ಟಿಫ್ರಾಕ್ ನಿರ್ಮಾಣದ ಸಾಧನೆಯಿಂದಾಗಿ ಐಟಿ ಕ್ಷೇತ್ರದಲ್ಲಿ ಚಟುವಟಿಕೆಗಳನ್ನು ಪ್ರಾರಂಭಿಸಿದ ಮೊದಲ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಲು ಸಾಧ್ಯವಾಯಿತು.
ಟಿಫ್ರಾಕ್ ನಿರ್ಮಾಣದ ಸಾಧನೆಯಿಂದಾಗಿ ಐಟಿ ಕ್ಷೇತ್ರದಲ್ಲಿ ಚಟುವಟಿಕೆಗಳನ್ನು ಪ್ರಾರಂಭಿಸಿದ ಮೊದಲ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಲು ಸಾಧ್ಯವಾಯಿತು.Image by Harikrishnan Mangayil from Pixabay

ಐಟಿ ಸಾಧನೆಗೆ ಬುನಾದಿ ಹಾಕಿಕೊಟ್ಟ 'ಟಿಫ್ರಾಕ್'

ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ನೆಲೆಯಾಗುವುದಕ್ಕೆ ದಶಕಗಳ ಮೊದಲೇ ನಮ್ಮ ದೇಶದಲ್ಲಿ ನಮ್ಮದೇ ಆದ ಡಿಜಿಟಲ್ ಕಂಪ್ಯೂಟರ್ ತಯಾರಾಗಿತ್ತು!

ಸ್ವತಂತ್ರ ಭಾರತದ ಹಲವಾರು ವೈಜ್ಞಾನಿಕ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿಯಾಗಿದ್ದವರು ಡಾ. ಹೋಮಿ ಜಹಾಂಗೀರ್ ಭಾಭಾ. ಭಾರತೀಯ ಪರಮಾಣು ಕಾರ್ಯಕ್ರಮದ ಪಿತಾಮಹರೆಂದೇ ಖ್ಯಾತರಾಗಿದ್ದ ಅವರು ೧೯೪೫ರಲ್ಲಿ ಖ್ಯಾತ ಉದ್ಯಮಿ ಜೆ. ಆರ್. ಡಿ. ಟಾಟಾರ ನೆರವಿನೊಂದಿಗೆ ಮುಂಬಯಿಯಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ (ಟಿಐಎಫ್‌ಆರ್) ಸಂಸ್ಥೆಯನ್ನು ಸ್ಥಾಪಿಸಿದರು.

ನಾವು ನಮ್ಮ ದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಬೇಕು ಎನ್ನುವುದು ಭಾಭಾ ಅವರ ನಿಲುವಾಗಿತ್ತು. ತಾವು ಸ್ಥಾಪಿಸಿದ ಟಿಐಎಫ್‌ಆರ್ ಹೀಗೆಯೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಉದ್ದೇಶದಿಂದ ಅವರು ಅಲ್ಲಿ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಸೈದ್ಧಾಂತಿಕ ಅಧ್ಯಯನಗಳ ಜೊತೆಗೆ ಪ್ರಾಯೋಗಿಕ ಸಂಶೋಧನೆ ಕೂಡ ನಡೆಯಬೇಕೆಂದು ದೃಢವಾಗಿ ನಂಬಿದ್ದ ಅವರು ಹೊಸ ಸಾಧನ-ಸಲಕರಣೆಗಳನ್ನು ನಿರ್ಮಿಸಿ ಬಳಸುವ ಕೆಲಸವನ್ನೂ ಪ್ರಾರಂಭಿಸಿದರು. ಜಾಗತಿಕ ಮಟ್ಟದಲ್ಲಿ ಆಗಷ್ಟೇ ಸುದ್ದಿಯಾಗುತ್ತಿದ್ದ ಕಂಪ್ಯೂಟರ್ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಟಿಐಎಫ್‌ಆರ್ ತನ್ನನ್ನು ತೊಡಗಿಸಿಕೊಳ್ಳಲು ಅವರ ಈ ದೂರದೃಷ್ಟಿ ಕಾರಣವಾಯಿತು.

ಈ ವಿಷಯದ ಕುರಿತು ಕೆಲಸ ಮಾಡುತ್ತಿದ್ದ ಟಿಐಎಫ್‌ಆರ್ ನ ಇನ್ಸ್ಟ್ರುಮೆಂಟೇಶನ್ ವಿಭಾಗವು ಒಂದು ಪೂರ್ಣ ಪ್ರಮಾಣದ, ಸಾಮಾನ್ಯ ಉದ್ದೇಶಗಳಿಗೆ ಬಳಸಬಹುದಾದ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ಅನ್ನು ರೂಪಿಸುವ ಯೋಜನೆಯನ್ನು ೧೯೫೪ರಲ್ಲಿ ಕೈಗೆತ್ತಿಕೊಂಡಿತು. ಪ್ರಪಂಚದ ಮೊತ್ತಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ಎಂದು ಹೆಸರಾಗಿರುವ ಇನಿಯಾಕ್ (ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಆಂಡ್ ಕಂಪ್ಯೂಟರ್) ಪೂರ್ಣಗೊಂಡು ಆಗಿನ್ನೂ ಹತ್ತು ವರ್ಷವೂ ಆಗಿರಲಿಲ್ಲ.

ವಿದೇಶಗಳಿಗೆ ಸಮನಾದ ಸಾಧನೆ ಮಾಡುವ ಮೂಲಕ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು ಹೊರಟಿದ್ದ ಟಿಐಎಫ್‌ಆರ್ ತಂಡದ ನಾಯಕತ್ವ ವಹಿಸಿಕೊಂಡವರು ಮುಂದೆ ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನ ಸಂಶೋಧನೆಯ ಕ್ಷೇತ್ರದ ಪಿತಾಮಹರೆಂದೇ ಖ್ಯಾತರಾದ ಡಾ. ಆರ್. ನರಸಿಂಹನ್. ಅಮೆರಿಕಾದಲ್ಲಿ ಕಂಪ್ಯೂಟರ್ ವಿಜ್ಞಾನದ ಉನ್ನತ ಅಧ್ಯಯನ ಮುಗಿಸಿದ ಅವರು ಹೋಮಿ ಭಾಭಾರ ಆಮಂತ್ರಣದ ಮೇರೆಗೆ ಆಗಷ್ಟೇ ಭಾರತಕ್ಕೆ ಮರಳಿದ್ದರು.

ಡಾ. ನರಸಿಂಹನ್ ಅವರ ತಂಡದಲ್ಲಿ ಭೌತವಿಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಪರಿಣತಿಯಿದ್ದ ಏಳು ಮಂದಿ ಪ್ರತಿಭಾನ್ವಿತ ಸಂಶೋಧಕರಿದ್ದರು. ಕಂಪ್ಯೂಟರ್ ನಿರ್ಮಾಣದ ಮಾತು ಹಾಗಿರಲಿ, ಈ ಸಂಶೋಧಕರಿಗೆ ಈ ಹಿಂದೆ ಕಂಪ್ಯೂಟರನ್ನು ಬಳಸಿದ ಅನುಭವವೂ ಇರಲಿಲ್ಲ! ಆದರೂ ಹಿಂಜರಿಯದ ಅವರೆಲ್ಲ ಒಟ್ಟಾಗಿ ಭಾರತದ ಮೊತ್ತಮೊದಲ ಡಿಜಿಟಲ್ ಕಂಪ್ಯೂಟರ್ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಪರೀಕ್ಷಾರ್ಥ ಕಂಪ್ಯೂಟರಿನ ತಯಾರಿಕೆಯನ್ನು ೧೯೫೫ರಲ್ಲಿ ಪ್ರಾರಂಭಿಸಿದ ಈ ತಂಡ ೧೯೫೬ರ ಕೊನೆಯ ವೇಳೆಗೆ ಆ ಕೆಲಸವನ್ನು ಪೂರ್ಣಗೊಳಿಸಿತು. ಮುಂದಿನ ವರ್ಷದಲ್ಲಿ ಪೂರ್ಣ ಪ್ರಮಾಣದ ಕಂಪ್ಯೂಟರಿನ ವಿನ್ಯಾಸವನ್ನು ಪೂರ್ಣಗೊಳಿಸಿದ ಅವರು, ೧೯೫೯ರ ವೇಳೆಗೆ ಅದರ ನಿರ್ಮಾಣವನ್ನೂ ಮುಗಿಸಿದರು. ಹೀಗೆ ಸಿದ್ಧವಾದ ಕಂಪ್ಯೂಟರಿನ ಕಾರ್ಯಾಚರಣೆ ಫೆಬ್ರುವರಿ ೧೯೬೦ರಿಂದ ಅಧಿಕೃತವಾಗಿ ಪ್ರಾರಂಭವಾಯಿತು. ಮುಂದೆ, ೧೯೬೨ರಲ್ಲಿ ಈ ಕಂಪ್ಯೂಟರಿಗೆ ಟಿಫ್ರಾಕ್ (ಟಿಐಎಫ್‌ಆರ್ ಆಟೋಮ್ಯಾಟಿಕ್ ಕ್ಯಾಲ್ಕ್ಯುಲೇಟರ್) ಎಂದು ನಾಮಕರಣ ಮಾಡಲಾಯಿತು.

ಟಿಫ್ರಾಕ್ - ಟಿಐಎಫ್‌ಆರ್ ಆಟೋಮ್ಯಾಟಿಕ್ ಕ್ಯಾಲ್ಕ್ಯುಲೇಟರ್
ಟಿಫ್ರಾಕ್ - ಟಿಐಎಫ್‌ಆರ್ ಆಟೋಮ್ಯಾಟಿಕ್ ಕ್ಯಾಲ್ಕ್ಯುಲೇಟರ್TIFR Archives / https://artsandculture.google.com/

ಅನನುಭವಿಗಳ ತಂಡವೊಂದು ಸಂಪನ್ಮೂಲಗಳ ದೃಷ್ಟಿಯಿಂದ ತಮಗಿದ್ದ ಎಲ್ಲ ಅಡ್ಡಿ ಆತಂಕಗಳ ನಡುವೆಯೇ ನಿರ್ಮಿಸಿದ ಈ ಕಂಪ್ಯೂಟರು ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸಲಾದ ಮೊತ್ತಮೊದಲ ಡಿಜಿಟಲ್ ಎಲೆಕ್ಟ್ರಾನಿಕ್ ಕಂಪ್ಯೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು, ತನ್ನ ಸಾಮರ್ಥ್ಯದ ದೃಷ್ಟಿಯಿಂದ, ಆ ಕಾಲದ ಬೇರಾವ ಕಂಪ್ಯೂಟರಿಗೂ ಕಡಿಮೆಯಿರಲಿಲ್ಲ ಎನ್ನುವುದು ಹೆಮ್ಮೆಯ ವಿಷಯ. ಮಾಹಿತಿ ತಂತ್ರಜ್ಞಾನ ಕ್ರಾಂತಿಯಲ್ಲಿ ಭಾರತವು ಪ್ರಮುಖ ಸ್ಥಾನ ಪಡೆದುಕೊಳ್ಳಲು ಈ ತಂಡವು ಆ ಕಾಲದಲ್ಲೇ ವೇದಿಕೆ ರೂಪಿಸಿಕೊಟ್ಟಿತ್ತು ಎಂದರೆ ಅದು ಅತಿಶಯೋಕ್ತಿಯಾಗಲಾರದು.

೧೯೬೦ರಿಂದ ೧೯೬೪ರವರೆಗೂ ಬಳಕೆಯಲ್ಲಿದ್ದ ಟಿಫ್ರಾಕ್ ಎಷ್ಟು ಉಪಯುಕ್ತವಾಗಿತ್ತೆಂದರೆ ಅದನ್ನು ಪ್ರತಿದಿನವೂ ಎರಡು ಪಾಳಿಗಳಲ್ಲಿ ಬಳಸಲಾಗುತ್ತಿತ್ತಂತೆ. ಈ ಕಂಪ್ಯೂಟರನ್ನು ಬಳಸಿದ ಅನುಭವ ಹಲವಾರು ಭಾರತೀಯ ತಂತ್ರಜ್ಞರಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಬಾಗಿಲನ್ನು ತೆರೆಯಿತು ಎನ್ನುವುದೂ ನಿಜವೇ. ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ತನ್ನ ಪ್ರಾರಂಭಿಕ ಅನುಭವಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಟಿಐಎಫ್‌ಆರ್ ಮುಂದೆ ರಾಷ್ಟ್ರಮಟ್ಟದಲ್ಲಿ ಕಂಪ್ಯೂಟರ್ ವಿಜ್ಞಾನ ಸಂಶೋಧನೆಯ ಪ್ರತಿಷ್ಠಿತ ಕೇಂದ್ರವಾಗಿ ಬೆಳೆಯುವುದು ಕೂಡ ಸಾಧ್ಯವಾಯಿತು.

ಡಾ. ಹೋಮಿ ಜಹಾಂಗೀರ್ ಭಾಭಾ ಮತ್ತವರ ತಂಡ ಮುಂಬಯಿಯಲ್ಲಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲೇ ಡಾ. ಪ್ರಶಾಂತ ಚಂದ್ರ ಮಾಹಾಲಾನೋಬಿಸ್ ನೇತೃತ್ವದ ಇನ್ನೊಂದು ತಂಡ ಕಲಕತ್ತೆಯ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಲ್ಲಿ ತೊಡಗಿಕೊಂಡಿತ್ತು. ಈ ಕ್ಷೇತ್ರದಲ್ಲಿ ಚಟುವಟಿಕೆಗಳನ್ನು ಪ್ರಾರಂಭಿಸಿದ ಮೊದಲ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಲು ಸಾಧ್ಯವಾಗಿದ್ದು ಇಂತಹ ಆದ್ಯ ಪ್ರವರ್ತಕರಿಂದಲೇ.

ನಂತರದ ವರ್ಷಗಳಲ್ಲಿ ಕಂಪ್ಯೂಟರ್ ನಿರ್ಮಾಣ ಕ್ಷೇತ್ರದಲ್ಲಾದ ಗಣನೀಯ ಬದಲಾವಣೆಗಳಿಂದಾಗಿ ಭಾರತವು ಈ ಕ್ಷೇತ್ರದಲ್ಲಿ ಹೆಚ್ಚು ಮುಂದುವರಿಯುವುದು ಸಾಧ್ಯವಾಗಲಿಲ್ಲ. ಅಂದಿನಿಂದ ತೀರಾ ಈಚಿನವರೆಗೂ ನಾವು ಕಂಪ್ಯೂಟರ್ ಮತ್ತಿತರ ವಿದ್ಯುನ್ಮಾನ ಸಾಧನಗಳ ಉತ್ಪಾದನೆಗೆ ಬೇರೆ ದೇಶಗಳ ಮೇಲೆಯೇ ಅವಲಂಬಿತರಾಗಿದ್ದೂ ಸುಳ್ಳಲ್ಲ. ಅಂದಿನ ವಿಜ್ಞಾನಿಗಳ ದೂರದೃಷ್ಟಿ ಆರು ದಶಕಗಳ ಹಿಂದೆಯೇ ನಮ್ಮ ದೇಶದಲ್ಲೊಂದು ಕಂಪ್ಯೂಟರಿನ ನಿರ್ಮಾಣಕ್ಕೆ ಕಾರಣವಾಗಿತ್ತು ಎನ್ನುವ ವಿಷಯ ಮುಂದಿನ ದಿನಗಳಲ್ಲಾದರೂ ಈ ಪರಿಸ್ಥಿತಿಯನ್ನು ಬದಲಿಸಿಕೊಳ್ಳುವುದಕ್ಕೆ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕಿದೆ.

ಆಗಸ್ಟ್ ೨೦೨೨ರ ಬಾಲವಿಜ್ಞಾನದಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com