ನೂರು ವರ್ಷಗಳಿಗೂ ಮುನ್ನವೇ ವಿಜ್ಞಾನದ ಹಲವಾರು ಪಠ್ಯಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿದ್ದವು.

ನೂರು ವರ್ಷಗಳಿಗೂ ಮುನ್ನವೇ ವಿಜ್ಞಾನದ ಹಲವಾರು ಪಠ್ಯಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿದ್ದವು.

ejnana.com

ಕನ್ನಡ ವಿಜ್ಞಾನ ಪಠ್ಯಪುಸ್ತಕಗಳ ಶತಮಾನದ ಇತಿಹಾಸ

ನೂರು ವರ್ಷಗಳಿಗೂ ಮುನ್ನವೇ ವಿಜ್ಞಾನದ ಹಲವಾರು ಪಠ್ಯಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿದ್ದವು. ಸುಮ್ಮನೆ ಪ್ರಕಟವಾಗಿದ್ದಷ್ಟೇ ಅಲ್ಲ, ಇಂದಿನ ಪಠ್ಯಪುಸ್ತಕಗಳು ಹೇಗಿರಬಹುದು ಎನ್ನುವುದಕ್ಕೂ ಅವು ಮಾದರಿಯಾಗಿದ್ದವು!

ವಿಜ್ಞಾನ-ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನೂ ಕನ್ನಡದಲ್ಲೇ ಬೋಧಿಸುವುದು, ಕಲಿಯುವುದು ಸಾಧ್ಯವಾಗಬೇಕು ಎನ್ನುವುದು ಕನ್ನಡಿಗರೆಲ್ಲರ ಬಹುದಿನಗಳ ಆಶಯ. ಸಾಕಷ್ಟು ಸಮಯ ಬೇಡಿಕೆಯ ಹಂತದಲ್ಲೇ ಇದ್ದ ಈ ಕೆಲಸ ಈಗ, ನಿಧಾನವಾಗಿಯಾದರೂ, ಪ್ರಾರಂಭವಾಗಿರುವುದು ವಿಶೇಷ. ಎಂಜಿನಿಯರಿಂಗ್ ಪಾಠಗಳನ್ನು ಕನ್ನಡದಲ್ಲಿ ಕಲಿಯುವ ಅವಕಾಶ ಕಲ್ಪಿಸಲಾಗಿದ್ದನ್ನು, ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ರೂಪಿಸುವ ಕೆಲಸ ಪ್ರಾರಂಭವಾಗುತ್ತಿರುವುದನ್ನೂ ನಾವು ಈ ಬೆಳವಣಿಗೆಯ ಭಾಗವಾಗಿ ಗಮನಿಸಬಹುದು. ಪಠ್ಯಪುಸ್ತಕಗಳು ಕನ್ನಡದಲ್ಲಿ ದೊರೆತರೆ ಅದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲದೆ ಹೊಸದಾಗಿ ಇಂಗ್ಲಿಷ್ ಮಾಧ್ಯಮದತ್ತ ಬಂದಿರುವ ವಿದ್ಯಾರ್ಥಿಗಳಿಗೂ ಸಹಕಾರಿಯಾಗಬಲ್ಲದು. ಆ ದೃಷ್ಟಿಯಿಂದ ನೋಡಿದರೆ, ಈಗಿನ್ನೂ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವಿಜ್ಞಾನ-ತಂತ್ರಜ್ಞಾನಗಳನ್ನು ಓದುತ್ತಿಲ್ಲವೆಂದರೂ, ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಲಭ್ಯವಾಗುವಂತೆ ಮಾಡುವ ಕೆಲಸ ನಿಜಕ್ಕೂ ಉಪಯುಕ್ತ.

ಕೆಲಸ ಈಗ ನಡೆದಿದೆ ಎಂದಮಾತ್ರಕ್ಕೆ ವಿಜ್ಞಾನದ ಪಠ್ಯಪುಸ್ತಕಗಳು ಈ ಹಿಂದೆ ಕನ್ನಡದಲ್ಲಿ ಇರಲೇ ಇಲ್ಲ ಎಂದೇನೂ ಅರ್ಥವಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪ್ರೌಢಶಾಲೆಯವರೆಗೂ ಕನ್ನಡದ ಪಠ್ಯಪುಸ್ತಕಗಳನ್ನೇ ಓದುತ್ತಾ ಬಂದಿದ್ದಾರೆ. ಈಗ ಮಾತ್ರವಲ್ಲ, ನೂರು ವರ್ಷಗಳಿಗೂ ಮುನ್ನವೇ ವಿಜ್ಞಾನದ ಹಲವಾರು ಪಠ್ಯಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿದ್ದವು. ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದ 'ರೇಖಾಗಣಿತ' (೧೮೭೨), ಮಂಗಳೂರಿನ ಬಾಸೆಲ್ ಮಿಶನ್ ಪ್ರಕಟಿಸಿದ 'ಕೃಷಿಶಾಸ್ತ್ರದ ಮೊದಲನೆಯ ಪುಸ್ತಕ' (೧೯೦೫), ಮ. ರಾಮಬ್ರಹ್ಮ ಅವರು ಬರೆದು ಪ್ರಕಟಿಸಿದ 'ಸೃಷ್ಟಿವ್ಯಾಪಾರಗಳ ನಿರೀಕ್ಷಣೆ' (೧೯೨೧) ಮುಂತಾದ ಕೃತಿಗಳನ್ನು ನಾವು ಇಲ್ಲಿ ಉದಾಹರಿಸಬಹುದು. ಸುಮ್ಮನೆ ಪ್ರಕಟವಾಗಿದ್ದಷ್ಟೇ ಅಲ್ಲ, ಇಂದಿನ ಪಠ್ಯಪುಸ್ತಕಗಳು ಹೇಗಿರಬಹುದು ಎನ್ನುವುದಕ್ಕೂ ಅವು ಮಾದರಿಯಾಗಿದ್ದವು ಎಂದರೆ ತಪ್ಪಾಗಲಾರದು.

ಸರಕಾರ ಮಾತ್ರವಲ್ಲದೆ ಖಾಸಗಿ ವ್ಯಕ್ತಿಗಳೂ ನಿರ್ದಿಷ್ಟ ಪಠ್ಯಕ್ರಮಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಬರೆದು ಪ್ರಕಟಿಸಬಹುದಾದ ವ್ಯವಸ್ಥೆ ಅಂದು ಪ್ರಚಲಿತದಲ್ಲಿತ್ತು. ಪದವಿಪೂರ್ವ ಹಂತದವರೆಗೆ ಇತ್ತೀಚಿನವರೆಗೂ ಜಾರಿಯಲ್ಲಿದ್ದ ಈ ವ್ಯವಸ್ಥೆ ಪದವಿಯ ಹಂತದಲ್ಲಿ (ಭಾಷಾ ಪಠ್ಯಗಳನ್ನು ಹೊರತುಪಡಿಸಿ) ಇಂದಿಗೂ ಮುಂದುವರೆದಿದೆ. ಅಂದಿನ ವ್ಯವಸ್ಥೆಗೆ ಅನುಗುಣವಾಗಿಯೇ ಬರೆಯಲಾಗಿದ್ದ ಈ ಪುಸ್ತಕಗಳು ಪಠ್ಯಕ್ರಮ ಮಾತ್ರವಲ್ಲದೆ ವಿಷಯದ ನಿರೂಪಣೆ ಹಾಗೂ ವಿಸ್ತಾರದ ದೃಷ್ಟಿಯಿಂದಲೂ ಬಹಳ ಕುತೂಹಲಕರವೆನ್ನಿಸುತ್ತವೆ.

ಪಾರಿಭಾಷಿಕ ಪದಗಳ ಇಂಗ್ಲಿಷ್ ಮೂಲ ಹಾಗೂ ಅವುಗಳ ಕನ್ನಡ ರೂಪಾಂತರವನ್ನು ಒಟ್ಟುಸೇರಿಸಿ ಒಂದು ಪಟ್ಟಿಯಾಗಿ ಪ್ರಕಟಿಸಿದ್ದ ರೇಖಾಗಣಿತ ಪುಸ್ತಕದ ಕ್ರಮ ಕನ್ನಡದ ಪಠ್ಯಪುಸ್ತಕಗಳ ಮಟ್ಟಿಗೆ ಇಂದಿಗೂ ಅನುಕರಣೀಯ. ಅಷ್ಟೇ ಅಲ್ಲ, ಒಂದು ಹಂತದವರೆಗೆ ಕನ್ನಡದಲ್ಲಿ ವ್ಯಾಸಂಗ ಮಾಡಿ ಆನಂತರ ಇಂಗ್ಲಿಷ್ ಮಾಧ್ಯಮದತ್ತ ಹೊರಳುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಇದು ಉಪಯುಕ್ತವಾಗಬಲ್ಲದು.

ಬೋಧನೆಯ ಕುರಿತು ಈ ಪಠ್ಯಪುಸ್ತಕಗಳಲ್ಲಿದ್ದ ವಿಚಾರಗಳೂ ಬಹಳ ಉತ್ತಮವಾದವು. 'ಸೃಷ್ಟಿವ್ಯಾಪಾರಗಳ ನಿರೀಕ್ಷಣೆ' ಎಂಬ ಕೃತಿಯಲ್ಲಿ ಲೇಖಕರು ಹೇಳಿರುವ "ಪ್ರತಿಯೊಂದು ಶಾಲೆಯಲ್ಲಿ ಈ ವಿಷಯಗಳನ್ನು ಕಲಿಸುವದಕ್ಕೆ ಬೇಕಾದ ಯಂತ್ರ ಸಾಧನಗಳನ್ನು ತರಿಸಿಟ್ಟಿರಬೇಕು. ಮಕ್ಕಳು ಆಯಾ ಸೃಷ್ಟಿವ್ಯಾಪಾರಗಳನ್ನು ಪರೀಕ್ಷಿಸಿದ ನಂತರ ಈ ಪುಸ್ತಕವನ್ನು ಓದಬೇಕೇ ಹೊರತು ಇದನ್ನು ಬರೇ ಪಾಠ ಮಾಡಬಾರದು." ಎಂಬ ಮಾತುಗಳು ವಿಜ್ಞಾನದ ಬೋಧನೆ ಹೇಗಿದ್ದರೆ ಚೆಂದ ಎನ್ನುವುದರ ಪ್ರತಿಬಿಂಬದಂತಿವೆ.

ಶಾಲೆಯ ಹಂತದಲ್ಲಿ ನಿತ್ಯದ ಬದುಕಿಗೆ ಬೇಕಾದ ಕೌಶಲಗಳನ್ನೂ ಕಲಿಸುತ್ತಿದ್ದದ್ದು ಅಂದಿನ ಇನ್ನೊಂದು ವೈಶಿಷ್ಟ್ಯ. ವ್ಯವಸಾಯದ ಉದ್ದೇಶ, ಮಣ್ಣಿನ ವಿಧಗಳು, ನೀರನ್ನು ಕೂಡಿಡುವುದರ ಮುಖ್ಯತ್ವ, ಪಶುಸಂವರ್ಧನೆ ಮುಂತಾದ ಹಲವು ಮಾಹಿತಿಪೂರ್ಣ ಅಧ್ಯಾಯಗಳನ್ನು ನಾವು 'ಕೃಷಿಶಾಸ್ತ್ರದ ಮೊದಲನೆಯ ಪುಸ್ತಕ'ದಲ್ಲಿ ಓದಬಹುದು. "ಆಕಾಶದಿಂದ ಭೂಮಿಗೆ ಬೀಳುವ ಮಳೆನೀರಿಗೆ ವೆಚ್ಚವೇನೂ ಇಲ್ಲ. ಸಸಿಗಳಿಗೆ ಬಹು ಆವಶ್ಯಕವಾದ ಕೆಲವು ಪದಾರ್ಥಗಳನ್ನು ಮಳೆಯು ಭೂಮಿಗೆ ತರುತ್ತದೆ" ಎನ್ನುವಂತಹ ಸರಳ ವಿವರಣೆ ಮಾತ್ರವಲ್ಲದೆ ವ್ಯವಸಾಯಕ್ಕೆ ತಗುಲುವ ವೆಚ್ಚವನ್ನು ಸಮಗ್ರವಾಗಿ ಲೆಕ್ಕಹಾಕುವ ವಿಧಾನದಂತಹ ಸಂಕೀರ್ಣ ವಿಚಾರಗಳೂ ಈ ಪುಸ್ತಕದಲ್ಲಿವೆ.

ವಿಜ್ಞಾನ ವಿಷಯಗಳನ್ನು ಚಿತ್ರಗಳ ಸಹಾಯವಿಲ್ಲದೆ ಬೋಧಿಸುವುದು ಕಷ್ಟದ ಕೆಲಸ. ಈ ಕಷ್ಟವನ್ನು ದೂರಮಾಡುವ ಪ್ರಯತ್ನಗಳೂ ಆ ಕಾಲದಲ್ಲಿ ನಡೆದಿದ್ದವು. 'ಸರಳಾರೋಗ್ಯಶಾಸ್ತ್ರಸಂಬಂಧವಾದ ಚಿತ್ರಗಳು' (೧೯೨೧) ಎಂಬ ಪುಸ್ತಕ ಇಂತಹ ಪ್ರಯತ್ನಗಳಿಗೆ ಒಂದು ಉದಾಹರಣೆ. ಮಾನವ ದೇಹದ ಭಾಗಗಳು, ಮಾನವರನ್ನು ಬಾಧಿಸುವ ಕೀಟಗಳು ಸೇರಿದಂತೆ ಇದರಲ್ಲಿ ೩೨ ವಿಭಿನ್ನ ಚಿತ್ರಗಳಿವೆ. "ಒಂದು ತರಗತಿಯಲ್ಲಿ ಆರೋಗ್ಯಶಾಸ್ತ್ರಸಂಗತಿಗಳನ್ನು ವಿವರಿಸುತ್ತಿರುವಾಗ ಸಾಧಾರಣವಾಗಿ ಗೋಡೆಗೆ ತಗುಲುಹಾಕುವ ದೊಡ್ಡದೊಂದು ಚಿತ್ರಪಟವನ್ನು ಉಪಯೋಗಿಸುವುದು ವಾಡಿಕೆಯಾಗಿದೆ. ಇಂತಹ ಪಟವನ್ನು ಒದಗಿಸಿಕೊಳ್ಳಬೇಕಾದರೆ ಮೊದಲು ಹೆಚ್ಚು ಹಣವನ್ನು ವೆಚ್ಚಮಾಡಬೇಕಾಗುವುದೂ ಅಲ್ಲದೆ, ಅದನ್ನು ಕೆಟ್ಟುಹೋಗದಂತೆ ಇಟ್ಟುಕೊಂಡಿರುವುದಕ್ಕೆ ಬಹಳ ಪ್ರಯಾಸವಾಗುವುದು. ಇದೂ ಅಲ್ಲದೆ, ಅದೇ ಪಟವನ್ನು ಇತರ ತರಗತಿಗಳಲ್ಲೂ ಏಕಕಾಲದಲ್ಲಿ ಉಪಯೋಗಿಸಬೇಕಾಗಿ ಬಂದಾಗಲೂ, ಹತ್ತಿರದ ದೃಷ್ಟಿಯುಳ್ಳ ವಿದ್ಯಾರ್ಥಿಗಳಿಗೂ ಇತರರಿಗೂ ಕಾಣುವಂತೆ ನೇತುಹಾಕಬೇಕಾದಾಗಲೂ ಬಹಳ ತೊಂದರೆಯಾಗುವುದು. ಈ ಸಂಗತಿಗಳು ವಿದ್ಯಾಭ್ಯಾಸದಲ್ಲಿ ಉದ್ಯುಕ್ತರಾಗಿರುವ ಎಲ್ಲರಿಗೂ ತಿಳಿದೇ ಇರುವುವು. ಪಟಕ್ಕೆ ಬದಲಾಗಿ ಸಣ್ಣದಾಗಿರುವ ಚಿತ್ರಗಳ ಪುಸ್ತಕವೊಂದನ್ನು ಪ್ರತಿವಿದ್ಯಾರ್ಥಿಯೂ ತನ್ನ ಬಳಿಯಿಟ್ಟುಕೊಂಡಿರಲು ಸಾಧ್ಯವಾದರೆ, ಈ ತೊಂದರೆಗಳೆಲ್ಲವೂ ತಪ್ಪಿ ಆರೋಗ್ಯಶಾಸ್ತ್ರಬೋಧನೆಯು ಸುಲಭವಾಗುವುದು." ಎಂದು ಈ ಕೃತಿಯ ಉದ್ದೇಶವನ್ನು ಪೀಠಿಕೆಯಲ್ಲಿ ವಿವರಿಸಲಾಗಿದೆ.

ವಿಜ್ಞಾನದ ಪಠ್ಯಪುಸ್ತಕಗಳಷ್ಟೇ ಅಲ್ಲದೆ ಅವಕ್ಕೆ ಪೂರಕವಾಗಿ ಓದಬಹುದಾಗಿದ್ದ ಹಲವು ಪುಸ್ತಕಗಳೂ ಆಗಿನ ಕಾಲದಲ್ಲಿ ಪ್ರಕಟವಾಗಿದ್ದು ವಿಶೇಷ. ಕೆ. ಸೀತಾರಾಮಯ್ಯನವರ ಸಂಪಾದಕತ್ವದಲ್ಲಿ ಮದರಾಸಿನಿಂದ ಪ್ರಕಟವಾಗುತ್ತಿದ್ದ 'ಸುಜ್ಞಾನ ಗ್ರಂಥ ರತ್ನಾವಳಿ' ಎಂಬ ಮಾಲಿಕೆಯಲ್ಲಿ ವಿಜ್ಞಾನದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪರಿಚಯಾತ್ಮಕ ಪುಸ್ತಕಗಳು ಹೊರಬಂದಿದ್ದವು. ಈ ಪೈಕಿ ೧೯೧೮ರಲ್ಲಿ ಪ್ರಕಟವಾದ 'ಸಸ್ಯಶಾಸ್ತ್ರವು' ಎಂಬ ಕೃತಿಯಲ್ಲಿ ಕನ್ನಡದ ಪ್ರಾಣಿವಿಜ್ಞಾನ ಪರಿಚಯ ಈಗಾಗಲೇ ಪ್ರಕಟವಾಗಿರುವ ಹಾಗೂ ಭೌತವಿಜ್ಞಾನದ ಕೃತಿ ಮುಂದೆ ಪ್ರಕಟವಾಗಲಿರುವ ವಿಷಯ ಪ್ರಸ್ತಾಪವಾಗಿದೆ.

ಪಂಜೆ ಮಂಗೇಶರಾಯರು ಅನುವಾದಿಸಿದ 'ಪ್ರಾಣಿಶಾಸ್ತ್ರ' (೧೯೧೯) ಕೂಡ ಇದೇ ಸಾಲಿಗೆ ಸೇರುವ ಪುಸ್ತಕ. ಅದನ್ನು ಪಠ್ಯಪುಸ್ತಕವಾಗಿ ಬಳಸಲಾಗುತ್ತಿತ್ತೆಂದು ನಾವು ಊಹಿಸಬಹುದಾದರೂ, ಪಂಜೆಯವರು ಪ್ರಸ್ತಾವನೆಯಲ್ಲಿ ಹೇಳಿರುವ "ಇಂಗ್ಲಿಷ್ ಪುಸ್ತಕದ ಈ ಕನ್ನಡ ಅನುವಾದವು ಇಂಗ್ಲಿಷ್ ಬಾರದ ಕನ್ನಡಿಗರ ಮನಸ್ಸನ್ನು ಕೊಂಚ ಕದಲಿಸಿ ಸೃಷ್ಟಿಯ ಕಡೆಗೆ ಹರಿಯುವ ಹಾಗೆ ಮಾಡಿದರೆ, ಈ ಪುಸ್ತಕವನ್ನು ಪ್ರಕಟಿಸಿದ ಉದ್ದೇಶವು ನೆರವೇರುವುದು" ಎಂಬ ಮಾತುಗಳು ಜನಸಾಮಾನ್ಯರೂ ಆ ಪುಸ್ತಕವನ್ನು ಓದಬೇಕೆಂದಿದ್ದ ಅವರ ಆಶಯವನ್ನು ಸ್ಪಷ್ಟಪಡಿಸುತ್ತದೆ.

ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಎಚ್. ನಾರಾಯಣರಾವ್ ಅವರು ಬರೆದು, ಮಂಗಳೂರಿನ ಬಾಸೆಲ್ ಮಿಶನ್ ಪ್ರಕಟಿಸಿದ 'ಭೂಮಿಶಾಸ್ತ್ರವು' (ದ್ವಿತೀಯ ಮುದ್ರಣ, ೧೯೧೭) ಎಂಬ ಕೃತಿಯಲ್ಲಂತೂ ಅದು ಸಾಮಾನ್ಯ ಓದುಗರಿಗಾಗಿ ಬರೆದ ಪುಸ್ತಕ ಎಂಬ ವಿಷಯವನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ಪುಸ್ತಕದಲ್ಲಿರುವ ಬರಹಗಳು ೧೯೦೨ಕ್ಕೂ ಮುನ್ನ ಮಂಗಳೂರಿನ 'ಸುವಾಸಿನಿ' ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು ಎಂಬ ಅಂಶ ಕನ್ನಡದ ಜನಪ್ರಿಯ ವಿಜ್ಞಾನ ಸಾಹಿತ್ಯ ನಡೆದುಬಂದ ದಾರಿಯಲ್ಲಿ ಒಂದು ಮಹತ್ವದ ಹೆಜ್ಜೆಗುರುತು. ಸಾಮಾನ್ಯ ಓದುಗರಿಗೆಂದು ಬರೆಯಲಾಗಿದ್ದ ಈ ಪುಸ್ತಕ ಮುಂದೆ ಪಠ್ಯಪುಸ್ತಕವೂ ಆಗಿದ್ದು ಅದರ ಗುಣಮಟ್ಟದ ಸಾಕ್ಷಿ.

ಕೆ. ರಂಗಾಚಾರ್ಯರು ಮೊದಲು ತಮಿಳಿನಲ್ಲಿ ಬರೆದ ಸಸ್ಯವಿಜ್ಞಾನ ಕೃತಿಯ ಕನ್ನಡ ಅನುವಾದ 'ಓಷಧಿಶಾಸ್ತ್ರ' ಎಂಬ ಹೆಸರಿನಲ್ಲಿ ೧೯೦೯ರಲ್ಲಿ ಪ್ರಕಟವಾಯಿತು. ೨೩೨ ಚಿತ್ರಗಳಿರುವ ೩೦೦ಕ್ಕೂ ಹೆಚ್ಚು ಪುಟಗಳ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನ ಕನ್ನಡ ಪಂಡಿತರಾಗಿದ್ದ ಎಂ. ಡಿ. ಅಳಸಿಂಗಾಚಾರ್ಯರು. ಅವರು ತಮ್ಮ ಉಪೋದ್ಘಾತದಲ್ಲಿ ಹೇಳಿರುವುದು ಹೀಗೆ - "ಇಂಗ್ಲೀಷು ಭಾಷೆಯಲ್ಲಿ ಓಷಧಿಶಾಸ್ತ್ರ ಸಂಬಂಧವಾದ ಪುಸ್ತಕಗಳು ಅಪರಿಮಿತವಾಗಿದ್ದರೂ, ಅವೆಲ್ಲವೂ ಆ ದೇಶದ ಗಿಡಗಳ ಸ್ವರೂಪವನ್ನೇ ವಿಶೇಷವಾಗಿ ವಿಮರ್ಶಿಸುತ್ತಿರುವುವು. ನಮಗೆ ವಿಶೇಷವಾಗಿ ಬಳಕೆಯಲ್ಲಿರುವ ಗಿಡಗಳನ್ನು ಪರೀಕ್ಷಿಸಿ ತಿಳಿಯುವುದರಿಂದ ಶಾಸ್ತ್ರಜ್ಞಾನವನ್ನು ಪಡೆಯುವುದು ಸುಲಭವಾದುದರಿಂದ, ಇಂಗ್ಲೀಷು ಭಾಷೆಯಲ್ಲಿರುವ ಪುಸ್ತಕಗಳು ಇದ್ದ ಹಾಗೆಯೇ ಪರಿವರ್ತಿಸಲ್ಪಡದೆ, ನಮ್ಮ ದೇಶದಲ್ಲಿ ಪ್ರಚಾರದಲ್ಲಿರುವ ಗಿಡಗಳೇ ಇದರಲ್ಲಿ ಸಚಿತ್ರವಾಗಿ ನಿರೂಪಿಸಲ್ಪಟ್ಟಿವೆ."

ಇದು ಅಂದಿನ ಕಾಲದ ಲೇಖಕರು - ಅನುವಾದಕರು ತಮ್ಮ ಕೃತಿಗಳ ಬಗ್ಗೆ ತೋರಿರುವ ಕಾಳಜಿಯ ಸಣ್ಣದೊಂದು ಉದಾಹರಣೆ ಮಾತ್ರ. ಇಂತಹ ವಿಶೇಷ ಪ್ರಯತ್ನಗಳ ಫಲವಾಗಿ ಕೃಷಿ, ಜೀವವಿಜ್ಞಾನ, ಗಣಿತ ಮುಂತಾದ ಹಲವು ವಿಷಯಗಳನ್ನು ಕುರಿತ ವಿಸ್ತೃತ ಕೃತಿಗಳು ನೂರು ವರ್ಷಗಳಿಗೂ ಹಿಂದೆಯೇ ನಮ್ಮ ಭಾಷೆಯಲ್ಲಿ ಪ್ರಕಟವಾಗಿದ್ದು ನಮಗೆ ಹೆಮ್ಮೆ ಉಂಟುಮಾಡುವ ವಿಷಯವೇನೋ ಸರಿ. ಅದರ ಜೊತೆಗೆ, ಕಾಲಕ್ರಮೇಣ ಅಂತಹ ಪ್ರಯತ್ನಗಳು ನಿಂತುಹೋದದ್ದು ಏಕೆ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ಕೈಗೊಳ್ಳುವುದಕ್ಕೂ ಈ ಪಠ್ಯಪುಸ್ತಕಗಳ ನೆನಪು ಕಾರಣವಾಗಬೇಕು. ಎಲ್ಲ ವಿಷಯಗಳನ್ನೂ ಕನ್ನಡದಲ್ಲೇ ಬೋಧಿಸುವುದನ್ನು, ಕಲಿಯುವುದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಗಂಭೀರವಾಗಿ ಕೆಲಸಮಾಡುವುದು ಆಗಲಾದರೂ ನಮಗೆ ಸಾಧ್ಯವಾಗಬಹುದೇನೋ.

ನವೆಂಬರ್ ೨೦೨೧ರ 'ಕುತೂಹಲಿ' ಜಾಲಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ. ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ಬಹುತೇಕ ಪುಸ್ತಕಗಳ ಸಾಫ್ಟ್ ಪ್ರತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜಾಲತಾಣ ಹಾಗೂ ಇಂಟರ್‌ನೆಟ್ ಆರ್ಕೈವ್‌ನಲ್ಲಿ ಲಭ್ಯವಿವೆ.

Related Stories

No stories found.
logo
ಇಜ್ಞಾನ Ejnana
www.ejnana.com