ಪ್ರಥಮ್ ಬುಕ್ಸ್, ಇಂಗ್ಲಿಷ್ ಹಾಗೂ ಅನೇಕ ಭಾರತೀಯ ಭಾಷೆಗಳ ಮಕ್ಕಳ ಪುಸ್ತಕಗಳನ್ನು ಹಲವು ವರ್ಷಗಳಿಂದ ಪ್ರಕಟಿಸುತ್ತ ಬಂದಿದೆ.
ಪ್ರಥಮ್ ಬುಕ್ಸ್, ಇಂಗ್ಲಿಷ್ ಹಾಗೂ ಅನೇಕ ಭಾರತೀಯ ಭಾಷೆಗಳ ಮಕ್ಕಳ ಪುಸ್ತಕಗಳನ್ನು ಹಲವು ವರ್ಷಗಳಿಂದ ಪ್ರಕಟಿಸುತ್ತ ಬಂದಿದೆ. prathambooks.org

ಕತೆಗಳ ಮೂಲಕ ವಿಜ್ಞಾನ - ಪ್ರಥಮ್ ಬುಕ್ಸ್ ಶ್ಲಾಘನೀಯ ಪ್ರಯತ್ನ

ಬೆಂಗಳೂರಿನ ಪ್ರಥಮ್ ಬುಕ್ಸ್, ಮಕ್ಕಳಿಗೆ ಆಸಕ್ತಿಹುಟ್ಟಿಸುವ ವಿವಿಧ ವಿಷಯಗಳನ್ನು ಕತೆಯ ರೂಪಕ್ಕೆ ತಂದು ಬಣ್ಣಬಣ್ಣದ ಆಕರ್ಷಕ ಪುಸ್ತಕಗಳಾಗಿ ಪ್ರಕಟಿಸುತ್ತಿದೆ. ಅಷ್ಟೇ ಅಲ್ಲ, ಈ ಪುಸ್ತಕಗಳ ಡಿಜಿಟಲ್ ಆವೃತ್ತಿಯನ್ನು ಉಚಿತವಾಗಿಯೂ ಒದಗಿಸುತ್ತಿದೆ!

ಚಿಕ್ಕಮಕ್ಕಳ ವಿದ್ಯಾಭ್ಯಾಸ ಹಾಗೂ ವಿಕಾಸದಲ್ಲಿ ಕತೆಗಳ ಪಾತ್ರ ಮಹತ್ವದ್ದು. ಅವರಲ್ಲಿ ವಿಜ್ಞಾನ-ತಂತ್ರಜ್ಞಾನ ವಿಷಯಗಳ ಅರಿವನ್ನು ಬೆಳೆಸುವುದು ಕೂಡ ಮುಖ್ಯವೇ.

ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ಮಕ್ಕಳಿಗೆ ಅರ್ಥಮಾಡಿಸಲು ಕತೆಗಳನ್ನು ಬಳಸಿಕೊಂಡರೆ? ಇದು ಸಾಧ್ಯವಾದರೆ ವಿಜ್ಞಾನ-ತಂತ್ರಜ್ಞಾನ ವಿಷಯಗಳ ಬಗ್ಗೆ ಮಕ್ಕಳಲ್ಲಿ ಕುತೂಹಲ ಬೆಳೆಯುವುದಷ್ಟೇ ಅಲ್ಲದೆ ಬೋಧನೆ ಹೆಚ್ಚು ಪರಿಣಾಮಕಾರಿಯೂ ಆಗುತ್ತದೆ.

ಇದು ಕಲ್ಪನೆಯಷ್ಟೇ ಅಲ್ಲ. ಮಕ್ಕಳ ಕಲಿಕೆಯನ್ನು ಆಸಕ್ತಿದಾಯಕ ಹಾಗೂ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳು ವಿಶ್ವದ ಹಲವೆಡೆಗಳಲ್ಲಿ ನಡೆದಿವೆ. ಈ ಪ್ರಯತ್ನವನ್ನು ಕನ್ನಡದಲ್ಲೂ ಕೈಗೊಂಡಿರುವುದು ಪ್ರಥಮ್ ಬುಕ್ಸ್ ಎಂಬ ಸ್ವಯಂಸೇವಾ ಸಂಸ್ಥೆಯ ಹೆಗ್ಗಳಿಕೆ. ಇಂಗ್ಲಿಷ್ ಹಾಗೂ ಅನೇಕ ಭಾರತೀಯ ಭಾಷೆಗಳ ಮಕ್ಕಳ ಪುಸ್ತಕಗಳನ್ನು ಈ ಸಂಸ್ಥೆ ಹಲವು ವರ್ಷಗಳಿಂದ ಪ್ರಕಟಿಸುತ್ತ ಬಂದಿದೆ.

ಮಕ್ಕಳಿಗೆ ಆಸಕ್ತಿಹುಟ್ಟಿಸುವ ವಿವಿಧ ವಿಷಯಗಳನ್ನು ಕತೆಯ ರೂಪಕ್ಕೆ ತಂದು ಬಣ್ಣಬಣ್ಣದ ಆಕರ್ಷಕ ಪುಸ್ತಕಗಳಾಗಿ ಪ್ರಕಟಿಸುವುದು ಪ್ರಥಮ್ ಬುಕ್ಸ್‌ನ ಪ್ರಮುಖ ಚಟುವಟಿಕೆ. ಕಾಲ್ಪನಿಕ ಕತೆಗಳು ಮಾತ್ರವೇ ಅಲ್ಲದೆ ಹೊಸ ಆವಿಷ್ಕಾರಗಳು, ಗಣಿತ, ವಿಜ್ಞಾನ-ತಂತ್ರಜ್ಞಾನದ ಪರಿಕಲ್ಪನೆಗಳು, ವಿಜ್ಞಾನಿಗಳ ಪರಿಚಯ, ಪರಿಸರದ ಪಾಠಗಳು - ಎಲ್ಲವೂ ಇಲ್ಲಿ ಕತೆಪುಸ್ತಕಗಳಾಗಿ ಮಕ್ಕಳ ಕೈಸೇರುತ್ತಿವೆ ಎನ್ನುವುದು ವಿಶೇಷ. ಕೋವಿಡ್ ಜಾಗತಿಕ ಸೋಂಕು ಮೊದಲಿಗೆ ಕಾಣಿಸಿಕೊಂಡಾಗ ಮಕ್ಕಳಿಗೆ ಬೇಕಾದ ಮಾಹಿತಿಯನ್ನು ತಿಳಿಸುವ ಕತೆಪುಸ್ತಕವನ್ನೂ ಪ್ರಕಟಿಸಲಾಗಿತ್ತು.

ಪ್ರಥಮ್‌ ಬುಕ್ಸ್‌ನ ಬಹುತೇಕ ಪುಸ್ತಕಗಳು ಮೊದಲು ಇಂಗ್ಲಿಷಿನಲ್ಲಿ ಪ್ರಕಟವಾಗಿ ಆನಂತರ ಭಾರತೀಯ ಭಾಷೆಗಳಿಗೆ ಅನುವಾದವಾಗುತ್ತವೆ. ಹಾಗೆಂದ ಕೂಡಲೇ ಅನುವಾದದ ಗುಣಮಟ್ಟ ಹೇಗಿರಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಅನುವಾದ ಹಾಗೂ ಪರಿಶೀಲನೆಯ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸುವುದರಿಂದ ಅನುವಾದ ಕೃತಕವೆನಿಸುವುದು ಅಪರೂಪ. ಕೆಲವು ಅಪವಾದಗಳನ್ನು ಹೊರತುಪಡಿಸಿದಂತೆ ಬಹುತೇಕ ಪುಸ್ತಕಗಳು ಕನ್ನಡದ್ದೇ ಪುಸ್ತಕಗಳೇನೋ ಎನ್ನುವಂತೆ ಓದಿಸಿಕೊಳ್ಳುತ್ತವೆ.

ಪುಸ್ತಕ ಯಾವ ಭಾಷೆಯದ್ದೇ ಆದರೂ ಅದನ್ನು ಉತ್ತಮ ಗುಣಮಟ್ಟದ ಕಾಗದದ ಮೇಲೆ ಬಹುವರ್ಣದಲ್ಲಿ ಮುದ್ರಿಸುವುದು ಪ್ರಥಮ್ ಬುಕ್ಸ್‌ನ ಅಭ್ಯಾಸ. ಬಣ್ಣಬಣ್ಣದ ಆಕರ್ಷಕ ಪುಸ್ತಕ ಎಂದಕೂಡಲೇ ಅವುಗಳ ಬೆಲೆ ತೀರಾ ದುಬಾರಿಯಿರಬಹುದು ಎಂಬ ಸಂಶಯ ಮೂಡುವುದು ಸಹಜ. ಆದರೆ ಪ್ರಥಮ್ ಬುಕ್ಸ್‌ ಪ್ರಕಟಿಸುವ ಪುಸ್ತಕಗಳ ಬೆಲೆ ಬಹುಮಟ್ಟಿಗೆ ಕೈಗೆಟುಕುವಂತೆಯೇ ಇರುತ್ತದೆ. ದಾನಿಗಳ ನೆರವಿನಿಂದ ತನ್ನ ಪ್ರಕಟಣೆಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಗಳನ್ನೂ ಪ್ರಥಮ್ ಬುಕ್ಸ್ ಸಂಸ್ಥೆ ಹಮ್ಮಿಕೊಳ್ಳುತ್ತದೆ.

ಇಂದಿನ ಮಕ್ಕಳು ಪುಸ್ತಕಗಳನ್ನೇ ಓದುವುದಿಲ್ಲ, ಅವರ ಗಮನವೇನಿದ್ದರೂ ಮೊಬೈಲ್ - ಟ್ಯಾಬ್ಲೆಟ್ ಇತ್ಯಾದಿಗಳ ಕಡೆಗೇ ಇರುತ್ತದೆ ಎನ್ನುವುದು ಪದೇಪದೇ ಕೇಳಸಿಗುವ ಆರೋಪ. ಮಕ್ಕಳು ಮೊಬೈಲ್ ನೋಡುವುದಾದರೆ ಆ ಮೊಬೈಲಿನಲ್ಲೇ ಕತೆಪುಸ್ತಕಗಳನ್ನು ಒದಗಿಸುವ ಕೆಲಸವನ್ನೂ ಪ್ರಥಮ್ ಬುಕ್ಸ್ ಮಾಡುತ್ತಿದೆ.

ಈ ಸಂಸ್ಥೆ ರೂಪಿಸಿರುವ 'ಸ್ಟೋರಿವೀವರ್' (storyweaver.org.in) ಎಂಬ ಜಾಲತಾಣದಲ್ಲಿ ನಾವು ಪ್ರಪಂಚದೆಲ್ಲೆಡೆಯ ನೂರಾರು ಭಾಷೆಗಳಲ್ಲಿರುವ ಹತ್ತಾರು ಸಾವಿರ ಕತೆಗಳನ್ನು ಉಚಿತವಾಗಿ ಓದಬಹುದು. ಅಷ್ಟೇ ಅಲ್ಲ, ಬೇರೆ ಭಾಷೆಯಲ್ಲಿರುವ ಕತೆಗಳನ್ನು ನಮ್ಮ ಭಾಷೆಗೆ ಅನುವಾದಿಸಬಹುದು, ನಮ್ಮದೇ ಹೊಸ ಕತೆಗಳನ್ನೂ ಬರೆದು ಪ್ರಕಟಿಸಬಹುದು. ನಮ್ಮ ಕತೆಗಳ ಜೊತೆ ಬಳಸಲು ಅಲ್ಲಿ ಬೇಕಾದಷ್ಟು ಚಿತ್ರಗಳಿವೆ, ನಾವೇ ಬರೆದ ಚಿತ್ರಗಳನ್ನು ಸೇರಿಸುವ ಅವಕಾಶವೂ ಇದೆ!

ಒಂದೇ ಕತೆ ಹಲವು ಭಾಷೆಗಳಲ್ಲಿ ದೊರಕುವುದು ಸ್ಟೋರಿವೀವರ್‌ನ ಪ್ರಮುಖ ವೈಶಿಷ್ಟ್ಯ. ಇದರಿಂದಾಗಿ ನಾವು ಬೇರೆಬೇರೆ ಭಾಷೆಗಳನ್ನು ಕಲಿಯಲು ಸಹಾಯವಾಗುತ್ತದೆ. ಇನ್ನು ನಮ್ಮದೇ ಕತೆಗಳನ್ನು ಬರೆದು ಪ್ರಕಟಿಸುವ ಸಾಧ್ಯತೆಯಂತೂ ಮಕ್ಕಳಿಗಷ್ಟೇ ಅಲ್ಲ, ಶಿಕ್ಷಕರಿಗೂ ಸಹಕಾರಿ. ಅವರು ಅದನ್ನು ಬೋಧನೆಯ ಹೊಸ ವಿಧಾನವಾಗಿ ಬಳಸಿಕೊಳ್ಳಬಹುದು.

ಕೊಳ್ಳೇಗಾಲ ಶರ್ಮ, ವಿಜ್ಞಾನ ಸಂವಹನಕಾರರು

ಪ್ರಥಮ್ ಬುಕ್ಸ್ ಪ್ರಕಟಿಸುವ ಎಲ್ಲ ಪುಸ್ತಕಗಳೂ ಕ್ರಿಯೇಟಿವ್‌ ಕಾಮನ್ಸ್‌ ಪರವಾನಗಿಯಡಿ ಪ್ರಕಟವಾಗುತ್ತಿರುವುದು ವಿಶೇಷ. ಈ ಮುಕ್ತ ಪರವಾನಗಿಯಡಿ ಪ್ರಕಟಿಸುವ ಮೂಲಕ ಕತೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು, ಅನುವಾದಿಸುವುದು ಎಲ್ಲವೂ ಸಾಧ್ಯವಾಗುತ್ತದೆ (ಕ್ರಿಯೇಟಿವ್ ಕಾಮನ್ಸ್‌ನಲ್ಲಿ ಹಲವು ಬಗೆಯ ಪರವಾನಗಿಗಳಿವೆ. ಪುಸ್ತಕವನ್ನು ಯಾವ ನಿರ್ದಿಷ್ಟ ಪರವಾನಗಿಯಡಿ ಪ್ರಕಟಿಸಲಾಗಿದೆ ಎನ್ನುವುದರ ಆಧಾರದ ಮೇಲೆ ಕೆಲವು ಹೆಚ್ಚುವರಿ ನಿಬಂಧನೆಗಳು ಅನ್ವಯಿಸಬಹುದು).

ಪ್ರಥಮ್ ಬುಕ್ಸ್‌ನ ಕೆಲ ಹೊಸ ಪ್ರಕಟಣೆಗಳನ್ನು ಓದುವ ಅವಕಾಶ ಇತ್ತೀಚೆಗೆ ನಮ್ಮ ತಂಡಕ್ಕೆ ದೊರಕಿತ್ತು. ನಮಗೆ ಬಹಳವೇ ಇಷ್ಟವಾದ ಕೃತಿಗಳ ಪಟ್ಟಿ ಇಲ್ಲಿದೆ. ಪಟ್ಟಿಯಲ್ಲಿರುವ ಪುಸ್ತಕದ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಆ ಪುಸ್ತಕವನ್ನು ಸ್ಟೋರಿವೀವರ್‌ನಲ್ಲಿ ಓದಬಹುದು.

ಪ್ರಥಮ್ ಬುಕ್ಸ್‌ನ ಕೆಲ ಪ್ರಕಟಣೆಗಳು
ಪ್ರಥಮ್ ಬುಕ್ಸ್‌ನ ಕೆಲ ಪ್ರಕಟಣೆಗಳುprathambooks.org
  • ದಿ ಗ್ರೇಟ್ ರಿಫಾಸ: ವನ್ಯಜೀವಿಗಳ ಮೇಲೆ ಪರಿಸರ ಪ್ರವಾಸೋದ್ಯಮದ ಪರಿಣಾಮಗಳನ್ನು ಕತೆಯ ರೂಪದಲ್ಲಿ ವಿವರಿಸುವ ಕೃತಿ; ಲೇಖಕರು: ರೋಹಿಣಿ ನಿಲೇಕಣಿ, ಕನ್ನಡ ಅನುವಾದ: ಕೃಪಾಕರ ಸೇನಾನಿ

  • ಗಿಡಕ್ಕೆ ಕೊರಳಾದವಳು: ಸಸ್ಯವಿಜ್ಞಾನಿ ಡಾ. ಎಚ್. ಜಯಶ್ರೀ ಸುಬ್ರಹ್ಮಣ್ಯಂ ಅವರ ಸಾಧನೆಗಳನ್ನು ಮಕ್ಕಳಿಗೆ ಪರಿಚಯಿಸುವ ಪುಸ್ತಕ; ಲೇಖಕರು: ಸಾಯಂತನ್ ದತ್ತ, ಕನ್ನಡ ಅನುವಾದ: ಮೋಹನ್ ಕುಮಾರ್ ಆರ್

  • ಸೂರ್ಯನನ್ನೇ ತಿಂದ ಮೈನಾ: ಆಹಾರ ಸರಪಳಿಯ ಪರಿಕಲ್ಪನೆಯನ್ನು ಚಿತ್ರ-ಕತೆಯ ಮೂಲಕ ವಿವರಿಸುವ ಪುಸ್ತಕ; ಲೇಖಕರು: ಲಬೋನಿ ರಾಯ್, ಕನ್ನಡ ಅನುವಾದ: ದೀಪ್ತಿ ಬಿ

ಪ್ರಥಮ್ ಬುಕ್ಸ್ ಕೃತಿಗಳನ್ನು ಅವರ ಆನ್‌ಲೈನ್ ಅಂಗಡಿಯಲ್ಲಿ ಖರೀದಿಸಬಹುದು: store.prathambooks.org

ಪ್ರಥಮ್ ಬುಕ್ಸ್ ಪ್ರಕಟಣೆಗಳನ್ನು ಓದಲು, ಕೇಳಲು ಸ್ಟೋರಿವೀವರ್ ತಾಣಕ್ಕೆ ಭೇಟಿಕೊಡಿ: storyweaver.org.in

Related Stories

No stories found.
logo
ಇಜ್ಞಾನ Ejnana
www.ejnana.com