ವಿಜ್ಞಾನ ಪ್ರಸಾರ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜೊತೆಗೂಡಿ ಪ್ರಾರಂಭಿಸಿರುವ 'ಕುತೂಹಲಿ' ಕನ್ನಡ ವಿಜ್ಞಾನ ಸಂವಹನ, ಪ್ರಚಾರ ಹಾಗೂ ವಿಸ್ತರಣೆಯ ಚಳುವಳಿಯ ಅಂಗವಾಗಿ ಈ ಮಾಸಪತ್ರಿಕೆ ಪ್ರಕಟವಾಗುತ್ತಿದೆ.
ವಿಜ್ಞಾನ ಪ್ರಸಾರ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜೊತೆಗೂಡಿ ಪ್ರಾರಂಭಿಸಿರುವ 'ಕುತೂಹಲಿ' ಕನ್ನಡ ವಿಜ್ಞಾನ ಸಂವಹನ, ಪ್ರಚಾರ ಹಾಗೂ ವಿಸ್ತರಣೆಯ ಚಳುವಳಿಯ ಅಂಗವಾಗಿ ಈ ಮಾಸಪತ್ರಿಕೆ ಪ್ರಕಟವಾಗುತ್ತಿದೆ. Kutuhali

ವಿಜ್ಞಾನ ಕುತೂಹಲಿಗಳಿಗೊಂದು ವಿಶಿಷ್ಟ ಪತ್ರಿಕೆ

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳು, ಆಯಾ ತಿಂಗಳ ವೈಶಿಷ್ಟ್ಯಗಳು ಸೇರಿದಂತೆ ಹಲವು ವಿಷಯಗಳು 'ಕುತೂಹಲಿ' ಮಾಸಿಕ ಜಾಲಪತ್ರಿಕೆಯಲ್ಲಿ ಆಕರ್ಷಕ ವಿನ್ಯಾಸದೊಡನೆ ಮೂಡಿಬರುತ್ತಿವೆ.

ವಿಜ್ಞಾನ-ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಮಾಹಿತಿ ನಮ್ಮ ಭಾಷೆಯಲ್ಲೇ ದೊರಕುವಂತಾಗಬೇಕು ಎನ್ನುವ ಅನಿಸಿಕೆಗೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಈ ಅನಿಸಿಕೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಹಲವು ಸಣ್ಣ-ದೊಡ್ಡ ಪ್ರಯತ್ನಗಳೂ ಈವರೆಗೆ ನಡೆದಿವೆ.

ಈಚಿನ ವರ್ಷಗಳಲ್ಲಿ ಇಂತಹ ಪ್ರಯತ್ನಗಳು ಹಿಂದಿಗಿಂತ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಇಂದಿನ ಕಾಲಕ್ಕೆ ತಕ್ಕಂತೆ ಈ ಪ್ರಯತ್ನಗಳು ಜಾಲತಾಣ, ಇ-ಬುಕ್, ವೀಡಿಯೊ, ಪಾಡ್‌ಕಾಸ್ಟ್ ಇತ್ಯಾದಿಗಳನ್ನು ಬಳಸಿಕೊಳ್ಳುವ ಮೂಲಕ ಮುದ್ರಣ ಮಾಧ್ಯಮದಿಂದ ಆಚೆಗೂ ವಿಸ್ತರಿಸಿಕೊಳ್ಳುತ್ತಿರುವುದು ವಿಶೇಷ.

ಇಂತಹುದೇ ಪ್ರಯತ್ನವೊಂದರ ಅಂಗವಾಗಿ 'ಕುತೂಹಲಿ' ಎಂಬ ವಿಜ್ಞಾನ ಜಾಲಪತ್ರಿಕೆ ಕಳೆದ ಹಲವು ತಿಂಗಳುಗಳಿಂದ ಕನ್ನಡದ ಓದುಗರಿಗೆ ಲಭ್ಯವಾಗುತ್ತಿದೆ. ನವದೆಹಲಿಯ ವಿಜ್ಞಾನ ಪ್ರಸಾರ್ ಹಾಗೂ ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜೊತೆಗೂಡಿ ಪ್ರಾರಂಭಿಸಿರುವ 'ಕುತೂಹಲಿ' ಎನ್ನುವ ಕನ್ನಡ ವಿಜ್ಞಾನ ಸಂವಹನ, ಪ್ರಚಾರ ಹಾಗೂ ವಿಸ್ತರಣೆಯ ಚಳುವಳಿಯ ಅಂಗವಾಗಿ ಈ ಮಾಸಪತ್ರಿಕೆ ಪ್ರಕಟವಾಗುತ್ತಿದೆ.

ಸದ್ಯ ಪಿಡಿಎಫ್‌ ಹಾಗೂ ಫ್ಲಿಪ್‌ ಬುಕ್‌ ರೂಪದಲ್ಲಿ ಉಚಿತವಾಗಿ ದೊರಕುತ್ತಿರುವ 'ಕುತೂಹಲಿ' ಪತ್ರಿಕೆಯನ್ನು ಮುಂದೆ ಇ-ಬುಕ್‌ನಂತಹ ಹೊಸ ರೂಪಗಳಲ್ಲಿ ಹಾಗೂ ಸಾಧ್ಯವಾದರೆ ಮುದ್ರಿತ ರೂಪದಲ್ಲೂ ಹೊರತರುವ ಉದ್ದೇಶ ವಿಜ್ಞಾನ ಪ್ರಸಾರ್‌ ನಿರ್ದೇಶಕರಾದ ಡಾ. ನಕುಲ್ ಪರಾಶರ್ ಅವರಿಗಿದೆ. ಡಾ. ಪರಾಶರ್ ಅವರು 'ಕುತೂಹಲಿ' ಪತ್ರಿಕೆಯ ಪ್ರಧಾನ ಸಂಪಾದಕರೂ ಹೌದು. ಕನ್ನಡದ ಹಿರಿಯ ವಿಜ್ಞಾನ ಸಂವಹನಕಾರ ಶ್ರೀ ಕೊಳ್ಳೇಗಾಲ ಶರ್ಮ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳು, ಆಯಾ ತಿಂಗಳ ವೈಶಿಷ್ಟ್ಯಗಳು ಸೇರಿದಂತೆ ಹಲವು ವಿಷಯಗಳು 'ಕುತೂಹಲಿ' ಪತ್ರಿಕೆಯಲ್ಲಿ ಆಕರ್ಷಕ ವಿನ್ಯಾಸದೊಡನೆ ಮೂಡಿಬರುತ್ತಿವೆ. ಪತ್ರಿಕೆಯ ಈವರೆಗಿನ ಸಂಚಿಕೆಗಳನ್ನು ವಿಜ್ಞಾನ ಪ್ರಸಾರ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜಾಲತಾಣಗಳಲ್ಲಿ ಓದಬಹುದು.

"ಹೊಸ ವಿಜ್ಞಾನ ಸಂವಹನಕಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಾಧ್ಯವಾದಷ್ಟೂ ಹೊಸಬರ ಬರಹಗಳನ್ನೇ ಪ್ರಕಟಿಸುವ ಪ್ರಯತ್ನ ನಮ್ಮ ತಂಡದ್ದು. ಲೇಖನಗಳನ್ನು ಬರೆಯಲು ಉತ್ಸಾಹವಿರುವವರು kutuhalikannada@gmail.com ಮೂಲಕ ನಮ್ಮನ್ನು ಸಂಪರ್ಕಿಸಬಹುದು" ಎಂದು ಸಂಪಾದಕ ಶ್ರೀ ಕೊಳ್ಳೇಗಾಲ ಶರ್ಮ ತಿಳಿಸಿದ್ದಾರೆ.

'ಕುತೂಹಲಿ' ಕನ್ನಡ ವಿಜ್ಞಾನ ಸಂವಹನ, ಪ್ರಚಾರ ಹಾಗೂ ವಿಸ್ತರಣೆಯ ಚಳುವಳಿಯ ಒಟ್ಟಾರೆ ಕಾರ್ಯಕ್ರಮದ ಅಂಗವಾಗಿ ಜಾಲಪತ್ರಿಕೆಯ ಪ್ರಕಟಣೆಯಷ್ಟೇ ಅಲ್ಲದೆ ಕನ್ನಡ ವಿಜ್ಞಾನ ಜಾಲಗೋಷ್ಠಿಗಳು, ವಿಜ್ಞಾನ ಬರೆವಣಿಗೆ ಮತ್ತು ಪತ್ರಿಕೋದ್ಯಮದ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಸಮಾವೇಶಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು 'ಕುತೂಹಲಿ'ಯ ಸಂಚಾಲಕ ಡಾ. ಟಿ. ವಿ. ವೆಂಕಟೇಶ್ವರನ್ ತಿಳಿಸಿದ್ದಾರೆ. ಈ ಕಾರ್ಯಕ್ರಮಗಳನ್ನು ಕುರಿತ ಹೆಚ್ಚಿನ ಮಾಹಿತಿಯನ್ನು ಇಜ್ಞಾನ ತಂಡ ಆಗಿಂದಾಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ.

Related Stories

No stories found.
logo
ಇಜ್ಞಾನ Ejnana
www.ejnana.com