ಕಾರಂತರು ರಚಿಸಿದ 'ವಿಜ್ಞಾನ ಪ್ರಪಂಚ' ಸಂಪುಟಗಳಲ್ಲೊಂದು
ಕಾರಂತರು ರಚಿಸಿದ 'ವಿಜ್ಞಾನ ಪ್ರಪಂಚ' ಸಂಪುಟಗಳಲ್ಲೊಂದುejnana.com

ವಿಜ್ಞಾನಲೋಕದಲ್ಲಿ ಕಾರಂತಜ್ಜ

ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿ, ಹಲವು ಅಡಚಣೆಗಳನ್ನು ಸಮರ್ಥವಾಗಿ ಎದುರಿಸಿ, ಅಪರೂಪದ ಕೃತಿಗಳನ್ನು ಹೊರತಂದ ಡಾ. ಕೆ. ಶಿವರಾಮ ಕಾರಂತರು ನಿಜಕ್ಕೂ ಒಬ್ಬ ದಾರ್ಶನಿಕರೇ ಸರಿ!

ಡಾ. ಕೆ. ಶಿವರಾಮ ಕಾರಂತರು (೧೯೦೨ - ೧೯೯೭) ನಮ್ಮ ನಾಡಿನ ಅಪೂರ್ವ ಸಾಧಕರಲ್ಲೊಬ್ಬರು. ಕಲೆ, ಸಾಹಿತ್ಯ, ಉದ್ಯಮ ಮುಂತಾದ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ವಿಶಿಷ್ಟ ಸಾಧನೆಗಳನ್ನು ಮಾಡಿದ ಪ್ರಯೋಗಶೀಲರು ಅವರು. ಜನಪ್ರಿಯ ಕಾದಂಬರಿಗಳು, ಪ್ರಬಂಧಗಳು, ಪ್ರವಾಸಕಥನಗಳನ್ನು ರಚಿಸಿದ ಹಾಗೆಯೇ ಅವರು ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

ತಾವು ವಿಜ್ಞಾನದ ಕಡೆಗೆ ಬಂದದ್ದು ಹೇಗೆಂದು ಸ್ವತಃ ಕಾರಂತರೇ ಒಂದುಕಡೆ ಹೇಳಿದ್ದಾರೆ ('ವಿಜ್ಞಾನ ಸಾಹಿತ್ಯ ನಿರ್ಮಾಣ', ಮೈಸೂರು ವಿವಿ, ೧೯೭೧). ಮಕ್ಕಳಿಗೆ ಗಣಿತವನ್ನು ಆಟದ ಮೂಲಕ ಹೇಳಿಕೊಡುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಅವರು ಹಲವು ಶಾಲೆಗಳಿಗೆ ಭೇಟಿ ಕೊಟ್ಟಿದ್ದರಂತೆ. ಅಲ್ಲಿ ಪಠ್ಯಪುಸ್ತಕ ಬಿಟ್ಟರೆ ಬೇರೆ ಯಾವ ಆಕರವೂ ಇರದಿರುವುದನ್ನು ನೋಡಿ ಬೇಸರಗೊಂಡ ಅವರು ವಿಜ್ಞಾನದ ವಿಷಯಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರಂತೆ. "ನಾನು ಪರರಿಗೆ ಹೇಳಬೇಕಾದರೆ ಮೊದಲು ನನಗೇ ಗೊತ್ತಿರಬೇಕಲ್ಲ; ಆದ್ದರಿಂದ ನನಗೆ ಗೊತ್ತಾಗಲೆಂದು ನಾನು ಮೊದಲು ಓದಲು ಹೊರಟೆ... ಹೆಚ್ಚಿಗೆ ಇವತ್ತಿನವರೆಗೂ, ಇವತ್ತೂ ನಾನು ಓದುತ್ತ ಇರುವುದು ವಿಜ್ಞಾನದ ಪುಸ್ತಕಗಳೇ," ಎಂದು ತಮ್ಮ ವಿಜ್ಞಾನದ ಓದಿನ ಕುರಿತು ಅವರು ಹೇಳಿರುವ ಮಾತುಗಳು ವಿಜ್ಞಾನ ಸಂವಹನಕಾರರಿಗೆ ಇಂದಿಗೂ ಪ್ರೇರಣಾದಾಯಕ.

ಕಾರಂತರ ಸತತ ಅಧ್ಯಯನದ ಫಲವಾಗಿ ಮೂರು ಸಂಪುಟಗಳ 'ಬಾಲಪ್ರಪಂಚ' ೧೯೩೦ರ ದಶಕದಲ್ಲಿ ಪ್ರಕಟವಾಯಿತು. ಈ ಸಂಪುಟಗಳಲ್ಲಿ ಇತರ ವಿಷಯಗಳ ಜೊತೆಗೆ ವಿಜ್ಞಾನಕ್ಕೂ ಮಹತ್ವದ ಸ್ಥಾನ ಕೊಟ್ಟಿದ್ದ ಕಾರಂತರು, ಇಪ್ಪತ್ತು ವರ್ಷಗಳ ನಂತರ 'ಈ ಜಗತ್ತು', 'ಜೀವ, ಜೀವನ', 'ವಸ್ತು, ಚೈತನ್ಯ', 'ವಿಜ್ಞಾನ ಸಾಧನ' ಎಂಬ ನಾಲ್ಕು ಸಂಪುಟಗಳ 'ವಿಜ್ಞಾನ ಪ್ರಪಂಚ'ವನ್ನೂ ರಚಿಸಿದರು. "ಭಾಷೆಯು ಆದಷ್ಟು ಸುಲಭವಾಗುವಂತೆ, ಕನ್ನಡದ ಬಳಕೆಯನ್ನು ಆದಷ್ಟು ಹೆಚ್ಚಿಸಿ, ಪಾರಿಭಾಷಿಕ ಶಬ್ದಗಳನ್ನು ತಿಳಿಯಾಗಿ ಪರಿವರ್ತಿಸಿ ಇಲ್ಲವೆ ಮೂಲದಂತೆ ಬಳಸಿ, ವಿಷಯವನ್ನು ಪ್ರತಿಪಾದಿಸಲು" ಪ್ರಯತ್ನಿಸಿದರು, "ವಾಚಕರ ಜ್ಞಾನತೃಷೆಯನ್ನು ಕಠಿಣ ಶಬ್ದಗಳಿಂದ ಅಂಜಿಸಬಾರದು" ಎಂದು ಹಂಬಲಿಸಿದರು. ಮಾಹಿತಿಯ ಲಭ್ಯತೆ ಇಂದಿನಷ್ಟು ಸುಲಭವಾಗಿರದಿದ್ದ ಕಾಲದಲ್ಲೇ, ಮೂಲತಃ ವಿಜ್ಞಾನದ ವಿದ್ಯಾರ್ಥಿಯಲ್ಲದ ಲೇಖಕರೊಬ್ಬರು ಇಂತಹುದೊಂದು ಸಾಧನೆ ಮಾಡಿದ್ದು ನಿಜಕ್ಕೂ ಅಪರೂಪದ ದಾಖಲೆ. ೧೯೬೪ರಲ್ಲಿ ಪ್ರಕಟವಾದ ವಿಜ್ಞಾನ ಪ್ರಪಂಚದ ಕೊನೆಯ ಸಂಪುಟದಲ್ಲಿ ಕಂಪ್ಯೂಟರುಗಳ ಬಗೆಗೂ ಒಂದು ಬರಹ ಇದೆ!

"ಯಾವಾಗಲೂ ಎಳೆಯರ ಶಿಕ್ಷಣ ಪದ್ಧತಿಯಲ್ಲಿ from the known to the unknown ಎಂಬ ಪದ್ಧತಿಯೇ ಸರಿಯಾದದ್ದು. ಅನೇಕ ವೈಜ್ಞಾನಿಕ ವಿಷಯಗಳನ್ನು ಪೀಠಿಕೆಯಲ್ಲಿಯೇ ತಂದು ವಿದ್ಯಾರ್ಥಿಯನ್ನು ಹೆದರಿಸುವ ಬದಲು ಅವನಿಗೆ ತಿಳಿದಿರುವ ವಿಷಯಗಳಿಂದ ತೊಡಗಿ ಮುಂದುವರಿಸಬೇಕು. ತೀರ್ಮಾನ ಅವನೇ ಮಾಡುವಂತೆ ಪ್ರೇರಿಸಬೇಕು. ಅವನ ಮಾತಿನಲ್ಲಿಯೇ ವಿವರಣೆ ಇದ್ದರೆ ಇದೇನೋ ಕುತೂಹಲಕಾರಿ ಆಗಿದೆಯಲ್ಲ ಎಂದೆನ್ನಿಸಬಹುದು." ಎನ್ನುವುದು ಮಕ್ಕಳಿಗಾಗಿ ಬರೆಯುವುದರ ಕುರಿತು ಕಾರಂತರ ಅಭಿಪ್ರಾಯವಾಗಿತ್ತು. ಮಕ್ಕಳಿಗಾಗಿ ತಮ್ಮ ಬರವಣಿಗೆಯಲ್ಲಿ ಅವರು ಈ ತಂತ್ರವನ್ನೇ ಬಳಸಿದರು. 'ತರಂಗ'ದಲ್ಲಿ ಪ್ರಕಟವಾಗುತ್ತಿದ್ದ 'ಬಾಲವನದಲ್ಲಿ ಕಾರಂತಜ್ಜ' ಪ್ರಶ್ನೋತ್ತರ ಅಂಕಣದಲ್ಲೂ ನಾವು ಇದನ್ನು ನೋಡಬಹುದಿತ್ತು.

ಮಕ್ಕಳಿಗೆ ವಿಜ್ಞಾನ ತಿಳಿಸುವುದಷ್ಟೇ ಅಲ್ಲದೆ ಒಟ್ಟಾರೆ ಮಕ್ಕಳ ಸಾಹಿತ್ಯದಲ್ಲೂ ಕಾರಂತರಿಗೆ ವಿಶೇಷ ಆಸಕ್ತಿಯಿತ್ತು. 'ಅಮರ ಚಿತ್ರ ಕಥೆ'ಗಾಗಿ ಅವರು ಹಲವು ಪುಸ್ತಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಲ್ಲದೆ, ಐಬಿಎಚ್ ಪ್ರಕಾಶನ ಮಕ್ಕಳಿಗಾಗಿ ಪ್ರಕಟಿಸಿದ 'ಇಕೋ' ಸರಣಿಯ ಪ್ರಧಾನ ಸಂಪಾದಕರಾಗಿಯೂ ಸೇವೆಸಲ್ಲಿಸಿದರು. ಹಕ್ಕಿಗಳ ವಲಸೆಯನ್ನು ವಿಷಯವಾಗಿಟ್ಟುಕೊಂಡು ಪತ್ರಕರ್ತೆ ಮಾರ್ಗರೇಟ್ ಭಾಟ್ಟಿ ಬರೆದ 'The Never-Never Bird' ಪುಸ್ತಕದ ಕನ್ನಡ ಅನುವಾದ, ಸ್ವತಃ ಕಾರಂತರೇ ಮಾಡಿದ್ದು, 'ಎಂದೆಂದೂ ಇಲ್ಲದ ಹಕ್ಕಿ' ಎಂಬ ಹೆಸರಿನಲ್ಲಿ ಇಕೋ ಸರಣಿಯಲ್ಲಿ ಪ್ರಕಟವಾಗಿತ್ತು.

ಪತ್ರಕರ್ತೆ ಮಾರ್ಗರೇಟ್ ಭಾಟ್ಟಿ ಬರೆದ 'The Never-Never Bird' ಪುಸ್ತಕದ ಕನ್ನಡ ಅನುವಾದ
ಪತ್ರಕರ್ತೆ ಮಾರ್ಗರೇಟ್ ಭಾಟ್ಟಿ ಬರೆದ 'The Never-Never Bird' ಪುಸ್ತಕದ ಕನ್ನಡ ಅನುವಾದejnana.com

ಪರಿಸರ ಹಾಗೂ ವನ್ಯಜೀವನ ಕೂಡ ಕಾರಂತರ ಆಸಕ್ತಿಯ ವಿಷಯಗಳಾಗಿದ್ದವು. ವಿಶ್ವವಿಖ್ಯಾತ ಪರಿಸರ ವಿಜ್ಞಾನಿ ರೇಚೆಲ್ ಕಾರ್ಸನ್‍ರ 'The Sea Around Us' ಕೃತಿಯನ್ನು ಅವರು 'ನಮ್ಮ ಸುತ್ತಲಿನ ಕಡಲು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ದೆಹಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್ ಪ್ರಕಟಿಸಿದ 'The State of India's Environment 1982' ಕೂಡ ಕಾರಂತರಿಂದ ಅನುವಾದಗೊಂಡು 'ಭಾರತದ ಪರಿಸರದ ಪರಿಸ್ಥಿತಿ' ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು. 'ಹಿರಿಯ ಕಿರಿಯ ಹಕ್ಕಿಗಳು', 'ಪ್ರಾಣಿಪ್ರಪಂಚದ ವಿಸ್ಮಯಗಳು', 'ಪ್ರಾಣಿಪ್ರಪಂಚ' - ಇವು, ಪರಿಸರ ಹಾಗೂ ವನ್ಯಜೀವನದ ಕುರಿತು ಕಾರಂತರು ಬರೆದ ಕೃತಿಗಳಿಗೆ ಇನ್ನಷ್ಟು ಉದಾಹರಣೆಗಳು.

ಅಂದಿನ ಕಾಲದಲ್ಲಿ ಮಾಹಿತಿ ಸಂಗ್ರಹಣೆಗೆ ಕಷ್ಟಪಟ್ಟ ಹಾಗೆಯೇ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸಂಗ್ರಹಿಸುವುದು ಹಾಗೂ ಮುದ್ರಿಸುವುದಕ್ಕೂ ಕಾರಂತರು ಕಷ್ಟಪಡಬೇಕಾಗಿ ಬಂದಿತ್ತು. ಈ ಕಷ್ಟದಿಂದ ಪಾರಾಗಲು ಅವರು 'ಪ್ರಾಣಿ ಪ್ರಪಂಚ' ಕೃತಿಯಲ್ಲಿ (೧೯೮೯) ಪ್ರಕಟವಾದ ಎಲ್ಲ ರೇಖಾಚಿತ್ರಗಳನ್ನೂ ತಾವೇ ಬರೆದರು! "... ಸುಮಾರು ನಾಲ್ಕು ನೂರು ಚಿತ್ರಗಳನ್ನು - ಬರೆದು, ಹರಿದು, ಬರೆದು, ಹರಿದು, ತಿರುಗಿ ಬರೆಯಲು ಹೊರಟೆ. ಪ್ರಕಟಣೆಯ ವೆಚ್ಚದ ದೃಷ್ಟಿಯಿಂದ ಅದು ಅನಿವಾರ್ಯವಾಗಿತ್ತು," ಎಂದು ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಇದು, ಓದುಗರಿಗೆ ಉಪಯುಕ್ತವಾಗಬಹುದಾದ ಮಾಹಿತಿಯನ್ನು ಹೇಗಾದರೂ ಮಾಡಿ ಅವರಿಗೆ ತಲುಪಿಸಲೇಬೇಕು ಎನ್ನುವುದರ ಬಗ್ಗೆ ಅವರಿಗಿದ್ದ ಬದ್ಧತೆಯ ಪ್ರತೀಕ. 'ವಿಜ್ಞಾನ ಪ್ರಪಂಚ' ಹೊರತರುವ ಸಂದರ್ಭದಲ್ಲೂ ಅವರು ಚಿತ್ರಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ದೇಶವಿದೇಶಗಳ ಹಲವು ಸಂಸ್ಥೆಗಳಿಂದ ಅವನ್ನು ಪಡೆದು ಪ್ರಕಟಿಸಿದ್ದರು ಎನ್ನುವುದು ವಿಶೇಷ.

ಸ್ವತಃ ವಿಜ್ಞಾನದ ವಿದ್ಯಾರ್ಥಿಯಲ್ಲದ ಕಾರಂತರ ಬರವಣಿಗೆಯಲ್ಲಿದ್ದ ಮಾಹಿತಿಯ ಬಗ್ಗೆ ಕೆಲವರ ಆಕ್ಷೇಪಗಳು ಅಂದಿಗೂ ಇದ್ದವು, ಇಂದಿಗೂ ಅಲ್ಲಲ್ಲಿ ಇವೆ. 'ಪ್ರಾಣಿ ಪ್ರಪಂಚ'ದ ಬಗ್ಗೆ ಇದ್ದ ಆಕ್ಷೇಪಗಳ ಬಗ್ಗೆ ಸ್ಪಷ್ಟನೆ ನೀಡುತ್ತ, "ಈ ನನ್ನ ಬರಹ ನನ್ನ ಸಂಶೋಧನೆಯ ಫಲವಲ್ಲ. ನಾನು ಜೀವ ವಿಜ್ಞಾನವನ್ನು ಕುರಿತು ಆಸಕ್ತ. ಹಲವು ವರ್ಷಗಳಿಂದ ಸಂಬಂಧಿಸಿದ ಗ್ರಂಥಗಳನ್ನು ತರಿಸಿ ಓದುತ್ತಿದ್ದು ಆ ತಜ್ಞರ ಬರವಣಿಗೆಯ ಸಾರವನ್ನು ಕನ್ನಡದ ಓದುಗರಿಗೆ ಕೊಡುತ್ತಿದ್ದೇನಷ್ಟೆ," ಎಂದು ಅವರು ಹೇಳಿದ್ದರು.

ಸಾಹಿತ್ಯ ರಚನೆ, ಮುದ್ರಣ, ಪ್ರಕಾಶನ, ಯಕ್ಷಗಾನ, ನಾಟಕ, ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಕಾರಂತರು ತಾವು ಮಾಡಿದ ಪ್ರತಿಯೊಂದು ಕೆಲಸದ ಬಗೆಗೂ ಅಪಾರ ಬದ್ಧತೆ ತೋರಿಸಿದವರು. ಶಾಲಾ ವಿದ್ಯಾರ್ಥಿಯೊಬ್ಬ ಪತ್ರ ಬರೆದರೂ ಅದಕ್ಕೆ ಪ್ರತ್ಯುತ್ತರ ಬರೆಯುವಷ್ಟು ಪ್ರೀತಿ ಇಟ್ಟುಕೊಂಡಿದ್ದವರು. ಕನ್ನಡದ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿ ದೊರಕುತ್ತಿಲ್ಲ ಎಂದು ಕಂಡುಕೊಂಡ ಕೂಡಲೇ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿ, ಹಲವು ಅಡಚಣೆಗಳನ್ನು ಸಮರ್ಥವಾಗಿ ಎದುರಿಸಿ, ಅಪರೂಪದ ಕೃತಿಗಳನ್ನು ಹೊರತಂದ ಕಾರಂತಜ್ಜ ನಿಜಕ್ಕೂ ಒಬ್ಬ ದಾರ್ಶನಿಕರೇ ಸರಿ!

'ಕುತೂಹಲಿ' ಆನ್‌ಲೈನ್ ಪತ್ರಿಕೆಯ ಸೆಪ್ಟೆಂಬರ್ ೨೦೨೧ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com