ಶ್ರೀ ಕೃಷ್ಣಮೂರ್ತಿಯವರ ಕೆಲವು ಕೃತಿಗಳು
ಶ್ರೀ ಕೃಷ್ಣಮೂರ್ತಿಯವರ ಕೆಲವು ಕೃತಿಗಳುejnana.com

ವಿಜ್ಞಾನ ಸಾಹಿತ್ಯದ ತೆರೆಮರೆಯ ಸಾಧಕ ಜಿ. ಎಂ. ಕೃಷ್ಣಮೂರ್ತಿ

ವಿದ್ಯಾರ್ಥಿದೆಸೆಯಿಂದಲೇ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಶ್ರೀ ಕೃಷ್ಣಮೂರ್ತಿಯವರು ಈವರೆಗೆ ೭೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಬೆಳವಣಿಗೆಗೆ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಸ್ವತಃ ವಿಜ್ಞಾನದ ಹಿನ್ನೆಲೆಯುಳ್ಳವರು ಮಾತ್ರವೇ ಅಲ್ಲದೆ ಇತರ ಕ್ಷೇತ್ರಗಳ ಹಿನ್ನೆಲೆಯಿಂದ ಬಂದವರು ಕೂಡ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ಸಾಧನೆ ಮಾಡಿರುವ ಅನೇಕ ಉದಾಹರಣೆಗಳನ್ನು ನಾವು ಈ ಕ್ಷೇತ್ರದಲ್ಲಿ ನೋಡಬಹುದು. ಅಂತಹ ಸಾಧಕರಲ್ಲೊಬ್ಬರು ಶ್ರೀ ಜಿ. ಎಂ. ಕೃಷ್ಣಮೂರ್ತಿ.

ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಶ್ರೀ ಜಿ. ಎಂ. ಕೃಷ್ಣಮೂರ್ತಿ ಮೊದಲಿನಿಂದಲೂ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತರು. ಈ ಆಸಕ್ತಿಯಿಂದಾಗಿಯೇ ಅವರು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ತಮ್ಮ ಉದ್ಯೋಗದಿಂದ ಸಂಬಳರಹಿತ ರಜೆ ಪಡೆದುಕೊಂಡು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂಎ ಪದವಿ ಪಡೆದರು.

ವಿದ್ಯಾರ್ಥಿದೆಸೆಯಿಂದಲೇ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಕೃಷ್ಣಮೂರ್ತಿಯವರು ಈವರೆಗೆ ೭೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕತೆ, ಕಾದಂಬರಿ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ ಮುಂತಾದ ಹಲವು ಪ್ರಕಾರಗಳಲ್ಲಿ ಸಾಹಿತ್ಯರಚನೆ ಮಾಡಿರುವ ಅವರು ಹಲವು ಕೃತಿಗಳ ಅನುವಾದ ಹಾಗೂ ಸಂಪಾದನೆಯನ್ನೂ ಮಾಡಿದ್ದಾರೆ. ಅವರು ಕಿರುಪತ್ರಿಕೆಯೊಂದರ ಸಂಪಾದಕರಾಗಿ ಕೆಲಸಮಾಡಿದ್ದೂ ಉಂಟು.

ಶ್ರೀ ಜಿ. ಎಂ. ಕೃಷ್ಣಮೂರ್ತಿ
ಶ್ರೀ ಜಿ. ಎಂ. ಕೃಷ್ಣಮೂರ್ತಿejnana.com

ಸಾಹಿತ್ಯದ ಹಿನ್ನೆಲೆಯಿಂದ ಬಂದ ಕೃಷ್ಣಮೂರ್ತಿಯವರು ವಿಜ್ಞಾನ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು ವಿಶೇಷ. ವಿಜ್ಞಾನ ವಿಶ್ವಕೋಶ (ಎರಡು ಭಾಗಗಳಲ್ಲಿ) ಹಾಗೂ ಮಕ್ಕಳ ವಿಶ್ವಜ್ಞಾನಕೋಶ (ಐದು ಭಾಗಗಳಲ್ಲಿ) ಅವರು ಸಂಪಾದಿಸಿದ ಪ್ರಮುಖ ಕೃತಿಗಳು. ಸಪ್ನಾ ಬುಕ್ ಹೌಸ್‌ನ 'ಸಾಮಾನ್ಯ ವಿಜ್ಞಾನ ವಿವರಣೆ ಮತ್ತು ಪ್ರಯೋಗ ಮಾಲೆ'ಯಲ್ಲಿ ಅವರು ಕಾಂತತೆ, ವಿದ್ಯುಚ್ಛಕ್ತಿ, ಗಾಳಿ, ನೀರು, ಉಷ್ಣ, ಬೆಳಕು ಎಂಬ ಆರು ಕೃತಿಗಳನ್ನು ರಚಿಸಿದ್ದಾರೆ. ವಿಜ್ಞಾನಲೋಕದ ವಿಸ್ಮಯಗಳು (ನಾಲ್ಕು ಭಾಗಗಳಲ್ಲಿ), ವಿಜ್ಞಾನ ಪ್ರಯೋಗಗಳು, ಆಹಾರ ಕೈಪಿಡಿ, ೫೧ ಸರಳ ವಿಜ್ಞಾನ ಪ್ರಬಂಧಗಳು, ವಿಜ್ಞಾನ: ನೂರಾರು ಪ್ರಶ್ನೆಗಳು, ಪ್ರಯೋಗಗಳು ಮತ್ತು ವಿವರಣೆ - ಇವು ಅವರು ರಚಿಸಿರುವ ಇನ್ನಷ್ಟು ಕೃತಿಗಳು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸಪ್ನಾ ಬುಕ್ ಹೌಸ್‌ನಿಂದ ಸನ್ಮಾನಿತರಾಗಿರುವ ಶ್ರೀ ಕೃಷ್ಣಮೂರ್ತಿಯವರು ತಮ್ಮ ಪತ್ನಿ ಶ್ರೀಮತಿ ಜಯಂತಿ, ಪುತ್ರ ಹಾಗೂ ಸೊಸೆಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಪುತ್ರ ಶ್ರೀ ತಿಲಕ್ ಕನ್ನಡ ಕಿರುತೆರೆ ಹಾಗೂ ಚಲನಚಿತ್ರರಂಗದಲ್ಲಿ ಸಕ್ರಿಯರು.

ಬರುವ ಡಿಸೆಂಬರ್‌ನಲ್ಲಿ ತಮ್ಮ ಎಂಬತ್ತು ವರ್ಷಗಳನ್ನು ಪೂರ್ಣಗೊಳಿಸಲಿರುವ ಶ್ರೀ ಜಿ. ಎಂ. ಕೃಷ್ಣಮೂರ್ತಿ ಅವರಿಗೆ ಇಜ್ಞಾನ ಬಳಗವು ಶುಭಾಶಯಗಳನ್ನು ಕೋರುತ್ತದೆ ಹಾಗೂ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸುತ್ತದೆ.

Related Stories

No stories found.
logo
ಇಜ್ಞಾನ Ejnana
www.ejnana.com