ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿ
ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿkai Stachowiak / publicdomainpictures.net

ಮಹಿಳಾದಿನ ವಿಶೇಷ: ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳೋಣ

ಹೊರಗಡೆ ಕೆಲಸ ಮತ್ತು ಮನೆ ಕೆಲಸ ಎರಡೂ ನಿಭಾಯಿಸುವವರಿಗೆ ಮೊಬೈಲ್ ಆಪ್‌ಗಳು ಆಪದ್ಬಾಂಧವರಿದ್ದಂತೆ ಎನ್ನುತ್ತಾರೆ ಸಾಫ್ಟ್‌ವೇರ್ ಕ್ವಾಲಿಟಿ ತಜ್ಞೆ ಯಶಸ್ವಿನಿ

ಮೊಬೈಲ್ ಆಪ್‌ಗಳಿಂದ ಸಮಯ ಹಾಳು, ಕಿರಿಕಿರಿ ಎಂದು ಏನೆಲ್ಲ ದೂರಿದರೂ ಅವುಗಳಿಂದ ಅಷ್ಟೇ ಅನುಕೂಲವೂ ಇದೆ. ಹೊರಗಡೆ ಕೆಲಸ ಮತ್ತು ಮನೆ ಕೆಲಸ ಎರಡೂ ನಿಭಾಯಿಸಬೇಕಾಗಿರುವ ನನ್ನಂತಹವರಿಗೆ ಕೆಲವು ಆಪ್‌ಗಳು ವರದಾನವಾಗಿವೆ.

ಉದಾಹರಣೆಗೆ, ಬೆಳಿಗ್ಗೆ ನಮ್ಮ ಸಮಯಕ್ಕೆ ಸರಿಯಾಗಿ ಮನೆ ಬಾಗಿಲಿಗೆ ಹಾಲನ್ನು ತಲುಪಿಸುವ ಅನೇಕ ಆಪ್‌ಗಳು ಬೆಂಗಳೂರಿನಲ್ಲಿ ಲಭ್ಯವಿದೆ. ಅದೇ ರೀತಿ ಅಡಿಗೆಗೆ ಬೇಕಾಗುವ ದಿನ ಬಳಕೆಯ ತರಕಾರಿಗಳು, ಹಣ್ಣು ಎಲ್ಲವನ್ನೂ ನನ್ನ ಅಗತ್ಯಕ್ಕೆ ತಕ್ಕಂತೆ ವಾರಕೊಮ್ಮೆ ತರಿಸಿಕೊಳ್ಳಲೂ ಆಪ್‌ಗಳ ಸಹಾಯ ಪಡೆಯುತ್ತೇನೆ. ಮೂರು ನಾಲ್ಕು ಅಂಗಡಿಗಳಿಗೆ ಹೋಗಿ ತರಬೇಕಾದದ್ದೆಲ್ಲ ಒಂದೇ ಅಪ್‌ನಲ್ಲಿ ಸಿಗುವುದರಿಂದ ಸಮಯವೂ ಉಳಿತಾಯವಾಗುತ್ತದೆ. ಟ್ರಾಫಿಕ್ಕಿನಲ್ಲಿ ಅಂಗಡಿ ಸುತ್ತಬೇಕಾದ ಕಿರಿಕಿರಿಯೂ ತಪ್ಪುತ್ತದೆ. ಹೆಚ್ಚಿ, ಕೆಡದಂತೆ ಪ್ಯಾಕ್‌ ಮಾಡಿಟ್ಟ ತರಕಾರಿ, ತೆಂಗಿನ ತುರಿ ಕೂಡ ಅವಸರಕ್ಕೆ ಬೇಕೆಂದರೆ ಇಂತಹ ಆಪ್‌ಗಳ ಮೂಲಕ ಮನೆಗೆ ಬರುತ್ತವೆ. ಆಹಾರವಿಜ್ಞಾನದ ಬೆಳವಣಿಗೆಯಿಂದ ಸಾಧ್ಯವಾದ ಈ ಸವಲತ್ತು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ನಮಗೆ ಬೇಕಾದಾಗ ಸಿಗುವಂತಾಗಿದೆ.

ಅಡುಗೆ ಏನು ಮಾಡುವುದು ಎಂಬುದು ಅನೇಕರ ಪಾಲಿಗೆ ದೊಡ್ಡ ಪ್ರಶ್ನೆ. ಏನು ಮಾಡಬೇಕು ಎಂದು ತಿಳಿದರೆ ಅರ್ಧ ಕೆಲಸ ಮುಗಿದಂತೆ. ಇಡೀ ವಾರದ ಅಡುಗೆಯ ಯೋಜನೆ ತಯಾರಿಸುವುದಕ್ಕೂ ಆಪ್‌ಗಳಿವೆ. ಮಗಳ ಜೊತೆ ಕುಳಿತು ಇಡೀ ವಾರದ ಅಡುಗೆ ಯೋಜನೆ ತಯಾರಿಸುವುದು ನನಗೆ ಒಂದು ಖುಷಿಯ ಚಟುವಟಿಕೆ. ಸ್ವಲ್ಪವೇ ಸಮಯ ಬೇಡುವ ಇಂತಹ ಕೆಲಸಗಳು ಬೆಳಗ್ಗಿನ ಒತ್ತಡಗಳನ್ನು ಕಡಿಮೆ ಮಾಡುತ್ತವೆ.

ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಕಾರ್ ಪೂಲಿಂಗ್ ಆಪ್‌ಗಳು ಬಹಳ ಸಹಕಾರಿಯಾಗಿವೆ. ನಮ್ಮದೇ ದಾರಿಯಲ್ಲಿ ಪಯಣಿಸುವವರೊಂದಿಗೆ ಒಂದೇ ಕಾರಿನಲ್ಲಿ ಹೋಗುವುದನ್ನು ಇವು ಸಾಧ್ಯವಾಗಿಸುತ್ತವೆ. ಇದರಿಂದ ಅನೇಕರ ಪರಿಚಯವೂ ಆಗುತ್ತದೆ. ಮಹಿಳೆಯರ ಭದ್ರತೆಗೂ ಆದ್ಯತೆ ಕೊಟ್ಟಿರುವ ಕಾರಣ ಇಂತಹ ಬಹಳಷ್ಟು ಆಪ್‌ಗಳು ಸುರಕ್ಷಿತವೂ ಆಗಿವೆ. ನಾನು ಪಯಣಿಸುವ ದಾರಿಯಲ್ಲಿ ಅನೇಕ ಮಹಿಳಾ ಚಾಲಕರೇ ಕಾರ್ ಪೂಲಿಂಗ್ ಮಾಡುವುದರಿಂದ ಟ್ರಾಫಿಕ್ ಸಮಸ್ಯೆಯಿಂದ ಹಿಡಿದು ಮಕ್ಕಳ ಶಾಲೆ, ನಮ್ಮ ಆರೋಗ್ಯ ಮುಂತಾದ ಅನೇಕ ವಿಚಾರ ವಿನಿಮಯ ಕೂಡ ಸಾಧ್ಯವಾಗುತ್ತದೆ.

ಚಾರಣಕ್ಕೆ ಬೇಕಾದ ವ್ಯಾಯಾಮ ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೂ ಆಪ್‌ಗಳು ಸಹಾಯ ಮಾಡುತ್ತವೆ
ಚಾರಣಕ್ಕೆ ಬೇಕಾದ ವ್ಯಾಯಾಮ ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೂ ಆಪ್‌ಗಳು ಸಹಾಯ ಮಾಡುತ್ತವೆಲೇಖಕರ ಸಂಗ್ರಹದಿಂದ

ಶಾಪಿಂಗ್ ಮಾತ್ರವೇ ಅಲ್ಲದೆ ಮನೆಯ ಖರ್ಚುಗಳು, ನನ್ನ ಹಣಕಾಸು ಯೋಜನೆಗಳು, ಬ್ಯಾಂಕ್ ವ್ಯವಹಾರ ಎಲ್ಲವನ್ನೂ ಆಪ್‌ಗಳ ಸಹಾಯದಿಂದ ಸುಲಭವಾಗಿ ಮಾಡಿಕೊಳ್ಳುತ್ತೇನೆ. ವರ್ಷಕ್ಕೊಮ್ಮೆ ರಜೆ ತೆಗೆದುಕೊಂಡು ಸುದೀರ್ಘ ಚಾರಣಕ್ಕೆ ಹೋಗುವುದು ನನಗಿಷ್ಟ. ಅದಕ್ಕೆ ಬೇಕಾದ ವ್ಯಾಯಾಮ ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೂ ಆಪ್‌ಗಳು ನನಗೆ ಸಹಾಯ ಮಾಡುತ್ತವೆ.

ಇಷ್ಟೆಲ್ಲದರ ನಡುವೆ ಮನರಂಜನೆಯ ಕತೆ? ಈ ನಿಟ್ಟಿನಲ್ಲಿ ನಮ್ಮೂರಿನ ಟ್ರಾಫಿಕ್ ವರದಾನವೇ ಸರಿ. ಇತ್ತೀಚಿಗೆ ನಾನಂತೂ ನನ್ನ ಇಷ್ಟದ ಚಲನಚಿತ್ರಗಳು, ಧಾರಾವಾಹಿಗಳನ್ನು ದಿನದ ಓಡಾಟದ ವೇಳೆಯಲ್ಲಿಯೇ ಮೊಬೈಲಿನಲ್ಲಿ ನೋಡುತ್ತಿದ್ದೇನೆ. ಒಟ್ಟಿನಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡರೆ ನಮ್ಮ ಸಮಯ ಉಳಿತಾಯವಾಗುವುದಷ್ಟೇ ಅಲ್ಲ, ಒತ್ತಡರಹಿತ ಜೀವನವೂ ಸಾಧ್ಯವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.

- ಯಶಸ್ವಿನಿ ಸಾಫ್ಟ್‌ವೇರ್ ಕ್ವಾಲಿಟಿ ತಜ್ಞೆ

ಸರ್ವವ್ಯಾಪಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಸವಲತ್ತುಗಳನ್ನು ವಿವಿಧ ಕ್ಷೇತ್ರಗಳ ಮಹಿಳೆಯರು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಈ ನಿಟ್ಟಿನಲ್ಲಿ ವಿಚಾರವಿನಿಮಯ ಸಾಧ್ಯವಾಗಿಸುವುದು ಮಹಿಳಾದಿನದ ಅಂಗವಾಗಿ ಪ್ರಕಟವಾಗುತ್ತಿರುವ ಈ ಸರಣಿಯ ಉದ್ದೇಶ. ಇದೇ ವಿಷಯದ ಬಗ್ಗೆ ನಿಮ್ಮ ಅನುಭವವನ್ನೂ ಹಂಚಿಕೊಳ್ಳುವ ಆಸಕ್ತಿಯಿದ್ದರೆ ದಯಮಾಡಿ ನಮ್ಮ ಫೇಸ್‌ಬುಕ್ ಪುಟಕ್ಕೆ ಬನ್ನಿ!

Related Stories

No stories found.
logo
ಇಜ್ಞಾನ Ejnana
www.ejnana.com