ವನ್ಯಜೀವನದ ಪರಿಚಯ, ಅಧ್ಯಯನ, ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಪ್ರಸಾದರ ಅನುಭವಗಳಿಗೆ ರೋಮಾಂಚಕತೆಯ ಜೊತೆಗೆ ಅಧಿಕೃತತೆಯನ್ನೂ ತಂದುಕೊಟ್ಟಿವೆ
ವನ್ಯಜೀವನದ ಪರಿಚಯ, ಅಧ್ಯಯನ, ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಪ್ರಸಾದರ ಅನುಭವಗಳಿಗೆ ರೋಮಾಂಚಕತೆಯ ಜೊತೆಗೆ ಅಧಿಕೃತತೆಯನ್ನೂ ತಂದುಕೊಟ್ಟಿವೆejnana.com

ಪುಸ್ತಕ ಪರಿಚಯ: Trails of Vanishing Tails

ವನ್ಯಜೀವನ ಹಾಗೂ ವನ್ಯಜೀವಿ ಸಂರಕ್ಷಣೆಯಂಥ ಮಹತ್ತ್ವದ, ಗಂಭೀರ ವಿಷಯವನ್ನು ಲಲಿತಪ್ರಬಂಧದೋಪಾದಿಯಲ್ಲಿ ನಿರೂಪಿಸಿರುವುದು ಈ ಕೃತಿಯ ವೈಶಿಷ್ಟ್ಯ
Published on

ಹೆಚ್. ಎನ್. ಎ. ಪ್ರಸಾದ್ ಬರೆದಿರುವ 'ಟ್ರೇಲ್ಸ್ ಆಫ್ ವ್ಯಾನಿಷಿಂಗ್ ಟೇಲ್ಸ್' ಎಂಬ ಪುಸ್ತಕವನ್ನು ನಿಮಗೆ ಓದುವಂತೆ ಪ್ರೇರೇಪಿಸುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ, ವನ್ಯಜೀವನ ಹಾಗೂ ವನ್ಯಜೀವಿ ಸಂರಕ್ಷಣೆಯಂಥ ಮಹತ್ತ್ವದ, ಗಂಭೀರ ವಿಷಯವನ್ನು ಲಲಿತಪ್ರಬಂಧದೋಪಾದಿಯಲ್ಲಿ ನಿರೂಪಿಸಿರುವುದು ಈ ಕೃತಿಯ ವೈಶಿಷ್ಟ್ಯ. ವನ್ಯಜೀವಿಗಳ ಬಗೆಗಿನ ತಮ್ಮ ಆಸಕ್ತಿಯನ್ನು ಕುರಿತು ದೂರದೇಶದಲ್ಲಿರುವ ಮೊಮ್ಮಗನಿಗೆ ಕಥೆಯ ರೂಪದಲ್ಲಿ ಹೇಳಲು ಹೊರಟ ಲೇಖಕರು ಅವನ್ನೆಲ್ಲ ಟಿಪ್ಪಣಿಗಳ ರೂಪದಲ್ಲಿ ಬರೆದಿಡಲು ಯೋಚಿಸಿದ್ದೂ ಒಂದು ಆಕಸ್ಮಿಕವೇ.

ವೃತ್ತಿಯಲ್ಲಿ ಇಂಜಿನಿಯರ್ ಆದ ಪ್ರಸಾದ್ ಪ್ರವೃತ್ತಿಯಲ್ಲಿ ವನ್ಯಜೀವಿಪ್ರೇಮಿ. ತಮ್ಮ ತಾಂತ್ರಿಕ ಕೌಶಲವನ್ನೂ ವನ್ಯಜೀವಿ ಅಧ್ಯಯನಕ್ಕೆ ಒದಗಿಸಿರುವ ಪ್ರಸಾದ್, ಹೆಸರಾಂತ ಅರಣ್ಯಾಧಿಕಾರಿ ಚಿಣ್ಣಪ್ಪ ಹಾಗೂ ವನ್ಯಜೀವಿ ವಿಜ್ಞಾನಿ ಉಲ್ಲಾಸ ಕಾರಂತರೊಡನೆ ವನ್ಯಜೀವನದ ಪರಿಚಯ, ಅಧ್ಯಯನ, ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಅವರ ಅನುಭವಗಳಿಗೆ ರೋಮಾಂಚಕತೆಯ ಜೊತೆಗೆ ಅಧಿಕೃತತೆಯನ್ನೂ ತಂದುಕೊಟ್ಟಿವೆ. ವನ್ಯಜೀವನದ ಛಾಯಾಗ್ರಹಣದ ಬಗೆಗಿನ ಪ್ರಸಾದರ ಆಸಕ್ತಿ , ಈ ಪುಸ್ತಕಕ್ಕೆ ಬೇಕಾದ ದೃಶ್ಯಸಂಪನ್ಮೂಲವನ್ನೂ ಒದಗಿಸಿದೆ. ಪ್ರಸಾದ್ ಸ್ವತಃ ತೆಗೆದಿರುವ ಹಲವು ಚಿತ್ರಗಳಲ್ಲದೆ ಈ ಪುಸ್ತಕದ ಪಠ್ಯಕ್ಕೆ ಪೂರಕವಾಗಿ ಪ್ರಸಾದರ ಮಿತ್ರರನೇಕರು ತೆಗೆದ ಹಲವು ಆಕರ್ಷಕ ಚಿತ್ರಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ.

ನಾಗರಹೊಳೆಯ ಅಡುಗೆಭಟ್ಟರಿಂದ ಅರಣ್ಯಾಧಿಕಾರಿಗಳವರೆಗೆ, ಬಂಡಿಪುರದ ಕೀಚಣ್ಣನಂತಹ ಕೆಲಸಗಾರನಿಂದ ಉತ್ಸಾಹಿ ಪ್ರವಾಸಿಗರವರೆಗೆ ಅನೇಕ ಪಾತ್ರಗಳು ಇಲ್ಲಿನ ಹಲವು ಘಟನೆಗಳಿಗೆ ಸಾಕ್ಷಿಯಾಗಿವೆ. ಕಾಡಿನ ಚಿತ್ರಗಳನ್ನು ಸ್ವಾರಸ್ಯಕರವಾಗಿ ಬಣ್ಣಿಸುತ್ತಲೇ ವನ್ಯಜೀವನದ ಮೇಲೆ ಮಾನವಪ್ರಪಂಚದ ಒತ್ತಡ, ಕಾಡ್ಗಿಚ್ಚಿನಂತಹ ಮಾನವನಿರ್ಮಿತ ಅನಾಹುತಗಳಿಂದ ಕಾಡುಗಳ ಮೇಲಾಗುವ ಪರಿಣಾಮ- ಮೊದಲಾದವನ್ನು ಲೇಖಕರು ಆದಷ್ಟು ಸಂಯಮವಾಗಿ ಓದುಗನ ಮುಂದಿಡಲು ಯತ್ನಿಸಿದ್ದಾರೆ.

ಆಫ್ರಿಕಾದ ಅರಣ್ಯದಲ್ಲಿ ತಾವು ಚಿತ್ರಿಸಿದಂತೆ ಘೇಂಡಾಮೃಗವನ್ನು ಅಟ್ಟಿಸುವ ಉಷ್ಟ್ರಪಕ್ಷಿಗಳು, ಪ್ರವಾಸಿಗರನ್ನು ಬೆದರಿಸುವ ಆನೆ, ಬಲಿಪ್ರಾಣಿಯ ಬೇಟೆಯಲ್ಲಿ ಯಶಸ್ವಿಯಾದ ರಣಥಂಬೋರಿನ ಸಿಂಹ, ಸಾರಸ್ ಪಕ್ಷಿಗಳ ಪ್ರಣಯಕಲಹ- ಮೊದಲಾದವುಗಳ ಸಚಿತ್ರಲೇಖನಗಳು ಮನಸೆಳೆಯುತ್ತವೆ. ಉಲ್ಲಾಸ ಕಾರಂತರ ರೇಡಿಯೋಕಾಲರಿಂಗ್ ಅಧ್ಯಯನಕ್ಕೆ ಪ್ರಸಾದರವರ ಸಹಕಾರ, ಅರಣ್ಯಸಂರಕ್ಷಣೆಯಲ್ಲಿ ರಾಜಕಾರಣದ ತೊಡಕು, ಕಾಡಿನ ಬೆಂಕಿಯ ನಿಯಂತ್ರಣದ ತಲೆಬೇನೆ- ಮುಂತಾದ ವಿಷಯಗಳ ನಿರೂಪಣೆ ಸರಳವಾಗಿದ್ದರೂ ವಿಷಯವನ್ನು ಓದುಗರ ಮನಮುಟ್ಟುವಂತಿದೆ. ವನ್ಯಜೀವನದ ಅಧ್ಯಯನದಲ್ಲಿ ಪ್ರಸಾದರಿಗೆ ಗುರುಸ್ಥಾನದಲ್ಲಿರುವ ಕೋಟ್ರಂಗಡ ಚಿಣ್ಣಪ್ಪನವರ ಜೀವನ, ವ್ಯಕ್ತಿತ್ವಗಳಿಗೆ ಸಂಬಂಧಿಸಿದ ಹಲವು ವಿವರಗಳು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.

ವನ್ಯಜೀವನದ ಬಗೆಗೆ ಆಸಕ್ತಿಯಿರುವವರೆಲ್ಲ ಓದಲೇ ಬೇಕಾದ ಪುಸ್ತಕವಿದು. ಅತ್ಯಂತ ಸರಳವಾದ ಇಂಗ್ಲಿಶ್ ಭಾಷೆಯ ಬಳಕೆ , ಅಂದವಾದ ಮುದ್ರಣ, ಆಪ್ತವಾದ ನಿರೂಪಣಾ ಶೈಲಿ, ಸೊಗಸಾದ ಚಿತ್ರಗಳು- ಪುಸ್ತಕದ ಸೊಗಸಿಗೆ ಪೂರಕವಾದ ಅಂಶಗಳು.

Trails of Vanishing Tails

ಲೇಖಕರು: ಹೆಚ್. ಎನ್. ಎ. ಪ್ರಸಾದ್

ಪ್ರಕಾಶಕರು: ಭಾರತೀ ಪ್ರಕಾಶನ, ಮೈಸೂರು

೨೧೬ ಪುಟಗಳು (ಡೆಮಿ ೧/೪, ಆರ್ಟ್ ಕಾಗದದಲ್ಲಿ ಬಹುವರ್ಣದ ಮುದ್ರಣ)

ಬೆಲೆ: ರೂ. ೪೯೫

ಪುಸ್ತಕ ಕೊಳ್ಳಲು: navakarnatakaonline.com/trails-of-vanishing-tails

logo
ಇಜ್ಞಾನ Ejnana
www.ejnana.com