ಓದುವ ಹವ್ಯಾಸವಿರುವ ಯಾರನ್ನಾದರೂ ಕೇಳಿ, ಕೈಲಿರುವ ಒಳ್ಳೆಯ ಪುಸ್ತಕ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ದುಬಿಡುತ್ತದೆ ಎನ್ನುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಕೈಯಲ್ಲೊಂದು ಪುಸ್ತಕವಿದ್ದರೆ ಸುತ್ತಲ ಜಗತ್ತನ್ನೇ ಮರೆತು ಕೂರುವ ಅನೇಕರನ್ನು ನೀವೂ ನೋಡಿರಬಹುದು, ಅಥವಾ ನೀವೂ ಅವರಲ್ಲಿ ಒಬ್ಬರಾಗಿರಬಹುದು!
ಇಷ್ಟೆಲ್ಲ ಒಳ್ಳೆಯ ಅನುಭವ ಕಟ್ಟಿಕೊಡುವ ಸಾಹಿತ್ಯದಲ್ಲಿ ವಿಜ್ಞಾನದ ಅಂಶಗಳೂ ಸೇರಿದರೆ? ಅದು ನಮ್ಮನ್ನು ವಿಸ್ಮಯಗಳ ಲೋಕಕ್ಕೇ ಕರೆದೊಯ್ದುಬಿಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಬದಲಾವಣೆಗಳಿಗೆ ಮಾನವರು ಪ್ರತಿಕ್ರಿಯಿಸುವ ರೀತಿಯನ್ನು ನಿರೂಪಿಸುವ ಸಾಹಿತ್ಯದ ಈ ಪ್ರಕಾರವೇ ವೈಜ್ಞಾನಿಕ ಕಥಾಸಾಹಿತ್ಯ (ಸೈನ್ಸ್ ಫಿಕ್ಷನ್).
ಈ ಪ್ರಕಾರಕ್ಕೆ ಹಾಗೊಂದು ವ್ಯಾಖ್ಯಾನ ಕೊಟ್ಟಿದ್ದು ಐಸಾಕ್ ಅಸಿಮೋವ್. ವೈಜ್ಞಾನಿಕ ಕಥಾಸಾಹಿತ್ಯದ ಕ್ಷೇತ್ರದಲ್ಲಿ ಸಾರ್ವಕಾಲಿಕ ಶ್ರೇಷ್ಠ ಸಾಧನೆಗಳನ್ನು ಮಾಡಿದವರಲ್ಲಿ ಪ್ರಮುಖ ಸ್ಥಾನ ಆತನದು. ಆತನ ಜನ್ಮದಿನವಾದ ಜನವರಿ ೨ನೇ ತಾರೀಕನ್ನು ವಿಶ್ವದ ಹಲವೆಡೆ ವೈಜ್ಞಾನಿಕ ಕಥಾಸಾಹಿತ್ಯ ದಿನವನ್ನಾಗಿ (ಸೈನ್ಸ್ ಫಿಕ್ಷನ್ ಡೇ) ಆಚರಿಸಲಾಗುತ್ತದೆ. ಸರಕಾರವೋ ಸಂಘಸಂಸ್ಥೆಗಳೋ ಗುರುತಿಸಿ ಘೋಷಿಸಿದ್ದಲ್ಲ, ವೈಜ್ಞಾನಿಕ ಕಥಾಸಾಹಿತ್ಯದ ಅಭಿಮಾನಿಗಳೇ ಪ್ರಾರಂಭಿಸಿ ಸಂಭ್ರಮಿಸುತ್ತಿರುವ ದಿನಾಚರಣೆ ಇದು.
ವೈಜ್ಞಾನಿಕ ಕಥಾಸಾಹಿತ್ಯ ಬೆಳೆದದ್ದೂ ಹಾಗೆಯೇ. ವಿಶ್ವವಿಖ್ಯಾತ ಸಾಹಿತಿಗಳಷ್ಟೇ ಅಲ್ಲದೆ ವಿಜ್ಞಾನಿಗಳ ಬೆಂಬಲವನ್ನೂ ಪಡೆದ ಅಪರೂಪದ ಸಾಹಿತ್ಯ ಪ್ರಕಾರ ಇದು. ನಮ್ಮ ದೇಶದಲ್ಲೂ ಅಷ್ಟೇ, ಮೊತ್ತಮೊದಲ ವೈಜ್ಞಾನಿಕ ಕತೆ ಬರೆದ ಹಿರಿಮೆ ಖ್ಯಾತ ವಿಜ್ಞಾನಿ ಜಗದೀಶಚಂದ್ರ ಬೋಸರಿಗೆ ಸಲ್ಲುತ್ತದಂತೆ.
ಕತೆ-ಕಾದಂಬರಿಗಳಲ್ಲಿ ಕಲ್ಪನೆಯ ಅಂಶಗಳಿರುವುದು ಸಾಮಾನ್ಯ. ಮೇಲ್ನೋಟಕ್ಕೆ ವೈಜ್ಞಾನಿಕ ಕಥಾಸಾಹಿತ್ಯವೂ ಹಾಗೆಯೇ ಎಂದು ತೋರಬಹುದು. ರೋಬಾಟ್‌ಗಳು, ಏಲಿಯನ್‌ಗಳು, ಟೈಮ್ ಮಶೀನುಗಳೆಲ್ಲ ವೈಜ್ಞಾನಿಕ ಕತೆಗಳಲ್ಲಿ ನಮಗೆ ಸಿಗುತ್ತಲೇ ಇರುತ್ತವೆ ಎಂದೂ ಅನ್ನಿಸಬಹುದು.
ಆದರೆ ವೈಜ್ಞಾನಿಕ ಕಥಾಸಾಹಿತ್ಯ ಕೇವಲ ಕಲ್ಪನೆಯ ಲೋಕವಷ್ಟೇ ಅಲ್ಲ. ಪ್ರಸ್ತುತ ನಮಗೆ ತಿಳಿದಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಆಧರಿಸಿ, ಭವಿಷ್ಯದಲ್ಲಿ ನಾವು ಕಾಣಬಹುದಾದ ಪ್ರಗತಿ ಅಥವಾ ಎದುರಿಸಬಹುದಾದ ಸವಾಲುಗಳನ್ನು ಇದು ಚಿತ್ರಿಸುತ್ತದೆ. ಒಂದು ಕಾಲದಲ್ಲಿ ವೈಜ್ಞಾನಿಕ ಕಥಾಸಾಹಿತ್ಯದ ಭಾಗವಾಗಿದ್ದ ಸಂಗತಿಗಳು ಆನಂತರದಲ್ಲಿ ಸಾಕಾರಗೊಂಡಿದ್ದೂ ಇದೆ!
ವೈಜ್ಞಾನಿಕ ಕಥಾಸಾಹಿತ್ಯವನ್ನು ಜ್ಞಾನ ಮತ್ತು ಕಲ್ಪನೆಯ ನಡುವಿನ ಸೇತುವೆಯೆಂದೇ ಕರೆಯಬಹುದು. ತಾಂತ್ರಿಕ ವಿಷಯಗಳಿಗಷ್ಟೇ ಸೀಮಿತವಾಗಿ ಬೋರು ಹೊಡೆಸದೆ ಹೊಸ ವಿಷಯಗಳನ್ನು ಆಕರ್ಷಕ ರೀತಿಯಲ್ಲಿ ಕಟ್ಟಿಕೊಡುವುದು ಈ ಪ್ರಕಾರದ ವೈಶಿಷ್ಟ್ಯ. ಹಾಗಾಗಿಯೇ ಇದು ಪತ್ರಿಕೆ-ಪುಸ್ತಕಗಳನ್ನು ದಾಟಿ ಚಲನಚಿತ್ರ ಹಾಗೂ ವೀಡಿಯೊ ಗೇಮ್‌ಗಳ ಮೂಲಕವೂ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಭವಿಷ್ಯದ ವಿಜ್ಞಾನ-ತಂತ್ರಜ್ಞಾನ ನಮ್ಮ ಜೀವನವನ್ನು ಹೇಗೆ ರೂಪಿಸಬಹುದು ಎಂಬ ಕುತೂಹಲವನ್ನು ಪೋಷಿಸುತ್ತಲೇ ಬಂದಿದೆ. ಓದುಗ-ನೋಡುಗರನ್ನಷ್ಟೇ ಅಲ್ಲ, ವಿಜ್ಞಾನಿಗಳನ್ನೂ ಪ್ರೇರೇಪಿಸುತ್ತಿದೆ.

