ಸಾಮಾನ್ಯವಾಗಿ ಪ್ರೋಬಯೊಟಿಕ್ ಎಂದರೆ ಹಾಲಿನ ಉತ್ಪನ್ನಗಳೇ ಆಗಿದ್ದು, ಅದರೊಳಗೆ ಜೀವಂತ ಉಪಕಾರಿ ಬ್ಯಾಕ್ಟೀರಿಯಾ ಇರುತ್ತವೆ.
ಸಾಮಾನ್ಯವಾಗಿ ಪ್ರೋಬಯೊಟಿಕ್ ಎಂದರೆ ಹಾಲಿನ ಉತ್ಪನ್ನಗಳೇ ಆಗಿದ್ದು, ಅದರೊಳಗೆ ಜೀವಂತ ಉಪಕಾರಿ ಬ್ಯಾಕ್ಟೀರಿಯಾ ಇರುತ್ತವೆ. Image by Antonio Jose Cespedes from Pixabay

ಪ್ರೀ ಮತ್ತು ಪ್ರೋಬಯೋಟಿಕ್ - ಹಳೆಬೇರು ಹೊಸಚಿಗುರು!

ನಾವು ತಿನ್ನೋ ಆಹಾರ ನಮ್ಮ ಕರುಳಿನಲ್ಲಿರೋ ಬ್ಯಾಕ್ಟೀರಿಯಾಗಳಿಗೂ ಸೂಕ್ತವಾಗಿದೆಯಾ ಇಲ್ಲವಾ ಎಂದು ಗಮನಿಸೋದು ನಮ್ಮದೇ ಜವಾಬ್ದಾರಿ!

ತಿಂಡಿ ಏನಿವತ್ತು? ದೋಸೇನಾ ಇಡ್ಲೀನಾ? ಬಿಸ್ಲಂತೂ ಜೋರಾಗೇ ಇತ್ತು ಇವತ್ತು. ಮಜ್ಜಿಗೆ ಕುಡಿದ್ರಾ? ಈಗಂತೂ ಕಿತ್ತಳೆಹಣ್ಣಿನ ಕಾಲ. ರುಚಿಯಾದ ಕಿತ್ತಳೆಯಾದ್ರೂ ಸವಿದ್ರಾ? ಇವೆಲ್ಲಾ ಕೇವಲ ನಮ್ ಜಿಹ್ವಾಚಾಪಲ್ಯ ತಣಿಸೋ ಖಾದ್ಯಗಳು/ಪಾನೀಯಗಳು ಅಂದುಕೊಂಡಿದ್ರೆ, ಇಲ್ಲಿ ಕೇಳಿ; ಇವು ಕೇವಲ ನಮ್ಮ ನಾಲಗೆಗೆ, ನಮ್ಮ ದೇಹಕ್ಕೆ ಆಹಾರವಲ್ಲ, ನಮ್ಮೊಳಗೆ ಕುಳಿತಿರುವ ನಮ್ಮ ಗೆಳೆಯರಿಗೂ ಆಹಾರವೇ!

ನಮ್ಮೊಳಗೆ ಕೂತಿರೋ ಗೆಳೆಯರಂದ್ರೆ ನಮ್ಮ ಕರುಳಿನಲ್ಲಿರೋ ಬ್ಯಾಕ್ಟೀರಿಯಾ ಕಣ್ರೀ. ನಾವು ತಿನ್ನೋ ಆಹಾರ ಅವುಗಳಿಗೂ ಸೂಕ್ತವಾಗಿದೆಯಾ ಇಲ್ಲವಾ ಎಂದು ಗಮನಿಸೋದು ನಮ್ಮ ಜವಾಬ್ದಾರಿ ಗೊತ್ತಾ? ಹೌದು! ಅದಕ್ಕಾಗಿಯೇ ಈಗ ಎಲ್ಲೆಡೆ ಪ್ರೀಬಯೋಟಿಕ್ ಮತ್ತು ಪ್ರೋಬಯೋಟಿಕ್ ಪಾನೀಯಗಳು, ಖಾದ್ಯಗಳು ಲಭ್ಯವಿವೆ. ಪ್ರೀ ಮತ್ತು ಪ್ರೋಬಯೋಟಿಕ್ ಅಂದ್ರೇನು ಅಂತ ಈಗ ಗಮನಿಸೋಣ ಬನ್ನಿ.

ಪ್ರೀಬಯೋಟಿಕ್ ಅಂದ್ರೆ, ನಮ್ಮ ಕರುಳಿನಲ್ಲಿರೋ ಬ್ಯಾಕ್ಟೀರಿಯಾದ ಆರೋಗ್ಯ ಕಾಪಾಡೋ ಪದಾರ್ಥಗಳು; ಆದ್ರೆ ಪ್ರೋಬಯೋಟಿಕ್ ಅಂದ್ರೆ ಜೀವಂತ ಆರೋಗ್ಯಕಾರಿ ಬ್ಯಾಕ್ಟೀರಿಯಾನೇ! ಪ್ರೋಬಯೋಟಿಕ್ ಡ್ರಿಂಕ್, ಯೋಗರ್ಟ್ ಅಂತೆಲ್ಲ ಇರುತ್ತವಲ್ಲ, ಅದರೊಳಗೆ ಜೀವಂತ ಉಪಯುಕ್ತ ಬ್ಯಾಕ್ಟೀರಿಯಾ ಇರುತ್ತವೆ; ಅವು ನಮ್ಮ ಕರುಳನ್ನು ಸೇರಿಕೊಂಡು ಅಲ್ಲಿ ತಮ್ಮ ವಸಾಹತು ಸೃಷ್ಟಿಸಿಕೊಂಡು ತಾವೂ ಬದುಕುತ್ತಾ, ನಮ್ಮ ಆರೋಗ್ಯವನ್ನೂ ಹೆಚ್ಚಿಸುತ್ತಾ ಸ್ವಾಮಿ ಕಾರ್ಯಕ್ಕೂ ಸೈ ಸ್ವಕಾರ್ಯಕ್ಕೂ ಸೈ ಎನ್ನುತ್ತವೆ! ಸಾಮಾನ್ಯವಾಗಿ ಪ್ರೋಬಯೊಟಿಕ್ ಎಂದರೆ ಹಾಲಿನ ಉತ್ಪನ್ನಗಳೇ ಆಗಿದ್ದು, ಅದರೊಳಗೆ ಲ್ಯಾಕ್ಟೋಬ್ಯಾಸಿಲ್ಲಸ್ ಬಲ್ಗೇರಿಕಸ್, ಬಿಫಿಡೋಬ್ಯಾಕ್ಟೀರಿಯಾ, ಸ್ಟ್ರೆಪ್ಟೋಕಾಕಸ್ ಥರ್ಮೋಫೈಲ್ಸ್‌ನಂತಹ ಜೀವಂತ ಉಪಕಾರಿ ಬ್ಯಾಕ್ಟೀರಿಯಾ ಇರುತ್ತವೆ.

ಈ ಉಪಕಾರಿ ಬ್ಯಾಕ್ಟೀರಿಯಾ ಇರೋದು ಕೇವಲ ಹಾಲಿನ ಉತ್ಪನ್ನಗಳಲ್ಲಿ ಮಾತ್ರವೇ? ನಾವು ವೀಗನ್‌ಗಳು ಅಥವಾ ಹಾಲಿನ ಅಲರ್ಜಿ ಇರುವವರು. ನಾವೇನು ಮಾಡೋಣ ಅಂತ ಮಂಡೆ ಬಿಸಿ ಮಾಡ್ಕೋಬೇಡಿ. ತೆಂಪೆಹ್, ಕಿಮ್ಚಿ, ಹಾಲು ಬೆರೆಸದ ಕೆಫಿರ್ ಅಷ್ಟೇ ಅಲ್ಲದೇ ಎಲ್ಲಾ ಬಗೆಯ ಉಪ್ಪಿನಕಾಯಿಗಳು, ಇಡ್ಲಿ, ದೋಸೆ ಮತ್ಯಾವುದೇ ಹುದುಗುವ ಪ್ರಕ್ರಿಯೆಯ ಫಲವಾಗಿ ತಯಾರಾದ ಆಹಾರ - ಇವೆಲ್ಲವೂ ಸಾಮಾನ್ಯವಾಗಿ ಪ್ರೋಬಯೋಟಿಕ್ ಆಹಾರಗಳೇ!

ಈ ಪ್ರೋಬಯೋಟಿಕ್ ಆಹಾರ ಅಥವಾ ಪೂರಕ ಆಹಾರವನ್ನು ಸೇವಿಸಿದಾಗ, ಉಪಕಾರಿ ಬ್ಯಾಕ್ಟೀರಿಯಾ ನಮ್ಮೊಳಗೇ ಸೇರಿ, ನಮ್ಮ ದೇಹದಲ್ಲಿ ಅದರಲ್ಲೂ ವಿಶೇಷವಾಗಿ ನಮ್ಮ ಜೀರ್ಣಾಂಗವ್ಯಸ್ಥೆಯ ಭಾಗವಾಗಿರುವ ಅಪಾಯಕಾರಿ ಬ್ಯಾಕ್ಟೀರಿಯಾದೊಂದಿಗೆ ಗುದ್ದಾಡಿ, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತವೆ; ನಂತರ ನಮಗೆ ಉಪಯುಕ್ತವಾದ ಕಿಣ್ವಗಳನ್ನೂ, ರಾಸಾಯನಿಕ ಸಂಯುಕ್ತ ಪದಾರ್ಥಗಳನ್ನೂ ಬಿಡುಗಡೆ ಮಾಡುತ್ತವೆ.

ಈ ಆರೋಗ್ಯಕಾರಿ ಬ್ಯಾಕ್ಟೀರಿಯಾದ ಸಂಖ್ಯೆ ಹೆಚ್ಚುವುದರಿಂದ ನಮ್ಮ ಜೀರ್ಣಪ್ರಕ್ರಿಯೆ ಸರಾಗವಾಗುತ್ತದೆ. ಆಹಾರದಲ್ಲಿನ ಪೋಷಕಾಂಶಗಳು ಸಂಪೂರ್ಣವಾಗಿ ಹೀರಲ್ಪಟ್ಟು, ನೈಸರ್ಗಿಕವಾಗಿ ಆರೋಗ್ಯವೃದ್ಧಿಯಾಗುತ್ತದೆ. ಕರುಳಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ೯೦% ತಗ್ಗಿಸಬಹುದು. ಮುಟ್ಟು, ಬಸುರು, ಬಾಣಂತನ ಎಂದು ಹಾರ್ಮೋನಿನ ಏರು ತಗ್ಗಿನ ನಡುವೆ ತೂಗುಯ್ಯಾಲೆಯಾಡೋ ಹೆಣ್ಣಿನ ಆರೋಗ್ಯಕ್ಕೆ ತುಸು ಹೆಚ್ಚೇ ಸಹಾಯಕ ಈ ಬ್ಯಾಕ್ಟೀರಿಯಾ. ಟೈಪ್ ೨ ಮಧುಮೇಹ, ಲಿವರ್ ಸಮಸ್ಯೆಗಳು, ಬೊಜ್ಜು - ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ಸರಿದೂಗಿಸಲು ಪ್ರೋಬಯೋಟಿಕ್ಸ್ ಸಹಕಾರಿ.

ಕೆಮ್ಮಿದರೆ, ಸೀನಿದರೆ ಆಂಟಿಬಯೋಟಿಕ್ಸ್ ತೆಗೆದುಕೊಂಡು, ಕರುಳಿನ ನೈಸರ್ಗಿಕ ಸಮತೋಲನವನ್ನು ಹಾಳುಗೆಡವಿರೋ ಮಂಕುದಿಣ್ಣೆಗಳಿಗೂ ಇದು ವರವೇ ಸರಿ; ಆಂಟಿಬಯೋಟಿಕ್ ಅಥವಾ ಪ್ರತಿಜೀವಕಗಳು ನಮ್ಮ ದೇಹದಲ್ಲಿ ಅಡಗಿದ್ದ ರೋಗಕಾರಕ ಸೂಕ್ಷ್ಮಾಣುವನ್ನು ಹೊರಹಾಕುವಾಗ, ನಮ್ಮಲಿದ್ದ ಆರೋಗ್ಯಕಾರಕ ಬ್ಯಾಕ್ಟೀರಿಯಾವನ್ನೂ ಹೊರಹಾಕುತ್ತವೆ; ಆಗ ನಮ್ಮ ಸಹಾಯಕ್ಕೆ ಬರೋದು ಇದೇ ಪ್ರೋಬಯೋಟಿಕ್ಸ್.

ಇನ್ನೂ ಹಲವಾರು ರೀತಿಯಲ್ಲಿ ನಮ್ಮ ಆರೋಗ್ಯ ಕಾಪಾಡೋ ಈ ಉತ್ತಮ ಸೂಕ್ಷ್ಮಾಣುಸ್ನೇಹಿತರಿಗೆ ತಾವು ಬದುಕಿ ಬೆಳೆಯಲು ಸಹಕಾರಿಯಾಗುವಂತೆ ನಾವು ಆಹಾರ ನೀಡಬೇಕಲ್ಲವೇ?

ಅದಕ್ಕೆ ನಮಗೆ ಸಹಾಯ ಮಾಡೋದು ಪ್ರೀಬಯೋಟಿಕ್ಸ್. ಪ್ರೀಬಯೋಟಿಕ್ಸ್ ಅಂದ್ರೆ ವಿಶೇಷವಾದ ನಾರಿನಂಶವಾಗಿದ್ದು, ನಾವು ತಿನ್ನುವ ಹಣ್ಣುಗಳು, ತರಕಾರಿ, ಸೊಪ್ಪು ಹಾಗೂ ಸಂಸ್ಕರಣೆಯಾಗದ ಧಾನ್ಯಾಧಾರಿತ ಆಹಾರದಲ್ಲಿ ಲಭ್ಯ. ಸಿಪ್ಪೆತೆಗೆಯದೆ ತಿನ್ನಬಹುದಾದ ಸೇಬು, ಸೀಬೆ, ಸಪೋಟದಂತಹ ಹಣ್ಣುಗಳನ್ನು, ನಾರು ತೆಗೆಯದೇ ಹುರುಳಿಕಾಯಿ, ಜವಳಿಕಾಯಿ, ಸಿಪ್ಪೆ ತೆಗೆಯದೇ ಕ್ಯಾರೆಟ್, ಆಲೂ, ಹೆಚ್ಚು ಸಿಪ್ಪೆ ತೆಗೆಯದೆ ಬೆಳ್ಳುಳ್ಳಿ ಈರುಳ್ಳಿಯಂತ ನೈಸರ್ಗಿಕ ವರದಾನಗಳನ್ನು ಬಳಸಿಕೊಂಡು ಆರೋಗ್ಯಕಾಪಾಡಿಕೊಳ್ಳಬೇಕು. ಅಜ್ಜಿತಾತಂದಿರು ಕೇವಲ ಹೊರಗಿನ ಸಿಪ್ಪೆ ತೆಗೆದು ಒಳಗಿನ ನಾರಿನ ಸಮೇತ ಕಿತ್ತಳೆ, ಮೂಸಂಬಿ ತಿನ್ರೋ ಅಂದ್ರೆ ಕೇಳ್ಬೇಕಲ್ಲ ನಾವು? ಅಗಸೆ, ನುಗ್ಗೆ, ಮನೆಯಲ್ಲಿ ಮಾಡಿದ ಪಾಲಿಶ್ ಇಲ್ಲದ ಅಕ್ಕಿ, ಗೋಧಿ, ರಾಗಿಯ ಆಹಾರಗಳನ್ನು ತಿನ್ನೋಕೆ ಅದೇನು ಧಾಡಿ ನಿಮಗೆ ಅಂದಾಗ ಮೂಗುಮುರಿಯೋ ಬದ್ಲು, ಹಳೆಯ ಬೇರಿಗೆ ಹೊಸ ಚಿಗುರು ಬಂದಂತೆ ಹಳೆಯ ಅನುಭವ ವೇದ್ಯ ಜ್ಞಾನಕ್ಕೆ ಹೊಸ ವಿಜ್ಞಾನದ ಕಳಸವಿಟ್ಟು ನಮ್ಮ ಹಾಗೂ ಭೂಮಿಯ ಆರೋಗ್ಯ ಕಾಪಾಡೋಣ. ಪ್ರೋಬಯೊಟಿಕ್ ಬ್ಯಾಕ್ಟೀರಿಯಾ ಎಂಬ ಬೀಜಕ್ಕೆ ಪ್ರೀಬಯೋಟಿಕ್ ನೀರು ಗೊಬ್ಬರ ಹಾಕಿದಂತೆ, ಹಳೇದೇಲ್ಲಾ ಗೊಡ್ಡು ನಂಬಿಕೆ ಎಂದು ಜರಿದು ಬಿಸಾಡುವ ಬದಲು, ನಮ್ಮೊಳಗೆ ಪರಂಪರಾಗತವಾಗಿ ಹರಿದು ಬಂದಿರೋ ಜ್ಞಾನಕ್ಕೆ ವಿಜ್ಞಾನದ ಪುಷ್ಟಿ ನೀಡೋ ಕೆಲಸ ಮಾಡೋಣ. ಅಲ್ವೇ?

Related Stories

No stories found.
logo
ಇಜ್ಞಾನ Ejnana
www.ejnana.com