ಹೆನ್ರಿ ಫಿಲಿಪ್ಸ್ ರೂಪಿಸಿದ ವಿನ್ಯಾಸ
ಹೆನ್ರಿ ಫಿಲಿಪ್ಸ್ ರೂಪಿಸಿದ ವಿನ್ಯಾಸPhoto by 500photos.com from Pexels

ತಿರುಪು ಮೊಳೆಗೂ ಉಂಟು ತಂತ್ರಜ್ಞಾನದ ನಂಟು

ಸ್ಕ್ರೂ ವಿನ್ಯಾಸ ಸರಿಯಿಲ್ಲ ಎಂದು ಅದನ್ನಷ್ಟೇ ಗಮನಿಸದೆ ಈ ಆವಿಷ್ಕಾರ ಸ್ಕ್ರೂ ಡ್ರೈವರನ್ನೇ ಬದಲಿಸಿಬಿಟ್ಟಿತು!

ತಂತ್ರಜ್ಞಾನದ ಬಳಕೆ ಎಂದತಕ್ಷಣ ನಮಗೆ ನೆನಪಾಗುವ ಉದಾಹರಣೆಗಳಲ್ಲಿ ಯಂತ್ರಗಳಿಗೆ ಮೊದಲ ಸ್ಥಾನ. ಸಣ್ಣ ಕ್ಯಾಲ್ಕುಲೇಟರಿನಿಂದ ಬೃಹದಾಕಾರದ ರಾಕೆಟ್‌ವರೆಗೆ ಯಂತ್ರ ಯಾವುದೇ ಆಗಿದ್ದರೂ ಅವುಗಳ ರಚನೆ ಬಹಳ ಸಂಕೀರ್ಣವಾಗಿರುವುದು ಸಾಮಾನ್ಯ.

ಹಾಗೆಂದು ತಂತ್ರಜ್ಞಾನದ ಬಳಕೆ ಸಂಕೀರ್ಣ ವಿಷಯಗಳಿಗೆ ಮಾತ್ರ ಸೀಮಿತ ಎಂದು ಹೇಳಬಹುದೇ? ಖಂಡಿತಾ ಇಲ್ಲ. ಏಕೆಂದರೆ ಸಂಕೀರ್ಣ ಯಂತ್ರಗಳ ರಚನೆ ಹಾಗೂ ಕಾರ್ಯಾಚರಣೆಯಲ್ಲಿ ತಂತ್ರಜ್ಞಾನ ಹೇಗೆ ಸಹಾಯ ಮಾಡುತ್ತದೆಯೋ ಅದೇ ರೀತಿ ಬಹಳ ಸರಳವೆನಿಸುವ ಸಂಗತಿಗಳ ಹಿನ್ನೆಲೆಯಲ್ಲೂ ತಂತ್ರಜ್ಞಾನದ ಕೈವಾಡ ಇರುತ್ತದೆ. ಬಹಳಷ್ಟು ಸಾರಿ ಇದು ನಮ್ಮ ಗಮನಕ್ಕೇ ಬಂದಿರುವುದಿಲ್ಲ ಎಂದರೂ ಸರಿಯೇ!

ಇಂತಹ ಸರಳ ಸಂಗತಿಗಳಿಗೆ ತಿರುಪು ಮೊಳೆ, ಅರ್ಥಾತ್ ಸ್ಕ್ರೂ , ಒಂದು ಉತ್ತಮ ಉದಾಹರಣೆ. ಇವನ್ನು ಬಳಸದ ಯಂತ್ರಗಳೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ.

ನಿಜ, ತಿರುಪು ಮೊಳೆಗಳ ಬಳಕೆ ಶತಮಾನಗಳಷ್ಟು ಹಳೆಯ ಅಭ್ಯಾಸ. ಯಂತ್ರಗಳ ಯುಗ ಪ್ರಾರಂಭವಾಗುವ ಮೊದಲಿನಿಂದಲೂ ಅವುಗಳ ಬಳಕೆ ಇತ್ತು ಎಂದು ಇತಿಹಾಸ ಹೇಳುತ್ತದೆ. ಸಾಮಾನ್ಯ ಮೊಳೆಗಳಿಗಿಂತ ಇವು ಹೆಚ್ಚು ಪರಿಣಾಮಕಾರಿಯಾಗಿದ್ದರಿಂದಲೂ, ಇವನ್ನು ಬಳಸುವುದು ಬಲು ಸುಲಭವಾಗಿದ್ದರಿಂದಲೂ ಯಂತ್ರಗಳ ಬಳಕೆಯೊಡನೆ ತಿರುಪು ಮೊಳೆಗಳ ಬಳಕೆಯೂ ಹೆಚ್ಚಿತು.

ಜೋಡನೆಯ ಪ್ರಕ್ರಿಯೆಯನ್ನು ವಿವಿಧ ಹಂತಗಳಾಗಿ ನಿರ್ವಹಿಸುವ ಮೂಲಕ ಯಾವುದೇ ಉತ್ಪನ್ನವನ್ನು ಕ್ಷಿಪ್ರವಾಗಿ ಹಾಗೂ ಸಮರ್ಥವಾಗಿ ತಯಾರಿಸುವ ಪರಿಕಲ್ಪನೆಯನ್ನು ಅಸೆಂಬ್ಲಿ ಲೈನ್ ಎಂದು ಕರೆಯುತ್ತಾರೆ. ಈ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದ್ದು ಅಮೆರಿಕಾದ ಕಾರ್ ನಿರ್ಮಾತೃ ಹೆನ್ರಿ ಫೋರ್ಡ್. ಕಾರ್ ತಯಾರಿಕೆಯ ಉದಾಹರಣೆಯನ್ನೇ ತೆಗೆದುಕೊಂಡರೆ ಚಕ್ರಗಳನ್ನು ಒಬ್ಬರು, ಇಂಜಿನ್ ಅನ್ನು ಇನ್ನೊಬ್ಬರು, ಸೀಟುಗಳನ್ನು ಮತ್ತೊಬ್ಬರು ಒಂದರ ನಂತರ ಒಂದರಂತೆ ಜೋಡಿಸುತ್ತ ಹೋಗುವುದು ಈ ಪರಿಕಲ್ಪನೆಯ ಉದ್ದೇಶ. ಇಲ್ಲಿ ತಯಾರಾಗುತ್ತಿರುವ ಉತ್ಪನ್ನ ಒಬ್ಬರ ನಂತರ ಒಬ್ಬರ ಬಳಿಗೆ ಸಾಲಿನಲ್ಲಿ ಚಲಿಸುವುದರಿಂದ ಇದನ್ನು ಜೋಡಿಸುವ ಸಾಲು, ಅರ್ಥಾತ್ ಅಸೆಂಬ್ಲಿ ಲೈನ್ ಎಂದು ಕರೆಯುತ್ತಾರೆ.

ಅಸೆಂಬ್ಲಿ ಸಾಲಿನ ಭಾಗವಾದ ಯಾವುದೇ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ, ಸಾಧ್ಯವಾದಷ್ಟೂ ಬೇಗ ಮಾಡಿ ಮುಗಿಸಬೇಕಾದ್ದು ಅಗತ್ಯ. ಸಣ್ಣದೊಂದು ಸ್ಕ್ರೂ ಜೋಡಿಸುವ ಕೆಲಸವಾದರೂ ಸರಿಯೇ, ಅದಕ್ಕೆ ಅನಗತ್ಯವಾದ ಶ್ರಮವಾಗಲೀ ಸಮಯವಾಗಲೀ ವ್ಯಯವಾಗುವಂತಿರಬಾರದು.

ಆದರೆ ಸಾಮಾನ್ಯ ಸ್ಕ್ರೂ ಜೋಡಿಸುವಾಗ ಅನೇಕ ಸಮಸ್ಯೆಗಳು ಎದುರಾಗುವುದು ಸಾಧ್ಯ. ಅದರ ತಲೆಯ ಮೇಲೆ ಒಂದೇಒಂದು ಗೆರೆ ಇರುತ್ತದಲ್ಲ, ಸ್ಕ್ರೂ ಡ್ರೈವರಿನ ತುದಿ ಅದಕ್ಕೆ ಸರಿಯಾಗಿ ಹೊಂದಿಕೊಳ್ಳಬೇಕು. ಆನಂತರವೂ ಅಷ್ಟೇ, ಸ್ಕ್ರೂ ತಿರುಗಿಸುತ್ತಿರುವಾಗಲೇ ಸ್ಕ್ರೂ ಡ್ರೈವರು ಅದರಿಂದ ಜಾರಿಹೋಗಬಾರದು. ಸ್ಕ್ರೂ ಅನ್ನು ನಿರ್ದಿಷ್ಟ ಮಿತಿಗಿಂತ ಹೆಚ್ಚು ಬಿಗಿಗಿಳಿಸುವುದೂ ಸಾಧ್ಯವಾಗಬಾರದು. ನಿಮಿಷಕ್ಕಿಷ್ಟು, ಗಂಟೆಗಿಷ್ಟು ಎನ್ನುವ ಲೆಕ್ಕದಲ್ಲಿ ದೊಡ್ಡ ಸಂಖ್ಯೆಯ ಸ್ಕ್ರೂಗಳನ್ನು ಜೋಡಿಸುವಾಗ (ಒಂದು ಕಾರಿನಲ್ಲಿ ಒಟ್ಟು ಎಷ್ಟು ಸ್ಕ್ರೂಗಳಿರಬಹುದು ನೀವೇ ಯೋಚಿಸಿ!) ಇಂತಹ ಯಾವುದೇ ಪರಿಸ್ಥಿತಿ ಎದುರಾದರೂ ಅದು ಸಮಯ ವ್ಯರ್ಥವಾಗುವುದಕ್ಕೆ ಕಾರಣವಾಗುತ್ತದೆ. ಪದೇಪದೇ ಸರಿಪಡಿಸುವಂತಹ ಪರಿಸ್ಥಿತಿ ಬರುತ್ತಿದ್ದರೆ ಆ ಪ್ರಕ್ರಿಯೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸುವುದೂ (ಆಟೊಮೇಶನ್) ಸಾಧ್ಯವಾಗುವುದಿಲ್ಲ.

ಇದಕ್ಕೆ ಪರಿಹಾರವೇನು ಎಂದು ಸ್ವತಃ ಹೆನ್ರಿ ಫೋರ್ಡ್‌ರಿಂದ ಪ್ರಾರಂಭಿಸಿ ಹಲವರು ತಲೆಕೆಡಿಸಿಕೊಂಡಿದ್ದರು. ಕೆಲವರು ತಮಗೆ ತೋಚಿದಂತೆ ಬದಲಿ ವಿನ್ಯಾಸಗಳನ್ನೂ ರೂಪಿಸಿದ್ದರು. ಈ ಪೈಕಿ ಅತ್ಯಂತ ಗಮನಾರ್ಹ ಎನ್ನಬಹುದಾದದ್ದು ಹೆನ್ರಿ ಫಿಲಿಪ್ಸ್ ಎಂಬ ವ್ಯಕ್ತಿ ರೂಪಿಸಿದ ವಿನ್ಯಾಸ.

ತಿರುಪು ಮೊಳೆಯ ತಲೆಮೇಲೆ ಒಂದೇ ಒಂದು ಗೆರೆ ಇರುವ ಬದಲು ಇಂಗ್ಲಿಷಿನ ಎಕ್ಸ್‌ನಂತಹ ಗುರುತಿದ್ದರೆ ಸ್ಕ್ರೂ ಡ್ರೈವರಿನ ತುದಿಯನ್ನು ಅದಕ್ಕೆ ಹೊಂದಿಸಲು ಪರದಾಟವೇ ಇರುವುದಿಲ್ಲ ಎನ್ನುವುದನ್ನು ಆತ ಕಂಡುಕೊಂಡರು. ಸ್ಕ್ರೂ ಡ್ರೈವರನ್ನು ಹೇಗೆಯೇ ಹಿಡಿದರೂ ಅದು ಸ್ಕ್ರೂ ತಲೆಗೆ ಸುಲಭಕ್ಕೆ ಹೊಂದಿಕೊಳ್ಳುವಂತೆ ಮಾಡಲು ವಿಶೇಷ ವಿನ್ಯಾಸದ ಸ್ಕ್ರೂ ಡ್ರೈವರ್ ಕೂಡ ತಯಾರಾಯಿತು. ಇದರಲ್ಲಿ ಒಂದೇ ಅಡ್ಡಗೆರೆಯ ಬದಲು ಎಕ್ಸ್ ಗುರುತಿನಂತೆ ಕಾಣುವ ತುದಿ ಇದ್ದುದರಿಂದ ಇನ್ನೊಂದು ಸಮಸ್ಯೆಯೂ ದೂರವಾಯಿತು: ಬಿಗಿಯಾಗಿ ಕುಳಿತ ನಂತರವೂ ಸ್ಕ್ರೂ ತಿರುಗಿಸಿದರೆ ಸ್ಕ್ರೂಡ್ರೈವರಿನ ತುದಿ ತನ್ನಷ್ಟಕ್ಕೆ ತಾನೇ ಜಾರಿ ಹೊರಬಂದುಬಿಡುತ್ತದೆ!

ಕೇಳಲು ಬಹಳ ಸರಳ ಎನ್ನಿಸಿದರೂ ಹೆನ್ರಿ ಫಿಲಿಪ್ಸ್ ಆವಿಷ್ಕಾರ ತನ್ನ ಸರಳತೆಯಿಂದಾಗಿಯೇ ಅಗಾಧ ಜನಪ್ರಿಯತೆ ಪಡೆಯಿತು. ಇಂದಿಗೆ ಎಂಟು ದಶಕಗಳಿಗೂ ಹಿಂದೆ (೧೯೩೬ರ ಜುಲೈ ತಿಂಗಳಿನಲ್ಲಿ) ಪೇಟೆಂಟ್ ಪಡೆದುಕೊಂಡ, ಅದೇ ವರ್ಷ ಕ್ಯಾಡಿಲಾಕ್ ಕಾರಿನ ಮಾದರಿಯೊಂದರಲ್ಲಿ ಮೊದಲ ಬಾರಿಗೆ ಬಳಕೆಯಾದ ಈ ತಿರುಪು ಮೊಳೆಗೆ ಇಂದಿಗೂ 'ಫಿಲಿಪ್ಸ್ ಸ್ಕ್ರೂ' ಎಂದೇ ಹೆಸರು. ನಾವು ಸ್ಟಾರ್ ಸ್ಕ್ರೂ - ಸ್ಟಾರ್ ಸ್ಕ್ರೂ‌ಡ್ರೈವರ್ ಎಂದೆಲ್ಲ ಕರೆಯುತ್ತೇವಲ್ಲ, ಅದರಲ್ಲಿ ಬಳಕೆಯಾಗುವುದು ಇದೇ ವಿನ್ಯಾಸ.

ಅಂದಿನ ಅಸೆಂಬ್ಲಿ ಲೈನ್ ಸಮಸ್ಯೆ ಬಗೆಹರಿಸುವುದರಿಂದ ಪ್ರಾರಂಭಿಸಿ ಇಂದಿನ ರಿಪೇರಿ ಹವ್ಯಾಸಿಗಳ ಕೆಲಸ ಸುಲಭಗೊಳಿಸುವವರೆಗೆ ಫಿಲಿಪ್ಸ್ ಸ್ಕ್ರೂ ವಿನ್ಯಾಸ ಹಲವು ಸಾಧನೆಗಳನ್ನು ಮಾಡಿದೆ. ವಾಹನಗಳಲ್ಲಿ ಬಳಸುವ ಉದ್ದೇಶದಿಂದ ಸೃಷ್ಟಿಯಾದ ಈ ವಿನ್ಯಾಸ ಇದೀಗ ವಿಶ್ವದೆಲ್ಲೆಡೆ ಎಲ್ಲ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿದೆ. ಸ್ಕ್ರೂ ಡ್ರೈವರ್ ತುದಿಗೆ ಅಯಸ್ಕಾಂತೀಯ ಗುಣ ಸೇರಿಸಿ ಇದರ ಬಳಕೆಯನ್ನು ಇನ್ನಷ್ಟು ಸುಲಭಗೊಳಿಸುವ ಪ್ರಯತ್ನಗಳೂ ನಡೆದಿವೆ.

ಅಂದಹಾಗೆ ಈ ವಿನ್ಯಾಸ ಬರಿಯ ತಿರುಪು ಮೊಳೆಗಳಿಗೆ ಮಾತ್ರವೇ ಸೀಮಿತವಲ್ಲ. ಸ್ಕ್ರೂ ವಿನ್ಯಾಸ ಸರಿಯಿಲ್ಲ ಎಂದಾಗ ಬರಿಯ ಅದನ್ನಷ್ಟೇ ಗಮನಿಸದೆ ಸ್ಕ್ರೂ ಡ್ರೈವರನ್ನೇ ಬದಲಿಸಿದ ಈ ಆವಿಷ್ಕಾರ ಪ್ರಪಂಚವನ್ನು ಹೊಸದೊಂದು ದೃಷ್ಟಿಕೋನದಿಂದ ನೋಡುವ ಸಾಧ್ಯತೆಯನ್ನು ನಮಗೆ ತೋರಿಸುತ್ತದೆ. ಬಹಳ ಸಣ್ಣ ಸಂಗತಿಗಳೂ ದೊಡ್ಡ ಸಾಧನೆಗಳಲ್ಲಿ ಹೇಗೆ ಭಾಗಿಗಳಾಗಬಹುದು ಎನ್ನುವುದಕ್ಕೆ ಇದಕ್ಕಿಂತ ಸಣ್ಣ ಗಾತ್ರದ, ಇದಕ್ಕಿಂತ ದೊಡ್ಡದಾದ ಉದಾಹರಣೆ ಬೇರೊಂದು ಇರಲಿಕ್ಕಿಲ್ಲವೇನೋ!

ಜುಲೈ ೪, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com