ಮೌಂಟ್ ಎವರೆಸ್ಟ್‌ ಅನ್ನು ಪ್ರಪಂಚದ ಅತಿ ಎತ್ತರದ ಪರ್ವತವೆಂದು ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಒಬ್ಬ ಭಾರತೀಯ ಗಣಿತಜ್ಞ
ಮೌಂಟ್ ಎವರೆಸ್ಟ್‌ ಅನ್ನು ಪ್ರಪಂಚದ ಅತಿ ಎತ್ತರದ ಪರ್ವತವೆಂದು ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಒಬ್ಬ ಭಾರತೀಯ ಗಣಿತಜ್ಞImage by Free-Photos from Pixabay

ಎತ್ತರದ ಪರ್ವತದ ಎತ್ತರ ಅಳೆದ ಕತೆ

ಪ್ರಪಂಚದ ಅತಿ ಎತ್ತರದ ಪರ್ವತ ಎಂದ ತಕ್ಷಣ ನಮಗೆ ಮೌಂಟ್ ಎವರೆಸ್ಟ್ ನೆನಪಾಗುತ್ತದೆ. ಅಷ್ಟೆತ್ತರದ ಪರ್ವತವನ್ನು ಅಳೆದದ್ದು ಹೇಗೆ? ತುರುವೇಕೆರೆಯ ಗಣಿತ ಅಧ್ಯಾಪಕ ಕೃಷ್ಣ ಚೈತನ್ಯ ಬರೆದ ಈ ಲೇಖನ ಓದಿ!

೧೮೦೨ರಲ್ಲಿ ಭಾರತದಲ್ಲಿ ನೆಲೆಯೂರಿದ್ದ ಈಸ್ಟ್ ಇಂಡಿಯಾ ಕಂಪನಿ, ಭಾರತದ ಉದ್ದಗಲ ತಿಳಿಯುವ ಸಲುವಾಗಿ ಸರ್ವೆ ಕೆಲಸವನ್ನು ಪ್ರಾರಂಭಿಸಿತು. ಈ ಸರ್ವೆಯ ನೇತೃತ್ವ ವಹಿಸಿದ್ದು ವಿಲಿಯಂ ಲ್ಯಾಂಬ್ಟನ್ ಎಂಬ ಸೈನ್ಯಾಧಿಕಾರಿ. ಅಂದಿನ ಕಾಲದಲ್ಲಿ ಈಗಿನ ಹಾಗೆ ಜಿಪಿಎಸ್ ಇರಲಿಲ್ಲ. ಅದರ ಬದಲು ಅವರು ಗಣಿತದ ಮೊರೆಹೊಗಿ ತ್ರಿಕೋನಮಿತಿ ವಿಜ್ಞಾನವನ್ನು (ಟ್ರಿಗ್ನಾಮೆಟ್ರಿ) ಬಳಸಿದರು. ಹೀಗಾಗಿಯೇ ಆ ಸರ್ವೆಗೆ 'ಗ್ರೇಟ್ ಟ್ರಿಗ್ನಾಮೆಟ್ರಿಕಲ್ ಸರ್ವೆ' ಎಂಬ ಹೆಸರು ಬಂತು.

೧೮೦೨ ಎಪ್ರಿಲ್ ೧೦ ರಂದು ಆಗಿನ ಮದ್ರಾಸ್ ಬಳಿ ಬೇಸ್ ಲೈನ್ ಅಳತೆಯೊಂದಿಗೆ ಪ್ರಾರಂಭವಾದ ಈ ಸರ್ವೆ ೧೮೭೧ರಲ್ಲಿ, ಏಳು ದಶಕಗಳಷ್ಟು ಸುದೀರ್ಘ ಕಾಲದ ನಂತರ, ಮುಕ್ತಾಯವಾಯಿತು. ಈ ಸರ್ವೆ ಮಾಡಲು ದೇಶದೆಲ್ಲೆಡೆ ಹಲವಾರು ಬೇಸ್‌ಲೈನ್‌ಗಳನ್ನು ಗುರುತಿಸಲಾಯಿತು. ಇಂತಹ ಗುರುತುಗಳು ನಮ್ಮ ಕರ್ನಾಟಕದಲ್ಲೂ ಇದ್ದವು: ಹಾಸನದ ಸಮೀಪ ಬಿಸಲೆ ಹಾಗೂ ಬೆಂಗಳೂರು ಸಮೀಪದ ಹೆಣ್ಣೂರಿನಲ್ಲಿ ಇದರ ಕಲ್ಲುಗಳು ಇನ್ನೂ ಇವೆ ಎನ್ನುವುದು ವಿಶೇಷ.

ಮೌಂಟ್ ಎವರೆಸ್ಟ್‌ ಅನ್ನು ಪ್ರಪಂಚದ ಅತಿ ಎತ್ತರದ ಪರ್ವತವೆಂದು ಗುರುತಿಸಲಾಗಿದ್ದು ಗ್ರೇಟ್ ಟ್ರಿಗ್ನಾಮೆಟ್ರಿಕಲ್ ಸರ್ವೆಯ ಸಂದರ್ಭದಲ್ಲೇ. ಈ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸಿದ್ದು ಒಬ್ಬ ಭಾರತೀಯ ಗಣಿತಜ್ಞ ಎನ್ನುವುದು ಹೆಮ್ಮೆಯ ವಿಷಯ.

೧೮೩೧ರಲ್ಲಿ ಸರ್ವೆಯರ್ ಜನರಲ್ ಆಗಿದ್ದ ಜಾರ್ಜ್ ಎವರೆಸ್ಟ್, ಟ್ರಿಗ್ನಾಮೆಟ್ರಿಕಲ್ ಸರ್ವೆಯಲ್ಲಿ ತಮಗೆ ಜೊತೆಯಾಗಲು ಒಬ್ಬ ಸಮರ್ಥ ಗಣಿತಜ್ಞನನ್ನು ಹುಡುಕುತ್ತಿರುತ್ತಾರೆ. ಆ ಸಮಯದಲ್ಲಿ ಕೊಲ್ಕತ್ತದ ಹಿಂದೂ ಮಹಾವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಟೈಟ್ಲರ್ ರವರು ತಮ್ಮ ಶಿಷ್ಯ ರಾಧಾನಾಥ್ ಸಿಕ್ದರ್‌ರನ್ನು ಈ ಕೆಲಸಕ್ಕಾಗಿ ಶಿಫಾರಸ್ಸು ಮಾಡುತ್ತಾರೆ. ರಾಧಾನಾಥರಿಗೆ ಆಗಿನ್ನೂ ೧೯ ವರ್ಷ. ಆಗಲೇ ಅವರು ಟ್ರಿಗ್ನಾಮೆಟ್ರಿಕಲ್ ಸರ್ವೆಯನ್ನು ತಿಂಗಳಿಗೆ ಮೂವತ್ತು ರೂಪಾಯಿ ಸಂಬಳಕ್ಕೆ ಕಂಪ್ಯೂಟರ್ ಆಗಿ ಸೇರಿಕೊಳ್ಳುತ್ತಾರೆ.

ಗ್ರೇಟ್ ಟ್ರಿಗ್ನಾಮೆಟ್ರಿಕಲ್ ಸರ್ವೆ ಸ್ಮರಣಾರ್ಥ ಅಂಚೆ ಚೀಟಿ
ಗ್ರೇಟ್ ಟ್ರಿಗ್ನಾಮೆಟ್ರಿಕಲ್ ಸರ್ವೆ ಸ್ಮರಣಾರ್ಥ ಅಂಚೆ ಚೀಟಿ IndiaPost

ಜಾರ್ಜ್ ಎವರೆಸ್ಟ್ ನಿವೃತ್ತಿಯ ನಂತರ ಹೊಸ ಮುಖ್ಯಸ್ಥನ ಜೊತೆ ತಮ್ಮ ಕೆಲಸ ಮುಂದುವರೆಸಿದ ರಾಧಾನಾಥರು ಹಿಮಾಲಯದ ಕಡೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಆಗ Peak XV ಎಂದು ಕರೆಸಿಕೊಳ್ಳುತ್ತಿದ್ದ ಪರ್ವತದ ಬಗ್ಗೆ ದತ್ತಾಂಶ ಸಂಗ್ರಹಣೆ ಮಾಡಿದ ಅವರು ವಿಸ್ತೃತ ಅಧ್ಯಯನದ ನಂತರ ಅದೇ ಪ್ರಪಂಚದ ಅತಿ ಎತ್ತರದ ಪ್ರದೇಶ ಎಂಬ ತೀರ್ಮಾನಕ್ಕೆ ಬರುತ್ತಾರೆ. ತನ್ನ ಹಿಂದಿನ ಮೇಲಧಿಕಾರಿ ಜಾರ್ಜ್ ಎವರೆಸ್ಟ್‌‌ನನ್ನು ನೆನಪಿಸಿಕೊಳ್ಳಬೇಕೆನ್ನುವ ಇಂಗ್ಲಿಷ್ ಸಾಹೇಬನ ಹಂಬಲದಿಂದಾಗಿ ಆ ಪರ್ವತಕ್ಕೆ ಮೌಂಟ್ ಎವರೆಸ್ಟ್ ಎಂದು ಹೆಸರಿಡಲಾಗುತ್ತದೆ.

ಹೆಸರು ಏನೇ ಇರಲಿ ನಾವು ನಮ್ಮ ಹೆಮ್ಮೆಯ ಭಾರತೀಯ ಗಣಿತಜ್ಞ ರಾಧಾನಾಥ್ ಸಿಕ್ದರರ ಪರಿಶ್ರಮ, ಸಾಧನೆ ಹಾಗೂ ಕೊಡುಗೆಯನ್ನು ಮರೆಯುವ ಹಾಗಿಲ್ಲ. ಭಾರತೀಯ ಅಂಚೆ ಇಲಾಖೆಯು ೨೭ ಜೂನ್ ೨೦೦೪ರಂದು ಅವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ಗ್ರೇಟ್ ಟ್ರಿಗ್ನಾಮೆಟ್ರಿಕಲ್ ಸರ್ವೆಯಲ್ಲಿ ಮಹತ್ವದ ಪಾತ್ರ ವಹಿಸಿದ ಇನ್ನೊಬ್ಬ ಭಾರತೀಯ ನೈನ್ ಸಿಂಗ್ ರಾವತ್ ಅವರ ಬಗೆಗಿನ ಅಂಚೆಚೀಟಿಯೂ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಿದೆ.

- ಕೃಷ್ಣ ಚೈತನ್ಯ ತುರುವೇಕೆರೆ

Related Stories

No stories found.
logo
ಇಜ್ಞಾನ Ejnana
www.ejnana.com