ವಿಜ್ಞಾನ ಸಾಹಿತಿಗಳಾಗಿ, ಸಂವಹನಕಾರರಾಗಿ ಮತ್ತು ಸಹೃದಯರಾಗಿ ಹಾಲ್ದೋಡೇರಿ ಸುಧೀಂದ್ರ ಅನೇಕರಿಗೆ ಪರಿಚಿತರಾಗಿದ್ದರು
ವಿಜ್ಞಾನ ಸಾಹಿತಿಗಳಾಗಿ, ಸಂವಹನಕಾರರಾಗಿ ಮತ್ತು ಸಹೃದಯರಾಗಿ ಹಾಲ್ದೋಡೇರಿ ಸುಧೀಂದ್ರ ಅನೇಕರಿಗೆ ಪರಿಚಿತರಾಗಿದ್ದರುtwitter.com/haldodderi

ಸುಧೀಂದ್ರ ಮತ್ತು ನಾನು ಜೊತೆಯಾಗಿ ಪುಸ್ತಕ ಬರೆಯಬೇಕೆಂದು ನಿರ್ಧರಿಸಿದ್ದೆವು

ಹಾಲ್ದೊಡ್ಡೇರಿ ಸುಧೀಂದ್ರ ಅವರೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದ ಉದಯ ಶಂಕರ ಪುರಾಣಿಕರ ಬರಹ

ವಿಜ್ಞಾನ ಸಾಹಿತಿಗಳಾಗಿ, ಸಂವಹನಕಾರರಾಗಿ ಮತ್ತು ಸಹೃದಯರಾಗಿ ಹಾಲ್ದೋಡೇರಿ ಸುಧೀಂದ್ರ ಅನೇಕರಿಗೆ ಪರಿಚಿತರಾಗಿದ್ದರು. ಆದರೆ ಅವರು ಇಂಜಿನಿಯರಿಂಗ್‌ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಕುರಿತು ಹೆಚ್ಚು ಜನರಿಗೆ ಗೊತ್ತಿರಲಾರದು.

ಹಾಲ್ದೋಡೇರಿ ಸುಧೀಂದ್ರರವರು, ಬೆಂಗಳೂರಿನ ಯುವಿಸಿಇಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದ ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸುಮಾರು ೨೦ ತಿಂಗಳು ಕೆಲಸ ಮಾಡಿದರು. ಇಲ್ಲಿರುವಾಗ, ಭಾರತದ ರಕ್ಷಣಾ ಪಡೆಗಳಿಗಾಗಿ ಡಿಆರ್‌ಡಿಓ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಪೃಥ್ವಿ ಕ್ಷಿಪಣಿಗೆ ಸಂಬಂಧಿಸಿದ ಯೋಜನೆಯೊಂದರಲ್ಲಿ ಅವರು ಕೆಲಸ ಮಾಡಿದರು. ಹೀಗೆ ಕೆಲಸ ಮಾಡುವಾಗ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲ ಮತ್ತು ಅನುಭವವನ್ನು ಗಳಿಸಿಕೊಳ್ಳುವ ಅವಕಾಶವೂ ಅವರಿಗೆ ದೊರಕಿತು.

೧೯೮೬ರಿಂದ ೨೨ ವರ್ಷಗಳ ಕಾಲ ಡಿಆರ್‌ಡಿಓ ಹಾಗೂ ಹೆಚ್‌ಎಎಲ್ ಸಂಸ್ಥೆಗಳಲ್ಲಿ ಸೇವೆಸಲ್ಲಿಸಿದ ಸುಧೀಂದ್ರ, ಡಿಆರ್‌ಡಿಓದ ಜಿಟಿಆರ್‌ಇ ಹಾಗೂ ಹೆಚ್‌ಎಎಲ್‌‌ನ ಎಲ್‌ಸಿಎ ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ವಿಶೇಷವಾಗಿ ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ವಿಮಾನಗಳಲ್ಲಿ ಬಳಸುವ ಇಂಜಿನ್‌ಗಳ ವಿನ್ಯಾಸ, ಮಾದರಿಗಳ ಅಭಿವೃದ್ಧಿ, ವಿಮಾನದಲ್ಲಿ ಇಂಜಿನ್‌ ಅಳವಡಿಕೆ, ಗುಣಮಟ್ಟ ಪರೀಕ್ಷೆಗಳು ಮತ್ತು ಸರ್ಟಿಫಿಕೇಶನ್‌ ಕ್ಷೇತ್ರದಲ್ಲಿ ಅವರು ಸೇವೆಸಲ್ಲಿಸಿದ್ದರು. ವಿದೇಶದಿಂದ ಅಮದು ಮಾಡಿಕೊಳ್ಳುವ ಕೆಲವು ಬಿಡಿಭಾಗಗಳನ್ನು ಸ್ವದೇಶಿಯಾಗಿ ತಯಾರಿಸುವ ನಿಟ್ಟಿನಲ್ಲೂ ಅವರ ಕೊಡುಗೆಗಳಿದ್ದವು.

ಡಿಆರ್‌ಡಿಓ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾಗಲೇ ಸುಧೀಂದ್ರರು ಮದ್ರಾಸ್‌ ಐಐಟಿಯಿಂದ ಥರ್ಮಲ್‌ ಟರ್ಬೋ ಮಷೀನ್ಸ್ ವಿಷಯದಲ್ಲಿ ಎಂಟೆಕ್‌ ಪದವಿಯನ್ನೂ ಪಡೆದರು. ೨೦೦೮ರಿಂದ ೨ ವರ್ಷಗಳ ಕಾಲ ಹೆಚ್‌ಎಎಲ್‌ ನಲ್ಲಿ ವಿಮಾನ ಸಂಶೋಧನೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಪವರ್‌ಪ್ಲಾಂಟ್‌ ಮತ್ತು ಇಂಧನ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿ ಐಜೆಟಿ ತರಬೇತಿ ವಿಮಾನ ಮತ್ತು ಎಲ್‌ಸಿಎ ಯುದ್ಧ ವಿಮಾನಕ್ಕೆ ಅಗತ್ಯವಾದ ಇಂಧನ ಪೂರೈಕೆ ವ್ಯವಸ್ಥೆಯ ವಿನ್ಯಾಸ, ಅಭಿವೃದ್ಧಿ, ಪರೀಕ್ಷೆಗಳು ಮತ್ತು ಸರ್ಟಿಫಿಕೇಷನ್‌ ಕೆಲಸದಲ್ಲಿ ತೊಡಗಿಕೊಂಡಿದ್ದರು. ಅತಿ ಎತ್ತರದ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯದ ನಡುವೆ ಕೂಡಾ ಭಾರತೀಯ ಹೆಲಿಕಾಪ್ಟರ್‌ಗಳು ಹಾರಾಡಲು ಸಾಧ್ಯವಾಗುವಂತೆ ಅಗತ್ಯವಾದ ಸಲಹೆಗಳನ್ನು ನೀಡಿದ ತಜ್ಞರ ಸಮತಿಯ ಸದಸ್ಯರಾಗಿಯೂ ಅವರು ಕೆಲಸ ಮಾಡಿದ್ದರು.

ಇಷ್ಟೆಲ್ಲ ಸಾಧನೆ ಮಾಡಿದ ಹಾಲ್ದೋಡ್ಡೇರಿ ಸುಧೀಂದ್ರರವರು ಸ್ವಯಂ ನಿವೃತ್ತಿ ಪಡೆದುಕೊಂಡ ನಂತರ ತಮ್ಮ ಅನುಭವ ಮತ್ತು ಕೌಶಲವನ್ನು ಇಂಜಿನಿಯರಿಂಗ್‌ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ವಿನಿಯೋಗಿಸಿದರು. ನಂತರ ನಾಲ್ಕು ವರ್ಷಗಳಿಂದ ವೈಮಾಂತರಿಕ್ಷ ಕ್ಷೇತ್ರದ ವಿಷಯ ತಜ್ಞರಾಗಿ, ಎರಡು ಪ್ರಮುಖ ಖಾಸಗಿ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಅತ್ಯುತ್ತಮ ವಿಜ್ಞಾನ ಸಂವಹನಕಾರರಾಗಿದ್ದ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ವಿಜ್ಞಾನ ಸಂವಹನಕಾರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಹಲವು ಗೌರವಗಳು ದೊರೆತಿದ್ದವು.

ಹಾಲ್ದೋಡೇರಿ ಸುಧೀಂದ್ರರು, ಅವರ ತಂದೆ ನಾಗೇಶ ರಾವ್‌ ಹಾಗೂ ನಮ್ಮ ಪುರಾಣಿಕ ಕುಟುಂಬದ ನಡುವಿನ ಸ್ನೇಹ ೪೦ ವರ್ಷಕ್ಕೂ ಹೆಚ್ಚಿನದು. ಸುಧೀಂದ್ರರ ಅಗಲಿಕೆಯಿಂದಾಗಿ ಕುಟುಂಬದ ಸದಸ್ಯರನ್ನೇ ಕಳೆದುಕೊಂಡ ನೋವು ನನ್ನನ್ನು ಕಾಡುತ್ತಿದೆ.

ವೈಮಾಂತರಿಕ್ಷ ಕೇತ್ರದಲ್ಲಿ ಇಂಜಿನಿಯರಿಂಗ್‌ ಮತ್ತು ಮಾಹಿತಿ ತಂತ್ರಜ್ಞಾನ ಕುರಿತು ಸುಧೀಂದ್ರ ಮತ್ತು ನಾನು ಜೊತೆಯಾಗಿ ಕನ್ನಡದಲ್ಲಿ ಪುಸ್ತಕ ಬರೆಯಬೇಕು ಎಂದು ನಿರ್ಧರಿಸಿದ್ದೆವು. ನನಗೆ ತಿಳಿದಿರುವಂತೆ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹೆಚ್ಚು ಪುಸ್ತಕಗಳಿಲ್ಲ. ಹಾಗೆ ನೋಡಿದರೆ ವೈಮಾಂತರಿಕ್ಷ ಕುರಿತು ತಮ್ಮ ಅಪಾರವಾದ ಅನುಭವ ಮತ್ತು ಕೌಶಲಗಳನ್ನು ಕುರಿತು ಸುಧೀಂದ್ರರು ಸರಣಿ ಲೇಖನ ಬರೆದಿದ್ದರೆ, ಕನಿಷ್ಠವೆಂದರೂ ೧೦೦೦ ಲೇಖನಗಳನ್ನು ಬರೆಯಬಹುದಾಗಿತ್ತು. ಅದು ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆಯಾಗುತ್ತಿತ್ತು.

ಈಗ ಸುಧೀಂದ್ರ ನಮ್ಮ ಜೊತೆಯಲ್ಲಿ ಭೌತಿಕವಾಗಿ ಇಲ್ಲದಿದ್ದರೂ ಅವರ ಸಾಧನೆ ಬರುವ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿ ಉಳಿಯಲಿದೆ.

Related Stories

No stories found.
logo
ಇಜ್ಞಾನ Ejnana
www.ejnana.com