ವಿಜ್ಞಾನದ ವಿಷಯಗಳನ್ನು ಜನಸಾಮಾನ್ಯರಿಗೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪಿಸಲು ಎಷ್ಟು ಮಾರ್ಗಗಳಿದ್ದರೂ ಸಾಲದು ಎನ್ನುವ ಪರಿಸ್ಥಿತಿಯಲ್ಲಿ ಕಲಬುರಗಿಯ ಡಾ. ಪಿ. ಎಸ್. ಶಂಕರ ಪ್ರತಿಷ್ಠಾನ ಒಂದು ವಿಶಿಷ್ಟ ಪ್ರಯೋಗ ಕೈಗೊಂಡಿದೆ. ವರ್ಷದುದ್ದಕ್ಕೂ ನಾವೆಲ್ಲ ಬಳಸುವ ದಿನದರ್ಶಿಕೆಯನ್ನು ವಿಜ್ಞಾನ ಸಂವಹನಕ್ಕೆ ಬಳಸಿಕೊಳ್ಳುವ ಮೂಲಕ ಪ್ರತಿಷ್ಠಾನವು ಹೊಸದೊಂದು ಪರಿಕಲ್ಪನೆಗೆ ನಾಂದಿಹಾಡಿದೆ.
ಪ್ರತಿಷ್ಠಾನವು ಪ್ರಕಟಿಸಿರುವ ವಿಜ್ಞಾನ ದಿನದರ್ಶಿಕೆಯ ಪ್ರತಿ ಪುಟದಲ್ಲೂ ವಿಜ್ಞಾನದ ಕ್ಷೇತ್ರದಲ್ಲಿ ಆಯಾ ತಿಂಗಳು ಹಾಗೂ ದಿನದ ಮಹತ್ವವನ್ನು ನಾವು ತಿಳಿದುಕೊಳ್ಳಬಹುದು ಎನ್ನುವುದು ವಿಶೇಷ. ಆಯಾ ತಿಂಗಳಿನಲ್ಲಿ ಜನಿಸಿದ ವಿಜ್ಞಾನಿಗಳ ಭಾವಚಿತ್ರ ಹಾಗೂ ಸಂಕ್ಷಿಪ್ತ ಪರಿಚಯ ಕೂಡ ಇಲ್ಲಿದೆ. ವಿಶ್ವವಿಖ್ಯಾತ ವಿಜ್ಞಾನಿಗಳ ನುಡಿಮುತ್ತುಗಳನ್ನೂ ನಾವು ಈ ದಿನದರ್ಶಿಕೆಯ ಪುಟಗಳಲ್ಲಿ ನೋಡಬಹುದು.
೨೦೨೧ರಲ್ಲಿ ಮೊದಲ ಬಾರಿಗೆ ಪ್ರಕಟಿಸಲಾದ ವಿಜ್ಞಾನ ದಿನದರ್ಶಿಕೆಯ ಪ್ರತಿಗಳನ್ನು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಎಲ್ಲ ಶಾಲೆಗಳಿಗೂ ವಿತರಿಸಲಾಗಿತ್ತು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ಅದೇ ರೀತಿ ಈ ವರ್ಷದ ದಿನದರ್ಶಿಕೆಯನ್ನೂ ಜನವರಿ ೧ರಂದು ಬಿಡುಗಡೆಗೊಳಿಸಲಾಗಿದ್ದು ಈ ಬಾರಿಯೂ ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ಅದರ ಪ್ರತಿಗಳನ್ನು ತಲುಪಿಸಲಾಗುತ್ತಿದೆ.
ವಿಜ್ಞಾನ ದಿನದರ್ಶಿಕೆಯಂತೆಯೇ ಪ್ರತಿಷ್ಠಾನವು ಕಳೆದ ವರ್ಷದಿಂದ ವೈದ್ಯವಿಜ್ಞಾನ ದಿನದರ್ಶಿಕೆಯನ್ನೂ ಪ್ರಕಟಿಸುತ್ತಿದ್ದು, ವೈದ್ಯವಿಜ್ಞಾನದ ಇತಿಹಾಸವನ್ನು ಅರಿಯುವ ಆಸಕ್ತಿಯುಳ್ಳವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ.