ವಿಜ್ಞಾನದ ಜಗತ್ತಿಗೆ ಕನ್ನಡದ ಕಿಟಕಿ
'ವಿಜ್ಞಾನ ಲೋಕ' ಪತ್ರಿಕೆಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ 2007ರಿಂದ ಪ್ರಕಟಿಸುತ್ತಿದೆejnana.com

ವಿಜ್ಞಾನದ ಜಗತ್ತಿಗೆ ಕನ್ನಡದ ಕಿಟಕಿ

'ವಿಜ್ಞಾನ ಲೋಕ' ಪತ್ರಿಕೆಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ 2007ರಿಂದ ಪ್ರಕಟಿಸುತ್ತಿದೆ

ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯ ವಿಜ್ಞಾನ ಪತ್ರಿಕೆಗಳಿಲ್ಲ ಎನ್ನುವುದು ಬಹುಸಮಯದಿಂದ ಕೇಳಿಬರುತ್ತಿರುವ ದೂರು. ಈ ದೂರಿನಲ್ಲಿ ಸತ್ಯಾಂಶವೂ ಇಲ್ಲದಿಲ್ಲ. 1918ರ 'ವಿಜ್ಞಾನ'ದಿಂದ ಇಂದಿನವರೆಗೆ ನೋಡಿದರೂ ಹೆಚ್ಚುಕಾಲ ಪ್ರಕಟವಾದ, ಹೆಚ್ಚು ಸುದ್ದಿಮಾಡಿದ ಪತ್ರಿಕೆಗಳು ಬೆರಳೆಣಿಕೆಯಷ್ಟೇ ಕಾಣಸಿಗುತ್ತವೆ.

ಇಂತಹ ಸನ್ನಿವೇಶದಲ್ಲೂ ನಮ್ಮ ಗಮನ ಸೆಳೆಯುವ ಪತ್ರಿಕೆಗಳ ಸಾಲಿನಲ್ಲಿ ನಿಲ್ಲುವುದು 'ವಿಜ್ಞಾನ ಲೋಕ'. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಈ ದ್ವೈಮಾಸಿಕ ಪತ್ರಿಕೆಯನ್ನು 2007ರಿಂದ ಪ್ರಕಟಿಸುತ್ತಿದೆ.

ಪ್ರಖ್ಯಾತ ವೈದ್ಯ - ವೈದ್ಯಸಾಹಿತಿ ಡಾ. ಪಿ. ಎಸ್. ಶಂಕರ್ ಈ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ - ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಪರಿಣತರ ಲೇಖನಗಳು ವಿಜ್ಞಾನ ಲೋಕದಲ್ಲಿ ಪ್ರಕಟವಾಗುತ್ತವೆ. ಇಡೀ ಪತ್ರಿಕೆ ಹೊಳಪಿನ ಕಾಗದದ ಮೇಲೆ ಬಹುವರ್ಣದಲ್ಲಿ ಮುದ್ರಣವಾಗುವುದು ವಿಶೇಷ.

ವಿಜ್ಞಾನ ಲೋಕದ ಸಂಚಿಕೆಗಳು ಪ್ರತಿ ಜನವರಿ, ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಪ್ರಕಟವಾಗುತ್ತವೆ. ಪ್ರತಿ ಸಂಚಿಕೆಯ ತಲಾ 2000 ಪ್ರತಿಗಳನ್ನು ಮುದ್ರಿಸಲಾಗುತ್ತಿದ್ದು, ಅವನ್ನು ರಾಜ್ಯದೆಲ್ಲೆಡೆಯ ವಿಜ್ಞಾನ ಪದವಿ ಪೂರ್ವ ಕಾಲೇಜುಗಳು, ವಿಜ್ಞಾನ ಪದವಿ ಕಾಲೇಜುಗಳು, ವಿಜ್ಞಾನ ಕೇಂದ್ರಗಳು, ಗ್ರಂಥಾಲಯಗಳು ಮತ್ತು ಇನ್ನಿತರೆ ಸಂಘ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜಾಲತಾಣದಲ್ಲಿ ವಿಜ್ಞಾನ ಲೋಕ ಸಂಚಿಕೆಗಳನ್ನು ಉಚಿತವಾಗಿ ಓದಬಹುದು
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜಾಲತಾಣದಲ್ಲಿ ವಿಜ್ಞಾನ ಲೋಕ ಸಂಚಿಕೆಗಳನ್ನು ಉಚಿತವಾಗಿ ಓದಬಹುದುkstacademy.in

ಹೊಸದಾಗಿ ವಿಜ್ಞಾನ ಸಂವಹನ ಪ್ರಾರಂಭಿಸಿದವರನ್ನೂ ಪ್ರೋತ್ಸಾಹಿಸುತ್ತಿರುವುದು ವಿಜ್ಞಾನ ಲೋಕದ ವೈಶಿಷ್ಟ್ಯಗಳಲ್ಲೊಂದು. ಪ್ರಕಟಣೆಯ ಹತ್ತು ವರ್ಷ ಪೂರೈಸಿದ ಸಂದರ್ಭಕ್ಕೆ ಹೊರತರಲಾದ ವಿಶೇಷ ಸಂಚಿಕೆ, ವಿಜ್ಞಾನ ಲೋಕ ನಡೆದುಬಂದ ದಾರಿಯ ಮಹತ್ವದ ಮೈಲಿಗಲ್ಲು. ಪತ್ರಿಕೆಯ ಮೊದಲ ಐದು ವರ್ಷಗಳಲ್ಲಿ ಪ್ರಕಟವಾದ ಲೇಖನಗಳಲ್ಲಿ ಕೆಲವನ್ನು ಆಯ್ದು 'ವಿಜ್ಞಾನ ದೀಪ್ತಿ' ಎಂಬ ಪ್ರಾತಿನಿಧಿಕ ಸಂಕಲನವನ್ನೂ ಹೊರತರಲಾಗಿತ್ತು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜಾಲತಾಣದಲ್ಲಿ ವಿಜ್ಞಾನ ಲೋಕ ಪತ್ರಿಕೆಯ ಸಂಚಿಕೆಗಳನ್ನು ಉಚಿತವಾಗಿ ಓದಬಹುದು, ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಹಾಗೂ ಇಂತಹವೇ ಇನ್ನಿತರ ಪತ್ರಿಕೆಗಳನ್ನು ಓದುವುದು ಮತ್ತು ಕ್ರಿಯಾತ್ಮಕ ಪ್ರತಿಕ್ರಿಯೆ ನೀಡುವುದು ಕನ್ನಡದ ವಿಜ್ಞಾನ ಪತ್ರಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಮಾಡಬಹುದಾದ ಅತ್ಯಂತ ಸುಲಭವಾದ ಕೆಲಸ.

ಕನ್ನಡದ ಓದುಗರ ಜ್ಞಾನದಾಹವನ್ನು ವಿಜ್ಞಾನ ಲೋಕ ಇನ್ನಷ್ಟು ಕಾಲ ತಣಿಸಲಿ, ಅದು ಇನ್ನಷ್ಟು ಸಮೃದ್ಧವಾಗಿ ಸಾವಿರಾರು ಓದುಗರನ್ನು ತಲುಪಲಿ ಎನ್ನುವುದು ಇಜ್ಞಾನ ತಂಡದ ಹಾರೈಕೆ.

Related Stories

No stories found.
ಇಜ್ಞಾನ Ejnana
www.ejnana.com