ಮಾರ್ಚ್ 14 ನ್ನು 'ಪೈ' ದಿನವನ್ನಾಗಿ ಆಚರಿಸಲಾಗುತ್ತದೆ
ಮಾರ್ಚ್ 14 ನ್ನು 'ಪೈ' ದಿನವನ್ನಾಗಿ ಆಚರಿಸಲಾಗುತ್ತದೆ|Image by Gerd Altmann from Pixabay
ವೈವಿಧ್ಯ

ಪೈ ದಿನ ವಿಶೇಷ: ಅನಂತ, ಅಗಾಧ ಪೈ!

ಪೈ ದಿನದ ಸಂದರ್ಭದಲ್ಲಿ ಒಂದು ಲೇಖನ ಬರೆಯಿರಿ ಎಂಬ ಕರೆಗೆ ಪ್ರತಿಕ್ರಿಯೆಯಾಗಿ ಬಂದ ಅತ್ಯುತ್ತಮ ಬರಹ ಇದು. ಬರೆದವರು ಕುಂದಾಪುರದ ಸಂದೇಶ್. ಎಚ್. ನಾಯ್ಕ್, ಹಕ್ಲಾಡಿ. ಪೈ ದಿನದ ಬಗ್ಗೆ ಅವರು ಏನು ಹೇಳಿದ್ದಾರೆ? ಓದಿ, ಪ್ರತಿಕ್ರಿಯೆ ನೀಡಿ!

ಇಜ್ಞಾನ ತಂಡ

ಗಣಿತ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರ ಗಮನ ಸೆಳೆಯುವ ಕೆಲವು ವಿಶಿಷ್ಟ ಅಂಶಗಳಲ್ಲಿ 'ಪೈ'ಗೆ ಮಹತ್ವದ ಸ್ಥಾನವಿದೆ. 22/7 ಎಂಬ ಮೇಲ್ನೋಟಕ್ಕೆ ಅತ್ಯಂತ ಸರಳ ಎಂದೆನಿಸುವ ಈ ಭಿನ್ನರಾಶಿಯ ಆಳ ಹಾಗೂ ಅಗಲ ಬೃಹತ್ತಾದುದು. ಒಂದು ವೃತ್ತದ ಸುತ್ತಳತೆ ಹಾಗೂ ತ್ರಿಜ್ಯದ ನಡುವಿನ ಅನುಪಾತವನ್ನು 'ಪೈ' ಎಂದು ಕರೆಯಲಾಗುತ್ತದೆ. ಅದರ ಸಂಖ್ಯಾ ಅಭಿವ್ಯಕ್ತಿಯಾದ 22/7 ಯನ್ನು ಭಾಗಿಸುತ್ತಾ ಹೋದರೆ ಅದು ಹಾಗೆ ಮುಂದುವರಿಯುತ್ತಾ ಹೋಗುತ್ತದೆ ಹೊರತು ಸಂಪೂರ್ಣವಾಗಿ ಭಾಗವಾಗಿ‌ ಹೋಗುವುದಿಲ್ಲ. ಅದರ ಆರಂಭದ ಸಂಖ್ಯೆಗಳು ಹತ್ತಿರದ ಸ್ಥಾನದ ಸರಾಸರಿಯ ಲೆಕ್ಕಾಚಾರದಲ್ಲಿ ಅದನ್ನು 3.14159 ಎಂದು ಗುರುತಿಸಬಹುದಾಗಿದೆ. ಸರಿಸುಮಾರು 18ನೇ ಶತಮಾನದ ಮಧ್ಯದಿಂದೀಚೆಗೆ ಅದನ್ನು 'π' ಎಂಬ ಗ್ರೀಕ್ ಸಂಕೇತವಾದ ಮೂಲಕ ಬರೆಯಲಾಗುತ್ತದೆ. 18ನೇ ಶತಮಾನದಲ್ಲಿ ವಿಲಿಯಂ ಜೋನ್ಸ್ ಎನ್ನುವಾತ ಈ ಹೆಸರನ್ನು ನೀಡಿದರೂ‌, ಇದನ್ನು ಜನಪ್ರಿಯಗೊಳಿಸಿ ಬಳಕೆಗಿಳಿಸಿದ ಶ್ರೇಯ ಮಾತ್ರ ಗಣಿತಜ್ಞನಾದ ಲಿಯೋನಾರ್ಡ್ ಆಯ್ಲರ್‌ಗೆ ಸಲ್ಲುತ್ತದೆ. ಅಂದಹಾಗೆ ಈ ಸಂಕೇತಕ್ಕೆ 'ಆರ್ಕಿಮಿಡೀಸ್ ಸ್ಥಿರಾಂಕ' ಎಂಬ ಇನ್ನೊಂದು ಹೆಸರೂ ಕೂಡಾ ಇದೆ.

ಮಾರ್ಚ್ 14 ನ್ನು 'ಪೈ' ದಿನವನ್ನಾಗಿ ಆಚರಿಸಲಾಗುತ್ತದೆ. ಅಮೇರಿಕಾವು ಸೇರಿದಂತೆ‌ ಹಲವಾರು ದೇಶಗಳಲ್ಲಿ ತಿಂಗಳನ್ನು ಮೊದಲು ಬರೆದು ದಿನಾಂಕವನ್ನು ನಂತರ ಬರೆಯುವ ಕ್ರಮವಿದೆ. ಅದರಂತೆ ಈ ದಿನವನ್ನು '3/14' ಎಂದು ಬರೆಯುತ್ತಾರೆ. ಈ‌ ಸಂಖ್ಯೆಗಳು 'ಪೈ' ಬೆಲೆಯನ್ನು ಸೂಚಿಸುವ ಸಂಖ್ಯೆಗಳ ಆರಂಭದ ಅಂಕೆಗಳಿಗೆ ಸಮವಾಗಿರುವುದರಿಂದ ಮಾರ್ಚ್ 14 ನ್ನು 'ಪೈ' ದಿನವನ್ನಾಗಿ ಆಚರಿಸುವ ಕ್ರಮ ಜಾರಿಗೆ ಬಂದಿತು. 1988 ರಲ್ಲಿ ಭೌತವಿಜ್ಞಾನಿ ಲ್ಯಾರಿ ಶಾ ಜನಪ್ರಿಯ ಸಂಖ್ಯೆಗಳು ಹಾಗೂ ಸಾಮಾನ್ಯ ಗಣಿತಕ್ಕೆಂದೇ ಹೀಗೊಂದು‌ ದಿನವನ್ನು ಆಚರಿಸುವ ಉದ್ಧೇಶದಿಂದ ಇದನ್ನು ಪ್ರಾರಂಭಿಸಿದನು. ನಂತರ 2009 ರಲ್ಲಿ ಅಮೇರಿಕಾದ ಸಂಸತ್ತು ಪೈ ದಿನಾಚರಣೆಗೆ ಸಂಬಂಧಿಸಿದಂತೆ ನಿರ್ಣಯವೊಂದನ್ನು ಅನುಮೋದಿಸುವ ಮೂಲಕ ಇದಕ್ಕೆ ಅಧಿಕೃತತೆಯ ಮುದ್ರೆ ಬಿತ್ತು. ಗಣಿತದಲ್ಲಿ ಇನ್ನೂ ಹೆಚ್ಚು ಆಸಕ್ತಿ ಉಳ್ಳವರು, ಈ‌ ದಿನವನ್ನು ಇನ್ನೂ‌ ವಿಶಿಷ್ಟವಾಗಿ ಆಚರಿಸಬೇಕೆಂದರೆ ಈ‌ ದಿನ ಬೆಳಿಗ್ಗೆ ಇಲ್ಲವೇ ಮಧ್ಯಾಹ್ನ 1.59 ಕ್ಕೆ ಆಚರಿಸಬೇಕು. ಆಗ ಆ ಆಚರಣೆಯ ಸಂದರ್ಭವು 'ಪೈ'ನ ಬೆಲೆಗೆ ಇನ್ನಷ್ಟು ನಿಖರವಾಗುತ್ತದೆ ಅಂದರೆ 3.14159..! ಶಾಲೆಗಳಲ್ಲಿ ಹೀಗೆ ಆಚರಿಸುವ ಮೂಲಕ ಮಕ್ಕಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಹಾಗೂ ಕುತೂಹಲವನ್ನು ಮೂಡಿಸಬಹುದು.

ಈ ಪೈಯ ಪೂರ್ಣ ಬೆಲೆ ಗೊತ್ತಿಲ್ಲದ ಹೊರತಾಗಿಯೂ ಕೆಲವರು ಅದರ ಬೆಲೆಯನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಭಾರೀ ಪ್ರಯತ್ನವನ್ನಂತೂ ಮಾಡಿದ್ದಾರೆ. ಎಮ್ಮಾ ಇಲ್ವಾವೋ ಎಂಬ ಗೂಗಲ್ ಉದ್ಯೋಗಿಯೋರ್ವಳು π ಬೆಲೆಯ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ದಾಖಲೆ ಬರೆದಿದ್ದಾಳೆ. ಆಕೆ ಭರ್ತಿ 4 ತಿಂಗಳು ಇದಕ್ಕಾಗಿ ವ್ಯಯಿಸಿ, ಅದರ ಬೆಲೆಯನ್ನು 31.4 ಮಿಲಿಯನ್ ಸಂಖ್ಯೆಯವರೆಗೆ ಲೆಕ್ಕ ಹಾಕಿದ್ದಾಳೆ. ಆದರೂ ಅದು ಮುಗಿಯದು ಎಂದರೆ ಒಂದು ಸಣ್ಣ ಸಂಕೇತವಾದ 'ಪೈ'ಯ ಅಗಾಧತೆ ಹಾಗೂ ಅನಂತತೆ ತಿಳಿಯುತ್ತದೆ.

ಈ ಸಂಖ್ಯೆಯ ವೈಶಿಷ್ಟ್ಯತೆ ಏನೆಂದರೆ ಈ ಭಿನ್ನರಾಶಿಯ ಅಂಶ ಹಾಗೂ ಛೇದಗಳು ಸಂಪೂರ್ಣವಾಗಿ ಭಾಗವಾಗಿ ಹೋಗುವುದಿಲ್ಲ ಎನ್ನುವುದೇನೋ ನಿಜ. ಅಂದರೆ ಅದನ್ನೊಂದು ಪೂರ್ಣತೆಯ ಪರಿಕಲ್ಪನೆಯಲ್ಲಿ ಹಿಡಿದಡಲು ನಮಗೆ ಸಾಧ್ಯವಿಲ್ಲ. ಎಷ್ಟೇ ಲೆಕ್ಕ ಮಾಡಿದರೂ ಕೊನೆಗೊಂದು ಶೇಷ ಉಳಿಯುವ ಮೂಲಕ ನಮ್ಮನ್ನು ಮತ್ತೂ ಮತ್ತೂ ಲೆಕ್ಕಕ್ಕೆ ಹಚ್ಚುತ್ತದೆ. ಹಾಗೆ ಮಾಡುತ್ತಾ ಹೋದರೆ ಅದು ಕೊನೆಯೇ ಇಲ್ಲದ್ದು. ವಿಶೇಷವೆಂದರೆ ಅದರ ಬೆಲೆಯ ಸರಾಸರಿಯನ್ನು ಪರಿಗಣಿಸಿ ಬೇರೆ ಲೆಕ್ಕದಲ್ಲಿ ಬಳಸಿಕೊಂಡಾಗ ಮಾತ್ರ‌ ಗಣಿತ ಹಾಗೂ ವಿಜ್ಞಾನದ ಹಲವಾರು‌ ಲೆಕ್ಕಗಳಿಗೆ ಅತ್ಯಂತ ಸುಲಭವಾಗಿ ನಿಖರವಾದ ಹಾಗೂ ಪರಿಪೂರ್ಣವಾದ ಉತ್ತರ ದೊರೆಯಲು ಸಾಧ್ಯ! ಈ ಹಿನ್ನೆಲೆಯಲ್ಲಿ ತನಗೊಂದು ಪೂರ್ಣತೆ ಇಲ್ಲದ ಹೊರತಾಗಿಯೂ ಸರಾಸರಿ ಮೌಲ್ಯದ‌ ಮೂಲಕವೇ ಬೇರೆ ಲೆಕ್ಕಾಚಾರಗಳು ಹಾಗೂ‌ ಗಣಿತದ ಲೆಕ್ಕಗಳಿಗೆ ಪೂರ್ಣ ಉತ್ತರವನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸುವ ಈ ಪೈ ಪರೋಪಕಾರಿಯೇ ಸೈ!

- ಸಂದೇಶ್. ಎಚ್. ನಾಯ್ಕ್, ಹಕ್ಲಾಡಿ

ಇಜ್ಞಾನ Ejnana
www.ejnana.com