೨೦೧೯ರ 'ಪದಕಮ್ಮಟ' ಕಾರ್ಯಕ್ರಮದಲ್ಲಿ ಶ್ರೀ ಸುಧೀಂದ್ರ
೨೦೧೯ರ 'ಪದಕಮ್ಮಟ' ಕಾರ್ಯಕ್ರಮದಲ್ಲಿ ಶ್ರೀ ಸುಧೀಂದ್ರ'ಪದಾರ್ಥ ಚಿಂತಾಮಣಿ' ಫೇಸ್‌ಬುಕ್ ಬಳಗ

ಸುಧೀಂದ್ರ ಎಂಬ ಜೆಟ್‌ ವೇಗದ ಮನುಷ್ಯ

"ಸುಧೀಂದ್ರ ಅವರ ಈ ಅಚಾನಕ್‌ ವಿದಾಯ ನಮ್ಮೆಲ್ಲರಿಗೆ, ಅದರಲ್ಲೂ ನನಗೆ ಬಹಳಷ್ಟು ನಷ್ಟದ ವಿಷಯ"... ಕೊಳ್ಳೇಗಾಲ ಶರ್ಮರ ಬರಹದಲ್ಲಿ ಹಾಲ್ದೊಡ್ಡೇರಿ ಸುಧೀಂದ್ರರ ನೆನಪು

ಸುಧೀಂದ್ರ ಹಾಗೂ ನನ್ನ ಒಡನಾಟ ರಿಮೋಟ್‌ ಒಡನಾಟ ಅಂತಲೇ ಹೇಳಬೇಕು. ಬಹಳ ಹಿಂದೆ ಅವರು ನೆಟ್‌ ನೋಟ ಬರೆಯಲು ಆರಂಭಿಸಿದ್ದಾಗ, ಇಮೇಲ್‌ ಮಾಡಿದ್ದೆ. ಲೇಖನದ ಬಗ್ಗೆ ಅಭಿನಂದಿಸಿದ್ದೆ. ಕನ್ನಡದಲ್ಲಿ ಇಂಜಿನೀಯರಿಂಗಿನ ವಿಷಯಗಳನ್ನು ಸರಾಗವಾಗಿ ಬರೆಯುವ ತಾಕತ್ತು ಅವರ ಲೇಖನಿಗಿತ್ತು. ತಂತ್ರಜ್ಞಾನದ ಬರೆಹಗಳಿಗಿಂತಲೂ ಸ್ವಲ್ಪ ಭಿನ್ನವಾದ ಶೈಲಿ. ಸುಲಲಿತವಾಗಿ ಬಳಕೆಯಾಗುತ್ತಿದ್ದ ಪನ್‌ ಗಳು, ಸುಧೀ ಬರಹಗಳ ವಿಶೇಷ. ಹೀಗೆ ಪತ್ರ ಬರೆದ ಮರುಕ್ಷಣವೇ ಮಾರೋಲೆ ಬಂದಿತ್ತು. ಸುಧೀಂದ್ರ ಅಷ್ಟೊಂದು ಫಾಸ್ಟ್.‌

ನಾವಿಬ್ಬರೂ ವಯಸ್ಸಿನಲ್ಲಿ ಒಂದೇ ಓರಗೆಯವರು. ಹೆಚ್ಚೂ ಕಡಿಮೆ ಒಂದೇ ವಯಸ್ಸು. ಆದರೆ ಸುಧೀಂದ್ರ ಮಾತ್ರ ತಾವು ನಂಬಿದ ಮೌಲ್ಯಗಳನ್ನು ಬಿಟ್ಟುಕೊಡಲಾಗದೆ ನನಗಿಂತ ಹದಿನೈದು ಇಪ್ಪತ್ತು ವರ್ಷ ಮೊದಲೇ ಉದ್ಯೋಗದಿಂದ ನಿವೃತ್ತಿ ಆಗಿದ್ದರು. ಆಗಿದ್ದರು ಅಲ್ಲ ಪಡೆದಿದ್ದರು. ಅವರು ಪಡೆದಿದ್ದು ವಿಜ್ಞಾನಿಯ ವೃತ್ತಿಯಿಂದ, ಅಥವಾ ಅದರ ಜೊತೆ ಬರುವ ರಾಜಕೀಯದಿಂದ ಬಿಡುಗಡೆಯಷ್ಟೆ. ಅಲ್ಲಿಂದ ಮುಂದೆ ಶಿಕ್ಷಕ ವೃತ್ತಿ ಹಾಗೂ ಬರೆಹಗಾರಿಕೆ ಅವರ ಬದುಕಾಯಿತು. ಸುಧೀಂದ್ರ ಅವರನ್ನು ಭೇಟಿಯಾದಾಗಲೆಲ್ಲ ನಾನು ಅವರಿಗೆ ಒಂದೇ ಮಾತು ಹೇಳುತ್ತಿದ್ದೆ. “ನಿಮ್ಮನ್ನು ಕಂಡರೆ ನನಗೆ ಅಸೂಯೆ ಆಗುತ್ತದೆ.” ಇದಕ್ಕೆ ಕಾರಣವಿಷ್ಟೆ. ನನಗೂ ಶಿಕ್ಷಕನಾಗಬೇಕೆನ್ನುವ ಹಂಬಲವಿತ್ತು. ಅದು ನೆರವೇರಿರಲಿಲ್ಲ. ಬರೆಹಗಳನ್ನು ಬರೆಯುತ್ತಿದ್ದೆನಾದರೂ, ಅವರಷ್ಟು ಪನ್‌ ಸಿದ್ಧಿಸಲಿಲ್ಲ. ಆದರೆ ನಾನು ಹೀಗೆ ಹೇಳಿದಾಗಲೆಲ್ಲ, ಅವರದ್ದು ಒಂದೇ ಉತ್ತರ. “ಶರ್ಮಾಜಿ. ನೀವು ನನ್ನ ಸೀನಿಯರ್.”‌

ಒಮ್ಮೆ ಹೀಗೇ ಮೈಸೂರಿಗೆ ಕುಟುಂಬ ಸಮೇತರಾಗಿ ಬಂದಿದ್ದವರು, ನೇರವಾಗಿ ಮನೆಗೆ ಭೇಟಿ ನೀಡಿದ್ದರು. ಕಾಫಿ ಕುಡಿದಿದ್ದರು. ಇದು ನಮ್ಮ ಮೊದಲ ಪರಿಚಯ. ಅದಕ್ಕೂ ಮುನ್ನ ಏನಿದ್ದರೂ ಬರೆಹಗಳ ಮೂಲಕ, ಇಮೇಲ್‌ ಮೂಲಕವಷ್ಟೆ ಒಡನಾಡಿದ್ದೆವು. ಅನಂತರ ಹಲವು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಸೌಮ್ಯ ಸುಧೀಂದ್ರ ಅವರ ಕೈಯ ರುಚಿಯಾದ ಅಡುಗೆ ಸವಿದಿದ್ದೇನೆ. ಹರಟಿದ್ದೇನೆ. ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕನಸುಗಳನ್ನು ಹಂಚಿಕೊಂಡಿದ್ದೇನೆ.

ನಮ್ಮ ಇತ್ತೀಚಿನ ಭೇಟಿಯಾಗಿದ್ದು ಎರಡು ವರ್ಷಗಳ ಹಿಂದೆ, ಕೋವಿಡ್‌ ಸೋಂಕುವ ಮೊದಲು, ಬೆಂಗಳೂರಿನ ಒಂದು ಕಮ್ಮಟದಲ್ಲಿ. ಅವರು ಉದ್ಘಾಟನಾ ಭಾಷಣ ಮಾಡಿದ್ದರು. ಅದಕ್ಕೂ ಮುನ್ನ ಒಂದೂವರೆ ಗಂಟೆ ನಾವಿಬ್ಬರೂ ಹರಟಿದ್ದೆವು. ಆದರೆ ಹೀಗೆ ಕಮ್ಮಟಗಳಲ್ಲಿ ಒಂದೇ ವೇದಿಕೆಯಲ್ಲಿ ಒಟ್ಟಾದ ಸಂದರ್ಭಗಳು ಬಹಳ ಕಡಿಮೆ ಎನ್ನುವುದು ವಿಚಿತ್ರ. ಯಾವುದೇ ವಿಜ್ಞಾನ ಕಮ್ಮಟದಲ್ಲಿ ನಮ್ಮಿಬ್ಬರ ಭಾಷಣವಿದ್ದರೂ, ಸುಧೀ ನನಗಿಂತ ಒಂದು ದಿನ ಮುನ್ನ ಬಂದು ಮಾತನಾಡಿ ಹೋಗಿರುತ್ತಿದ್ದರು, ಅಥವಾ ಒಂದು ದಿನ ಅನಂತರ ಅವರ ಭಾಷಣವಿತ್ತು. ಅಂತಹ ಸಂದರ್ಭದಲ್ಲಿಯೆಲ್ಲ ಮುಂದಾಗಿಯೇ ನಮ್ಮಿಬ್ಬರ ಭಾಷಣಗಳ ಬಗ್ಗೆ ಚರ್ಚಿಸಿಕೊಳ್ಳುತ್ತಿದ್ದೆವು. ಈ ಚರ್ಚೆಗಳು ಎಷ್ಟೋ ಬಾರಿ ಹೊಸ ಹೊಳಹುಗಳನ್ನು ಕೊಡುತ್ತಿದ್ದುವು.

ಸುಧೀಂದ್ರ ಅವರ ಈ ಅಚಾನಕ್‌ ವಿದಾಯ ನಮ್ಮೆಲ್ಲರಿಗೆ, ಅದರಲ್ಲೂ ನನಗೆ ಬಹಳಷ್ಟು ನಷ್ಟದ ವಿಷಯ.

Related Stories

No stories found.
logo
ಇಜ್ಞಾನ Ejnana
www.ejnana.com