ಅರಿಸ್ಟಾಟಲ್‌ನಂತಹ ತತ್ತ್ವಜ್ಞಾನಿ ಕೆಲವು ಪಕ್ಷಿಗಳು ತಮ್ಮ ಗರಿಹೊದಿಕೆಯ ಬಣ್ಣವನ್ನು ವಾರ್ಷಿಕವಾಗಿ ಬದಲಿಸುತ್ತವೆ ಎಂದುಕೊಂಡಿದ್ದನಂತೆ
ಅರಿಸ್ಟಾಟಲ್‌ನಂತಹ ತತ್ತ್ವಜ್ಞಾನಿ ಕೆಲವು ಪಕ್ಷಿಗಳು ತಮ್ಮ ಗರಿಹೊದಿಕೆಯ ಬಣ್ಣವನ್ನು ವಾರ್ಷಿಕವಾಗಿ ಬದಲಿಸುತ್ತವೆ ಎಂದುಕೊಂಡಿದ್ದನಂತೆImage by 💛 Passt gut auf euch auf und bleibt gesund! 💛 from Pixabay

ಪಕ್ಷಿಗಳ ವಲಸೆಯ ಪಕ್ಷಿನೋಟ

ಮೇ ಹಾಗೂ ಅಕ್ಟೋಬರ್ ತಿಂಗಳ ಎರಡನೇ ಶನಿವಾರವನ್ನು ವಿಶ್ವ ವಲಸೆ ಹಕ್ಕಿಗಳ ದಿನವೆಂದು ಆಚರಿಸಲಾಗುತ್ತದೆ

ಪಕ್ಷಿಗಳ ವಲಸೆಯನ್ನು ಅಧ್ಯಯನ ಮಾಡಲು ಅನೇಕ ಹೊಸ ವಿಧಾನಗಳು, ತಂತ್ರಜ್ಞಾನಗಳು ಬಂದಿರುವಂತಹ ಇಂದಿನ ದಿನಮಾನಗಳಲ್ಲಿಯೂ ಪರಿಣತ ಪಕ್ಷಿವೀಕ್ಷಕರಿಗೂ ಒಂದು ವಲಸೆ ಹಕ್ಕಿಯನ್ನು ನೋಡಿದಾಗ ಒಂದು ಕ್ಷಣ ವಿಸ್ಮಯವಾಗದಿರದು! ಅದೇ ಈ ವಿಷಯದ ಆಕರ್ಷಣೆ.

ಅರಿಸ್ಟಾಟಲ್‌ನಂತಹ ತತ್ತ್ವಜ್ಞಾನಿ ಕೆಲವು ಪಕ್ಷಿಗಳು ತಮ್ಮ ಗರಿಹೊದಿಕೆಯ ಬಣ್ಣವನ್ನು ವಾರ್ಷಿಕವಾಗಿ ಬದಲಿಸುತ್ತವೆ ಎಂದುಕೊಂಡಿದ್ದನಂತೆ. ಆದರೆ ಅದು ನಿಜವಾಗಿ ವಲಸೆಯಾಗಿತ್ತು. ವಲಸೆಯನ್ನು ಅರ್ಥ ಮಾಡಿಕೊಳ್ಳದಿದ್ದ ಕಾಲದಲ್ಲಿ ಕೆಲವು ಪಕ್ಷಿಗಳು ಚಂದ್ರನಲ್ಲಿಗೆ ಹೋಗುತ್ತವೆ, ಶಿಶಿರನಿದ್ರೆಗೆ (ಹೈಬರ್‍ನೇಷನ್) ಹೋಗುತ್ತವೆ ಎಂಬ ಕಲ್ಪನೆಗಳೂ ಇದ್ದುವು. ಪಕ್ಷಿಗಳು ಶಿಶಿರನಿದ್ರೆಗೆ ಹೋಗದಿದ್ದರೂ ಅದಕ್ಕೆ ಸಮೀಪದ ಸ್ಥಿತಿಗೆ ಹೊಗುವ ಕೆಲವು ಪ್ರಭೇದಗಳಿವೆ. ಆ ಸ್ಥಿತಿಯನ್ನು ಟೋಪರ್ (torpur) ಎನ್ನುತ್ತಾರೆ. ದೇಹದ ಕ್ರಿಯೆಗಳನ್ನು ಕನಿಷ್ಠಮಟ್ಟಕ್ಕಿಳಿಸಿಕೊಂಡು ಜೀವಿಸುವ ಸ್ಥಿತಿಯದು.

ಇಂದು ಪಕ್ಷಿಗಳ ವಲಸೆ ಸಾಕಷ್ಟು ಅರ್ಥವಾಗಿರುವ ಕಾಲ. ಬಹಳ ಮುಖ್ಯವಾಗಿ ಸಹಿಸಲಸಾಧ್ಯವಾದ ಹವಾಮಾನದ ಕಾಲವನ್ನು ಕಳೆಯಲು ವಲಸೆ ಹೋಗುತ್ತವೆ. ಮತ್ತೆ ಕೆಲವು ಮುಖ್ಯವಾಗಿ ಉತ್ತರಾರ್ಧಗೋಳದಲ್ಲಿ ಹುಳುಗಳ ಸಂತತಿ ಹಾಗೂ ಗಿಡಗಳು ಮೊಳೆಯುವ ಕಾಲದಲ್ಲಿ ಇನ್ನು ಉತ್ತರದ ಪ್ರದೇಶಗಳಿಗೆ ವಲಸೆ ಹೋಗಿ ಈ ಆಹಾರ ಸಮೃದ್ಧಿಯ "ಲಾಭ"ವನ್ನು ಪಡೆದುಕೊಳ್ಳುತ್ತವೆ. ಅಲ್ಲಿ ಆಹಾರದ ಪ್ರಮಾಣ ಕಡಿಮೆಯಾದ ಕೂಡಲೆ ದಕ್ಷಿಣದತ್ತ ಪ್ರಯಾಣ ಬೆಳಸುತ್ತವೆ.

ವಲಸೆಯ ಬಗ್ಗೆ ನಮಗೆ ಹೆಚ್ಚು ತಿಳಿಯುತ್ತಾ ಬಂದಿರುವುದು ಕೇವಲ ಕಳೆದ ನೂರು ವರ್ಷಗಳಲ್ಲಿ ಮಾತ್ರ. ತಿಳಿದಿರುವುದೂ ತೀರಾ ಅಲ್ಪವೇ. ಆದರೆ, ಈ ಚರ್ಚೆಗೆ ಎರಡು ಸಹಸ್ರಮಾನದ ಇತಿಹಾಸವಿದೆ.

ಹಿಂದೆ ವಲಸೆ ಹಕ್ಕಿಗಳನ್ನು ಅಧ್ಯಯನ ಮಾಡಲು ಹಕ್ಕಿಗಳನ್ನು ಹಿಡಿದು ಸಂಕೇತಾಕ್ಷರಗಳಿರುವ ಉಂಗುರಗಳನ್ನು ತೊಡಿಸಿ ಬಿಡುತ್ತಿದ್ದರು. ಅದು ಬೇರೆಡೆ ಸಿಕ್ಕಾಗ ಅದರ ಉಂಗುರದ ಮೇಲಿನ ಮಾಹಿತಿಯಿಂದಾಗಿ ಇದು ಇಂತಹ ಕಡೆಯಿಂದ ಬಂದ್ದದ್ದು ಎಂದು ತಿಳಿಯುತ್ತಿತ್ತು. ಇಂತಹ ಅಧ್ಯಯನಗಳಿಂದ ವಲಸೆ ಕುರಿತಾಗಿ ಅಗಾಧವಾದ ಮಾಹಿತಿಯನ್ನು ಕಲೆಹಾಕಲಾಗಿದೆ. ಕೆಲವು ವಲಸೆ ಹೋಗದೆಂದು ತಿಳಿಯಲಾಗಿದ್ದ ಹಕ್ಕಿಗಳಿಗೂ ಕುತೂಹಲಕ್ಕಾಗಿ ಉಂಗುರ ತೊಡಿಸಿದಾಗ ಅವು ಸಹ ವಲಸೆ ಹೋಗುವುದು ತಿಳಿದು ಬಂದು ವಿಜ್ಞಾನಿಗಳನ್ನು ಚಕಿತಗೊಳಿಸಿದೆ.

ಸಾವಿರಾರು ಮೈಲು ದೂರ ಸಾಗುವ ವಲಸೆ ಹಕ್ಕಿಗಳು ದಾರಿಯನ್ನು ಹೇಗೆ ಕಂಡುಕೊಳ್ಳುತ್ತವೆ ಎಂಬುದು ಶತಮಾನಗಳ ಕಾಲ ಒಂದು ಚಿದಂಬರ ರಹಸ್ಯವಾಗಿತ್ತು. ಈಗ ಅವು ನಕ್ಷತ್ರಗಳ ಚಿತ್ರಗಳನ್ನು ಬಳಸುತ್ತವೆ ಎಂಬುದು ತಿಳಿದಿದೆ. ಇದು ಸಂಕೀರ್ಣವೇ ಆದರೂ ಹಕ್ಕಿಗಳ ಮಿದುಳಲ್ಲಿ ಈ ವಿಶ್ಲೇಷಣೆ ಹೇಗೋ ನಡೆಯುತ್ತದೆ ಎನ್ನಲಾಗಿದೆ. ತಾರಾಲಯಗಳಂತಹ ವ್ಯವಸ್ಥೆಯನ್ನು ಪ್ರಯೋಗಶಾಲೆಗಳಲ್ಲಿ ಕಲ್ಪಿಸಿ ಇದನ್ನು ಪರೀಕ್ಷಿಸಲಾಗಿದೆ.

ಜಿಪಿಎಸ್‍ ತಂತ್ರಜ್ಞಾನದ ಬಳಕೆ

ಅಜ್ಜಿಯನ್ನು ಮನೆಗೆ ತಾನೆ ಹೋಗಿ ಬಿಟ್ಟುಬರಲಾಗದ ಮೊಮ್ಮಗ ಆಪ್ ಟ್ಯಾಕ್ಸಿ ಮಾಡಿ ಕಳಿಸಿಕೊಟ್ಟ. ಮನೆ ತಲುಪಿದ ಅಜ್ಜಿ ಮೊಮ್ಮಗನಿಗೆ ಕರೆ ಮಾಡಿ "ಮನೆಗೆ ಬಂದೇಪ್ಪಾ! ಥ್ಯಾಂಕ್ಯೂ!" ಎನ್ನಲು ಗೊತ್ತಾಯಿತಜ್ಜಿ, ನೀನು ಯಾವ ಯಾವ ರಸ್ತೆಯಲ್ಲಿ ಹೋದೆ ಎಂಬುದನ್ನೂ ನಾನು ಇಲ್ಲಿಂದಲೇ ನೋಡುತ್ತಿದ್ದೆ ಎಂದ ಮೊಮ್ಮಗ!

ಹಾಗೆಯೇ ಈಗ ಹಕ್ಕಿಗಳಿಗೆ ತೊಂದರೆಯಾಗದಂತಹ ಪುಟ್ಟ ಟ್ರಾನ್ಸಿವರ್‍ ಅನ್ನು ತೊಡಿಸಿ ಹಾರಿಬಿಡಲಾಗುತ್ತದೆ. ಅವು ಹಾರಿಹೋಗುವ ದಾರಿಯನ್ನು ಗುರುತಿಸಿ ಅವುಗಳ ನಕ್ಷೆಗಳನ್ನು ತಯಾರಿಸಲಾಗಿದೆ. ಇದರಿಂದಾಗಿ ಹಕ್ಕಿಗಳ ವಲಸೆಯ ಅಧ್ಯಯನ ಮತ್ತಷ್ಟು ವಿಸ್ತೃತವಾಗಿದೆ.

ವಿಶ್ವ ವಲಸೆ ಹಕ್ಕಿಗಳ ದಿನದ ಪೋಸ್ಟರ್
ವಿಶ್ವ ವಲಸೆ ಹಕ್ಕಿಗಳ ದಿನದ ಪೋಸ್ಟರ್worldmigratorybirdday.org

ವಲಸೆಯ ಕೆಲವು ವಿಲಕ್ಷಣ ಉದಾಹರಣೆಗಳು:

ಸಾಮಾನ್ಯವಾಗಿ ಹೇಳಲಾಗುವ ಆರ್ಟಿಕ್‍ ಟರ್ನ್ ಹಕ್ಕಿಯ ಧ್ರುವದಿಂದ ಧ್ರುವದ ವಲಸೆ ಎಲ್ಲರಿಗೂ ತಿಳಿದಿರುವುದೇ! ಆದರೆ, ಕೆಲವು ಚಕಿತಗೊಳಿಸುವ ಮಾಹಿತಿಯನ್ನು ಪಕ್ಷಿ ಅಧ್ಯಯನ ಸಂಸ್ಥೆಗಳು ಬಿಡುಗಡೆ ಮಾಡಿವೆ. ಕೆಲವನ್ನು ನೋಡಿ:

  • ನಮ್ಮನಿಮ್ಮ ಮನೆಯ ಸುತ್ತಮುತ್ತ, ಉದ್ಯಾನಗಳಲ್ಲಿ ಕಂಡುಬರುವ ಕೆನ್ನೀಲಿ ಸೂರಕ್ಕಿ (ಪರ್ಪಲ್ ಸನ್‍ಬರ್ಡ್). 1968 ಮಾರ್ಚ್‍ ತಿಂಗಳಲ್ಲಿ ಭರತಪುರದಲ್ಲಿ ಉಂಗುರ ತೊಡಿಸಿದ್ದು ಮೂರು ವರ್ಷದ ನಂತರ ಮುನ್ನೂರೈವತ್ತು ಕಿಲೋಮೀಟರ್ ಉತ್ತರದಲ್ಲಿ ಜಾರ್ಖಂಡಿನ ಡೆಹ್ರಾಡೂನ್‍ ಬಳಿ ಪತ್ತೆಯಾಗಿತ್ತು!

  • ಇಂದು ಮಾಯವಾಗುತ್ತಿರುವ ನಮ್ಮ ಗುಬ್ಬಿಗಳು (ಇವುಗಳ ಸಂಖ್ಯೆ ಹೆಚ್ಚುತಿದೆ ಎಂಬ ಸಂತೋಷದಾಯಕ ಸುದ್ದಿ ಸಂಶೋಧಕರ ವಲಯಗಳಲ್ಲಿ ಕ್ಷೀಣವಾಗಿಯಾದರೂ ಕೇಳಿಬರುತ್ತಿದೆ) ಸಹ ಹೀಗೆಯೇ ಭಾರತದ ಭರತ್‍ಪುರದಲ್ಲಿ ಉಂಗುರ ತೊಡಿಸಲಾಗಿದ್ದ ಇವು (ಒಟ್ಟು ಎಂಟು ಹಕ್ಕಿಗಳು) ರಷ್ಯಾ, ಕಜಕಿಸ್ಥಾನ ಮತ್ತು ತಜಿಕಿಸ್ಥಾನಗಳಲ್ಲಿ ಪತ್ತೆಯಾದವು! ಇದು 1962 - 75 ಮಾಹಿತಿ. ಹೀಗೆ ಚಕಿತಗೊಳಿಸುವ ಅನೇಕ ಮಾಹಿತಿಗಳಿವೆ. ಇವುಗಳ ಕೋಆರ್ಡಿನೇಟ್ಸ್‍ಗಳನ್ನು (ಸಹಜವಾಗಿಯೇ) ದಾಖಲಿಸಲಾಗಿದೆ.

ಉಪಗ್ರಹ ಹಾಗೂ ಜಿಯೋಲೊಕೇಟರ್‌ಗಳನ್ನು ಬಳಸಿ ಸಾಕಷ್ಟು ಅಧ್ಯಯನಗಳು ಇಂದು ನಡೆಯುತ್ತಿವೆ. ಆಸಕ್ತರು ಈ ಕ್ಷೇತ್ರದಲ್ಲೂ ತೊಡಗಿಕೊಳ್ಳಬಹುದು.

ಪ್ರತಿವರ್ಷ ಮೇ ತಿಂಗಳ ಎರಡನೇ ಶನಿವಾರ ಹಾಗೂ ಅಕ್ಟೋಬರ್ ತಿಂಗಳ ಎರಡನೇ ಶನಿವಾರಗಳನ್ನು ವಿಶ್ವ ವಲಸೆ ಹಕ್ಕಿಗಳ ದಿನವನ್ನಾಗಿ ಆಚರಿಸುತ್ತಾರೆ. ಅನೇಕ ಕಾರ್ಯಕ್ರಮಗಳು ಈ ದಿಸೆಯಲ್ಲಿ ನಡೆಯುತ್ತವೆ. ಈ ಕುರಿತು ಹೆಚ್ಚಿನ ವಿವರಗಳಿಗೆ ಈ ಜಾಲತಾಣವನ್ನು ನೋಡಬಹುದು.

Related Stories

No stories found.
logo
ಇಜ್ಞಾನ Ejnana
www.ejnana.com