ಸ್ವಿಚ್ ಆಫ್: ಮೊಬೈಲ್ ಆಚೆಗೂ ಒಂದು ಜಗತ್ತಿದೆ!
ಸ್ವಿಚ್ ಆಫ್: ಮೊಬೈಲ್ ಆಚೆಗೂ ಒಂದು ಜಗತ್ತಿದೆ!ejnana.com

ಪುಸ್ತಕ ಪರಿಚಯ: ಸ್ವಿಚ್ ಆಫ್ - ಮೊಬೈಲ್ ಆಚೆಗೂ ಒಂದು ಜಗತ್ತಿದೆ!

ಮೊಬೈಲ್ ಬಳಕೆದಾರರೆಲ್ಲರೂ ಓದಲೇಬೇಕಾದ ಪುಸ್ತಕ ಇದು.

ಮೊಬೈಲ್ ಫೋನಿಗೆ ನಾವೆಲ್ಲರೂ ಎಷ್ಟು ಅಂಟಿಕೊಂಡಿದ್ದೇವೆ ಎಂದರೆ ಭೌತಿಕ ವಸ್ತುಗಳಾದ ಭೂಪಟ, ಶಬ್ದಕೋಶ, ವಿಶ್ವಕೋಶ ಮುಂತಾದ ಎಷ್ಟೋ ಸಾಧನಗಳನ್ನು ಉಪಯೋಗಿಸುವುದನ್ನೇ ಮರೆತಿದ್ದೇವೆ. ಹೌದು, ಮೊಬೈಲ್ ಫೋನು ಸರ್ವಾನುಕೂಲಿ. ಇದರ ಸದುಪಯೋಗ ಪಡೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಇಲ್ಲಿ ಸಾಕಷ್ಟು ದುಷ್ಪರಿಣಾಮಗಳೂ ಇರುವುದು ನಮಗೆಲ್ಲ ಸ್ವಲ್ಪಮಟ್ಟಿಗೆ ತಿಳಿದೇ ಇದೆ. ಅವುಗಳನ್ನು ತಪ್ಪಿಸುವುದು ಸಾಧ್ಯವಿಲ್ಲ ಎಂದೆನಿಸಿದರೂ ಅವುಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಖಂಡಿತಾ ಸಾಧ್ಯವಿದೆ. ಇದಕ್ಕೊಂದಿಷ್ಟು ನೀತಿ ನಿಯಮಗಳನ್ನು ಯಾರಾದರೂ ರೂಪಿಸಿದ್ದು ಅದು ಮೊಬೈಲ್ ನಲ್ಲಿಯೇ ಲಭ್ಯವಿದೆಯೇ ಎಂಬ ಪ್ರಶ್ನೆ ಏಳುವುದು ಸಹಜ.

ಮೊಬೈಲ್ ಫೋನನ್ನು ಎಲ್ಲಿ, ಹೇಗೆ, ಯಾವ ಪ್ರಮಾಣದಲ್ಲಿ ಬಳಸಿದರೆ ಒಳ್ಳೆಯದು ಎಂದಾದರೂ ನಮ್ಮ ಅನುಭವದಿಂದಲೇ ತಿಳಿದುಕೊಳ್ಳಬಹುದಲ್ಲವೇ? ಇದರಿಂದಾಚೆಗೂ ಯೋಚಿಸುವುದಾದರೆ ಈಗಾಗಲೇ ನಾವು ಫೋನನ್ನು ಅವಶ್ಯಕತೆಗಿಂತಲೂ ಹೆಚ್ಚು ಸಮಯ, ಅನವಶ್ಯಕ ಸ್ಥಳಗಳಲ್ಲಿ, ಬೇಡದ ಕೆಲಸಗಳಿಗೆ ಬಳಸುತ್ತಿದ್ದೇವೆಯೇ ಎಂದು ಒಂದು ಸ್ವವಿಮರ್ಶೆ ಮಾಡಿಕೊಳ್ಳಬಹುದೇ? ಇದರಿಂದ ನಮಗೆ ಆಗುತ್ತಿರುವ/ ಆಗಬಹುದಾದ ದುಷ್ಪರಿಣಾಮಗಳ ಒಂದು ವರದಿ ತಯಾರಿಸಿಕೊಳ್ಳಬಹುದೇ? ಈ ದಿಸೆಯಲ್ಲಿ ಸುತ್ತಮುತ್ತಲ ಜಗತ್ತಿನಲ್ಲಿ ಏನಾದರೂ ಸಲಹೆ ಸೂಚನೆಗಳು ಸಿಗಬಹುದೇ? ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಏಳುತ್ತಿವೆಯಲ್ಲವೇ?

ಇದೇ ನಿಟ್ಟಿನಲ್ಲಿ ಈಚೆಗೆ ನನ್ನ ಕೈಸೇರಿರುವ ಕನ್ನಡದ ಒಂದು ಕಿರು ಹೊತ್ತಿಗೆಯನ್ನು ನಾನು ಈಗ ಪರಿಚಯಿಸುತ್ತಿದ್ದೇನೆ. ವಿಜ್ಞಾನ, ತಂತ್ರಜ್ಞಾನದ ಹೊಸ ಹೊಸ, ಸಂಕೀರ್ಣ ವಿಷಯಗಳನ್ನು ಸರಳ ಕನ್ನಡದಲ್ಲಿ ಅದು ನಮ್ಮ ಭಾಷೆಯಲ್ಲೇ ಮೊದಲು ಹುಟ್ಟಿದ ವಿಷಯವೇನೋ ಎಂಬಷ್ಟು ಸರಳವಾಗಿ ತಿಳಿಸಿಕೊಡುತ್ತಿರುವ ಲೇಖಕ ಟಿ. ಜಿ. ಶ್ರೀನಿಧಿ ಬರೆದಿರುವ 'ಸ್ವಿಚ್ ಆಫ್: ಮೊಬೈಲ್ ಆಚೆಗೂ ಒಂದು ಜಗತ್ತಿದೆ!' ಎಂಬ ಪುಸ್ತಕದ ಜೊತೆ ನಿಮ್ಮೊಡನೆ ಒಂದು ಸುತ್ತು ಹೋಗಿಬರೋಣವೇ?

ಮೊಬೈಲ್ ಅತಿಬಳಕೆಯ ದುಷ್ಪರಿಣಾಮಗಳ ಕುರಿತು ಇಜ್ಞಾನ ಟ್ರಸ್ಟ್ ಪ್ರಕಟಿಸಿದ ಕೃತಿ 'ಸ್ವಿಚ್ ಆಫ್: ಮೊಬೈಲ್ ಆಚೆಗೂ ಒಂದು ಜಗತ್ತಿದೆ!' ಮುದ್ರಿತ ಪ್ರತಿಗಳ ವಿತರಣೆಗೆ ಸದ್ಯದ ಪರಿಸ್ಥಿತಿ ಅಡ್ಡಿಯಾಗಿದ್ದರಿಂದ, ಈಗ ಅದರ ಇ-ಪುಸ್ತಕ ಆವೃತ್ತಿಯನ್ನು ಗೂಗಲ್ ಪ್ಲೇ ಬುಕ್ಸ್ ಮೂಲಕ ಉಚಿತವಾಗಿ ಲಭ್ಯವಾಗಿಸಲಾಗಿದೆ.

ಈ ಪುಸ್ತಕದಲ್ಲಿ ಒಟ್ಟು ಏಳು ಅಧ್ಯಾಯಗಳಿವೆ: ಮೊದಲ ಅಧ್ಯಾಯದ ಶೀರ್ಷಿಕೆ 'ಹೀಗೊಂದು ಹೈಟೆಕ್ ಚಟ': ಇಲ್ಲಿ ಲೇಖಕರು ಚಟವನ್ನು ವಿವರಿಸಲು ಹೆಸರಾಂತ ಲೇಖಕ ಬಿ ಜಿ ಎಲ್ ಸ್ವಾಮಿಯವರನ್ನು ಉಲ್ಲೇಖಿಸುತ್ತಾರೆ. ಎಲೆ-ಅಡಿಕೆ-ತಂಬಾಕು-ಮದ್ಯಪಾನಗಳಂತಹ ಚಟಗಳ ಜೊತೆಗೆ ಮೊಬೈಲ್ ಫೋನನ್ನೂ ಸೇರಿಸುತ್ತಾರೆ ಶ್ರೀನಿಧಿ. ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿ ಮಲಗುವ ಮುನ್ನ , ಮಧ್ಯರಾತ್ರಿ ಎಚ್ಚರವಾದಾಗ, ಬೇರೆಯವರೊಡನೆ ಕಾಲ ಕಳೆಯುವಾಗ….( ಉಳಿದವನ್ನು ನೀವೇ ನಿಮ್ಮ ಅನುಭವದ ಆಧಾರದ ಮೇಲೆ ಪಟ್ಟಿ ಮಾಡಿಕೊಳ್ಳಬಹುದು) ಮೊಬೈಲ್ ಫೋನಿನ ಬಳಕೆ ನಮಗೆ ಒಂದು ಚಟವಾಗಿದೆ ಅಲ್ಲವೇ? ಪರಮ ಪಂಡಿತನಾದ ಸರ್ಚ್ ಇಂಜಿನ್ನನ್ನು ಪದೇ ಪದೇ ಬಳಸುವುದು, ಅಲ್ಲಿ ಕಂಡದ್ದನ್ನೆಲ್ಲಾ ನಂಬುವುದು, ಇತರರಿಗೆ ಹಂಚುವುದು ಹೀಗೆ ಹಲವಾರು ಚಟಗಳನ್ನು - ಅವುಗಳಿಂದಾಗುವ ಪರಿಣಾಮಗಳನ್ನು ಲೇಖಕರು ಇಲ್ಲಿ ಚರ್ಚಿಸುತ್ತಾರೆ.

ಎರಡನೆಯ ಅಧ್ಯಾಯ 'ನಿಮ್ಮ ದಿನದಲ್ಲಿ ಸ್ಕ್ರೀನ್ ಟೈಮ್ ಎಷ್ಟು?'. ಈ ಅಧ್ಯಾಯದಲ್ಲಿ ಟಿವಿ ನೋಡುವುದು, ವಿಡಿಯೋ ಗೇಮ್ ಆಡುವುದು, ಕಂಪ್ಯೂಟರ್/ ಮೊಬೈಲ್ ಬಳಸುವುದು ಇವೆಲ್ಲವನ್ನೂ ಸ್ಕ್ರೀನ್ ಟೈಮ್ ಎಂದು ವರ್ಗೀಕರಿಸಲಾಗಿದೆ. ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಂಡ್ರಾಯ್ಡ್ ಫೋನ್‌ಗಳಲ್ಲಿರುವ 'ಡಿಜಿಟಲ್ ವೆಲ್‌ಬೀಯಿಂಗ್' ಸೌಲಭ್ಯವನ್ನು ಬಳಸಿಕೊಳ್ಳುವ ಸಲಹೆ ಇದೆ.

ಮೂರನೇ ಅಧ್ಯಾಯ 'ಗೂಗಲ್ ನಿಮ್ಮ ಫ್ಯಾಮಿಲಿ ಡಾಕ್ಟರಾ?' ಒಂದು ಅತಿ ಮುಖ್ಯ ಅಧ್ಯಾಯ. ನಮ್ಮ ಅನಾರೋಗ್ಯ ಲಕ್ಷಣಗಳನ್ನು ಗೂಗಲ್‌ಗೆ ಉಣಿಸಿದರೆ ಅದು ಕೊಡಬಹುದಾದ ರೋಗದ ವಿವರಗಳು ಎಂತಹ ಮಾನಸಿಕ ಅನಾರೋಗ್ಯವನ್ನು ಸೃಷ್ಟಿಸಬಲ್ಲುದು, ಇದರಿಂದ ಆಗಬಹುದಾದ ದುಷ್ಪರಿಣಾಮಗಳು ಎಲ್ಲವನ್ನೂ ವಿವರವಾಗಿ ಚರ್ಚಿಸಿದ್ದಾರೆ. ತಲೆ ನೋವು ಎಂದು ಗೂಗಲ್ ಗೆ ಹೇಳಿದರೆ ನಿದ್ರೆ ಮಾಡಿಲ್ಲ ಎನ್ನುವುದರಿಂದ ಹಿಡಿದು ಬ್ರೈನ್ ಟ್ಯೂಮರ್‌ವರೆಗೂ ಕಾರಣಗಳನ್ನು ಅದು ಹೇಳಬಹುದು. ಅಂತರಜಾಲದಲ್ಲಿ ಮಾಹಿತಿ ಹುಡುಕುವ ಅಭ್ಯಾಸವನ್ನು 'ಇಡಿಯಟ್ ಸಿಂಡ್ರೋಮ್' (Internet Derived Information Obstructing Treatment) ಎಂದು ತಮಾಷೆಯಾಗಿ ಕರೆಯುತ್ತಾರೆಂದೂ ಲೇಖಕರು ತಿಳಿಸುತ್ತಾರೆ. ಪ್ರಥಮ ಪರಿಣಾಮ, ಸೈಬರ್ ಕಾಂಡ್ರಿಯ ಮುಂತಾದ ಮಾಹಿತಿಗಾಗಿ ನೀವು ಪುಸ್ತಕವನ್ನು ಓದಬೇಕು.

ಟಾಯ್ಲೆಟ್‌ಗೆ ನೀವು ಮೊಬೈಲ್ ಕೊಂಡು ಹೋಗುವುದಿಲ್ಲ ಅಲ್ಲವೇ? ಸಧ್ಯ ನೀವು ಹಲವು ಅಪಾಯಗಳಿಂದ ಬಚಾವ್. ಆದರೂ ಊಟ ತಿಂಡಿ ಮಾಡುವಾಗ? ಇದರ ಪರಿಣಾಮಗಳನ್ನು ತಿಳಿಸಲು ಲೇಖಕರು ನಾಲ್ಕನೆಯ ಅಧ್ಯಾಯ 'ನಿಮ್ಮ ಮೊಬೈಲ್‌ನಲ್ಲಿ ಕೀಟಾಣು ಇದೆಯೇ?'ದಲ್ಲಿ ವಿವರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮೊಬೈಲನ್ನು ಶುಚಿಯಾಗಿಕೊಳ್ಳಲು ಹಲವು ಸೂಚನೆಗಳನ್ನು ಕೊಡುವುದಲ್ಲದೇ ಮೊಬೈಲ್ ತಂತಾನೇ ಈ ಕೆಲಸವನ್ನೂ ಮಾಡಿಕೊಳ್ಳಬಹುದಾದ ಆಂಟಿ ಮೈಕ್ರೋಬಿಯಲ್ ಪರದೆಗಳೂ ಇನ್ನು ಮುಂದೆ ಬರಬಹುದಂತೆ ಎಂಬ ಆಸೆಯನ್ನೂ ಹುಟ್ಟಿಸುತ್ತಾರೆ.

ಇನ್ನು ಮೊಬೈಲ್ ಮೂಲಕ ಹರಡಬಹುದಾದ ಸುಳ್ಳು ಮಾಹಿತಿಗಳ ಪರಿಣಾಮಗಳನ್ನು 'ಮೊಬೈಲ್ ಜಗದಲ್ಲಿ ಸುಳ್ಳುಗಳ ಜಾಲ' ಎಂಬ ಶೀರ್ಷಿಕೆಯ ಐದನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ. ವಿವೇಚನೆಯಿಲ್ಲದೆ, ಪರಿಶೀಲಿಸದೆ ಮಾಡುವ ಮುನ್ನೊತ್ತುಗಳ ಬಗ್ಗೆ ಎಚ್ಚರಿಸುತ್ತಾರೆ.

ಹಲವು ಸಮೀಕ್ಷೆಗಳ ಪ್ರಕಾರ ಸಾಮಾನ್ಯ ಮೊಬೈಲ್ ಬಳಕೆದಾರರು ಹದಿನೈದರಿಂದ ಮುವ್ವತ್ತು ನಿಮಿಷಗಳಲ್ಲಿ ಒಮ್ಮೆಯಾದರೂ ತಮ್ಮ ಮೊಬೈಲ್ ತೆರೆದು ನೋಡಿರುತ್ತಾರಂತೆ. ನೀವು ಹಾಗಿಲ್ಲ ಬಿಡಿ. ರಾತ್ರಿ ನಿದ್ದೆ ಬರದಿದ್ದರೆ, ಹಲವು ಕಾಲ ಮೊಬೈಲ್ ಸಹಾಯ ತೆಗೆದುಕೊಳ್ಳುತ್ತೀರಿ ಅಲ್ಲವೇ? ಇದೆಲ್ಲದರ ಕಾರಣವಾಗಿ ಮೊಬೈಲ್ ಪ್ರಸರಿಸುವ ಬೆಳಕು ಯಾವುದು? ಅದರಿಂದ ಏನು ಪರಿಣಾಮ ಆಗಬಹುದು? ಇದಲ್ಲದೇ ಇನ್ನಿತರ ದೈಹಿಕ ಪರಿಣಾಮಗಳೇನಾಗಬಹುದು ಎನ್ನುವ ವಿಚಾರವನ್ನು ಸವಿಸ್ತಾರವಾಗಿ 'ನಿಮ್ಮ ಡಿಜಿಟಲ್ ಆರೋಗ್ಯ ಹೇಗಿದೆ?' ಎಂಬ ಆರನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ. ಫಬ್ಬಿಂಗ್(ಫೋನ್+ಸ್ನಬ್ಬಿಂಗ್), ನೊಮೋಫೋಬಿಯ (ನೋ ಮೊಬೈಲ್ ಫೋನ್ ಫೋಬಿಯ), ಫ್ಯಾಂಟಮ್ ರಿಂಗಿಂಗ್ ಸಿಂಡ್ರೋಮ್ , ರಿಂಗ್‌ಸೈಟಿ (ರಿಂಗ್+ಆಂಗ್ಸೈಟಿ) ಇವೆಲ್ಲಾ ಈಗಾಗಲೇ ಕಾಯಿನ್ ಆಗಿರುವ ಹೊಸ ಪದಗಳು. ವಿವರಗಳು ಇದೇ ಅಧ್ಯಾಯದಲ್ಲಿವೆ.

ಇನ್ನು 'ಮೊಬೈಲ್ ಫೋನಿನಿಂದ ಸ್ವಾತಂತ್ರ ಬೇಕಿದೆ!' ಎಂಬ ಏಳನೆಯ ಹಾಗೂ ಕೊನೆಯ ಅಧ್ಯಾಯ ಈ ಹಿಂದೆ ಚರ್ಚಿಸಿದ ಎಲ್ಲಾ ನ್ಯೂನತೆಗಳನ್ನು ಸ್ವಲ್ಪ ಮಟ್ಟಿಗಾದರೂ ಹೋಗಲಾಡಿಸಿಕೊಳ್ಳಲು ಒಂದು ಮಾರ್ಗಸೂಚಿಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗಬಲ್ಲುದು. ನಮ್ಮ ದಿನನಿತ್ಯದ ಬದುಕಿನ ಮೇಲೆ ಸ್ವಲ್ಪ ಹೆಚ್ಚಿನ ನಿಯಂತ್ರಣ ಸಾಧಿಸಿರುವ ಮೊಬೈಲ್ ಫೋನಿನ ಮೇಲೆ ನಮ್ಮ ಹಿಡಿತವನ್ನು ಬಿಗಿಗೊಳಿಸುವಲ್ಲಿನ ಸಾಧನಗಳ ಬಗ್ಗೆ ಲೇಖಕ ತಿಳಿಸಿಕೊಟ್ಟಿದ್ದಾರೆ. ಹೆಚ್ಚಿನ ಕಾಫಿ, ಟೀ, ಸಿಹಿತಿಂಡಿ, ಆಲ್ಕೋಹಾಲ್, ತಂಬಾಕು ಮುಂತಾದವುಗಳನ್ನು ದೂರೀಕರಿಸಲು ಬಳಸುವ ಡಿಟಾಕ್ಸಿಫಿಕೇಷನ್ ರೀತಿಯಲ್ಲೇ 'ಡಿಜಿಟಲ್ ಡಿಟಾಕ್ಸ್' ಪ್ರಯೋಗ, ಫೇಸ್ಬುಕ್ - ವಾಟ್ಸಾಪ್‌ಗಳ ಡಿಆಕ್ಟಿವೇಷನ್. ಒಮ್ಮೊಮ್ಮೆ ೨೪ ಘಂಟೆಗಳ ಕಾಲ ಸತತವಾಗಿ ಆಫ್‌ನಲ್ಲಿಟ್ಟು 'ಡೇ ಆಫ್ ಅನ್ ಪ್ಲಗಿಂಗ್' ಆಚರಣೆ, ಇಂಟರ್ನೆಟ್ ಉಪವಾಸ ಅಥವಾ ನೆಟ್ ಉಪವಾಸ, ಡೊಪಮೈನ್ ಉಪವಾಸ, 'ಫಿಯರ್ ಆಫ್ ಮಿಸಿಂಗ್ ಔಟ್ (FOMO)' ಬದಲಿಗೆ 'ಜಾಯ್ ಆಫ್ ಮಿಸಿಂಗ್ ಔಟ್ (JOMO)' ಅನುಸರಣೆ ಮುಂತಾದ, ಈಗಾಗಲೇ ಜಗತ್ತಿನ ಇತರೆಡೆಗಳಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ನಾವೂ ಪಾಲಿಸಬಹುದೇನೋ?

ಮೊಬೈಲ್ ನ ಅತಿ ಬಳಕೆಯ ದುಷ್ಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲು ಒಂದೇ ದಾರಿ ನಿಯಮಿತವಾಗಿ ಮೊಬೈಲ್ ಸ್ವಿಚ್ ಆಫ್! ಮೊಬೈಲ್ ಬಳಕೆದಾರರೆಲ್ಲರೂ ಓದಲೇಬೇಕಾದ ಪುಸ್ತಕ ಇದು.

ಸ್ವಿಚ್ ಆಫ್: ಮೊಬೈಲ್ ಆಚೆಗೂ ಒಂದು ಜಗತ್ತಿದೆ!

ಲೇಖಕರು: ಟಿ. ಜಿ. ಶ್ರೀನಿಧಿ

ಪ್ರಕಾಶಕರು: ಇಜ್ಞಾನ ಟ್ರಸ್ಟ್, ಬೆಂಗಳೂರು

48 ಪುಟಗಳು, ಬೆಲೆ: ರೂ. 40

ಉಚಿತ ಇ-ಬುಕ್ ಆವೃತ್ತಿ: tinyurl.com/SwitchOff-eBook

Related Stories

No stories found.
logo
ಇಜ್ಞಾನ Ejnana
www.ejnana.com