ವಿಜ್ಞಾನ ವಿಚಾರಗಳಿಗೊಂದು ವಿಶೇಷ ದಿನ
Image by Pexels from Pixabay

ವಿಜ್ಞಾನ ವಿಚಾರಗಳಿಗೊಂದು ವಿಶೇಷ ದಿನ

ಫೆಬ್ರುವರಿ ೨೮ ರಾಷ್ಟ್ರೀಯ ವಿಜ್ಞಾನ ದಿನ
Published on

ಹಲವು ಅಡ್ಡಿ-ಆತಂಕಗಳ ನಡುವೆಯೂ ಗಮನಾರ್ಹ ಸಾಧನೆ ಮಾಡಿರುವುದು ಭಾರತೀಯ ವಿಜ್ಞಾನಿಗಳ ಹೆಗ್ಗಳಿಕೆ. ಈ ಕ್ಷೇತ್ರದಲ್ಲಿ ಭಾರತೀಯರ ಸಾಧನೆಗಳನ್ನು ಗೌರವಿಸುವುದರ ಜೊತೆಗೆ ವಿಜ್ಞಾನ ಶಿಕ್ಷಣವನ್ನೂ ವೈಜ್ಞಾನಿಕ ಮನೋಭಾವವನ್ನೂ ಪ್ರೋತ್ಸಾಹಿಸುವ ಸಂದರ್ಭವೇ ರಾಷ್ಟ್ರೀಯ ವಿಜ್ಞಾನ ದಿನ. ಪ್ರತಿವರ್ಷ ಫೆಬ್ರುವರಿ ೨೮ನೇ ತಾರೀಕಿನಂದು ನಾವು ಈ ದಿನವನ್ನು ಆಚರಿಸುತ್ತೇವೆ.

೧೯೨೮ರ ಫೆಬ್ರವರಿ ೨೮, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು 'ರಾಮನ್ ಪರಿಣಾಮ' ಎಂದೇ ಪ್ರಸಿದ್ಧವಾದ ತಮ್ಮ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ತಿಳಿಸಿದ ದಿನ. ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಚಟುವಟಿಕೆಗಳ ಪರಿಣಾಮವೇ ಈ ಅಪೂರ್ವ ಸಂಶೋಧನೆ. ಇದಕ್ಕಾಗಿ ಅವರಿಗೆ ೧೯೩೦ನೇ ಇಸವಿಯಲ್ಲಿ ನೋಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೋಬೆಲ್ ಪುರಸ್ಕಾರವೂ ಹೌದು.

ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ "ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ?" ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ಅವರು ಸೂರ್ಯನ ಬೆಳಕು ನೀರಿನ ಅಣುಗಳಿಂದ ಚದುರುವುದೇ ಇದಕ್ಕೆ ಕಾರಣವೆಂದು ಕಂಡುಕೊಂಡರು. ಇದೇ ಅಂಶ ಮುಂದೆ 'ರಾಮನ್ ಪರಿಣಾಮ'ದ ಸಂಶೋಧನೆಗೆ ಪ್ರೇರಣೆಯಾಯಿತು.

'ರಾಮನ್ ಪರಿಣಾಮ' ಸಂಶೋಧನೆಯ ವಿವರಗಳು ಪ್ರಕಟವಾದ ಫೆಬ್ರವರಿ ೨೮ನೇ ತಾರೀಕನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುವಂತೆ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು (ಎನ್‌ಸಿಎಸ್‌ಟಿಸಿ) ೧೯೮೬ರಲ್ಲಿ ಭಾರತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಅದರಂತೆ, ೧೯೮೭ ಫೆಬ್ರವರಿ ೨೮ರಂದು ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶಗಳಲ್ಲೊಂದು. 'ವಿಜ್ಞಾನದಲ್ಲಿ ಮಹಿಳೆ: ವಿಕಸಿತ ಭಾರತದ ವೇಗವರ್ಧನೆ' ಎನ್ನುವುದು ಈ ಬಾರಿಯ (೨೦೨೬) ವಿಜ್ಞಾನ ದಿನದ ಕೇಂದ್ರ ವಿಷಯ.

"ನಾವು ಎಚ್ಚರಿಕೆಯಿಂದ ಗಮನಿಸಿದಾಗ ಮತ್ತು ಪ್ರಾಮಾಣಿಕವಾಗಿ ಯೋಚಿಸಿದಾಗಲೇ ವಿಜ್ಞಾನದ ಆರಂಭ," ಎಂದು ರಾಮನ್ ಹೇಳಿದ್ದರಂತೆ. ಸುಳ್ಳುಸುದ್ದಿಗಳು, ಉತ್ಪ್ರೇಕ್ಷೆಗಳು, ಆಧುನಿಕ ಮೂಢನಂಬಿಕೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಇಂತಹ ಮಾತುಗಳು ನಮಗೆ ಸ್ಫೂರ್ತಿಯಾಗಬೇಕು. "ನಾವು ವಿಜ್ಞಾನವನ್ನು ಮಾತೃಭಾಷೆಯಲ್ಲೇ ಬೋಧಿಸಬೇಕು. ಇಲ್ಲದಿದ್ದರೆ ಅದು ಕೆಲವರಿಗಷ್ಟೇ ಸೀಮಿತವಾಗಿಬಿಡುತ್ತದೆ," ಎಂಬ ಅವರ ಮಾತುಗಳು ಎಲ್ಲರನ್ನೂ ವಿಜ್ಞಾನ ಸಾಕ್ಷರರನ್ನಾಗಿಸುವ ನಿಟ್ಟಿನಲ್ಲಿ ನಮ್ಮನ್ನು ಪ್ರೇರೇಪಿಸಬೇಕು.

logo
ಇಜ್ಞಾನ Ejnana
www.ejnana.com