ವಿಜ್ಞಾನ ಸಾಹಿತ್ಯ ಮತ್ತು ಪಂಜೆ ಮಂಗೇಶರಾಯರು
ಪಂಜೆಯವರು ಕನ್ನಡಕ್ಕೆ ಅನುವಾದಿಸಿದ್ದ 'ಪ್ರಾಣಿಶಾಸ್ತ್ರ' ಪಠ್ಯಪುಸ್ತಕಕೊಳ್ಳೇಗಾಲ ಶರ್ಮರ ಸಂಗ್ರಹದಿಂದ

ವಿಜ್ಞಾನ ಸಾಹಿತ್ಯ ಮತ್ತು ಪಂಜೆ ಮಂಗೇಶರಾಯರು

ಮಕ್ಕಳಿಗಾಗಿ ಪದ್ಯದ ಪುಸ್ತಕಗಳನ್ನು ಸಿದ್ಧಪಡಿಸಿದ ಹಾಗೆಯೇ ಅವರು ವಿಜ್ಞಾನದ ಪಠ್ಯಪುಸ್ತಕವನ್ನೂ ಕನ್ನಡಕ್ಕೆ ತಂದಿದ್ದರು ಎನ್ನುವ ವಿಷಯಕ್ಕೆ ಹೆಚ್ಚು ಪ್ರಚಾರ ದೊರೆತಿಲ್ಲ!

ಮಕ್ಕಳಿಗಾಗಿ ಬರೆದ ಕನ್ನಡದ ಹಿರಿಯರಲ್ಲಿ 'ಕವಿಶಿಷ್ಯ' ಪಂಜೆ ಮಂಗೇಶರಾಯರದು (೧೮೭೪-೧೯೩೭) ಪ್ರಮುಖ ಹೆಸರು. ಅವರು ಹೊಸಗನ್ನಡ ಬಾಲಸಾಹಿತ್ಯದ ಮೂಲಪುರುಷರೂ ಹೌದು. 'ಬರಲಿದೆ! ಅಹಹಾ! ದೂರದಿ ಬರಲಿದೆ' (ತೆಂಕಣ ಗಾಳಿಯಾಟ), 'ನಾಗರ ಹಾವೆ! ಹಾವೊಳು ಹೂವೆ!' (ಹಾವಿನ ಹಾಡು), 'ಮೂಡುವನು ರವಿ ಮೂಡುವನು' (ಉದಯ ರಾಗ), 'ತಾರಮ್ಮಯ್ಯ, ತಂದು ತೋರಮ್ಮಯ್ಯ!' (ಚಂದ್ರನನ್ನು ತಾ!) ಮುಂತಾದ ಪದ್ಯಗಳ ಮೂಲಕ ಅವರು ಇಂದಿಗೂ ಕನ್ನಡದ ಮಕ್ಕಳಿಗೆ ಆಪ್ತರೆನಿಸುತ್ತಾರೆ. ಪದ್ಯಗಳಷ್ಟೇ ಅಲ್ಲ, 'ಇಲಿಗಳ ಥಕ್ಕಥೈ', 'ಗುಡು ಗುಡು ಗುಮ್ಮಟ ದೇವರು', 'ಮೆಣಸಿನ ಕಾಳಪ್ಪ' ಮುಂತಾದ ಅವಿಸ್ಮರಣೀಯ ಮಕ್ಕಳ ಕತೆಗಳನ್ನು ಬರೆದವರೂ ಪಂಜೆಯವರೇ.

ಅಂದಹಾಗೆ ಕನ್ನಡದ ಮಕ್ಕಳಿಗೆ ಪಂಜೆ ಮಂಗೇಶರಾಯರ ಕೊಡುಗೆ ಬಾಲಸಾಹಿತ್ಯಕ್ಕೆ ಮಾತ್ರವೇ ಸೀಮಿತವೇನಲ್ಲ. ಇಂದಿಗೆ ನೂರು ವರ್ಷ ಹಿಂದೆಯೇ ಮಕ್ಕಳ ಶಿಕ್ಷಣ ವಿಚಾರದಲ್ಲಿ ಅವರ ದೃಷ್ಟಿ ಆಧುನಿಕವಾಗಿತ್ತು. ಆಟ ಪಾಟ ಕುಣಿತ ಚಿತ್ರ ಸಂಗೀತಗಳ ಸಹಾಯದಿಂದ ಮಕ್ಕಳಿಗೆ ವಿದ್ಯೆ ಕಲಿಸುವುದು ಉತ್ತಮ ಎಂದು ಭಾವಿಸಿದ್ದ ಅವರು ಅದನ್ನು ಕಾರ್ಯಗತಗೊಳಿಸುವುದಕ್ಕೂ ಅನೇಕ ಕೆಲಸಗಳನ್ನು ಮಾಡಿದರು. ಆಟ, ಹಾಡುಗಳ ಮೂಲಕ ಓದು, ಬರಹ, ಲೆಕ್ಕಗಳನ್ನು ಕಲಿಸುವ ಹೊಸ ವಿಧಾನವನ್ನು ಹಲವರ ವಿರೋಧದ ನಡುವೆಯೂ ಆ ಕಾಲದಲ್ಲೇ ಜಾರಿಗೆ ತಂದಿದ್ದು ಪಂಜೆಯವರ ಸಾಧನೆ. ಇದಕ್ಕೆ ಪೂರಕವಾಗಿ ಹಲವು ಪಠ್ಯಪುಸ್ತಕಗಳನ್ನೂ ಅವರು ಸಿದ್ಧಪಡಿಸಿದರು.

೧೯೧೦ರ ದಶಕದಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್‌ ವಿದ್ಯಾರ್ಥಿಗಳಿಗೆಂದು ಪ್ರಕಟಿಸಿದ ಕನ್ನಡ ಪದ್ಯಗಳ ಮೂರು ಪುಸ್ತಕಗಳನ್ನು ಪಂಜೆ ಮಂಗೇಶರಾಯರು ಸಂಪಾದಿಸಿದ್ದರು. ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳ ಸಾಲಿನಲ್ಲಿ ಈ ಪುಸ್ತಕಗಳಿಗೆ ವಿಶೇಷ ಸ್ಥಾನವಿದೆ. ಈ ಸಂಕಲನಗಳ ಮೂಲಕ ಮಕ್ಕಳಲ್ಲಿ ಕನ್ನಡ ಕವಿತೆಯನ್ನು ಓದುವ ಅಭಿರುಚಿಯನ್ನು ಬೆಳೆಸಲು ಅವರು ಪ್ರಯತ್ನಿಸಿದ್ದರು. ಮಕ್ಕಳಿಗಾಗಿ ಪದ್ಯದ ಪುಸ್ತಕಗಳನ್ನು ಸಿದ್ಧಪಡಿಸಿದ ಹಾಗೆಯೇ ಅವರು ವಿಜ್ಞಾನದ ಪಠ್ಯಪುಸ್ತಕವನ್ನೂ ಕನ್ನಡಕ್ಕೆ ತಂದಿದ್ದರು ಎನ್ನುವ ವಿಷಯಕ್ಕೆ ಹೆಚ್ಚು ಪ್ರಚಾರ ದೊರೆತಿಲ್ಲ. ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ 'ಪ್ರಾಣಿಶಾಸ್ತ್ರ' ಪಠ್ಯಪುಸ್ತಕ ಪ್ರಕಟವಾಗಿ ಈಗಾಗಲೇ ನೂರಾ ಎರಡು ವರ್ಷಗಳು ಸಂದಿವೆ!

ಖ್ಯಾತ ಲೇಖಕ ಡಾ. ಕೃಷ್ಣಾನಂದ ಕಾಮತರು ಸೆರೆಹಿಡಿದಿದ್ದ ಪಂಜೆ ಮಂಗೇಶರಾಯರ ಭಾವಚಿತ್ರ
ಖ್ಯಾತ ಲೇಖಕ ಡಾ. ಕೃಷ್ಣಾನಂದ ಕಾಮತರು ಸೆರೆಹಿಡಿದಿದ್ದ ಪಂಜೆ ಮಂಗೇಶರಾಯರ ಭಾವಚಿತ್ರ© K. L. Kamat / kamat.com

"ಪ್ರಪಂಚದಲ್ಲಿಯ ಪ್ರಾಣಿಗಳ ನಿವಾಸ, ಅಂಗರಚನೆ, ಆಹಾರ ಇವುಗಳಲ್ಲಿಯ ಪರಸ್ಪರ ಸಂಬಂಧವನ್ನು ತೋರಿಸಿಕೊಟ್ಟು, ಆಯಾ ಜಂತುಗಳ ಲಕ್ಷಣಗಳನ್ನೂ ಗುಣಸ್ವಭಾವಗಳನ್ನೂ ವ್ಯಕ್ತಗೊಳಿಸಿ, ಶಾಸ್ತ್ರೋಕ್ತ ರೀತಿಯಲ್ಲಿ ಪ್ರಾಣಿಗಳನ್ನು ಬೇರೆಬೇರೆ ವರ್ಗಗಳನ್ನಾಗಿ ಹೇಗೆ ವಿಂಗಡಿಸಬಹುದೆಂಬುದನ್ನು ಈ ಪುಸ್ತಕವು ಹೇಳಿಕೊಡುತ್ತದೆ" ಎನ್ನುವುದು ಕೃತಿಯ ಪ್ರಸ್ತಾವನೆಯಲ್ಲಿ ಪಂಜೆಯವರು ಹೇಳಿರುವ ಮಾತುಗಳು. "ಈ ಕನ್ನಡ ಅನುವಾದವು ಇಂಗ್ಲಿಷ್ ಬಾರದ ಕನ್ನಡಿಗರ ಮನಸ್ಸನ್ನು ಕೊಂಚ ಕದಲಿಸಿ ಸೃಷ್ಟಿಯ ಕಡೆಗೆ ಹರಿಯುವ ಹಾಗೆ ಮಾಡಿದರೆ, ಈ ಪುಸ್ತಕವನ್ನು ಪ್ರಕಟಿಸಿದ ಉದ್ದೇಶವು ನೆರವೇರುವುದು" ಎನ್ನುವ ಅವರ ಮಾತುಗಳು ವಿಜ್ಞಾನದ ವಿಷಯಗಳು ಕನ್ನಡದಲ್ಲೂ ದೊರಕಬೇಕೆನ್ನುವ ಅವರ ಆಶಯವನ್ನು ಸ್ಪಷ್ಟವಾಗಿ ನಿರೂಪಿಸುತ್ತವೆ.

ಮಕ್ಕಳ ಕಾವ್ಯಗಳು ಅವರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು ಎಂಬ ಖಚಿತ ಅಭಿಪ್ರಾಯ ಇಟ್ಟುಕೊಂಡಿದ್ದ ಪಂಜೆಯವರು ಅದೇ ಉದ್ದೇಶವನ್ನು ವಿಜ್ಞಾನವನ್ನು ಕನ್ನಡದಲ್ಲಿ ಹೇಳುವುದಕ್ಕೂ ವಿಸ್ತರಿಸಿಕೊಂಡಿರುವುದು ಗಮನಾರ್ಹ. "ಸವುದೆ ಉರಿದನಂತರ ಬೂದಿ ಉಳಿಯುವಂತೆ ಸಜೀವದೇಹಗಳಲ್ಲಿ ಶ್ವಾಸೋಚ್ಛಾಸವೂ ಪಚನಕಾರ್ಯವೂ ನಡೆದ ಬಳಿಕ ದೇಹಕ್ಕೆ ಹಾನಿಕರವಾದ ಅವಶೇಷಗಳು ಹಿಂದುಳಿಯುತ್ತವೆ. ಇವು ವಿಸರ್ಜನೆಯಾಗಬೇಕು" (ವಿಸರ್ಜನಾಂಗಗಳ ಬಗ್ಗೆ), "ಕಡಲ ಮೇಲಿನ ಹಡಗು ನೀರನ್ನು ವಿಂಗಡಿಸಿ ಹೋಗುವಂತೆ ಪಕ್ಷಿಯು ಅಂತರಿಕ್ಷದಲ್ಲಿ ವಾಯುವನ್ನು ಭೇದಿಸಿಕೊಂಡು ಹೋಗುತ್ತದೆ" (ಪಕ್ಷಿಗಳ ಬಗ್ಗೆ) ಮುಂತಾದ ಸಾಲುಗಳು ಅವರ ಈ ಪ್ರಯತ್ನದ ಪ್ರತೀಕಗಳಂತೆಯೇ ತೋರುತ್ತವೆ.

ಜೀವವಿಜ್ಞಾನ ಮಾತ್ರವೇ ಅಲ್ಲ, ಭೂಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ 'ಪ್ರಾಣಿಗಳೂ ಪ್ರದೇಶಗಳೂ' ಎನ್ನುವ ಪುಸ್ತಕವನ್ನು ಕೂಡ ಪಂಜೆಯವರು ರಚಿಸಿದ್ದರು (ಶ್ರೀ ಉದ್ಯಾವರ ಭವಾನಿಶಂಕರ ರಾಯರ ಸಹಾಯದೊಡನೆ). 'ವಿಚಿತ್ರ ಭೂಗೋಲ', 'ಆನೆಯೂ ಅದರ ಮನೆಯೂ', 'ನರ? ವಾನರ?', 'ಭೂಮಿ ಒಂದು ಗೋಲ' ಮುಂತಾದ ಅಧ್ಯಾಯಗಳಿರುವ ಈ ಪುಸ್ತಕದಲ್ಲೂ ಪಂಜೆಯವರ ಸರಳ ನಿರೂಪಣೆಯನ್ನು ನಾವು ಕಾಣಬಹುದು. ಆಫ್ರಿಕಾದ ಕಾಡುಗಳ ಬಗ್ಗೆ ಪ್ರಸ್ತಾಪಿಸುವಾಗ ಅವರು ನೀರಾನೆಯನ್ನು ಪರಿಚಯಿಸಿರುವುದು ಹೀಗೆ: "ಇಂಥ ಕಾಡುಗಳಲ್ಲಿ ಆನೆಮೊಸಳೆಗಳಷ್ಟೇ ಬಲಿಷ್ಠವಾದ ಇನ್ನೊಂದು ಪ್ರಾಣಿ ದೊರೆಯುತ್ತದೆ. ಅದಕ್ಕೆ ನೀರಾನೆ ಎನ್ನುತ್ತಾರೆ; ಆದರೆ ಅದಕ್ಕೆ ಸೊಂಡಿಲು ಇಲ್ಲ."

ಜನಸಾಮಾನ್ಯರಿಗೆ ವಿಜ್ಞಾನವನ್ನು ಪರಿಚಯಿಸುವ ಪ್ರಯತ್ನವನ್ನೂ ಪಂಜೆಯವರು ಮಾಡಿದ್ದರು ಎನ್ನುವುದು ಗಮನಾರ್ಹ ಸಂಗತಿ. 'ಸತ್ಯದೀವಿಕೆ'ಯೆನ್ನುವ ಪತ್ರಿಕೆಯಲ್ಲಿ ಅವರು ಬರೆದಿದ್ದ 'ಹಲ್ಲಿ' ಎಂಬ ಪ್ರಬಂಧ ಇದಕ್ಕೊಂದು ಉದಾಹರಣೆ. ಹಲ್ಲಿಯು ಕ್ರಿಮಿಕೀಟಗಳನ್ನು ಕೊಂದು ತಿನ್ನುವ ಬಗ್ಗೆ ಹೇಳುವಾಗ ಅವರು "ಹಲ್ಲಿಯು ಹೀಗೆ ಹುಳಗಳನ್ನು ಸಂಹರಿಸದಿದ್ದರೆ, ಕೀಟದ ಕಾಟವು ಮನೆಯಲ್ಲಿ ಎಷ್ಟಾಗುತ್ತಿತ್ತೋ, ಹೇಳಬರುವುದಿಲ್ಲ" ಎಂದೂ ಸೇರಿಸಿ ಅವುಗಳ ಉಪಕಾರವನ್ನು ನೆನಪಿಸಿದ್ದಾರೆ.

ಪಂಜೆ ಮಂಗೇಶರಾಯರನ್ನು 'ನಾಗರ ಹಾವೆ! ಹಾವೊಳು ಹೂವೆ!'ಯಂತಹ ಜನಪ್ರಿಯ ಪದ್ಯಗಳ ಮೂಲಕ ನೆನಪಿಸಿಕೊಳ್ಳುವುದು ಮಾತ್ರವೇ ಅಲ್ಲದೆ, ಸಂವಹನ ಮಾಧ್ಯಮಗಳು ಇಂದಿನಷ್ಟು ಮುಂದುವರೆದಿಲ್ಲದ ಕಾಲದಲ್ಲೇ ವಿಜ್ಞಾನವನ್ನು ಕನ್ನಡಕ್ಕೆ ತರಲು ಶ್ರಮಿಸಿದವರು ಎಂಬ ಕಾರಣಕ್ಕೂ ನೆನಪಿಸಿಕೊಳ್ಳಬೇಕಿದೆ. ಪಂಜೆ ಮಂಗೇಶರಾಯರಿಗಿದ್ದಂತಹ ಕೆಲಸಮಾಡುವ ಆಸಕ್ತಿ, ಕಾರ್ಯಶ್ರದ್ಧೆಗಳು ನಮಗೂ ಆದರ್ಶವಾಗಬೇಕಿದೆ.

'ಕುತೂಹಲಿ' ಆನ್‌ಲೈನ್ ಪತ್ರಿಕೆಯ ಜೂನ್ ೨೦೨೧ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com