ಭೌತವಿಜ್ಞಾನ, ರಸಾಯನವಿಜ್ಞಾನ, ಪ್ರಾಣಿವಿಜ್ಞಾನ, ವೈದ್ಯವಿಜ್ಞಾನ, ಗಣಿತವಿಜ್ಞಾನ ಸೇರಿದಂತೆ ವಿಜ್ಞಾನದ ಹಲವು ಶಾಖೆಗಳಿಗೆ ಸಂಬಂಧಿಸಿದ ಕೃತಿಗಳು ಪ್ರಚಾರ ಪುಸ್ತಕಮಾಲೆಯಲ್ಲಿ ಬೆಳಕು ಕಂಡಿದ್ದವು.
ಭೌತವಿಜ್ಞಾನ, ರಸಾಯನವಿಜ್ಞಾನ, ಪ್ರಾಣಿವಿಜ್ಞಾನ, ವೈದ್ಯವಿಜ್ಞಾನ, ಗಣಿತವಿಜ್ಞಾನ ಸೇರಿದಂತೆ ವಿಜ್ಞಾನದ ಹಲವು ಶಾಖೆಗಳಿಗೆ ಸಂಬಂಧಿಸಿದ ಕೃತಿಗಳು ಪ್ರಚಾರ ಪುಸ್ತಕಮಾಲೆಯಲ್ಲಿ ಬೆಳಕು ಕಂಡಿದ್ದವು.ejnana.com

ವಿಜ್ಞಾನ ಪ್ರಚಾರಕ್ಕೆ ಕೊಡುಗೆ ನೀಡಿದ 'ಪ್ರಚಾರ ಪುಸ್ತಕಮಾಲೆ'

"ಈ ಮಾಲೆಯಲ್ಲಿ ಹೊಸದೊಂದು ಪುಸ್ತಕ ಹೊರಬಿದ್ದ ದಿನವೇ ಸುಮಾರು ೬೦೦ ಪ್ರತಿಗಳು ಮಾರಾಟವಾಗುತ್ತವೆ; ಈ ಮೂರು ವರ್ಷಗಳ ಅವಧಿಯಲ್ಲಿ ಸುಮಾರು ೬೦,೦೦೦ ಪ್ರತಿಗಳು ವಿಕ್ರಯವಾಗಿವೆ," ಎಂದು ಉಪಕುಲಪತಿಗಳಾಗಿದ್ದ ಇ. ಜಿ. ಮೆಕಾಲ್ಪೈನ್ ಹೇಳಿದ್ದರು!

ಯಾವುದೇ ವಿಷಯವನ್ನು ಸಂಕ್ಷಿಪ್ತವಾಗಿ, ಆಕರ್ಷಕವಾಗಿ ವಿವರಿಸಿದರೆ ಆ ಸಂವಹನ ಹೆಚ್ಚು ಪರಿಣಾಮಕಾರಿಯಾಗಿರುವುದು ಸಾಧ್ಯ. ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ಈ ಪರಿಕಲ್ಪನೆ ಈಚಿನ ವರ್ಷಗಳಲ್ಲಿ ಹೆಚ್ಚು ಪ್ರಚಾರ ಪಡೆದುಕೊಂಡಿದೆಯಾದರೂ, ಕನ್ನಡದಲ್ಲಿ ಇಂತಹ ಪ್ರಯೋಗಗಳು ಸ್ವಾತಂತ್ರ್ಯಪೂರ್ವದಿಂದಲೇ ನಡೆದುಕೊಂಡು ಬಂದಿವೆ. ೧೯೩೦ರ ದಶಕದಲ್ಲಿ ಪ್ರಾರಂಭವಾದ ಮೈಸೂರು ವಿಶ್ವವಿದ್ಯಾನಿಲಯದ 'ಪ್ರಚಾರ ಪುಸ್ತಕಮಾಲೆ'ಗೆ ಇಂತಹ ಪ್ರಯೋಗಗಳ ಸಾಲಿನಲ್ಲಿ ಅತ್ಯಂತ ಮಹತ್ವದ ಸ್ಥಾನ.

"ವಿಶ್ವವಿದ್ಯಾನಿಲಯದ ವಿದ್ಯೆ ಪಟ್ಟಣಗಳಲ್ಲಿ ಮಾತ್ರ ಕೇಂದ್ರೀಕೃತವಾಗದೆ ನಾಡಿನ ಮೂಲೆಮೂಲೆಗೂ ಪ್ರಸರಿಸಬೇಕು," ಎನ್ನುವುದು ಮೈಸೂರು ವಿವಿಯ ಮೊದಲ ಕುಲಪತಿ ನಾಲ್ವಡಿ ಕೃಷ್ಣರಾಜ ಒಡೆಯರ ಆಶಯವಾಗಿತ್ತಂತೆ. ಇದೇ ಆಶಯಕ್ಕೆ ಅನುಗುಣವಾಗಿ ವಿಶ್ವವಿದ್ಯಾನಿಲಯದ ಅಧ್ಯಾಪಕ ಸಂಘವು ವಿವಿಧ ಸ್ಥಳಗಳಲ್ಲಿ ಪರಿಣತರ ಉಪನ್ಯಾಸಗಳನ್ನು ಏರ್ಪಡಿಸಲು ಪ್ರಾರಂಭಿಸಿತು. 'ಪ್ರಚಾರೋಪನ್ಯಾಸ'ಗಳೆಂದೇ ಜನಪ್ರಿಯವಾದ ಈ ಉಪನ್ಯಾಸಗಳ ಮುದ್ರಿತ ರೂಪವನ್ನು ವಿಶ್ವವಿದ್ಯಾನಿಲಯದ ಪ್ರಸಾರಾಂಗವು 'ಪ್ರಚಾರ ಪುಸ್ತಕಮಾಲೆ' ಎಂಬ ಹೆಸರಿನಲ್ಲಿ ಪ್ರಕಟಿಸಿತು.

ಬೆಂಗಳೂರು ಸಮೀಪದ ಆನೇಕಲ್ಲಿನಲ್ಲಿ ೧೯೩೯ರ ಫೆಬ್ರುವರಿ-ಮಾರ್ಚ್‌ನಲ್ಲಿ ಆಯೋಜಿಸಲಾಗಿದ್ದ ಪ್ರಚಾರೋಪನ್ಯಾಸದಲ್ಲಿ ಬೆಂಗಳೂರು ಇಂಜಿನಿಯರಿಂಗ್ ಕಾಲೇಜಿನ ಸಿ. ಎನ್. ಶ್ರೀನಿವಾಸ ಅಯ್ಯಂಗಾರರು ಜನಸಾಮಾನ್ಯರಿಗೆ ಖಗೋಳವಿಜ್ಞಾನದ ಪರಿಚಯ ಮಾಡಿಕೊಟ್ಟರು. ಇದೇ ಉಪನ್ಯಾಸದ ಮುದ್ರಿತ ರೂಪ, 'ಖಗೋಳಶಾಸ್ತ್ರ ಪ್ರವೇಶ' ಎಂಬ ಹೆಸರಿನಲ್ಲಿ, ಪ್ರಚಾರ ಪುಸ್ತಕಮಾಲೆಯ ಮೊದಲ ಪುಸ್ತಕವಾಗಿ ಪ್ರಕಟವಾಯಿತು.

ಪ್ರಚಾರ ಪುಸ್ತಕಮಾಲೆಯ ಮೊದಲ ಪುಸ್ತಕ 'ಖಗೋಳಶಾಸ್ತ್ರ ಪ್ರವೇಶ'ದ ಮರುಮುದ್ರಿತ ಪ್ರತಿ (೧೯೫೫)
ಪ್ರಚಾರ ಪುಸ್ತಕಮಾಲೆಯ ಮೊದಲ ಪುಸ್ತಕ 'ಖಗೋಳಶಾಸ್ತ್ರ ಪ್ರವೇಶ'ದ ಮರುಮುದ್ರಿತ ಪ್ರತಿ (೧೯೫೫)ejnana.com

ಪ್ರಚಾರ ಪುಸ್ತಕಮಾಲೆಯನ್ನು ಪ್ರಾರಂಭಿಸಿದ್ದು ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿಗಳಾಗಿದ್ದ ಎನ್. ಎಸ್. ಸುಬ್ಬರಾಯರು. ಇವರು ೧೯೩೫ರಲ್ಲಿ ಮುಂಬಯಿಯಲ್ಲಿ ನಡೆದ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ಜಿ. ಹನುಮಂತರಾಯರು ಪ್ರಚಾರ ಪುಸ್ತಕಮಾಲೆಯ ಮೊದಲ ಪ್ರಧಾನ ಸಂಪಾದಕರಾಗಿ ಸೇವೆಸಲ್ಲಿಸಿದರು. ಮೊದಲ ದಿನಗಳಿಂದಲೂ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಈ ಪುಸ್ತಕಮಾಲೆಯ ಹೆಗ್ಗಳಿಕೆ. ಮೊದಲ ಮೂರು ವರ್ಷಗಳಲ್ಲಿ ಪ್ರಕಟವಾದ ೩೪ ಪುಸ್ತಕಗಳ ಪೈಕಿ ೧೧ ವಿಜ್ಞಾನ ವಿಷಯಗಳ ಕುರಿತಾಗಿಯೇ ಇದ್ದವು.

"ಈ ಮಾಲೆಯಲ್ಲಿ ಹೊಸದೊಂದು ಪುಸ್ತಕ ಹೊರಬಿದ್ದ ದಿನವೇ ಸುಮಾರು ೬೦೦ ಪ್ರತಿಗಳು ಮಾರಾಟವಾಗುತ್ತವೆ; ಈ ಮೂರು ವರ್ಷಗಳ ಅವಧಿಯಲ್ಲಿ ಸುಮಾರು ೬೦,೦೦೦ ಪ್ರತಿಗಳು ವಿಕ್ರಯವಾಗಿವೆ," ಎಂದು ೧೯೪೨ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಇ. ಜಿ. ಮೆಕಾಲ್ಪೈನ್ ಹೇಳಿದ್ದು ಪ್ರಚಾರ ಪುಸ್ತಕಮಾಲೆ ಗಳಿಸಿಕೊಂಡಿದ್ದ ಜನಪ್ರಿಯತೆಗೆ ಸಾಕ್ಷಿ. ಅಂದಿನ ನಾಲ್ಕು ಆಣೆ - ಇಂದಿನ ಇಪ್ಪತ್ತೈದು ಪೈಸೆ - ಬೆಲೆಗೆ ದೊರಕುತ್ತಿದ್ದ ಪೋಸ್ಟ್‌ಕಾರ್ಡ್ ಗಾತ್ರದ ಈ ಪುಸ್ತಕಗಳು 'ನಾಲ್ಕಾಣೆ ಪುಸ್ತಕ'ಗಳೆಂದೇ ಪ್ರಖ್ಯಾತವಾಗಿದ್ದವು. ಪ್ರಾರಂಭದ ಕೆಲ ವರ್ಷಗಳಲ್ಲಿ ಈ ಮಾಲೆಯ ಕೃತಿಗಳ 'ಸಾಧಾರಣ ಪ್ರತಿ'ಗೆ ಮೂರು ಆಣೆ ಬೆಲೆ ನಿಗದಿಯಾಗಿದ್ದೂ ಉಂಟು; ಆಗ ನಾಲ್ಕು ಆಣೆಗೆ 'ಉತ್ತಮ ಪ್ರತಿ'ಯೇ ದೊರಕುತ್ತಿತ್ತು!

ಭೌತವಿಜ್ಞಾನ, ರಸಾಯನವಿಜ್ಞಾನ, ಪ್ರಾಣಿವಿಜ್ಞಾನ, ವೈದ್ಯವಿಜ್ಞಾನ, ಗಣಿತವಿಜ್ಞಾನ ಸೇರಿದಂತೆ ವಿಜ್ಞಾನದ ಹಲವು ಶಾಖೆಗಳಿಗೆ ಸಂಬಂಧಿಸಿದ ಕೃತಿಗಳು ಪ್ರಚಾರ ಪುಸ್ತಕಮಾಲೆಯಲ್ಲಿ ಬೆಳಕು ಕಂಡಿದ್ದವು. ಮಾಲೆಯ ಮೊದಲ ಕೃತಿಯಾಗಿ ಪ್ರಕಟವಾದ 'ಖಗೋಳಶಾಸ್ತ್ರ ಪ್ರವೇಶ'ದ ನಂತರ ಪ್ರಕಟವಾದ ವಿಜ್ಞಾನದ ಕೃತಿಗಳಿಗೆ ಬಿ. ಎ. ಕೃಷ್ಣಸ್ವಾಮಿರಾವ್ ಅವರ 'ವಿದ್ಯುಚ್ಛಕ್ತಿಯ ವೈಭವ', ಎ. ನಾರಾಯಣರಾವ್ ಅವರ 'ಪ್ರಾಣಿಜೀವನ', ಕೆ. ಶೇಷಾದ್ರಿ ಅಯ್ಯಂಗಾರರ 'ವಾಯುಗುಣ', ಡಾ. ಡಿ. ಶಾಮಣ್ಣ ಅವರ 'ಕಣ್ಣು ಮತ್ತು ಅದರ ರಕ್ಷಣೆ' ಹಾಗೂ 'ರಕ್ತ', ಎಚ್. ಸುಬ್ಬಾಜೋಯಿಸ್ ಅವರ 'ಸಾರಜನಕದ ಮಹತ್ವ', ಡಿ. ಎಚ್. ವೀರಯ್ಯನವರ 'ಕೀಟಗಳು', ಜೆ. ಆರ್. ಲಕ್ಷ್ಮಣರಾಯರ 'ಆಹಾರ', ಕೆ. ಎಸ್. ಲಕ್ಷ್ಮಣರಾವ್ ಅವರ 'ಕಲ್ಲಿದ್ದಲು' ಕೆಲ ಉದಾಹರಣೆಗಳು. ಗಣಿತದ ಕುರಿತು ಸಿ. ಎನ್. ಶ್ರೀನಿವಾಸ ಅಯ್ಯಂಗಾರರು ಹಾಗೂ ವಿ. ಕೆ. ದೊರೆಸ್ವಾಮಿಯವರು, ಪ್ರಾಣಿವಿಜ್ಞಾನದ ಕುರಿತು ಡಾ. ಎಚ್. ಬಿ. ದೇವರಾಜ ಸರ್ಕಾರರು ಈ ಮಾಲೆಯಲ್ಲಿ ಹಲವು ಕೃತಿಗಳನ್ನು ರಚಿಸಿದರು.

ಪ್ರಚಾರ ಪುಸ್ತಕಮಾಲೆಯಿಂದ ಪ್ರೇರಣೆ ಪಡೆದ ಕರ್ನಾಟಕ ವಿಶ್ವವಿದ್ಯಾನಿಲಯ ೧೯೫೪ರಲ್ಲಿ 'ಉಪನ್ಯಾಸ ಗ್ರಂಥಮಾಲೆ'ಯನ್ನೂ ಬೆಂಗಳೂರು ವಿಶ್ವವಿದ್ಯಾನಿಲಯ ೧೯೬೭ರಲ್ಲಿ 'ಪ್ರಚಾರೋಪನ್ಯಾಸಮಾಲೆ'ಯನ್ನೂ ಪ್ರಾರಂಭಿಸಿದ್ದು ವಿಶೇಷ. ಮೈಸೂರು ವಿಶ್ವವಿದ್ಯಾನಿಲಯದ ಪುಸ್ತಕಮಾಲೆಯಂತೆ ಈ ಸರಣಿಗಳಲ್ಲೂ ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಮಹತ್ವ ದೊರೆತಿತ್ತು. ಎಸ್. ಜೆ. ನಾಗಲೋಟಿಮಠ, ಆರ್. ಎಸ್. ಭೂಸನೂರಮಠ, ಪಿ. ಎಸ್. ಶಂಕರ್, ಡಿ. ಆರ್. ಬಳೂರಗಿ ಮೊದಲಾದ ಹಲವು ಹಿರಿಯ ಸಂವಹನಕಾರರ ವಿಜ್ಞಾನ ಕೃತಿಗಳು ಕರ್ನಾಟಕ ವಿಶ್ವವಿದ್ಯಾನಿಲಯದ ಗ್ರಂಥಮಾಲೆಯಲ್ಲಿ ಪ್ರಕಟವಾಗಿದ್ದವು. ಅದೇ ರೀತಿ ಬೆಂಗಳೂರು ವಿಶ್ವವಿದ್ಯಾನಿಲಯ ಜಿ. ಟಿ. ನಾರಾಯಣರಾಯರ 'ನಕ್ಷತ್ರ ಲೋಕ', ಪಿ. ಎಸ್. ವೆಂಕಟಸ್ವಾಮಿ ಶೆಟ್ಟಿಯವರ 'ಚಂದ್ರಲೋಕ ಯಾತ್ರೆ', ಬಿ. ವಿ. ನಾರಾಯಣರಾವ್ ಅವರ 'ಬೆಳಕಿನ ಸ್ವರೂಪ', ಕೆ. ಶೇಷಾದ್ರಿ ಅಯ್ಯಂಗಾರರ 'ಸೂಕ್ಷ್ಮದರ್ಶಕಗಳು ಮತ್ತು ದೂರದರ್ಶಕಗಳು', ಎಸ್. ಬಿ. ವಸಂತ ಕುಮಾರ್ ಅವರ 'ದೇಹರಚನೆ ಹಾಗೂ ಮೂಳೆಗಳು' ಮುಂತಾದ ಕೃತಿಗಳನ್ನು ಪ್ರಕಟಿಸಿತ್ತು. ಈ ಎಲ್ಲ ಪುಸ್ತಕಗಳ ಗಾತ್ರ - ಬೆಲೆಗಳೂ ಪ್ರಚಾರ ಪುಸ್ತಕಮಾಲೆಯ ಕೃತಿಗಳನ್ನೇ ಅನುಸರಿಸಿದ್ದವು. ಅಷ್ಟೇ ಏಕೆ, ಆ ಸಮಯದ ಕೆಲ ಖಾಸಗಿ ಪ್ರಕಾಶಕರು ಕೂಡ ಪ್ರಚಾರ ಪುಸ್ತಕಮಾಲೆಯನ್ನು ಅನುಕರಿಸಿದ್ದುಂಟು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸಂಘ ಪ್ರಕಟಿಸಿದ 'ಮಂಗಳ ಮಾಲೆ'ಯ ಕೃತಿಗಳೂ ಇದೇ ಗಾತ್ರದಲ್ಲಿದ್ದವು.

ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಪ್ರಚಾರ ಪುಸ್ತಕಮಾಲೆಯ ಕೊಡುಗೆಯ ಕುರಿತು ಅಂದಿನ ಉಪಕುಲಪತಿಗಳಾಗಿದ್ದ ಕುವೆಂಪು ೧೯೫೮ರಲ್ಲಿ "ಈ ಮಾಲೆಯಿಂದ ಸಾಮಾನ್ಯಜನರಲ್ಲಿ ಜ್ಞಾನಪ್ರಸಾರ ಕಾರ್ಯ ತಕ್ಕಮಟ್ಟಿಗೆ ಯಶಸ್ವಿಯಾಗಿ ನಡೆದಿರುವಂತೆಯೆ ಕನ್ನಡದಲ್ಲಿ ವಿಜ್ಞಾನ ಸಂಬಂಧವಾದ ವಿಷಯಗಳನ್ನು ಸುಲಭವಾಗಿ ಸರಳವಾಗಿ ಹೇಳಬಹುದು, ಮತ್ತು ಕನ್ನಡ ವೈಜ್ಞಾನಿಕ ಭಾಷೆಯಾಗಬಲ್ಲದು ಎಂಬ ಅಂಶ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ," ಎಂದು ಹೇಳಿದ್ದರು. ಶಿಕ್ಷಣಸಂಸ್ಥೆಗಳ ವ್ಯಾಪ್ತಿ ಇಂದಿನಷ್ಟು ದೊಡ್ಡ ಪ್ರಮಾಣದಲ್ಲಿ ಇರದಿದ್ದ ಆ ಕಾಲದಲ್ಲೇ ಪ್ರಚಾರ ಪುಸ್ತಕಮಾಲೆ ವಿಜ್ಞಾನದ ಹಲವು ವಿಷಯಗಳ ಕುರಿತು ಜನಸಾಮಾನ್ಯರಿಗೆ ಉಪಯುಕ್ತವಾದ ಮಾಹಿತಿಯನ್ನು ಸರಳ ಭಾಷೆಯಲ್ಲಿ, ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಸಾಹಸ ಮಾಡಿತ್ತು. ಇಂತಹುದೊಂದು ಅದ್ಭುತ ಸಾಧನೆಯ ಉದಾಹರಣೆ ಇದ್ದರೂ ಕೂಡ ನಾವು ಇಂದಿಗೂ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಸಂವಹನವನ್ನು ವ್ಯಾಪಕಗೊಳಿಸುವುದು ಸಾಧ್ಯವಾಗಿಲ್ಲ ಎನ್ನುವುದು ವಿಷಾದದ ಸಂಗತಿ. ಈ ನಿಟ್ಟಿನಲ್ಲಿ ಇಂದು ನಡೆದಿರುವ ಹಾಗೂ ಮುಂದೆ ನಡೆಯಬೇಕಿರುವ ಹಲವು ಪ್ರಯತ್ನಗಳಿಗೆ ಎಂಟು ದಶಕಗಳಷ್ಟು ಹಿಂದೆಯೇ ಮೇಲ್ಪಂಕ್ತಿ ಹಾಕಿಕೊಟ್ಟ ಪ್ರಚಾರ ಪುಸ್ತಕಮಾಲೆ ಆದರ್ಶವಾಗಬೇಕಿದೆ. ಈಗಲೂ ಅಸ್ತಿತ್ವದಲ್ಲಿರುವ ಪ್ರಚಾರ ಪುಸ್ತಕಮಾಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮತ್ತೆ ವಿಜ್ಞಾನ-ತಂತ್ರಜ್ಞಾನಗಳಿಗೆ ಪ್ರಾಮುಖ್ಯ ನೀಡುವುದಾದರೆ, ನಮ್ಮ ನಾಡಿನ ಇನ್ನಿತರ ಉನ್ನತ ಶಿಕ್ಷಣ ಸಂಸ್ಥೆಗಳೂ ಇದೇ ಮಾದರಿಯನ್ನು ಮುನ್ನೆಲೆಗೆ ತರುವುದಾದರೆ ಅದೂ ಸಂತೋಷದ ವಿಷಯವೇ!

'ಕುತೂಹಲಿ' ಆನ್‌ಲೈನ್ ಪತ್ರಿಕೆಯ ಆಗಸ್ಟ್ ೨೦೨೧ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com