೆಯ ಹಸಿರು ಹಾವುಗಳು ಇವೆ ಎನ್ನುವ ವಿಷಯ ಬೆಂಗಳೂರಿನ ಐಐಎಸ್ಸಿ ಪರಿಸರವಿಜ್ಞಾನಿಗಳ ಅಧ್ಯಯನದಿಂದ ತಿಳಿದುಬಂದಿದೆ.

ಹಾಂ. ಗಿಡ, ಪೊದೆಗಳಲ್ಲಿ ಅದು ಆ ಗಿಡದ್ದೇ ಭಾಗವೇನೋ ಎನ್ನುವ ಹಾಗೆ ತೆಳ್ಳನೆ ತಳುಕಿಕೊಂಡ, ಗಿಡದಷ್ಟೇ ಹಸಿರಾದ ಹಸಿರುಹಾವುಗಳನ್ನು ನೋಡಿರಬೇಕಲ್ಲ! ಇವುಗಳ ಚೂಪು ಮೂತಿಯನ್ನು ಕಂಡು ಕೆಲವರು ಇವು ಕಣ್ಣು ಕುಕ್ಕುತ್ತವೆ ಎಂದು ಹೆದರಿಸುವುದೂ ಉಂಟು. ನೋಡಲು ಒಂದೇ ರೀತಿ ಇರುವ ಈ ಹಾವುಗಳಲ್ಲಿ ಐದನ್ನು ಒಂದೇ ಪ್ರಬೇಧಕ್ಕೆ ಸೇರಿದವು ಎಂದು ಭಾವಿಸಲಾಗಿತ್ತು. ಆದರೆ ಇದೀಗ ಬೆಂಗಳೂರಿನ ಇಂಡಿಯನ್‌ ಇನ್ಸ್‌ ಟಿಟ್ಯೂಟ್‌ ಆಫ್‌ ಸೈನ್ಸಸ್‌ ಸಂಸ್ಥೆಯ (ಐಐಎಸ್ಸಿ) ಪರಿಸರವಿಜ್ಞಾನಿಗಳ ಅಧ್ಯಯನದ ಪ್ರಕಾರ ಇವು ಬೇರೆ, ಬೇರೆ ಪ್ರಭೇದಗಳು. ಹೀಗಾಗಿ ಈಗ ದಕ್ಷಿಣಭಾರತದಲ್ಲಿ ಒಟ್ಟು ಆರು ಬಗೆಯ ಹಸಿರು ಹಾವುಗಳು ಇವೆ ಎಂದಾಗಿದೆ.

ಏಶಿಯನ್‌ ವೈನ್‌ ಸ್ನೇಕ್‌ ಅಥವಾ ಬಳ್ಳಿ ಹಾವುಗಳು ಎಂದು ವಿಜ್ಞಾನಿಗಳು ಹೆಸರಿಸಿರುವ ಈ ಹಸಿರುಹಾವುಗಳು ಅಹೇಟುಲಾ ಎನ್ನುವ ಕುಲಕ್ಕೆ ಸೇರಿದವು. ಇವುಗಳಿಗೆ ಚಾಟಿಹಾವುಗಳು ಎಂಬ ಹೆಸರೂ ಇದೆ. ನೋಡಲು ತೆಳ್ಳಗಿನ ಬಳ್ಳಿ ಇಲ್ಲವೇ ಚಾಟಿಯಂತೆ ಕಾಣುವ ಇವುಗಳ ಬಣ್ಣ ಹಚ್ಚ ಹಸಿರು. ಇತ್ತೀಚೆಗೆ ಪ್ರೊಅಹೇಟುಲಾ ಎನ್ನುವ ಇನ್ನೊಂದು ಹಸಿರುಹಾವಿನ ಕುಲವನ್ನೂ ಗುರುತಿಸಲಾಗಿತ್ತು. ಈ ಕುಲದ ಅಹೇತುಲಾ ನಸುಟಾ ಎನ್ನುವ ಹಾವೇ ಭಾರತದ ಎಲ್ಲೆಡೆಯೂ ಇದೆ ಎಂದು ನಂಬಲಾಗಿತ್ತು. ಆದರೆ ಈಗ ಈ ಪ್ರಭೇದದೊಳಗೆ ಹಲವು ಉಪಪ್ರಭೇದಗಳಿವೆಯೆಂದೂ, ಅವುಗಳೆಲ್ಲವನ್ನೂ ಪ್ರತ್ಯೇಕ ಪ್ರಭೇದಗಳೆಂದು ಪರಿಗಣಿಸಬಹುದೆಂದೂ ಐಐಎಸ್ಸಿಯಲ್ಲಿ ಸಂಶೋಧಕರಾಗಿದ್ದ ಆಶೋಕ್‌ ಮಲಿಕ್‌ ಮತ್ತು ಅವರ ಸಂಗಡಿಗರು ಪತ್ತೆ ಮಾಡಿದ್ದಾರೆ.

ದಕ್ಷಿಣ ಭಾರತದಲ್ಲಿ ಇರುವ ಮೊಂಡು ಮೂಗಿನ ಹಸಿರುಹಾವುಗಳಲ್ಲಿ ನಾಲ್ಕು ಪ್ರಭೇದಗಳಿವೆ. ಅಹೇಟುಲಾ ಬೋರಿಯಾಲಿಸ್‌, ಅಹೇಟುಲಾ ಫಾರ್ನ್ಸ್ವರ್ತಿ, ಅಹೇಟುಲಾ ಮಲಬಾರಿಕಾ ಹಾಗೂ ಅಹೇಟುಲಾ ಇಸಾಬೆಲಿನಾ ಈ ನಾಲ್ಕು ಪ್ರಭೇದಗಳು. ಇವು ನೋಡಲು ಒಂದೇ ತೆರನಾಗಿದ್ದರೂ, ಪ್ರತಿಯೊಂದೂ ಪಶ್ಚಿಮ ಘಟ್ಟದ ನಿರ್ದಿಷ್ಟ ಭಾಗದಲ್ಲಿಯಷ್ಟೆ ನೆಲೆಸಿವೆ. ಜೊತೆಗೆ ಈ ವಿವಿಧ ಹಾವುಗಳ ನಡುವೆ ಸಂಪರ್ಕವೂ ಇಲ್ಲ. ಹೀಗಾಗಿ ಇವು ಒಂದೊಂದು ಪ್ರತ್ಯೇಕವಾಗಿ ವಿಕಾಸವಾದ ಪ್ರಭೇದಗಳು ಎನ್ನುವುದು ಈ ವಿಜ್ಞಾನಿಗಳ ಅಂಬೋಣ.

ವಿವಿಧ ಹಾವಿನ ಪ್ರಭೇದಗಳ ಮೂತಿಗಳು ಹಾಗೂ ತಲೆಬುರುಡೆಗಳಲ್ಲಿ ಇರುವ ಸೂಕ್ಷ್ಮ ವ್ಯತ್ಯಾಸಗಳು
ವಿವಿಧ ಹಾವಿನ ಪ್ರಭೇದಗಳ ಮೂತಿಗಳು ಹಾಗೂ ತಲೆಬುರುಡೆಗಳಲ್ಲಿ ಇರುವ ಸೂಕ್ಷ್ಮ ವ್ಯತ್ಯಾಸಗಳು

ಜೀವಿಗಳ ಪ್ರಭೇದ ಎಂದರೆ ಒಂದು ಇನ್ನೊಂದರ ಜೊತೆಗೆ ಬೆರೆಯದ, ಕೂಡದ, ಸಂತಾನೋತ್ಪತ್ತಿ ಮಾಡದ ಪ್ರತ್ಯೇಕ ಬಗೆ ಎಂದರ್ಥ. ಹೀಗೆ ಇವು ಪ್ರತ್ಯೇಕವಾಗಿರುವುದಕ್ಕೆ ಹಲವು ಕಾರಣಗಳಿರಬಹುದು. ದೀರ್ಘ ಕಾಲ ಒಂದು ಇನ್ನೊಂದರ ಸಂಪರ್ಕಕ್ಕೆ ಬಾರದೇ ಇದ್ದರೂ ಪ್ರತ್ಯೇಕ ಪ್ರಭೇದಗಳಾಗಿ ಬೇರ್ಪಡಬಹುದು. ಅಥವಾ ಅವುಗಳ ಅಂಗಾಂಗಗಳಲ್ಲಿ ಒಂದಿನ್ನೊಂದುರ ಜೊತೆಗೆ ಕೂಡಲಾಗದಂತಹ ರಚನೆಗಳು ಇರಬಹುದು. ಅಥವಾ ತಳಿಗುಣಗಳು ಬೇರೆಯಾಗಿರುವುದರಿಂದ ಕೂಡಿದರೂ ಹುಟ್ಟುವ ಮರಿಗಳು ಬದುಕದೇ ಹೋಗಬಹುದು. ಈ ಎಲ್ಲ ಅಂಶಗಳೂ ಒಂದಿನ್ನೊಂದರಂತೆ ಇಲ್ಲದಂತೆ ಮಾಡುತ್ತವೆ. ಈ ಐದೂ ಹಾವುಗಳೂ ಒಂದಿನ್ನೊಂದರ ಸಂಪರ್ಕಕ್ಕೆ ಬರಲು ಆಗದಂತಹ ನೆಲೆಗಳಲ್ಲಿ ಇರುವುದರಿಂದ ಹೀಗೆ ಪ್ರತ್ಯೇಕ ಪ್ರಭೇದಗಳಾಗಿವೆ ಎನ್ನುತ್ತಾರೆ ಐಐಎಸ್ಸಿ ವಿಜ್ಞಾನಿಗಳು.

ಸಾಮಾನ್ಯವಾಗಿ ಪ್ರತ್ಯೇಕ ಪ್ರಭೇದಗಳಾಗಿದ್ದರೂ ಮೇಲ್ನೋಟಕ್ಕೆ ಹಾಗೆ ತೋರದವುಗಳನ್ನು ಗುಪ್ತಪ್ರಭೇದಗಳು ಎನ್ನುತ್ತಾರೆ. ಈ ಎಲ್ಲ ಹಾವಿನ ಬಗೆಗಳೂ ಇದುವರೆವಿಗೂ ಗುಪ್ತಪ್ರಭೇದಗಳಾಗಿದ್ದುವು. ಇವುಗಳ ನಡವಳಿಕೆಗಳು, ಸಂತಾನೋತ್ಪತ್ತಿ ಹಾಗೂ ತಳಿಗುಣಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದಾಗ ಇವು ಪ್ರತಿಯೊಂದೂ ಪ್ರತ್ಯೇಕವೆಂದು ಅರಿವಾಯಿತು ಎನ್ನುತ್ತಾರೆ ಅಶೋಕ್‌ ಮಲಿಕ್.‌ ಈ ಹಾವುಗಳ ವಿವಿಧ ಅಂಗಾಂಶಗಳು ಹಾಗೂ ಇವು ಎಲ್ಲೆಲ್ಲಿ ಇವೆ ಎನ್ನುವ ಮಾಹಿತಿಯ ಆಧಾರದ ಮೇಲೆ ಈ ಪ್ರಭೇದಗಳನ್ನು ನಿರ್ಧರಿಸಲಾಗಿದೆ.

ಇವು ಹಸಿರುಹಾವುಗಳಾದರೆ, ಇದೇ ರೀತಿಯಲ್ಲಿ ಬಳುಕುವ ಬಳ್ಳಿಯಂತಿರುವ ಕಂದು ಬಣ್ಣದ ಇನ್ನೊಂದು ಹಾವೂ ಇದೆ. ಅಹೇಟುಲಾ ಟ್ರಾವೆಂಕೋರಿಕಾ ಎನ್ನುವ ಇದು ಕೇರಳದ ಕಾಡುಗಳಲ್ಲಿ ಕಾಣಸಿಗುತ್ತದೆ. ಇದುವರೆವಿಗೂ ಇದು ಇಡೀ ದಕ್ಷಿಣಭಾರತದಲ್ಲಿ ಹಾಗೂ ಶ್ರೀಲಂಕಾದಲ್ಲಿ ಕಾಣಸಿಗುವ ಅಹೇಟುಲಾ ಆಕ್ಸಿರಿಂಕಾ ಎನ್ನುವ ಹಾವು ಎಂದೇ ಭಾವಿಸಲಾಗಿತ್ತು. ಆದರೆ ಇದು ಕೇವಲ ಕೇರಳದ ಕಾಡುಗಳಲ್ಲಿ ಮಾತ್ರ ಕಾಣಸಿಗುವ ಹಾವು. ಬೇರೆಯೇ ಪ್ರಭೇದ ಎಂದು ಐಐಎಸ್ಸಿ ತಂಡ ಗುರುತಿಸಿದೆ.

ಇವೆಲ್ಲವೂ ಕೂಡ ಸುಮಾರು ಎರಡೂವರೆ ಕೋಟಿ ವರ್ಷಗಳ ಹಿಂದೆ ಪ್ರೊಅಹೇಟುಲಾ ಕುಲದಿಂದ ಬೇರೆಯಾದ ಹೊಸ ಕುಲದವು. ಅಂದಿನಿಂದ ಹೀಗೆ ಹಲವು ಪ್ರಭೇದಗಳಾಗಿ ಒಡೆದು ಜೀವಿಸುತ್ತಿವೆ ಎಂದು ಈ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ಈ ಸಂಶೋಧನೆಯ ವಿವರಗಳನ್ನು ಜೂಟಾಕ್ಸಾ ಪತ್ರಿಕೆ ವರದಿ ಮಾಡಿದೆ.

Related Stories

No stories found.
logo
ಇಜ್ಞಾನ Ejnana
www.ejnana.com