ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ - ಕೈಪಿಡಿ
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ - ಕೈಪಿಡಿejnana.com

ವಿಜ್ಞಾನ ಸಾಹಿತ್ಯ ನಿರ್ಮಾಣಕ್ಕೆ ಕನ್ನಡದಲ್ಲೊಂದು ಕೈಪಿಡಿ

ವಿಜ್ಞಾನ ಸಂವಹನ ಕೈಗೊಳ್ಳಲು ಉದ್ದೇಶಿಸಿರುವ ಹೊಸಬರಿಗೆ ಉತ್ತಮ ಮಾರ್ಗದರ್ಶನ ನೀಡುವ ಕೃತಿ

ವಿಜ್ಞಾನ ವಿಷಯಗಳನ್ನು ಸರಳ ಭಾಷೆಯಲ್ಲಿ, ಕರಾರುವಾಕ್ಕಾಗಿ, ಓದುಗರಿಗೆ ಕಷ್ಟವೆನಿಸದಂತೆ ಕನ್ನಡದಲ್ಲಿ ಉಣಬಡಿಸುವ ವಿಜ್ಞಾನ ಲೇಖಕರ ಸಂಖ್ಯೆ ಇಂದಿಗೂ ಕಡಿಮೆಯೇ. ಈ ಕೊರತೆಗೆ ಇರಬಹುದಾದ ಹಲವು ಕಾರಣಗಳನ್ನು ಮೆಟ್ಟಿ ನಿಂತು ವಿಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕಾದ ಅಗತ್ಯವಿದೆ. ಇದನ್ನು ಮನಗಂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗಳ ಸಹಯೋಗದೊಂದಿಗೆ ವಿಜ್ಞಾನ ಬರಹಗಾರರಿಗೆ ಸಹಕಾರಿಯಾಗಬಲ್ಲ ಕೈಪಿಡಿಯನ್ನು ಪ್ರಕಟಿಸಿದೆ.

ಕನ್ನಡದ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಎಂಟು ಮಂದಿ ವಿಜ್ಞಾನ ಲೇಖಕರು ಒಟ್ಟಾಗಿ ರಚಿಸಿರುವ ಈ ಕೈಪಿಡಿಯು ವಿಜ್ಞಾನ ಸಂವಹನದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಉತ್ತಮ ಆಕರ ಗ್ರಂಥವಾಗಬಲ್ಲದು. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಮಾಹಿತಿ ಈ ಕೃತಿಯ ಒಂಬತ್ತು ಅಧ್ಯಾಯಗಳಲ್ಲಿ ಸಂಕ್ಷಿಪ್ತವಾಗಿ ಮೂಡಿಬಂದಿದೆ. ಇಲ್ಲಿ ಗಮನಿಸಬೇಕಾದ ವೈಶಿಷ್ಟ್ಯವೆಂದರೆ, ಈ ಕೈಪಿಡಿಯಲ್ಲಿ ಪ್ರಕಟವಾಗಿರುವ ಅಧ್ಯಾಯಗಳನ್ನು, ಎರಡು ದಿನದ ಕಾರ್ಯಾಗಾರದಲ್ಲಿ ಸರಿಸುಮಾರು 50 ಮಂದಿ ವಿಜ್ಞಾನ ಲೇಖಕರುಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಿ, ಸಂವಾದದಲ್ಲಿ ಚರ್ಚಿಸಲ್ಪಟ್ಟ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರವೇ ಅಂತಿಮಗೊಳಿಸಲಾಗಿದೆ. ಸ್ವತಃ ವಿಜ್ಞಾನ ಸಂವಹನಕಾರರೂ ಆಗಿರುವ ಭಾರತರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರು ಈ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ ಆಶಯ ನುಡಿಗಳನ್ನೂ ಈ ಕೈಪಿಡಿಯಲ್ಲಿ ದಾಖಲಿಸಲಾಗಿದೆ.

ಈ ಕೈಪಿಡಿಯ ಹೂರಣವನ್ನು ನೋಡುವುದಾದರೆ, ವಿಜ್ಞಾನ ಸಾಕ್ಷರತೆ ಎಂದರೇನು? ಸಾರ್ವಜನಿಕರಿಗೆ ವಿಜ್ಞಾನವನ್ನು ತಲುಪಿಸುವ ಅವಶ್ಯಕತೆ ಇದೆಯೇ? ಇದೆಯೆಂದಾದರೆ ಒಬ್ಬ ಲೇಖಕನಿಗೆ ಕನ್ನಡದಲ್ಲಿ ವಿಜ್ಞಾನ ಸಂವಹನ ಕೈಗೊಳ್ಳಬೇಕಾದರೆ ಇರಬೇಕಾದ ತತ್ವಗಳು, ತಂತ್ರಗಳನ್ನು ಈ ಕೈಪಿಡಿಯ ಸಂಪಾದಕರಾದ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ ಮೊದಲ ಅಧ್ಯಾಯದಲ್ಲಿ ವಿವರಿಸಿದ್ದಾರೆ.

ಕನ್ನಡದಲ್ಲಿ ವಿಜ್ಞಾನ ಬರಹವನ್ನು ಮಾಡುವಾಗ ಸಾಮಾನ್ಯವಾಗಿ ಎದುರಿಸುವ ಸಮಸ್ಯೆ ಎಂದರೆ ಪಾರಿಭಾಷಿಕ ಪದಗಳ ಬಳಕೆ. ಪಾರಿಭಾಷಿಕ ಪದಗಳ ಬಳಕೆ ಹೇಗಿರಬೇಕು, ಪದಕೋಶಗಳ ಮಾಹಿತಿ, ಅವುಗಳ ಸೃಷ್ಟಿ ಹೇಗಿರಬೇಕು? ಕನ್ನಡ ಅಂಕಿ ಸಂಖ್ಯೆಗಳನ್ನು ಬಳಸಬೇಕೆ? ಚಿಹ್ನೆ, ತೂಕ, ಅಳತೆಯ ಮೂಲಮಾನಗಳನ್ನು ಬಳಸುವುದು ಹೇಗೆ ಎಂಬುದರ ಕುರಿತಾದ ಮಾಹಿತಿಯನ್ನು “ಥಟ್ ಅಂತ ಹೇಳಿ” ಖ್ಯಾತಿಯ ಡಾ. ನಾ. ಸೋಮೇಶ್ವರ ಹಂಚಿಕೊಂಡಿದ್ದಾರೆ.

ಮಾಹಿತಿ ತಂತ್ರಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಸಂವಹನ ಕೈಗೊಳ್ಳುವಾಗ ತಾಂತ್ರಿಕ ಪದಗಳಿಗೆ ಪಾರಿಭಾಷಿಕ ಪದಗಳನ್ನು ಸೃಷ್ಟಿ ಮಾಡುವಾಗ ಅಥವಾ ಅನುವಾದ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಡಾ. ಯು. ಬಿ. ಪವನಜ ಸವಿವರವಾಗಿ ತಿಳಿಸಿದ್ದಾರೆ.

ಕನ್ನಡದಲ್ಲಿ ವಿಜ್ಞಾನ ಸಂವಹನ ಮಾಡಬೇಕೆಂದು ಹೊರಟವರಿಗೆ ಸಂವಹನಕ್ಕಾಗಿ ಲಭ್ಯವಿರುವ ಸಾಧನ, ಸಲಕರಣೆ ಮತ್ತು ಸಂಪನ್ಮೂಲಗಳೇನು? ಅವನ್ನೆಲ್ಲ ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎನ್ನುವುದನ್ನು ಪ್ರತ್ಯೇಕ ಅನುಬಂಧದೊಂದಿಗೆ ಟಿ.ಜಿ.ಶ್ರೀನಿಧಿಯವರು ವಿವರಿಸಿದ್ದಾರೆ.

ದಿನಪತ್ರಿಕೆ, ಮಾಸಪತ್ರಿಕೆ ಮತ್ತು ನಿಯತಕಾಲಿಕೆಗಳು ನಮ್ಮ ಸುತ್ತಮುತ್ತ ಪ್ರತಿದಿನವೂ ಜರುಗುವ ಘಟನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಮುಖ ಮಾಧ್ಯಮಗಳಾಗಿವೆ. ಇಂತಹ ಪತ್ರಿಕೆಗಳಿಗೆ ಬರೆಯುವುದು ಹೇಗೆ ಎಂಬುದನ್ನು ಹಿರಿಯ ಪತ್ರಕರ್ತ-ವಿಜ್ಞಾನ ಲೇಖಕ ನಾಗೇಶ ಹೆಗಡೆಯವರು ವಿವರಿಸಿದ್ದಾರೆ. ಲೇಖನಗಳಿಗೆ ವಿಷಯದ ಆಯ್ಕೆ ಹೇಗಿರಬೇಕು, ಜಾಗತಿಕ ಸುದ್ದಿಗಳ ಜೊತೆಗೆ ನಮ್ಮ ಸುತ್ತಮುತ್ತ ನಡೆಯುತ್ತಿರುವ ಹಲವಾರು ಸಂಗತಿಗಳನ್ನು ಹೇಗೆ ತಿಳಿಸಬಹುದು ಮತ್ತು ಸಂಪಾದಕರಿಗೆ ಲೇಖನಗಳನ್ನು ಕಳುಹಿಸುವಾಗ ಅಥವಾ ವ್ಯವಹರಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು ಎಂಬುದನ್ನೂ ಅವರ ಬರಹದಲ್ಲಿ ಪಟ್ಟಿ ಮಾಡಲಾಗಿದೆ.

ವಿಜ್ಞಾನ ಪುಸ್ತಕಗಳನ್ನು ಬರೆಯುವುದು ಹೇಗೆ? ಅವುಗಳ ವಿಧಗಳು, ಗಾತ್ರ, ವಿಷಯಕ್ಕೆ ಸಂಬಂಧಿಸಿದ ಹೂರಣ - ತೋರಣ ಮುಂತಾದ ವಿಷಯಗಳನ್ನು ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ. ಪುಸ್ತಕಗಳನ್ನು ಯಾರಿಗಾಗಿ ಬರೆಯುತ್ತಿದ್ದೇವೆ? ಯಾತಕ್ಕಾಗಿ ಬರೆಯುತ್ತಿದ್ದೇವೆ? ವಿಷಯ, ಭಾಷಾ ಶೈಲಿಯ ಆಯ್ಕೆ ಹೇಗಿರಬೇಕು? ಬರೆಯುವ ಮುನ್ನ ವಿಜ್ಞಾನ ಲೇಖಕರ ಪುಸ್ತಕಗಳನ್ನು ಓದಬೇಕೆ? ಹಾಗಾದರೆ, ವಿಜ್ಞಾನ ವಿಷಯಗಳಲ್ಲಿ ಓದಲೇಬೇಕಾದ ಪುಸ್ತಕಗಳಾವುವು ಎನ್ನುವ ಪ್ರಶ್ನೆಗಳನ್ನು ಅವರ ಲೇಖನ ಚರ್ಚಿಸುತ್ತದೆ.

ಸಂವಹನ ಮಾಧ್ಯಮಗಳ ಪೈಕಿ ಇಂದಿಗೂ ಪ್ರಮುಖ ಸ್ಥಾನದಲ್ಲಿರುವುದು ರೇಡಿಯೋ. ರೇಡಿಯೋದಲ್ಲಿ ವಿಜ್ಞಾನ ಸಂವಹನಕಾರರಿಗೆ ಇರುವ ಅವಕಾಶಗಳೇನು? ಮಿತಿಗಳೇನು? ರೇಡಿಯೋ ಪ್ರಸಾರದಲ್ಲಿ ಬಳಕೆಯಲ್ಲಿರುವ ವಿವಿಧ ಪ್ರಕಾರಗಳಾದ ಕಿರುಭಾಷಣ, ಭಾಷಣ, ಸಂದರ್ಶನ, ಸಂವಾದ, ಚರ್ಚೆ, ನಾಟಕ, ರೂಪಕ, ವೈಜ್ಞಾನಿಕ ಕಥೆ, ಇತ್ಯಾದಿಗಳ ಸ್ವರೂಪಗಳೇನು ಎನ್ನುವುದರ ಬಗ್ಗೆ ಸ್ವತಃ ಈ ಕ್ಷೇತ್ರದ ಪರಿಣತರಾದ ಸುಮಂಗಲ ಮುಮ್ಮಿಗಟ್ಟಿಯವರು ಮಾರ್ಗದರ್ಶನ ನೀಡಿದ್ದಾರೆ.

ಬೇರೆ ಭಾಷೆಯಲ್ಲಿರುವ ವಿಜ್ಞಾನದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕೆಂದರೆ ಇರುವ ಸವಾಲುಗಳೇನು? ಯಾವೆಲ್ಲ ಪಾರಿಭಾಷಿಕ ಪದಗಳನ್ನು ಬಳಸಬೇಕು, ಅನುವಾದಕರಾಗಬೇಕಾದರೆ ಏನೆಲ್ಲ ಅರ್ಹತೆಗಳಿರಬೇಕು, ಕೃತಿಸ್ವಾಮ್ಯದ ಬಗ್ಗೆ ತಿಳಿದುಕೊಂಡಿರಬೇಕಾದ ವಿಷಯಗಳೇನು, ಮೂಲಕೃತಿಯ ಆಶಯಕ್ಕೆ ಧಕ್ಕೆಯಾಗದಂತೆ ಅನುವಾದ ಮಾಡಲು ಅನುಸರಿಸಬೇಕಾದ ಕ್ರಮಗಳೇನು ಎಂಬದರ ಬಗ್ಗೆ ಪೂರಕವಾದ ಮಾಹಿತಿಯನ್ನು ಬಗ್ಗೆ ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ ನೀಡಿದ್ದಾರೆ.

ಅನುವಾದ ಮಾಡುವುದೂ ಒಂದು ಕೌಶಲ, ಹಾಗೂ ಸಾಹಿತ್ಯ ಕೃತಿಯ ಅನುವಾದಕ್ಕಿಂತ ಜನಪ್ರಿಯ ವಿಜ್ಞಾನ ಕೃತಿಯ ಅನುವಾದ ವಿಭಿನ್ನವಾಗಿರುತ್ತದೆ. ಇಂತಹ ಅನುವಾದ ಕೈಗೊಳ್ಳುವಾಗ ಕೃತಿಯಲ್ಲಿನ ಶಬ್ದಗಳನ್ನಷ್ಟೇ ಅನುವಾದಿಸದೆ ವಾಕ್ಯ ಚಿತ್ರಣದ ಮೇಲೆ ಲಕ್ಷ್ಯ ವಹಿಸುವುದು ಹೇಗೆ, ಸಣ್ಣದೆಂದು ತೋರುವ ಅಂಶಗಳಿಗೂ ಮಹತ್ವ ಕೊಡಬೇಕಾದ್ದು ಏಕೆ ಎನ್ನುವುದನ್ನೆಲ್ಲ ಹಿರಿಯ ಸಂವಹನಕಾರ ಪ್ರೊ. ಎಂ.ಆರ್. ನಾಗರಾಜು ಮನಮುಟ್ಟುವಂತೆ ತಿಳಿಸಿದ್ದಾರೆ.

ಇಷ್ಟೆಲ್ಲ ಅಂಶಗಳನ್ನು ಒಳಗೊಂಡಿರುವ ಈ ಕೃತಿಯು ವಿಜ್ಞಾನ ಸಂವಹನ ಕೈಗೊಳ್ಳಲು ಉದ್ದೇಶಿಸಿರುವ ಹೊಸಬರಿಗೆ ನಿಜಕ್ಕೂ ಉತ್ತಮ ಮಾರ್ಗದರ್ಶನ ನೀಡುತ್ತದೆ. ಇಂಥದ್ದೊಂದು ಕೃತಿಯನ್ನು ಸಿದ್ಧಪಡಿಸಲು ನೆರವಾದ ಲೇಖಕರು, ಕೃತಿಯ ಸಂಪಾದಕರು ಹಾಗೂ ಪ್ರಕಾಶಕರು ನಿಜಕ್ಕೂ ಅಭಿನಂದನಾರ್ಹರು.

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ - ಕೈಪಿಡಿ

  • ಪ್ರಧಾನ ಸಂಪಾದಕರು: ಟಿ. ಎಸ್. ನಾಗಾಭರಣ

  • ಸಂಪಾದಕರು: ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ

  • ಪ್ರಕಾಶಕರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ, ಬೆಂಗಳೂರು

  • ೧೪೨ ಪುಟಗಳು, ಬೆಲೆ: ರೂ. ೧೦೦

  • ಉಚಿತ ಪಿಡಿಎಫ್ ಪ್ರತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯವಿದೆ

Related Stories

No stories found.
logo
ಇಜ್ಞಾನ Ejnana
www.ejnana.com