ಪುಸ್ತಕ ಪರಿಚಯ: ಟೆಕ್ ಲೋಕದ ಹತ್ತು ಹೊಸ ಮುಖಗಳು
ತಂತ್ರಜ್ಞಾನ ಬರಹಗಾರ, 'ಇಜ್ಞಾನ ಡಾಟ್ ಕಾಮ್' ಸಂಪಾದಕ ಟಿ. ಜಿ. ಶ್ರೀನಿಧಿ ಈ ಪುಸ್ತಕದ ಕರ್ತೃ.ejnana.com

ಪುಸ್ತಕ ಪರಿಚಯ: ಟೆಕ್ ಲೋಕದ ಹತ್ತು ಹೊಸ ಮುಖಗಳು

ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಸದ್ದುಮಾಡುತ್ತಿರುವ ಹಲವು ಪ್ರಮುಖ ವಿದ್ಯಮಾನಗಳ ಪರಿಚಯ ಈ ಪುಸ್ತಕದಲ್ಲಿದೆ

ನಿತ್ಯದ ಬದುಕಿಗೆ ನೇರವಾಗಿ ಬೇಕಾಗದ, ಬೇಕಾದರೂ ನೇರವಾಗಿ ನಮ್ಮ ಗಮನಕ್ಕೆ ಬಾರದ ವಿಷಯಗಳ ಬಗೆಗೆ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ, ಮೊಬೈಲ್ ಫೋನ್. ನಾವು ಬಳಸುವ, ನಮಗೆ ಬೇಕಾದ ಒಂದಷ್ಟು ಸಂಗತಿಗಳನ್ನು ಹೊರತುಪಡಿಸಿ ಅದರ ಇನ್ನಿತರ ಸಾಧ್ಯತೆಗಳನ್ನು ಪೂರ್ಣವಾಗಿ ಅವಲೋಕಿಸುವ ಗೋಜಿಗೂ ನಮ್ಮಲ್ಲಿ ಅನೇಕರು ಹೋಗುವುದಿಲ್ಲ.

ನಿತ್ಯವೂ ಬಳಸುವ ಮೊಬೈಲ್ ಕಥೆಯೇ ಹೀಗಾದರೆ ಇನ್ನು ಸೆನ್ಸರ್, ಕ್ಲೌಡ್, ಎಐ, ಅನಲಿಟಿಕ್ಸ್‌ ಮುಂತಾದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದು, ಅರಗಿಸಿಕೊಳ್ಳುವುದು ಹೇಗೆ? ನಮ್ಮ ನಿತ್ಯದ ಬದುಕಿನ ಮೇಲೆ ಈ ಪರಿಕಲ್ಪನೆಗಳ ಪ್ರಭಾವ ದಿನೇದಿನೇ ಜಾಸ್ತಿಯಾಗುತ್ತಿರುವ ಈ ಸಂದರ್ಭದಲ್ಲಿ ಇವುಗಳ ತಂಟೆಯೇ ಬೇಡವೆಂದು ಸುಮ್ಮನಿರುವುದೂ ಬಹುತೇಕ ಅಸಾಧ್ಯ.

ಇಂತಹ ಸಂಕೀರ್ಣ ವಿಷಯಗಳನ್ನೂ ಸರಳವಾಗಿ ವಿವರಿಸುವುದು 'ಟೆಕ್ ಲೋಕದ ಹತ್ತು ಹೊಸ ಮುಖಗಳು' ಕೃತಿಯ ಹೆಚ್ಚುಗಾರಿಕೆ. ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳನ್ನು ಓದುಗರಿಗೆ ಆಗಿಂದಾಗಲೇ ಪರಿಚಯಿಸುವ ಪ್ರಯತ್ನಗಳು ಇಂಗ್ಲಿಷಿನಲ್ಲಿ ನಡೆಯುತ್ತಿರುತ್ತವೆ. ಈ ಪುಸ್ತಕ ಅಂಥದ್ದೊಂದು ಪ್ರಯತ್ನವನ್ನು ಕನ್ನಡದಲ್ಲೂ ಮಾಡಿದೆ. ಸದ್ಯ ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಸದ್ದುಮಾಡುತ್ತಿರುವ ಹಲವು ಪ್ರಮುಖ ವಿದ್ಯಮಾನಗಳನ್ನು ಈ ಪುಸ್ತಕದ ಹತ್ತು ಅಧ್ಯಾಯಗಳು ಓದುಗರಿಗೆ ಪರಿಚಯಿಸುತ್ತವೆ. ಲೇಖನಗಳು ಹೆಚ್ಚು ದೀರ್ಘವಾಗಿಲ್ಲದಿರುವುದರಿಂದ ಓದುವಿಕೆ ಹೊರೆಯೆನಿಸುವುದಿಲ್ಲ ಎನ್ನುವುದು ಇದರ ಪ್ಲಸ್ ಪಾಯಿಂಟುಗಳಲ್ಲೊಂದು.

ಅನಲಿಟಿಕ್ಸ್, ಕ್ಲೌಡ್, ಎಐ, ಮಶೀನ್ ಲರ್ನಿಂಗ್, ಐಓಟಿ, ೫ಜಿ, ಬ್ಲಾಕ್‌ಚೈನ್, ರೋಬಾಟ್‌ಗಳು, ಸೆನ್ಸರ್ ತಂತ್ರಜ್ಞಾನ ಸೇರಿದಂತೆ ತಂತ್ರಜ್ಞಾನ ಜಗತ್ತಿನ ಹಲವು ಹೊಸ ಬೆಳವಣಿಗೆಗಳ ಪರಿಚಯ ಈ ಪುಸ್ತಕದಲ್ಲಿದೆ. ಸ್ಮಾರ್ಟ್ ಹೋಮ್, ಚಾಲಕರಹಿತ ವಾಹನ, ತಂತ್ರಾಂಶರೂಪಿ ರೋಬಾಟ್ ಮುಂತಾದ ಪರಿಕಲ್ಪನೆಗಳ ಬಗ್ಗೆಯೂ ನಮಗಿಲ್ಲಿ ಮಾಹಿತಿ ಸಿಗುತ್ತದೆ.

ತಂತ್ರಜ್ಞಾನ ಬರಹಗಾರ, 'ಇಜ್ಞಾನ ಡಾಟ್ ಕಾಮ್' ಸಂಪಾದಕ ಟಿ. ಜಿ. ಶ್ರೀನಿಧಿ ಈ ಪುಸ್ತಕದ ಕರ್ತೃ. "ತಂತ್ರಜ್ಞಾನ ಕಬ್ಬಿಣದ ಕಡಲೆ ಎಂದುಕೊಂಡವರು ಕೂಡ ಒಂದೆರೆಡು ಲೇಖನ ಓದಿದ ಮೇಲೆ 'ಅಯ್ಯೋ ಇಷ್ಟೇನಾ' ಎಂದುಕೊಳ್ಳುವಂತೆ ಮಾಡುವ ಇವರ ಬರಹಗಳು ಕನ್ನಡದ ಓದುಗರಿಗೆ ಜ್ಞಾನ ಭಂಡಾರ" ಎಂದು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿಯವರು ಪುಸ್ತಕದ ಬೆನ್ನುಡಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುತೂಹಲವಿರುವ ಓದುಗರಿಗೆ ಮಾಹಿತಿ ನೀಡುವ ಜೊತೆಗೆ ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ನಡೆಸುವಂತೆ ಕನ್ನಡದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದೂ ಈ ಪುಸ್ತಕದ ಉದ್ದೇಶ ಎನ್ನುವ ಆಶಯವನ್ನು ನಾವು ಕೃತಿಯ ಮುನ್ನುಡಿಯಲ್ಲಿ ನೋಡಬಹುದು. ಈ ಪುಸ್ತಕವನ್ನು ಪ್ರಕಟಿಸಿರುವ ಇಜ್ಞಾನ ಟ್ರಸ್ಟ್, ದಾನಿಗಳ ನೆರವಿನಿಂದ ಈ ಪುಸ್ತಕದ ಪ್ರತಿಗಳನ್ನು ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿರುವುದು ವಿಶೇಷ.

ಮುಖಪುಟವನ್ನು ಖಾಕಿ ಕಾಗದದ ಮೇಲೆ ಒಂದೇ ಬಣ್ಣದಲ್ಲಿ ಮುದ್ರಿಸಿರುವುದರಿಂದ ಹಾಗೂ ಅದಕ್ಕೆ ಪ್ಲಾಸ್ಟಿಕ್ಕಿನ ಲ್ಯಾಮಿನೇಶನ್ ಮಾಡದಿರುವುದರಿಂದ ಪುಸ್ತಕ ನೋಡಲು ವಿಭಿನ್ನವಾಗಿ ಕಾಣುತ್ತದೆ. ಟೆಕ್ ಲೋಕ ಕುರಿತ ಮಾಹಿತಿಯನ್ನು ಟೆಕ್ ಲೋಕದಲ್ಲೇ ಕುಳಿತು ಓದಿಕೊಳ್ಳಲು ಬಯಸುವವರಿಗಾಗಿ ಗೂಗಲ್ ಪ್ಲೇ ಬುಕ್ಸ್‌ನಲ್ಲಿ ಇದರ ಇ-ಬುಕ್ ಆವೃತ್ತಿಯನ್ನೂ ಪ್ರಕಟಿಸಲಾಗಿದೆ.

ಟೆಕ್ ಲೋಕದ ಹತ್ತು ಹೊಸ ಮುಖಗಳು (ಮಾಹಿತಿ ತಂತ್ರಜ್ಞಾನ ಪ್ರಬಂಧಗಳು)

ಲೇಖಕರು: ಟಿ. ಜಿ. ಶ್ರೀನಿಧಿ | ಪ್ರಕಾಶಕರು: ಇಜ್ಞಾನ ಟ್ರಸ್ಟ್, ಬೆಂಗಳೂರು

ಪುಟಗಳು: ೫೬, ಬೆಲೆ: ರೂ. ೬೦ | ಇ-ಪುಸ್ತಕ ಕೊಳ್ಳಲು: tinyurl.com/techloka

ಅಕ್ಟೋಬರ್ ೨೦೧೯ರ 'ಹಸಿರುವಾಸಿ'ಯಲ್ಲಿ ಪ್ರಕಟವಾದ ಪರಿಚಯ

ನಿಮ್ಮ ಪುಸ್ತಕವನ್ನು ನಮಗೆ ಪರಿಚಯಿಸಿ!
ವಿಜ್ಞಾನ-ತಂತ್ರಜ್ಞಾನ ವಿಷಯಗಳ ಬಗ್ಗೆ ನೀವು ಬರೆದ ಪುಸ್ತಕಗಳನ್ನು ನಾವು ನಮ್ಮ ಓದುಗರಿಗೆ ಪರಿಚಯಿಸಲು ಬಯಸುತ್ತೇವೆ. ನಿಮ್ಮ ಪುಸ್ತಕದ ವಿವರಗಳೊಂದಿಗೆ ejnana.trust@gmail.com ವಿಳಾಸವನ್ನು ಇಂದೇ ಸಂಪರ್ಕಿಸಿ!

Related Stories

No stories found.
ಇಜ್ಞಾನ Ejnana
www.ejnana.com