ಮಹಿಳಾದಿನ ವಿಶೇಷ: ವಿಜ್ಞಾನದ ಶಿಕ್ಷಣ ನನ್ನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದೆ
ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಒಬ್ಬ ಮಹಿಳೆಯಾಗಿ ಸಂಭ್ರಮ ಪಡಲು ಕಾರಣ ಹತ್ತು ಹಲವು. ಪ್ರಾಥಮಿಕ ಆರೋಗ್ಯ ಕೇಂದ್ರದಂತಹ ಕನಿಷ್ಟ ಸೌಕರ್ಯಗಳಿಲ್ಲದ ಹಳ್ಳಿಯೊಂದರಲ್ಲಿ ಜನಿಸಿ ಬೆಳೆದ ನಾನು ಇಂದು ರಾಜಧಾನಿ ನಗರಿಯಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತ ನೆಲೆ ನಿಲ್ಲಲು ಕಾರಣವಾಗಿರುವುದು ವಿಜ್ಞಾನದಲ್ಲಿ ಪಡೆದ ಶಿಕ್ಷಣ ಎಂದರೆ ತಪ್ಪೇನಿಲ್ಲ.
ಹಳ್ಳಿಯಲ್ಲೇ ಸರ್ಕಾರಿ ಶಾಲೆಗಳಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿ.ಯು.ಸಿ.ಯನ್ನು ಡಿಸ್ಟಿಂಕ್ಷನ್ ನಲ್ಲಿ ಪೂರೈಸಿದೆ. ವಿಜ್ಞಾನದಲ್ಲಿ ಆಸಕ್ತಿ, ಅಭಿರುಚಿ ಮತ್ತು ಪ್ರತಿಭೆ ಇದ್ದುದರಿಂದ ಬಿ.ಎಸ್ಸಿ. ಪದವಿಯನ್ನು ವಿಶ್ವವಿದ್ಯಾಲಯಕ್ಕೆ ಐದನೇ ಸ್ಥಾನದೊಂದಿಗೆ ಪಡೆದೆ. ಹೆಣ್ಣುಮಗು ನೀನು ಇನ್ನು ಪದವಿ ಓದಿದ್ದು ಸಾಕು ಬಿ.ಎಡ್. ತರಬೇತಿ ಪಡೆದು ಶಿಕ್ಷಕಿಯಾಗು ಎಂದು ಸುಮಾರು ಮಂದಿ ಸಲಹೆ ನೀಡಿದಾಗ ತುಂಬಾ ನಿರಾಸೆಯಾಗುತ್ತಿತ್ತು. ಮಹಿಳೆಯಾಗಿ ನನ್ನೊಳಗಿನ ಅಂತ:ಶಕ್ತಿ ಅಷ್ಟಕ್ಕೇ ಬಿಡಲಿಲ್ಲ ಮತ್ತು ಒಮ್ಮೆ ಖ್ಯಾತ ಶಿಕ್ಷಣ ತಜ್ಞ, ರಸಾಯನ ವಿಜ್ಞಾನಿ ಡಾ. ಗುರುರಾಜ ಕರ್ಜಗಿಯವರ ಸಂದರ್ಶನ ನೋಡಿ ಪ್ರೇರೇಪಿತಗೊಂಡಿದ್ದರಿಂದ ರಸಾಯನ ವಿಜ್ಞಾನದಲ್ಲಿ ಎಂ.ಎಸ್ಸಿ., ಯನ್ನು ಚಿನ್ನದ ಪದಕದೊಂದಿಗೆ ಮೊದಲ ಸ್ಥಾನ ಗಳಿಸಿದೆ. ನಂತರ ಡಾಕ್ಟರೇಟ್ ಮಾಡಬೇಕೆಂಬ ಆಸಕ್ತಿಯಿತ್ತು ಆದರೆ ಆರ್ಥಿಕ ಸ್ಥಿತಿ ಮುಗ್ಗಟ್ಟಿನಲ್ಲಿತ್ತು ಆದರೂ ಛಲ ಬಿಡದೆ ಮನೆಯವರ ಸಹಕಾರದಿಂದ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತ ಸಂಶೋಧನೆಗೆ ದಾಖಲಾದೆ. ಮುಂದೆ ನನ್ನ ಸಂಶೋಧನೆಗೆ ಆರ್ಥಿಕವಾಗಿ ಬಲ ತುಂಬಿ ಸ್ವಾವಲಂಭಿಯಾಗಿ ಮಾಡಿದ್ದು ಭಾರತ ಸರ್ಕಾರದ ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಇನ್ಸ್‌ಪೈರ್ ಫೆಲೋಶಿಪ್ ಯೋಜನೆ.
ಸಂಶೋಧನಾ ಕಾರ್ಯ ಮುಗಿಯುವಷ್ಟರಲ್ಲಿಯೇ ರಾಜ್ಯ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ರಸಾಯನತಜ್ಞೆಯಾಗಿ ನೇಮಕಗೊಂಡೆ. ಹಿಂದೆ ಮಹಿಳಾ ತಾಂತ್ರಿಕ ಅಧಿಕಾರಿಗಳೇ ಇಲ್ಲದಿದ್ದ ಇಲಾಖೆಯಲ್ಲಿ ಪ್ರಸ್ತುತ ಪುರುಷರಷ್ಟೇ ಸಮಾನ ಸಂಖ್ಯೆಯಲ್ಲಿ ತಾಂತ್ರಿಕ ಅಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ಕಛೇರಿಗಳ ಮುಖ್ಯಸ್ಥರುಗಳಾಗಿ ಮಹಿಳೆಯರೂ ಕೂಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರ ಹಿಂದೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ.
ಕಚೇರಿ, ಮನೆ ಕೆಲಸ ಮತ್ತು ಸಂಸಾರ ನಿರ್ವಹಣೆ ಇವೆಲ್ಲವನ್ನು ಒಟ್ಟಿಗೆ ನಿಭಾಯಿಸಲು ಕೂಡ ವಿಜ್ಞಾನ-ತಂತ್ರಜ್ಞಾನದ ಸವಲತ್ತುಗಳು ನಮಗೆ ನೆರವಾಗುತ್ತಿವೆ. ನನ್ನ ಬದುಕಿನಲ್ಲಿ ಇಷ್ಟೆಲ್ಲ ಮಹತ್ವದ ಪಾತ್ರ ವಹಿಸಿರುವ ವಿಜ್ಞಾನದ ವಿಷಯಗಳನ್ನು ಬೇರೆಯವರಿಗೂ ತಿಳಿಸುವ ಉದ್ದೇಶದಿಂದ ನಾನು ವಿಜ್ಞಾನ ಸಂವಹನದ ಕೆಲಸದಲ್ಲೂ ಆಸಕ್ತಿಯಿಂದ ತೊಡಗಿಕೊಂಡಿದ್ದೇನೆ.
- ಡಾ. ದೀಪ ಎಂ. ಬಿ. ರಸಾಯನತಜ್ಞೆ
ಸರ್ವವ್ಯಾಪಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಸವಲತ್ತುಗಳನ್ನು ವಿವಿಧ ಕ್ಷೇತ್ರಗಳ ಮಹಿಳೆಯರು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಈ ನಿಟ್ಟಿನಲ್ಲಿ ವಿಚಾರವಿನಿಮಯ ಸಾಧ್ಯವಾಗಿಸುವುದು ಮಹಿಳಾದಿನದ ಅಂಗವಾಗಿ ಪ್ರಕಟವಾಗುತ್ತಿರುವ ಈ ಸರಣಿಯ ಉದ್ದೇಶ. ಇದೇ ವಿಷಯದ ಬಗ್ಗೆ ನಿಮ್ಮ ಅನುಭವವನ್ನೂ ಹಂಚಿಕೊಳ್ಳುವ ಆಸಕ್ತಿಯಿದ್ದರೆ ದಯಮಾಡಿ ನಮ್ಮ ಫೇಸ್‌ಬುಕ್ ಪುಟಕ್ಕೆ ಬನ್ನಿ!