ಶ್ರೀ ಸಿ. ಆರ್. ಸತ್ಯ ಅವರು 'ತ್ರಿಮುಖಿ'ಯಲ್ಲಿ ತಾವು ನಡೆದುಬಂದ ಹಾದಿಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಶ್ರೀ ಸಿ. ಆರ್. ಸತ್ಯ ಅವರು 'ತ್ರಿಮುಖಿ'ಯಲ್ಲಿ ತಾವು ನಡೆದುಬಂದ ಹಾದಿಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. T G Srinidhi / ejnana.com

ಪುಸ್ತಕ ಪರಿಚಯ: ತಂತ್ರಜ್ಞರೊಬ್ಬರ ಜೀವನದ ಪುಟಗಳನ್ನು ತೆರೆದಿಡುವ 'ತ್ರಿಮುಖಿ'

ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲಿಸಿದ ಮಹಾನ್ ವಿಜ್ಞಾನಿಗಳ ಜೊತೆ ಹೆಗಲಿಗೆ ಹೆಗಲುಕೊಟ್ಟು ಶ್ರೀ ಸತ್ಯ ಅವರು ಮಾಡಿದ ಕಾರ್ಯವನ್ನು ತಿಳಿಯುವಾಗ ರೋಮಾಂಚನವಾಗುತ್ತದೆ.

ನಮ್ಮ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಆರಂಭಿಕ ದಿನಗಳಲ್ಲಿ ಅಲ್ಲಿ ತಂತ್ರಜ್ಞರಾಗಿ ಕೆಲಸಮಾಡಿದ ಶ್ರೀ ಸಿ. ಆರ್. ಸತ್ಯ ಅವರು ಇತ್ತೀಚೆಗೆ ಪ್ರಕಟವಾಗಿರುವ ತಮ್ಮ ಕೃತಿ 'ತ್ರಿಮುಖಿ'ಯಲ್ಲಿ ತಾವು ನಡೆದುಬಂದ ಹಾದಿಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಅತ್ಯುತ್ತಮ ವಿಜ್ಞಾನಿಯಾಗಿ, ಕನ್ನಡ ಹಾಗೂ ಇಂಗ್ಲಿಷ್ ಲೇಖಕರಾಗಿ, ಹಾಸ್ಯಬರಹಗಾರರಾಗಿ ಕನ್ನಡಿಗರಿಗೆ ಶ್ರೀ ಸತ್ಯ ಅವರ ಪರಿಚಯ ಇದ್ದೇ ಇದೆ. ವಿಕ್ರಂ ಸಾರಾಭಾಯ್, ಎ ಪಿ ಜೆ ಅಬ್ದುಲ್ ಕಲಾಂ, ಯು ಆರ್ ರಾವ್ ಮುಂತಾದ ಶ್ರೇಷ್ಠ ವಿಜ್ಞಾನಿಗಳ ಜೊತೆ ಕೆಲಸ ಮಾಡಿದ ಮೇಧಾವಿ ಅವರು.

'ತ್ರಿಮುಖಿ' ಕೃತಿ ಸತ್ಯರ ಸಂಪೂರ್ಣ ಜೀವನ ಚರಿತ್ರೆ ಅಲ್ಲದಿದ್ದರೂ ಈ ಪುಸ್ತಕದಲ್ಲಿ ಅವರ ಜೀವನದ ಪ್ರಮುಖ ಘಟ್ಟಗಳು ನಿರೂಪಣೆ ಇದೆ. ಈ ಕೃತಿಯ ಮೊದಲ ಭಾಗ 'ಹೊರನಾಡು ಕನ್ನಡಿಗನಾಗಿ', ಎರಡನೆಯದು 'ಒಬ್ಬ ಪ್ರವಾಸಿಗನಾಗಿ ಹಾಗೂ ಕೊನೆಯದು 'ಮರಳಿ ತವರೂರಿಗೆ'. ಈ ಮೂರೂ ಭಾಗಗಳಲ್ಲಿ ತಾವು ಬೆಂಗಳೂರಿನಿಂದ ಹೊರಟು ಹೊರನಾಡಿಗನಾಗಿ, ಪ್ರವಾಸಿಯಾಗಿ, ಮರಳಿ ಮನೆಗೆ ಬಂದ ಹಾದಿಯ ಕುತೂಹಲ ಮೂಡಿಸುವ ಚಿತ್ರಣವನ್ನು ನೀಡಿರುವ ಸತ್ಯ ಅವರು, ಅದನ್ನು ಕಾವ್ಯಮಯವಾಗಿ ವಿಭಾಗಿಸಿ ತ್ರಿಮುಖಿ ಎಂದು ಹೆಸರಿಸಿರುವುದು ಆಕರ್ಷಕವಾಗಿದೆ.

ಈ ಮೂರು ಮುಖಗಳ ದರ್ಶನ ಮಾಡಿಸುತ್ತ ಶ್ರೀ ಸತ್ಯ ಅವರು ತಮ್ಮ ಜೀವನ ಪಯಣದ ರೋಚಕ ಸಂಗತಿಗಳನ್ನು ಬಹಳ ಆಪ್ತವಾಗಿ ಮೂಡಿಸುತ್ತಾರೆ. ಈ ಬರಹವನ್ನು ಓದುತ್ತಿದ್ದರೆ, ಅಲ್ಲೇ - ಅವರ ಪಕ್ಕದಲ್ಲೇ ನಾವು ಇರುವ ಅನುಭವ ಆಗುತ್ತದೆ. ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲಿಸಿದ ಮಹಾನ್ ವಿಜ್ಞಾನಿಗಳ ಜೊತೆ ಹೆಗಲಿಗೆ ಹೆಗಲುಕೊಟ್ಟು ಶ್ರೀ ಸತ್ಯ ಅವರು ಮಾಡಿದ ಕಾರ್ಯವನ್ನು ತಿಳಿಯುವಾಗ ರೋಮಾಂಚನವಾಗುತ್ತದೆ. ಸತ್ಯರ ಬರಹದ ಜೊತೆಗೆ ಈ ಕೃತಿಯಲ್ಲಿ ಅಪರೂಪದ ಚಿತ್ರಗಳ ಸಂಗ್ರಹವೂ ಇದೆ.

ಇದರಲ್ಲಿರುವ ಒಂದು ಅನುಭವ ಹೀಗಿದೆ: ರಾಕೆಟ್ಟಿಗೆ ಬೇಕಾದ ಇಂಧನ ಸಮ್ಮಿಶ್ರಣದ ನೋದಕಗಳ ಸ್ಫೋಟಕವನ್ನು ಜೀಪಿನ ಟ್ರೈಲರ್‌ನಲ್ಲಿ ಕಾರೈಕುಡಿಯಿಂದ ತಿರುವನಂತಪುರಕ್ಕೆ ತರಲು ಸತ್ಯ ನಿಯೋಜಿತರಾಗಿದ್ದರು. ರಾತ್ರಿ ಇವರು ತಪಾಸಣೆಗೆ ಜೀಪ್ ನಿಲ್ಲಿಸಿದ ಸ್ಥಳಕ್ಕೆ ಹೋದಾಗ ಅವರ ಎದೆ ಧಸಕ್ಕೆಂದಿತು. ಜೀಪಿಗೆ ಒರಗಿಕೊಂಡು ಯಾರೋ ಇಬ್ಬರು ಬೀಡಿ ಸೇದುತ್ತಿದ್ದರು. ಕಾವಲುಗಾರ, ಪೊಲೀಸರು ನಾಪತ್ತೆಯಾಗಿದ್ದರು. ಅಕಸ್ಮಾತ್ ಗೀರಿದ ಕಡ್ಡಿಯೋ ಸೇದಿ ಬಿಸಾಕಿದ ಬೀಡಿ ತುಂಡೋ ಟ್ರೈಲರ್‌ ಒಳಗೆ ಬಿದ್ದಿದರೆ ಕೊಯಮತ್ತೂರಿನ ಆ ಭಾಗವೇ ನಿರ್ನಾಮವಾಗಿ ಹೋಗಬೇಕಿತ್ತು. ಅದನ್ನು ಮನಗಂಡು ಅವರು ರಾತ್ರಿಯೆಲ್ಲಾ ಜೀಪಿಗೆ ಪಹರೆ ಕೊಟ್ಟಿದ್ದಾಯ್ತು.

ಇನ್ನೊಮ್ಮೆ ನಮ್ಮ ದೇಶದಲ್ಲಿ ತಯಾರಾಗುವ ಗುಂಡು ನಿರೋಧಕ ಜ್ಯಾಕೆಟ್‌ಗಳನ್ನು ಕೊಳ್ಳಲು ಆಲ್ಜೀರಿಯಾದ 'ಜಂಟಾ'ದಿಂದ ಸತ್ಯ ಸೇವೆಸಲ್ಲಿಸುತ್ತಿದ್ದ ಸಂಸ್ಥೆಗೆ ಕರೆ ಬಂದಿತ್ತು. ಅಲ್ಲಿಗೆ ಹೋಗಿ, ಅವರ ರಾಜಧಾನಿಯಲ್ಲಿ ಉಗ್ರರು ನಡೆಸುತ್ತಿದ್ದ ಅಟ್ಟಹಾಸದಿಂದ ಪಾರಾಗಿ ಹಿಂದಿರುಗಿದ ಕತೆ ಓದಿದಾಗ ಮೈಜುಂ ಎನ್ನಿಸುತ್ತದೆ. ಅದಕ್ಕಿಂತ ಹೆಚ್ಚಾಗಿ, ಎ ಕೆ ೪೭ರ ದಾಳಿ ತಡೆಯುವ ಗುಂಡು ನಿರೋಧಕ ಜ್ಯಾಕೆಟ್‌ಗಳನ್ನು ನಮ್ಮಲ್ಲೇ ಟಾಟಾ ಸಂಸ್ಥೆಯೊಂದು ನಿರ್ಮಿಸುತ್ತಿದೆ ಎಂಬ ವಿಚಾರ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಎಕೆ ೪೭ರ ನಿರ್ಮಾತೃ ರಷ್ಯಾದ ವಿಜ್ಞಾನಿ ಮೈಕೆಲ್ ಕಲಾಷ್ನಿಕೋವ್ ಅವರನ್ನು ದೆಹಲಿಯಲ್ಲಿ ಭೇಟಿಯಾದ ಬಗೆಗೂ ಸತ್ಯ ವಿವರಿಸಿದ್ದಾರೆ. ಲೇಖನದ ಕೊನೆಗೆ ಮೂಡಿರುವ ವಿಷಾದದ ಛಾಯೆ, ಜೀವ ತೆಗೆಯುವ ಸಾಧನಗಳು ಬಗ್ಗೆ, ಅವುಗಳ ದುರುಪಯೋಗಗಳ ಬಗ್ಗೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.

ಒಮ್ಮೆ ಇಸ್ರೋದಲ್ಲಿ ಕೆಲಸಕ್ಕೆ ಹಾಜರಾಗದ ಒಬ್ಬ ನೌಕರನಿಗೆ ನೋಟಿಸ್ ಕೊಟ್ಟು, ನೌಕರರ ಯೂನಿಯನ್ ಇವರನ್ನು ಘೇರಾವ್ ಮಾಡಿ "ಸತ್ಯ ಅವರು ಕರ್ನಾಟಕದಿಂದ ಬಂದು ಮಲಯಾಳಿಗಳಿಗೆ ಮೇಲೆ ಇಲ್ಲಸಲ್ಲದ ಆರೋಪ ಅಪವಾದ ಹೊರಿಸುತ್ತಿದ್ದಾರೆ ಇವರಿಗೆ ಕೇರಳದವರನ್ನು ಕಂಡರೆ ಆಗುವುದಿಲ್ಲ" ಎಂದು ದೂರು ಕೊಟ್ಟಿದ್ದರು. ಈ ಪ್ರಕರಣವು ನೇರವಾದ ಕೆಲಸಕ್ಕೆ ರಾಜಕೀಯ ಲೇಪನ ಮಾಡುವ ಕಲೆಯ ಪ್ರದರ್ಶನದಂತಿದೆ. ಕೇರಳದ ಸಂಸದ ವಯಲಾರ್ ರವಿ ಅವರು "ಇಸ್ರೋ ಸಂಸ್ಥೆಯಲ್ಲಿ ಕನ್ನಡದವರ ದಬ್ಬಾಳಿಕೆ ನಿಜವೇ?" ಎಂದು ಲೋಕಸಭೆಯಲ್ಲಿ ಪ್ರಶ್ನಿಸುವವರೆಗೂ ಇದು ಹೋಗಿತ್ತು ಎನ್ನುವುದು ನಮ್ಮ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತೆ ಭಾಸವಾಗುತ್ತದೆ.

ಇಸ್ರೋ ಸಂಸ್ಥೆಯಲ್ಲಿ ತಾಂತ್ರಿಕ ನಿರ್ದೇಶಕರಾಗಿ ತಿರುವನಂತಪುರದಲ್ಲಿದ್ದ ಸತ್ಯ ಅವರಿಗೆ ಒಮ್ಮೆ ಪ್ರೊ. ರಾವ್ ಅವರಿಂದ ಕರೆ ಬಂತು. ಆಗ ಅವರು ಕೆಲಸ ಮಾಡುತ್ತಿದ್ದ ತಾಂತ್ರಿಕ ಕ್ಷೇತ್ರ : ಸಮ್ಮಿಶ್ರ ವಸ್ತುಗಳು (ಕಂಪೋಸಿಟ್ಸ್). ಲೋಹಗಳಿಗಿಂತಲೂ ಹಗುರವಾದ ಇವು ಅವಕ್ಕಿಂತ ಉತ್ಕೃಷ್ಟವಾದ ಅನೇಕ ಉಪಯೋಗಕರ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಈ ಸಮ್ಮಿಶ್ರ ವಸ್ತುಗಳನ್ನು ದೃಢೀಕರಿಸಿದ ಪ್ಲಾಸ್ಟಿಕ್ ಎಂದೂ ಹೇಳಬಹುದು. ಇವನ್ನು ಅಳವಡಿಸಿಕೊಂಡು ವಿನ್ಯಾಸ ಮಾಡಿ ನಿರ್ಮಿಸಿದ ಉಪಕರಣಗಳು ಈಗ ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ ಹಾಗೂ ಅನೇಕ ಕೈಗಾರಿಕೆಗಳಲ್ಲಿ ಮತ್ತು ದಿನನಿತ್ಯ ಬಳಕೆಯಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿವೆ. ಈ ತಂತ್ರಜ್ಞಾನದ ಬಗ್ಗೆ ಬೆಂಗಳೂರಿಗೆ ಬಂದು ಶ್ರೀ ರತನ್ ಟಾಟಾ ಅವರಿಗೆ ಸುಮಾರು ಒಂದು ಘಂಟೆ ಅವಧಿಯಲ್ಲಿ ತಿಳಿಸಿಕೊಡಿ ಎಂದು ಪ್ರೊ. ರಾವ್ ಅವರು ಆದೇಶಿಸಿದರು.

ಅನಂತರ ನಡೆದದ್ದನ್ನು ಶ್ರೀ ಸತ್ಯ ಅವರು ಹೀಗೆ ದಾಖಲಿಸುತ್ತಾರೆ: "ಹಾಗಾಗಿ, ಒಂದು ದಿನ, ಬೆಂಗಳೂರಿನ ಬಾಹ್ಯಾಕಾಶ ಕೇಂದ್ರದ ಮುಖ್ಯ ಕಛೇರಿಯಲ್ಲಿ ಶ್ರೀ ರತನ್ ಟಾಟಾ ಅವರನ್ನು ಮುಖಾಮುಖಿ ಭೇಟಿ ಮಾಡಿ, ಅವರೊಡನೆ ವಿಚಾರ ವಿನಿಮಯ ಮಾಡಿದ್ದು ನನ್ನ ಸುಯೋಗವೇ ಎನ್ನಬೇಕು. ನಾನು ಹೇಳಿದ್ದನ್ನೆಲ್ಲಾ ಬಹು ಆಸಕ್ತಿಯಿಂದ ಕೇಳಿ, ‘ಇದು ಯೋಚನೆ ಮಾಡಬೇಕಾದ ವಿಷಯ. ನಿಮ್ಮಿಂದ ನನಗೆ ಇನ್ನೂ ಹೆಚ್ಚು ಸಲಹೆಗಳು ಬೇಕಾಗಿವೆ ಎಂದರು". ಇಸ್ರೋ ಒಪ್ಪಿಗೆ ಪಡೆದು, ತಮ್ಮ ಕೆಲಸದ ಜೊತೆಗೇ ಒಂದು ವರ್ಷ ಕಾಲ ಟಾಟಾ ಅವರಿಗೆ ಸತ್ಯ ತಾಂತ್ರಿಕ ಸಲಹೆಗಾರರಾಗಿದ್ದರು. ಅದರ ಪರಿಣಾಮವಾಗಿ ಜಿಗಣಿಯಲ್ಲಿ ಟಾಟಾ ಅಡ್ವಾನ್ಸ್ಡ್ ಮೆಟೀರಿಯಲ್ ಸಂಸ್ಥೆ ಪ್ರಾರಂಭವಾಯಿತು. ಅದನ್ನು ಮುನ್ನಡೆಸಲು ರತನ್ ಟಾಟಾರ ಆಹ್ವಾನದಂತೆ ಸತ್ಯ ಟಾಟಾ ಅಡ್ವಾನ್ಸ್ಡ್ ಮೆಟೀರಿಯಲ್ ಸಂಸ್ಥೆಗೆ ತಾಂತ್ರಿಕ ನಿರ್ದೇಶಕರಾಗಿ ಸೇರಿ 2009ರಲ್ಲಿ ನಿವೃತ್ತರಾದರು. ಈಗ ಈ ಟಾಟಾ ಸಂಸ್ಥೆಯು ಬೃಹತ್ ಪ್ರಮಾಣದ ಉದ್ಯಮವಾಗಿದೆ. ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದಲ್ಲಿ ದೊಡ್ಡ ಹೆಸರುಗಳಿಸಿದೆ.

ಈ ಅನುಭವಗಳ ಜೊತೆಗೆ ಅವರ ಸಂಪರ್ಕಕ್ಕೆ ಬಂದ ಅನೇಕ ವ್ಯಕ್ತಿಗಳ ಪರಿಚಯ, ಅವರೊಡನೆ ಕಳೆದ ರಸಮಯ ಸನ್ನಿವೇಶಗಳು, ಅವರು ತಿರುವನಂತಪುರದ ಅನಂತಶಯನ ದೇವಸ್ಥಾನದ ನಿರ್ಮಾಣದ ಬಗ್ಗೆ ಮಾಡಿದ ಸಂಶೋಧನೆ, ತಿರುವನಂತಪುರದಲ್ಲಿ ಬೆಳೆಸಿದ ಕರ್ನಾಟಕ ಅಸೋಸಿಯೇಷನ್, ಅದು ಮಾಡಿದ ಸ್ತುತ್ಯ ಕಾರ್ಯಗಳು, ಪುರಂದರದಾಸರ ಐವತ್ತು ಕೃತಿಗಳನ್ನು ಮಲೆಯಾಳಿ ಲಿಪಿಯಲ್ಲಿ ಸಾಹಿತ್ಯ ಮತ್ತು ಸ್ವರಸಂಯೋಜನೆಗಳ ಸಮೇತ ಮುದ್ರಿಸಿ ಅಲ್ಲಿಯ ಸಂಗೀತಗಾರರಿಗೆ ಹಂಚಿದ್ದು, ಹಾಗೆಯೇ ಮಹಾರಾಜ ಸ್ವಾತಿ ತಿರುನಾಳ್ ಅವರ ಐವತ್ತು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದ್ದು - ಈ ತರಹದ ಅನೇಕ ಸಾಂಸ್ಕೃತಿಕ ಕೆಲಸಗಳ ದಾಖಲೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತವೆ.

ಸತ್ಯ ಅವರ ಲೇಖನದಲ್ಲಿ ನವಿರಾದ ಹಾಸ್ಯ ಹಾಸುಹೊಕ್ಕಾಗಿರುತ್ತದೆ. ಅಂಥ ಒಂದು ಪ್ರಸಂಗವನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ. ಇದು ಸತ್ಯ ಅವರು ಬ್ರಹ್ಮಚಾರಿಯಾಗಿದ್ದಾಗ ನಡೆದ ಘಟನೆ: "ಒಮ್ಮೆ ಸಿಂಡಿಕೇಟ್ ಬ್ಯಾಂಕ್ ಮಹಿಳಾ ಸಿಬ್ಬಂದಿಗಳಿಗೆಂದೇ ಮೀಸಲಾದ ಒಂದು ಶಾಖೆಯನ್ನು ತಿರುವನಂತಪುರದಲ್ಲಿ ತೆರೆಯಿತು. ಅಲ್ಲಿದ್ದ ಮಹಿಳೆಯರೆಲ್ಲಾ ನಮ್ಮ ಕಣ್ಣಿಗೆ ವಿಶ್ವಸುಂದರಿಯರ ಹಾಗೇ ಕಂಡರು. ಅದರಲ್ಲೂ ಕ್ಯಾಷಿಯರ್ ಅಂತೂ ಎಲ್ಲರ ಕಣ್ಣುಗಳನ್ನೂ, ಮನವನ್ನೂ ಸೆಳೆಯುವಂತಹ ಸ್ಪುರದ್ರೂಪಿಯಾಗಿದ್ದಳು. ಇದಕ್ಕೆ ನಮ್ಮ ಪ್ರತಿಕ್ರಿಯೆ? ಇನ್ಯಾವುದೋ ಬ್ಯಾಂಕ್‌ನಲ್ಲಿದ್ದ ನಮ್ಮ ಜುಜುಬಿ ಠೇವಣಿಗಳನ್ನು ಈ ಬ್ಯಾಂಕಿಗೆ ರವಾನಿಸಿದ್ದು (ಇದು ಮೊದಲನೇ ಹಂತ), ಎರಡನೇ ಹಂತದಲ್ಲಿ ಶನಿವಾರಗಳು ನಮಗೆ ರಜಾ ದಿನಗಳಾದುದ್ದರಿಂದ ಸಾವಧಾನವಾಗಿ ಸ್ವಲ್ಪ ಸ್ವಲ್ಪ ದುಡ್ಡು ಎಳೆಯುವುದು. ಇನ್ನೂರು ರೂಪಾಯಿ ಬೇಕಾದರೆ ಎರಡು ಬಾರಿ ನೂರು ರೂಪಾಯಿ ಚೆಕ್‌ಗಳನ್ನು ಪಾವತಿಸೋದು. ಹೀಗಾಗಿ ಕ್ಯಾಷಿಯರ್ ಮುಂದೆ ಎರಡರಷ್ಟು ಹೊತ್ತು ಕಳೆಯಬಹುದಲ್ಲಾ! ನನ್ನ ಸ್ನೇಹಿತನೊಬ್ಬ ಈ ಪ್ರಕ್ರಿಯೆಯಲ್ಲಿ ಮೂರನೇ ಹಂತಕ್ಕೂ ಇಳಿದ. ಅದು: ಕ್ಯಾಷಿಯರ್ ಹತ್ತಿರ ಇನ್ನೊಮ್ಮೆ ಹೋಗಿ ಒಂದು ನೂರು ರೂಪಾಯಿಗೆ ಚಿಲ್ಲರೆ ಕೇಳುವುದು!"

ಸತ್ಯ ಅವರ ಬಗ್ಗೆ ಅನೇಕರಿಗೆ ಗೊತ್ತಿಲ್ಲದೆ ಇರುವ ಎರಡು ವಿಚಾರಗಳಿವೆ. ಮೊದಲನೆಯದು, ಹಾಸ್ಯೋತ್ಸವಗಳಲ್ಲಿ ಕೇಳಿ ಬರುವ "ಆಚೆ ಮನೆ ಸುಬ್ಬಮ್ಮಂಗೆ ಏಕಾದಶಿ ಉಪ್ವಾಸ" ಎಂಬ ಹಾಸ್ಯ ಕವಿತೆಯ ಕರ್ತೃ ಶ್ರೀ ಸತ್ಯ ಎಂಬುದು ಅನೇಕರಿಗೆ ಗೊತ್ತಿಲ್ಲ. ನಮ್ಮಲ್ಲಿ ಅನೇಕರಿಗೆ ತಿಳಿಯದ ಮತ್ತೊಂದು ವಿಷಯವೆಂದರೆ ಸತ್ಯ ಅವರು ಪ್ರಖ್ಯಾತ ವಿದ್ವಾಂಸರಾದ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳ ಮೊಮ್ಮಗ. ಪ್ರೊ. ಎ. ಆರ್. ಕೃ. ಅವರ ಸಮಸ್ತ ಕೃತಿಗಳನ್ನು ಅಂತರಜಾಲದಲ್ಲಿ ಉಚಿತವಾಗಿ ಸಿಕ್ಕುವಂತೆ ಮಾಡಿರುವುದು ಸತ್ಯ ಅವರ ಕನ್ನಡ ಪ್ರೀತಿಗೆ ನಿದರ್ಶನ. ಇಲ್ಲಿಯವರೆಗೆ ಪ್ರೊ. ಎ. ಆರ್. ಕೃ. ಅವರ ಕೃತಿಗಳನ್ನು ೫೦೦೦ಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಿಕೊಳ್ಳಲಾಗಿದೆ ಎಂದರೆ ಆ ಪುಸ್ತಕಗಳಿಗೆ ಇಂದಿಗೂ ಇರುವ ಬೇಡಿಕೆಯು ಮನವರಿಕೆಯಾಗುತ್ತದೆ.

ತ್ರಿಮುಖಿ - ನೆನಪುಗಳ ಹಾದಿಯಲ್ಲಿ

ಲೇಖಕರು: ಸಿ. ಆರ್. ಸತ್ಯ

ಪ್ರಕಾಶಕರು: ಬೀChi ಪ್ರಕಾಶನ, ಬೆಂಗಳೂರು

೧೪೦ ಪುಟಗಳು, ಬೆಲೆ: ರೂ. ೧೯೯

ಆನ್‍ಲೈನ್ ಖರೀದಿಗೆ: ನವಕರ್ನಾಟಕ

'ಜಾಣಸುದ್ದಿ' ಪಾಡ್‌ಕಾಸ್ಟ್‌ನಲ್ಲಿ ಶ್ರೀ ಸಿ. ಆರ್. ಸತ್ಯ ಅವರ ಸಂದರ್ಶನ ಕೇಳಿ: ಭಾಗ ೧ | ಭಾಗ ೨

Related Stories

No stories found.
logo
ಇಜ್ಞಾನ Ejnana
www.ejnana.com