ಬಿಗ್ ಬ್ಯಾಂಗ್ ಥಿಯರಿ: ವಿಜ್ಞಾನ-ಹಾಸ್ಯ ಹದವಾಗಿ ಬೆರೆತ ರಸಪಾಕ!
ವಿಜ್ಞಾನ ಹಾಗೂ ಹಾಸ್ಯವನ್ನು ಹದವಾಗಿ ಬೆರೆಸಿ ರೂಪಿಸಿರುವುದು ಈ ಸರಣಿಯ ವೈಶಿಷ್ಟ್ಯthe-big-bang-theory.com

ಬಿಗ್ ಬ್ಯಾಂಗ್ ಥಿಯರಿ: ವಿಜ್ಞಾನ-ಹಾಸ್ಯ ಹದವಾಗಿ ಬೆರೆತ ರಸಪಾಕ!

ವಿಜ್ಞಾನದ, ಅದೂ ನಾವೆಲ್ಲ ಕ್ಲಿಷ್ಟವೆಂದು ಭಾವಿಸುವ ಭೌತವಿಜ್ಞಾನದ ಸುತ್ತ ಒಂದು ಹಾಸ್ಯ ಧಾರಾವಾಹಿಯನ್ನು ಹೆಣೆಯುವುದು ಸಾಧ್ಯವೇ? ಈ ಪ್ರಶ್ನೆಗೆ ಅದ್ಭುತ ಉತ್ತರ ನೀಡಿದ 'ದ ಬಿಗ್ ಬ್ಯಾಂಗ್ ಥಿಯರಿ' ಬಗ್ಗೆ ಪ್ರಶಾಂತ್ ಭಟ್ ಹೇಳುವುದು ಹೀಗೆ...

ನಾಲ್ವರು ವಿಜ್ಞಾನಿ ಗೆಳೆಯರು. ಲೆನಾರ್ಡ್, ಶೆಲ್ಡನ್, ಹಾವರ್ಡ್, ರಾಜ್, ಅವರಿಗೆ ಸಮಾಜದ ಇತರ ಜನರೊಂದಿಗೆ ಹೇಗೆ ಬೆರೆಯಬೇಕು ಎಂಬುದರ ಅರಿವಿಲ್ಲ. ತಮ್ಮ ತಮ್ಮ ಸಂಶೋಧನಾ ಕ್ಷೇತ್ರಗಳಲ್ಲಿ ಅವರು ಪ್ರಚಂಡರು. ಅವರಲ್ಲೊಬ್ಬ ಶೆಲ್ಡನ್. ಆ ಗೆಳೆಯರ ಗುಂಪಿನಲ್ಲಿ ಅತ್ಯಂತ ಬುದ್ಧಿವಂತ. ಅವನಿಗೆ ಎಲ್ಲಾ ವಿಷಯಗಳ ಪರಿಜ್ಞಾನವಿದೆ. ಆದರೆ ವ್ಯಂಗ್ಯ, ಕುಹಕಗಳನ್ನು ಗುರುತಿಸಲು ಗೊತ್ತಾಗುವುದಿಲ್ಲ. ತಾನು ಮಾತಾಡಿದ್ದು ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬುದರ ಅರಿವೂ ಇಲ್ಲ. ಉಳಿದ ಮೂವರು ಗೆಳೆಯರಿಗೆ ತಮಗೆ ಇಷ್ಟು ಬುದ್ಧಿವಂತಿಕೆ ಇದ್ದರೂ ತಮಗೊಬ್ಬಳು ಹುಡುಗಿ ಸಿಗುವುದಿಲ್ಲವಲ್ಲ ಎಂಬ ಬೇಸರ. ಅದೇ ಸಮಯಕ್ಕೆ ಶೆಲ್ಡನ್ ಮತ್ತು ಲೆನಾರ್ಡ್ ಮನೆ ಎದುರಿನ ಫ್ಲಾಟ್‌ಗೆ ಬಾಡಿಗೆದಾರಳಾಗಿ ಚಂದದ ವೆಯಿಟ್ರೆಸ್ ಪೆನ್ನಿ ಬರುತ್ತಾಳೆ. ಈ ನಾಲ್ವರು ಗೆಳೆಯರು ಮತ್ತು‌ ಆ ಹುಡುಗಿಯ ನಡುವಿನ ಹಾಸ್ಯ ಪ್ರಸಂಗಗಳೇ 'ದ ಬಿಗ್ ಬ್ಯಾಂಗ್ ಥಿಯರಿ' ಎಂಬ ಇಂಗ್ಲಿಷ್ ಧಾರಾವಾಹಿಯ ಕಥಾವಸ್ತು.

ವಿಜ್ಞಾನ ಹಾಗೂ ಹಾಸ್ಯವನ್ನು ಹದವಾಗಿ ಬೆರೆಸಿ ರೂಪಿಸಿರುವುದು ಸಿಟ್‌ಕಾಮ್ ಎಂಬ ವಿಧಕ್ಕೆ ಸೇರಿದ ಈ ಸರಣಿಯ ವೈಶಿಷ್ಟ್ಯ. ಇಲ್ಲಿನ ಪಾತ್ರಗಳ ಪೈಕಿ ಶೆಲ್ಡನ್ ಸ್ಟ್ರಿಂಗ್ ಥಿಯರಿಯ ಕುರಿತು ಅಧ್ಯಯನ ನಡೆಸುವ ಥಿಯರೆಟಿಕಲ್ ಫಿಸಿಸಿಸ್ಟ್. ಆತ ಕೆಲಸಮಾಡುತ್ತಿರುವ ಒಂದು ಸಮಸ್ಯೆ ಸರಣಿಯುದ್ದಕ್ಕೂ ಅವನ ವೈಟ್ ಬೋರ್ಡ್ ಮೇಲೆ ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಎಪಿಸೋಡಿನಲ್ಲೂ ಅದರ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ. ಇಂಜಿನಿಯರುಗಳು ವಿಜ್ಞಾನಿಗಳಿಗಿಂತ ಕೀಳು ಎನ್ನುವ ಆತನ ಅನಿಸಿಕೆ, ಪ್ರಾಣಿಪಕ್ಷಿಗಳನ್ನು ಕುರಿತ ವಿಪರೀತ ಭಯ, ಇತರ ವಿಜ್ಞಾನಿಗಳನ್ನು ಕುರಿತ ಹೊಟ್ಟೆಕಿಚ್ಚು, ಪ್ರತಿಯೊಂದೂ ತಾನು ಹೇಳಿದಂತೆಯೇ ಆಗಬೇಕೆನ್ನುವ ಬಾಲಿಶ ಹಟ ಎಲ್ಲವೂ ವೀಕ್ಷಕನಲ್ಲಿ ನಗೆಯುಕ್ಕಿಸುತ್ತವೆ, ವಿಜ್ಞಾನಿಗಳೂ ಮನುಷ್ಯರೇ ಎನ್ನುವುದನ್ನು ಮತ್ತೆಮತ್ತೆ ತೋರಿಸುತ್ತವೆ.

ಇದಲ್ಲದೆ ಈ ಮಿತ್ರರಲ್ಲಿ ಅಂತರಿಕ್ಷಯಾನ‌ ಕೈಗೊಳ್ಳುವ ಹಾವರ್ಡ್, ಅಲ್ಲಿ ಯಾನಿಗಳು ನೌಕೆಯಲ್ಲಿ ಮಲವಿಸರ್ಜನೆ ಮಾಡುವಾಗ ಅದು ಸೊನ್ನೆ ಗುರುತ್ವಾಕರ್ಷಣ ಶಕ್ತಿಯಲ್ಲಿ ಮೇಲೆ ಬರದಂತೆ ತಡೆವ ತಂತ್ರವನ್ನು ಶೋಧಿಸಿರುತ್ತಾನೆ. ಮೂಲತಃ ಭಾರತೀಯನಾದ ರಾಜ್ ಹೊಸ ಗ್ರಹವೊಂದನ್ನು ಶೋಧಿಸಿರುತ್ತಾನೆ. ವೈಜ್ಞಾನಿಕ ಪ್ರಯೋಗಗಳನ್ನು ತಮ್ಮ ವೈಯಕ್ತಿಕ ಆಸೆಗಳಾದ ಹುಡುಗಿಯರ ಹುಡುಕುವುದು ಇತ್ಯಾದಿಗಳಿಗೆ ಬಳಸಿಕೊಂಡು ಗೆಳೆಯರು ಪೆಚ್ಚಾಗುವ ಪ್ರಸಂಗಗಳು ಸರಣಿಯುದ್ದಕ್ಕೂ ಬರುತ್ತದೆ. ಹಾಗಿದ್ದರೂ ರಾಜ್ ಹೊರತುಪಡಿಸಿ ಉಳಿದವರಿಗೆ ಗರ್ಲ್‌ಫ್ರೆಂಡುಗಳು ಸಿಗುತ್ತಾರೆ!

ಖ್ಯಾತ ವಿಜ್ಞಾನಿಗಳಾದ ಸ್ಟೀಫನ್ ಹಾಕಿಂಗ್, ನೀಲ್ ಡಿಗ್ರಾಸ್ ಟೈಸನ್ ಮೊದಲಾದವರು ಈ ಸರಣಿಯಲ್ಲಿ ಪಾತ್ರಗಳಾಗಿಯೂ ಕಾಣಿಸಿಕೊಂಡಿದ್ದು ವಿಶೇಷ. ಈ ಸರಣಿಯಲ್ಲಿ ಶೆಲ್ಡನ್ ಪದೇಪದೇ ಬಳಸುವ 'ಬಝಿಂಗ' ಎನ್ನುವ ಶಬ್ದದಿಂದ ಪ್ರಭಾವಿತರಾಗಿ 2012ರಲ್ಲಿ ಬ್ರೆಜಿಲ್‌ನಲ್ಲಿ‌ ಕಂಡುಹುಡುಕಿದ ಜೇನ್ನೊಣದ ಪ್ರಬೇಧಕ್ಕೆ ಆ ಹೆಸರನ್ನೇ ಇಟ್ಟಿದ್ದಾರಂತೆ!

ಇತರ ಯಶಸ್ವಿ ಸೈನ್ಸ್ ಫಿಕ್ಷನ್ ಸರಣಿಗಳಾದ ಸ್ಟಾರ್ ಟ್ರೆಕ್, ಸ್ಟಾರ್ ವಾರ್ಸ್ ಉಲ್ಲೇಖ ಪದೇ ಪದೇ ಬಳಸುವುದು, ಕಾಮಿಕ್ ಪುಸ್ತಕಗಳನ್ನು ಅತಿಯಾಗಿ ಪ್ರೀತಿಸುವುದು, ಸಾಮಾನ್ಯರಿಗೆ ಅರ್ಥವಾಗದ ವಿಜ್ಞಾನದ ಭಾಷೆಯಲ್ಲಿ ಸಂವಹನ‌ ನಡೆಸಿ ಪಿಗ್ಗಿ‌ ಬೀಳುವುದು, ದೊಡ್ಡ ದೊಡ್ಡ ಪ್ರಯೋಗಗಳ ಸಲಕರಣೆಗಳನ್ನು ಕೈಯಲ್ಲಿ ಮಾಡುವಷ್ಟು ಸಣ್ಣ ಕೆಲಸಗಳಿಗೆ ಬಳಸಿ ನಗೆಪಾಟಲಿಗೀಡಾಗುವುದು, ಸಿದ್ಧಾಂತಗಳನ್ನು ಪ್ರಯೋಗಾತ್ಮಕವಾಗಿ ಪರಿಶೀಲಿಸಲು ಹೋಗಿ ಎಡವುದು ಹೀಗೆ ಸರಣಿಯುದ್ದಕ್ಕೂ ನಕ್ಕು ನಲಿಸುವ ಪ್ರಸಂಗಗಳಿವೆ. ಇವೆಲ್ಲಕ್ಕೂ ಕಲಶವಿಟ್ಟಂತೆ ಇವರ ಹಾಗೆ ವಿಜ್ಞಾನ ಗೊತ್ತಿಲ್ಲದಿದ್ದರೂ ಸಾಮಾಜಿಕವಾಗಿ ಇವರು ಕಷ್ಟಕ್ಕೆ ಸಿಲುಕಿಕೊಂಡಾಗ ತನ್ನ ಸಾಮಾನ್ಯ ಜ್ಞಾನದಿಂದ ಸಮಸ್ಯೆ ಪರಿಹರಿಸುವ ಪೆನ್ನಿ ಇಷ್ಟವಾಗುತ್ತಾಳೆ.

2007ರಲ್ಲಿ ಶುರುವಾಗಿ ಬರೋಬ್ಬರಿ ಹನ್ನೆರಡು ವರ್ಷ ಬಂದ‌ ಈ ಟಿವಿ ಸರಣಿ 2019ರಲ್ಲಿ ಶೆಲ್ಡನ್-ಏಮಿ ಜೋಡಿ ತಮ್ಮ ಸಂಶೋಧನೆಗೆ ನೊಬೆಲ್ ಗಳಿಸುವುದರೊಂದಿಗೆ ಮುಗಿಯುತ್ತದೆ. ವಿಜ್ಞಾನ ಮತ್ತು ತಮಾಷೆ ಹದವಾಗಿ ಬೆರೆತ ಈ ಸರಣಿ ಇದೀಗ ಹಲವು ಆನ್‌ಲೈನ್ ವೇದಿಕೆಗಳ ಮೂಲಕ ಲಭ್ಯವಿದೆ. ಇದರ ಜನಪ್ರಿಯತೆಯಿಂದ ಪ್ರೇರಣೆ ಪಡೆದು ಶೆಲ್ಡನ್ನಿನ ಬಾಲ್ಯದ ಕತೆ ಹೇಳುವ 'ಯಂಗ್ ಶೆಲ್ಡನ್' ಎಂಬ ಸರಣಿಯೂ ಪ್ರಾರಂಭವಾಗಿದೆ. ಬಿಗ್ ಬ್ಯಾಂಗ್ ಥಿಯರಿಯದೇ ಮುಂದುವರೆದ ಭಾಗ ಬರಬಹುದು ಎಂಬ ಆಶಾಭಾವ ಅದರ ಅಭಿಮಾನಿಗಳಲ್ಲಿ ಇನ್ನೂ ಇದೆ!

ಈವರೆಗೂ ನೋಡಿಲ್ಲದಿದ್ದರೆ ಖಂಡಿತಾ ನೋಡಿ!

Related Stories

No stories found.
ಇಜ್ಞಾನ Ejnana
www.ejnana.com