ನಮ್ಮ ಭಾಷೆ ಡಿಜಿಟಲ್ ಜಗತ್ತಿನಲ್ಲಿ ಸದೃಢವಾಗಿ ನಿಲ್ಲುವಂತೆ ಮಾಡುವುದು ಹೇಗೆ?
ನಮ್ಮ ಭಾಷೆ ಡಿಜಿಟಲ್ ಜಗತ್ತಿನಲ್ಲಿ ಸದೃಢವಾಗಿ ನಿಲ್ಲುವಂತೆ ಮಾಡುವುದು ಹೇಗೆ?|Image by Wokandapix from Pixabay
ವೈವಿಧ್ಯ

ಕನ್ನಡದಲ್ಲಿ ಈ ಜಗತ್ತು

ಡಿಸೆಂಬರ್ ೭, ೨೦೧೯ರಂದು ವಿಜಯ ಕರ್ನಾಟಕ ಕನ್ನಡ ಹಬ್ಬದಲ್ಲಿ ಹಂಚಿಕೊಂಡ ವಿಚಾರಗಳ ಸಾರಾಂಶ

ಟಿ. ಜಿ. ಶ್ರೀನಿಧಿ

ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಅದು ನಮ್ಮ ಮೇಲೆ ನಾನಾರೀತಿಯ ಪರಿಣಾಮಗಳನ್ನು ಬೀರುತ್ತಿದೆ. ಈ ಪೈಕಿ ಕೆಲ ಪರಿಣಾಮಗಳು ಸಕಾರಾತ್ಮಕವಾದರೆ ಇನ್ನು ಕೆಲವು ಅಷ್ಟೇನೂ ಒಳ್ಳೆಯವಲ್ಲ.

ಇಲ್ಲಿ ಹೊಸ ಸವಾಲುಗಳು ಹೆಚ್ಚಿನ ಪ್ರಮಾಣದಲ್ಲಿ ಎದುರಾಗುವುದು ಯಾರಿಗೆ-ಅಥವಾ-ಯಾವುದಕ್ಕೆ ಎಂದು ಹುಡುಕಲು ಹೊರಟರೆ ನಮಗೆ ಸಿಗುವ ಪಟ್ಟಿಯಲ್ಲಿ ಭಾಷೆಗೆ ಪ್ರಮುಖ ಸ್ಥಾನ. ವಿಶ್ವಸಂಸ್ಥೆ ಪ್ರಕಟಿಸಿರುವ ಮಾಹಿತಿಯನ್ನು ಉಲ್ಲೇಖಿಸುವುದಾದರೆ ಪ್ರಪಂಚದ ವಿವಿಧೆಡೆ ಜನರು ಮಾತನಾಡುವ ಸುಮಾರು ೬೦೦೦ ಭಾಷೆಗಳಲ್ಲಿ ಕನಿಷ್ಠ ಶೇ.೪೩ರಷ್ಟು ಈಗಾಗಲೇ ಅಪಾಯದ ಅಂಚಿನಲ್ಲಿವೆಯಂತೆ. ಶಿಕ್ಷಣ ವ್ಯವಸ್ಥೆಗಳಲ್ಲಿ ಕೇವಲ ಕೆಲವೇ ನೂರರಷ್ಟು ಭಾಷೆಗಳು ಸ್ಥಾನ ಪಡೆದಿವೆ ಹಾಗೂ ಡಿಜಿಟಲ್ ಜಗತ್ತಿನಲ್ಲಿ, ನೂರಕ್ಕೂ ಕಡಿಮೆ ಭಾಷೆಗಳಷ್ಟೇ ಬಳಕೆಯಾಗುತ್ತಿವೆ.

ಇಂದಿನ ಸಂದರ್ಭದಲ್ಲಿ ಯಾವುದೇ ಭಾಷೆಯ ಉಳಿವು ಹಾಗೂ ಬೆಳವಣಿಗೆಯ ಮೇಲೆ ಡಿಜಿಟಲ್ ಜಗತ್ತಿನಲ್ಲಿ ಆ ಭಾಷೆಯ ಸ್ಥಿತಿಗತಿ ಹೇಗಿದೆ ಎನ್ನುವ ಅಂಶ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ. ಹೀಗಿರುವಾಗ ನಮ್ಮ ಭಾಷೆ ಡಿಜಿಟಲ್ ಜಗತ್ತಿನಲ್ಲಿ ಸದೃಢವಾಗಿ ನಿಲ್ಲುವಂತೆ ಮಾಡುವುದು ಹೇಗೆ?

At least 43% of the estimated 6000 languages spoken in the world are endangered. Only a few hundred languages have genuinely been given a place in education systems and the public domain, and less than a hundred are used in the digital world.

un.org

ಇದನ್ನು ಸಾಧ್ಯವಾಗಿಸುವ ಬಗ್ಗೆ ಸಾಕಷ್ಟು ಆಲೋಚನೆಗಳನ್ನು ನಾವೆಲ್ಲ ಕೇಳಿದ್ದೇವೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿ ನಮ್ಮ ಭಾಷೆಯಲ್ಲೇ ಹೆಚ್ಚುಹೆಚ್ಚಾಗಿ ದೊರಕುವಂತೆ ಮಾಡುವುದು ಇಂತಹ ಆಲೋಚನೆಗಳಲ್ಲಿ ಒಂದು. ಇದು ಸಾಧ್ಯವಾದಾಗ ಮಾತ್ರ ನಮ್ಮ ಭಾಷೆಯಲ್ಲೇ ಶಿಕ್ಷಣ ಪಡೆದುಕೊಳ್ಳುವುದು, ಮುಂದಿನ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಿಕೊಳ್ಳುವುದು ಸಾಧ್ಯವಾಗುತ್ತದೆ.

ಹೆಚ್ಚುಹೆಚ್ಚು ಮಾಹಿತಿ ಎನ್ನುವುದು ಕೇವಲ ಅದರ ಪರಿಮಾಣಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಹೀಗೆ ಸಿಗುವ ಮಾಹಿತಿ ಸಾಧ್ಯವಾದಷ್ಟೂ ಹೆಚ್ಚಿನ ಜನರನ್ನು ಮುಟ್ಟಬೇಕೆಂದರೆ ಅದು ಬೇರೆಬೇರೆ ಮಟ್ಟಗಳಲ್ಲಿ ಇರಬೇಕು, ಪಠ್ಯದ ಜೊತೆಗೆ ಧ್ವನಿ-ವೀಡಿಯೊ-ಅನಿಮೇಶನ್ ಮುಂತಾದ ವಿಭಿನ್ನ ಮಾಧ್ಯಮಗಳನ್ನೂ ಬಳಸಬೇಕು. ಹೀಗೆ ಸಿಗುವ ಮಾಹಿತಿ ವೈವಿಧ್ಯಮಯವಾಗಿರಬೇಕಾದ್ದೂ ಅಗತ್ಯ - ಹೊಸ ಮೊಬೈಲ್ ಹೇಗಿದೆ ಎಂದು ತಿಳಿಸುವ ಜೊತೆಗೆ ಮೊಬೈಲ್ ಜಾಲಗಳು ಕೆಲಸಮಾಡುವುದು ಹೇಗೆ ಎಂದು ತಿಳಿಸುವ ಮಾಹಿತಿಯೂ ನಮಗೆ ಬೇಕು.

"ಕನ್ನಡದಲ್ಲಿ ಭಾವೋಪಯೋಗಿ ಸಾಹಿತ್ಯ ಬೆಳೆದಷ್ಟು ಲೋಕೋಪಯೋಗಿ ಸಾಹಿತ್ಯ ಬೆಳೆದಿಲ್ಲ" ಎಂದು ಹಿರಿಯರೊಬ್ಬರು ಹೇಳಿದ್ದರು. ಆ ಕೊರತೆಯನ್ನು ತುಂಬುವ ಕೆಲಸ ಕೊಂಚ ತಡವಾಗಿಯಾದರೂ ಪ್ರಾರಂಭವಾಗಿದೆ ಹಾಗೂ ಚುರುಕಿನಿಂದ ನಡೆಯುತ್ತಿದೆ ಎನ್ನುವುದು ಖುಷಿಯ ವಿಷಯ.

ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಮಾಹಿತಿಯನ್ನು ಕನ್ನಡಕ್ಕೆ ತರುವ ನಿಟ್ಟಿನಲ್ಲಿ ನಡೆದಿರುವ ಕೆಲಸವನ್ನೇ ನೋಡುವುದಾದರೆ ಹಲವು ಪ್ರಯತ್ನಗಳು ನಮ್ಮ ಗಮನವನ್ನು ಸೆಳೆಯುತ್ತವೆ. ೨೦೦೭ರಿಂದ ಈವರೆಗೆ ವಿಜ್ಞಾನ-ತಂತ್ರಜ್ಞಾನ ಬರಹಗಳನ್ನು ನಿರಂತರವಾಗಿ ಪ್ರಕಟಿಸುತ್ತ ಬಂದಿರುವ ನಮ್ಮದೇ ತಾಣ 'ಇಜ್ಞಾನ ಡಾಟ್ ಕಾಮ್' ಈ ಪಟ್ಟಿಯಲ್ಲಿ ಸ್ಥಾನ ಪಡೆಯಬಲ್ಲದು ಎಂದು ನಾನು ಭಾವಿಸುತ್ತೇನೆ. ವಿಜ್ಞಾನ-ತಂತ್ರಜ್ಞಾನದ ಮಾಹಿತಿ ಪಠ್ಯಕ್ಕಷ್ಟೇ ಸೀಮಿತವಾಗುವುದು ಬೇಡವೆಂದು ಹಿರಿಯ ವಿಜ್ಞಾನ ಲೇಖಕ ಶ್ರೀ ಕೊಳ್ಳೇಗಾಲ ಶರ್ಮ ಪ್ರಾರಂಭಿಸಿದ 'ಜಾಣಸುದ್ದಿ' ಪಾಡ್ಕಾಸ್ಟ್ ಕೂಡ ಒಂದು ವಿಭಿನ್ನ ಪ್ರಯತ್ನ. ವಿಜ್ಞಾನ-ತಂತ್ರಜ್ಞಾನ ಕುರಿತ ಶೈಕ್ಷಣಿಕ ವೀಡಿಯೊಗಳನ್ನು ಕನ್ನಡಕ್ಕೆ ತಂದು ಪ್ರಕಟಿಸುತ್ತಿರುವ 'ತಿಳಿ' ಯೂಟ್ಯೂಬ್ ಚಾನೆಲ್, 'ಸಂವಾದ' ಯೂಟ್ಯೂಬ್ ಚಾನೆಲ್ನಲ್ಲಿ ಮಾಹಿತಿ ತಂತ್ರಜ್ಞಾನದ ಪರಿಕಲ್ಪನೆಗಳನ್ನು ಪರಿಚಯಿಸುತ್ತಿರುವ 'ತಂತ್ರಜ್ಞಾನ' ಸರಣಿಗಳನ್ನೂ ನಾವಿಲ್ಲಿ ಗಮನಿಸಬಹುದು.

ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೇ ಮೀಸಲಾದ ಟೆಕ್ ಕನ್ನಡ, ಅರಿಮೆ, cfpus ಮುಂತಾದ ಜಾಲತಾಣಗಳೂ ಕನ್ನಡದಲ್ಲಿವೆ. ವಿಕಿಪೀಡಿಯ ಮತ್ತು ಕಣಜದಂತಹ ವಿಶ್ವಕೋಶಗಳಲ್ಲೂ ವಿಜ್ಞಾನ-ತಂತ್ರಜ್ಞಾನದ ಮಾಹಿತಿ ಇದೆ. ಹಲವು ನಿಘಂಟು-ಪದವಿವರಣ ಕೋಶಗಳೂ ಆನ್ಲೈನ್ ಜಗತ್ತಿಗೆ ಬಂದಿವೆ. ಕನ್ನಡದಲ್ಲಿ ಇ-ಪುಸ್ತಕಗಳ ಪ್ರಕಟಣೆ ಇನ್ನೂ ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿಲ್ಲದಿದ್ದರೂ ಹಲವು ಇ-ಪುಸ್ತಕಗಳು ಈಗಾಗಲೇ ಬಂದಿವೆ.

ಹೀಗೆ ಸೃಷ್ಟಿಯಾಗುತ್ತಿರುವ ವೈವಿಧ್ಯಮಯ ಮಾಹಿತಿಯನ್ನೆಲ್ಲ ಹಂಚಿಕೊಳ್ಳಲು ಸಮಾಜಜಾಲಗಳೂ ವ್ಯಾಪಕವಾಗಿ ಬಳಕೆಯಾಗುತ್ತಿವೆ. ತಂತ್ರಜ್ಞಾನದ ವೀಡಿಯೊಗಳು ಫೇಸ್ಬುಕ್ನಲ್ಲಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳ ಸಂಖ್ಯೆ ತಲುಪುವುದು ಇದಕ್ಕೊಂದು ಒಳ್ಳೆಯ ಉದಾಹರಣೆ.

ಇವೆಲ್ಲ ಒಳ್ಳೆಯ ಕೆಲಸಗಳು ಹಾಗೂ ಅವುಗಳಿಂದ ಸಾಕಷ್ಟು ಉಪಯೋಗವಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಮುಂದಕ್ಕೆ ಆಗಬೇಕಿರುವ ಕೆಲಸ ಕೂಡ ಬಹಳಷ್ಟಿದೆ. ಸಾಮಾನ್ಯಜ್ಞಾನ ಹೆಚ್ಚಿಸಿಕೊಳ್ಳಲು ಉಪಯುಕ್ತವಾದ ಮಾಹಿತಿ ಈಗ ಸಿಗುತ್ತಿರುವ ಹಾಗೆಯೇ ತಜ್ಞತೆ ಬೆಳೆಸಿಕೊಳ್ಳಲು ಬೇಕಾದ ಮಾಹಿತಿಯೂ - ವಿವಿಧ ಹಂತದ ಪಠ್ಯಪುಸ್ತಕಗಳು, ಪಠ್ಯಪೂರಕ ಸಾಮಗ್ರಿ ಇವೆಲ್ಲ ಸೇರಿದಂತೆ - ಕನ್ನಡದಲ್ಲಿ ಸಿಗಬೇಕಿದೆ. ಈಗಾಗಲೇ ಇರುವ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಜಗತ್ತಿನತ್ತ ಬರಬೇಕಾಗಿಯೂ ಇದೆ. ಇನ್ನು ಇಂಗ್ಲಿಷಿನಲ್ಲಿ ಭಾರೀ ಜನಪ್ರಿಯತೆ ಗಳಿಸಿಕೊಂಡಿರುವ ಯೂಡೆಮಿಯಂತಹ ಆನ್ಲೈನ್ ತರಬೇತಿ ವೇದಿಕೆಗಳು, ನಿಘಂಟು-ಪದವಿವರಣ ಕೋಶಗಳನ್ನು ಸುಲಭವಾಗಿ ದೊರಕಿಸುವ ವ್ಯವಸ್ಥೆಗಳು ಕನ್ನಡದಲ್ಲೂ ರೂಪುಗೊಳ್ಳಬೇಕಿದೆ. ಇವು ಮತ್ತು ಬೇರೆಯವೂ ಇನ್ನಷ್ಟು ಕನಸುಗಳನ್ನು ಸಾಕಾರಗೊಳಿಸಲು ನಾವೆಲ್ಲ ಒಟ್ಟಿಗೆ ಸೇರಿ ಕೆಲಸಮಾಡೋಣ. ಧನ್ಯವಾದಗಳು.

ಇಜ್ಞಾನ Ejnana
www.ejnana.com