ಜೆಆರ್‌ಎಲ್ ನೂರರ ನೆನಪು: ಪ್ರೊ. ಜೆ. ಆರ್. ಲಕ್ಷ್ಮಣರಾವ್ ನೂರು - ನೆನಪುಗಳು ನೂರಾರು
ಮಿತ್ರರೊಡನೆ ಪ್ರೊ. ಜೆ‌ಆರ್‌ಎಲ್ಜೆ. ಎಲ್. ಅನಿಲ್ ಕುಮಾರ್

ಜೆಆರ್‌ಎಲ್ ನೂರರ ನೆನಪು: ಪ್ರೊ. ಜೆ. ಆರ್. ಲಕ್ಷ್ಮಣರಾವ್ ನೂರು - ನೆನಪುಗಳು ನೂರಾರು

ಹಿರಿಯ ಪತ್ರಕರ್ತ-ಲೇಖಕ ಶ್ರೀ ಎನ್. ಎಸ್. ಶ್ರೀಧರಮೂರ್ತಿಯವರು ಪ್ರೊ. ಜೆ. ಆರ್. ಲಕ್ಷ್ಮಣರಾಯರ ಜೊತೆಗಿನ ತಮ್ಮ ಒಡನಾಟವನ್ನು ಈ ಲೇಖನದಲ್ಲಿ ಆತ್ಮೀಯವಾಗಿ ನೆನಪಿಸಿಕೊಂಡಿದ್ದಾರೆ.

ಪ್ರೊ.ಜೆ.ಆರ್.ಲಕ್ಷ್ಮಣರಾವ್ ಇದ್ದಿದ್ದರೆ ಇವತ್ತು (ಜನವರಿ 21, 2021) ನೂರು ವರ್ಷಗಳನ್ನು ಪೂರೈಸುತ್ತಿದ್ದರು. ಅವರು ತೀರಾ ಇತ್ತೀಚಿನವರೆಗೂ ನಮ್ಮ ಜೊತೆ ಇದ್ದರು ಕೂಡ. ಹೀಗಿದ್ದರೂ ವಿಜ್ಞಾನ ಬರವಣಿಗೆಗೆ ರಾಜ ಗೌರವ ತಂದು ಕೊಟ್ಟ ಅದಕ್ಕಾಗಿ ರಾಷ್ಟ್ರ ಮನ್ನಣೆಯನ್ನು ಕೂಡ ಪಡೆದ ಅವರ ಹೆಸರು ಹೆಚ್ಚಿನವರಿಗೆ ಅಪರಿಚಿತ. ಅಷ್ಟೇ ಅಲ್ಲ ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳೂ ಸೇರಿದಂತೆ ಅವರ ಶತಮಾನೋತ್ಸವದ ಕುರಿತು ಯಾರೂ ಅಷ್ಟಾಗಿ ತಲೆ ಕೆಡಿಸಿ ಕೊಂಡಂತಿಲ್ಲ.

ಪ್ರೊ. ಜೆ.ಆರ್.ಲಕ್ಷ್ನಣ ರಾವ್ ಅವರ ಹೆಸರು ನನ್ನ ಅರಿವಿನ ಪರಿಧಿಯೊಳಗೆ ಬಂದಿದ್ದು ನ‍ನ್ನ ತಂದೆಯವರಿಗೆ ಅವರು ಬರೆಯುತ್ತಿದ್ದ ಅಸಂಖ್ಯಾತ ಪತ್ರಗಳಿಂದ. ಹಾಗೆ ನೋಡಿದರೆ ಬಿ.ಜಿ.ಎಲ್.ಸ್ವಾಮಿ, ಎಂ.ಎ.ಸೇತುರಾವ್, ಜಿ.ಟಿ.ನಾರಾಯಣ ರಾವ್, ಆಡ್ಯನಡ್ಕ ಕೃಷ್ಣಭಟ್, ಶ್ರೀಮತಿ ಹರಿಪ್ರಸಾದ್, ಎಂ.ಎ.ಸವದತ್ತಿ, ಡಿ.ಆರ್.ಬಳೂರಗಿ, ಎನ್.ಎಸ್.ಶ್ರೀಗಿರಿ ನಾಥ್ ಸೇರಿದಂತೆ ಹಲವು ವಿಜ್ಞಾನ ಬರಹಗಾರರು ನನಗೆ ಪರಿಚಿತರಾಗಿದ್ದ ತಂದೆಯವರಿಗೆ ಬರೆಯುತ್ತಿದ್ದ ಪತ್ರಗಳಿಂದಲೇ. ಅಂದಿನ ಬಹುತೇಕ ವಿಜ್ಞಾನ ಬರಹಗಾರರೊಂದಿಗೆ ಅವರಿಗೆ ನಿಕಟ ಸಂಪರ್ಕ ಇತ್ತು. ಜೆ.ಆರ್.ಎಲ್ ವಾರಕ್ಕೆ ಕನಿಷ್ಟ ಮೂರು ಪತ್ರಗಳನ್ನಾದರೂ ಬರೆಯುತ್ತಿದ್ದರು. ಅದರಲ್ಲಿ ಕೇವಲ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಮಾತ್ರ ಇರುತ್ತಿರಲಿಲ್ಲ. ಸಾಹಿತ್ಯ, ಸಂಗೀತ ಹೀಗೆ ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಕುತೂಹಲಕರ ವಿಷಯಗಳು ಇರುತ್ತಿದ್ದವು. ಹೀಗಾಗಿ ಅವರ ಪತ್ರಗಳನ್ನು ನಾನು ಆಸಕ್ತಿಯಿಂದ ಓದುತ್ತಿದ್ದೆ. ಒಂದು ರೀತಿಯಲ್ಲಿ ಅವು ನನ್ನ ಬರವಣಿಗೆಗೆ ಮೊದಲ ಪಾಠಗಳಂತೆ ಇದ್ದವು.

ಹೀಗೆ ಪತ್ರರೂಪಿಯಾಗಿ ಪರಿಚಿತರಾಗಿದ್ದ ಲಕ್ಷ್ಮಣ ರಾಯರು ನನ್ನ ತಂದೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕವನ್ನು ಹರಿಹರಪುರದಲ್ಲಿ ಸ್ಥಾಪಿಸಿದಾಗ ನಮ್ಮ ಮನೆಗೂ ಬಂದರು. ಉದ್ಘಾಟನೆಯಲ್ಲಿ ಅವರು ಸೊಗಸಾದ ಉಪನ್ಯಾಸವನ್ನೂ ಕೊಟ್ಟರು, ನಮ್ಮ ಪುಟ್ಟ ಮನೆಯಲ್ಲಿ ಸರಳವಾಗಿ ಹೊಂದಿಕೊಂಡು ಎಲ್ಲರ ಜೊತೆ ಅವರವರ ಆಸಕ್ತಿಗೆ ತಕ್ಕಂತೆ ಮಾತನಾಡುತ್ತಾ ಮನಸ್ಸಿಗೂ ಬಂದುಬಿಟ್ಟರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಬಾಲವಿಜ್ಞಾನ ನಮ್ಮ ತಂದೆಯವರ ಆಸಕ್ತಿಯ ಕ್ಷೇತ್ರಗಳೂ ಆಗಿದ್ದರಿಂದ ಲಕ್ಷ್ಮಣ ರಾಯರ ಒಡನಾಟವೂ ಬೆಳೆಯಿತು. ನಮ್ಮ ಪಾಲಿಗೆ ಅವರು ಮನೆಯ ಹಿರಿಯರಂತೆ ಆಗಿಬಿಟ್ಟರು.

ಸಮಾರಂಭವೊಂದರಲ್ಲಿ ಪ್ರೊ. ಎಚ್. ನರಸಿಂಹಯ್ಯನವರೊಡನೆ ಪ್ರೊ. ಜೆಆರ್‌ಎಲ್
ಸಮಾರಂಭವೊಂದರಲ್ಲಿ ಪ್ರೊ. ಎಚ್. ನರಸಿಂಹಯ್ಯನವರೊಡನೆ ಪ್ರೊ. ಜೆಆರ್‌ಎಲ್ಜೆ. ಎಲ್. ಅನಿಲ್ ಕುಮಾರ್

ನಾನು ಪತ್ರಿಕೋದ್ಯಮಕ್ಕೆ ಬಂದ ಮೇಲೆ ನನ್ನ ತಂದೆಯವರ ಅಪೇಕ್ಷೆಯ ಮೇರೆಗೆ ‘ಮಲ್ಲಿಗೆ ಮಾಸ ಪತ್ರಿಕೆ’ಯಲ್ಲಿ ಬಾಲವಿಜ್ಞಾನಕ್ಕೆ ಇಪ್ಪತ್ತು ವರ್ಷ ತುಂಬಿದಾಗ ಒಂದು ಮುಖಪುಟ ಲೇಖನ ಮಾಡಿದೆ. ಆಗ ಲಕ್ಷ್ಮಣ ರಾವ್ ಸಾಕಷ್ಟು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. 2000ನೇ ಇಸವಿಯಲ್ಲಿ ಶತಮಾನದ ಬೆಳವಣಿಗೆಗಳನ್ನು ವಿವಿಧ ಕ್ಷೇತ್ರದ ಸಾಧಕರಿಂದ ಮಾಡಿಸುವ ಯೋಜನೆ ರೂಪಿಸಿದೆ. ಆಗ ವಿಜ್ಞಾನ ಕ್ಷೇತ್ರದ ಬೆಳವಣಿಗೆಗಳ ಕುರಿತು ಲಕ್ಷ್ಮಣ ರಾಯರನ್ನು ಕೇಳಿದೆ. ಅವರು ಬರೆಯುವುದಕ್ಕಿಂತ ನನಗೆ ಹೇಳುವುದು ಸುಲಭ ಎಂದಿದ್ದರಿಂದ ಅವರ ಮೈಸೂರಿನ ಮನೆಯಲ್ಲಿ ಉಕ್ತ ಲೇಖನ ತೆಗೆದು ಕೊಂಡೆ. ಲೇಖನವೂ ಪ್ರಕಟವಾಯಿತು. ಆದರೆ ಎರಡೇ ದಿನಕ್ಕೆ ಅವರಿಂದ ಒಂದು ಪತ್ರ ಬಂದಿತು. ‘ಈ ಲೇಖನದಲ್ಲಿನ ಮಾಹಿತಿ ಮಾತ್ರ ನನ್ನದು, ಭಾಷೆ, ಶೈಲಿ ನನ್ನದಲ್ಲ. ಇದನ್ನು ನೀನು ಪತ್ರಿಕೆಯಲ್ಲಿ ಪ್ರಕಟಿಸ ಬೇಕು’ ನಾನು ಗಾಭರಿಯಿಂದ ಅವರಿಗೆ ಪೋನ್ ಮಾಡಿದೆ. ಅವರು ‘ಹೀಗೆ ಉಕ್ತ ಲೇಖನ ತೆಗೆದು ಕೊಂಡಾಗ, ಇದು ಬರೆದು ಕೊಂಡ ಲೇಖನ ಎನ್ನುವುದನ್ನೂ ಬರೆಯ ಬೇಕು. ಇಲ್ಲದಿದ್ದರೆ ನನ್ನ ಶೈಲಿ ಮತ್ತು ಭಾಷೆಯನ್ನು ಬಲ್ಲವರು ಇದನ್ನು ನನ್ನ ಲೇಖನ ಅಲ್ಲ ಎಂದು ಸುಲಭದಲ್ಲಿ ಗುರುತಿಸುತ್ತಾರೆ.’ ಎಂದರು. ಹೀಗೆ ಅವರಿಗೆ ಅನ್ನಿಸಲು ಕಾರಣವಾಗಿದ್ದು ಲೇಖನದಲ್ಲಿ ಇದ್ದ ಒಂದೆರಡು ವಾಕ್ಯ ರಚನೆಯ ಸಮಸ್ಯೆಗಳು. ಹೀಗೆ ಬರವಣಿಗೆಯ ತಪ್ಪುಗಳ ಕುರಿತು ಮಾತು ಬೆಳೆಯಿತು. ಬಹಳ ಆಸಕ್ತಿಕರ ವಿಷಯಗಳನ್ನು ಅವರು ಹೇಳಿದರು. ‘ಸರ್, ಇದೆಲ್ಲವನ್ನೂ ಬರೆದು ಕೊಡಲು ಸಾಧ್ಯವೆ?’ ಎಂದು ಕೇಳಿದೆ. ಅವರು ಬರೆದೂ ಕೊಟ್ಟರು. ‘ಬರವಣಿಗೆಯ ತಪ್ಪುಗಳು’ ಮಲ್ಲಿಗೆ ಮಾಸ ಪತ್ರಿಕೆಯಲ್ಲಿ ಐದು ಕಂತುಗಳಲ್ಲಿ ಮೂಡಿ ಬಂದಿತು. ಇದು ವಿಜ್ಞಾನ ಬರವಣಿಗೆಯನ್ನು ಗಮನದಲ್ಲಿ ಇರಿಸಿ ಕೊಂಡಿದ್ದರೂ ಎಲ್ಲಾ ಮಾದರಿ ಬರವಣಿಗೆಗೂ ಅನ್ವಯವಾಗುವಂತಿದೆ.

ಪ್ರತಿಯೊಬ್ಬ ಬರಹಗಾರರ ಬಳಿಯೂ ಕೈಪಿಡಿಯಂತೆ ಇರ ಬೇಕಾದ ಈ ಮಾಲಿಕೆಯಿಂದ ನಾನಂತೂ ಕಲಿತಿದ್ದು ಅಪಾರ. ಅನೇಕ ಬರಹಗಾರರಿಗೂ ಇದರಿಂದ ಉಪಯೋಗವಾಯಿತು . ನೇಮಿಚಂದ್ರ ಅವರಂತೂ ಇಡೀ ಮಾಲಿಕೆಯನ್ನು ನನ್ನಿಂದ ಝೆರಾಕ್ಸ್ ಮಾಡಿಸಿ ಕೊಂಡು ಪಡೆದು ಕೊಂಡಿದ್ದರು. ಮುಂದೆ ಕೂಡ ನನ್ನ ಬರವಣಿಗೆಯನ್ನು ನಿಕಟವಾಗಿ ಗಮನಿಸುತ್ತಿದ್ದ ಲಕ್ಷ್ಮಣ ರಾಯರು ನಾನು ತಪ್ಪು ಮಾಡಿದಾಗ ಕ್ಲಾಸ್ ತೆಗೆದು ಕೊಂಡು ತಿದ್ದುತ್ತಿದ್ದರು. ಅವರು ಹೇಳುತ್ತಿದ್ದ ಅನೇಕ ಉದಾಹರಣೆಗಳನ್ನು ಇಂದಿಗೂ ನಾನು ಪತ್ರಿಕೋದ್ಯಮದ ತರಗತಿಗಳಲ್ಲಿ ಬಳಸಿ ಕೊಳ್ಳುತ್ತಿದ್ದೇನೆ. ಹಲವು ನಿಘಂಟುಗಳ ಸಂಪಾದಕರಾಗಿ, ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ್ದ ಅವರ ಪದ ಸಂಪತ್ತು ಬೆರಗು ಮೂಡಿಸುವಂತಿತ್ತು. ಹಾಗೆ ನೋಡಿದರೆ ನಾಡು ಅವರ ಅಪಾರ ಪ್ರತಿಭೆಗೆ ಕೊಡ ಬೇಕಾದ ಮನ್ನಣೆಯನ್ನು ಅವರು ಇದ್ದಾಗಲೇ ನೀಡಲಿಲ್ಲ. ನನ್ನ ತಂದೆಯವರು ನಿಧನರಾದಾಗ ಅವರು ಸಂತಾಪ ಸೂಚಿಸಿ ನನಗೆ ಒಂದು ಪತ್ರ ಬರೆದಿದ್ದರು ‘ಹರಿಹರಪುರದಂತಹ ಚಿಕ್ಕ ಊರಿನಲ್ಲಿ ಇದ್ದು ಸ್ವ ಅಧ್ಯಯನಶೀಲತೆಯಿಂದ ಸೀತಾರಾಮ ಸಾಧಿಸಿದ್ದು ಅಪಾರ, ಅವನಿಗಿದ್ದ ಪ್ರತಿಭೆಗೆ ನಿಜಕ್ಕೂ ಅವನು ಯಾವುದಾದರೂ ವಿಶ್ವ ವಿದ್ಯಾಲಯದಲ್ಲಿ ಇರಬೇಕಿತ್ತು. ಅಥವಾ ಹಾಗೆ ಇರದಿದ್ದರಿಂದ ಅವನಿಗೆ ಅಷ್ಟೊಂದು ಬರವಣಿಗೆ ಮಾಡಲು ಸಾಧ್ಯವಾಯಿತು.’ ಕೊನೆಯ ವಾಕ್ಯ ಅರ್ಥವಾಗಲು ಲಕ್ಷ್ಮಣ ರಾಯರ ‘ನೆನಪಿನ ಅಲೆಗಳು’ ಆತ್ಮಕಥೆಯನ್ನು ಓದಬೇಕು.

ನನ್ನ ತಂದೆಯವರದೂ ಮತ್ತು ಅವರದು ಇಬ್ಬರದೂ ಒಂದೇ ಜನ್ಮದಿನ. ನನ್ನ ತಂದೆ ಸರಿಯಾಗಿ ಅವರಿಗಿಂತ ಇಪ್ಪತ್ತು ವರ್ಷ ಚಿಕ್ಕವರು. ಇಬ್ಬರೂ ವಿ‍ಜ್ಞಾನ ಬರವಣಿಗೆಗೆ ಮನ್ನಣೆ ಸಿಗ ಬೇಕು ಎಂಬ ಕನಸನ್ನು ಕಟ್ಟಿದವರು. ಅದಕ್ಕಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಬಾಲ ವಿಜ್ಞಾನಗಳನ್ನು ಸ್ಥಾಪಿಸಿದರು. ಇಂದು ಅವರ ಕನಸು ಕೆಲಮಟ್ಟಿಗಾದರೂ ನನಸಾಗಿದೆ ಆದರೆ ನೋಡಲು ಅವರಿಬ್ಬರೂ ಇಲ್ಲ.

ನನ್ನ ಬದುಕಿನ ಅಮೂಲ್ಯ ನಿಧಿಯಾಗಿದ್ದ, ನನ್ನನ್ನು ಬರಹಗಾರನ್ನಾಗಿ ರೂಪಿಸಿದ ಗುರುವಾಗಿದ್ದ ಪ್ರೊ.ಜೆ. ಆರ್. ಲಕ್ಷ್ಮಣರಾಯರಿಗೆ ನೂರನೇ ಹುಟ್ಟು ಹಬ್ಬದಂದು ನಮನಗಳನ್ನು ಸಲ್ಲಿಸುತ್ತೇನೆ.

Related Stories

No stories found.