ಪ್ರೊ. ಜೆ. ಆರ್. ಲಕ್ಷ್ಮಣರಾವ್
ಪ್ರೊ. ಜೆ. ಆರ್. ಲಕ್ಷ್ಮಣರಾವ್ಜೆ. ಎಲ್. ಅನಿಲ್ ಕುಮಾರ್

ಜೆಆರ್‌ಎಲ್ ನೂರರ ನೆನಪು: ಹೀಗಿದ್ದರು ನಮ್ಮ ಅಣ್ಣ

ವಿಜ್ಞಾನ ಸಂವಹನಕಾರರಾಗಿ ನಾವು ಪ್ರೊ. ಜೆ. ಆರ್. ಲಕ್ಷ್ಮಣರಾಯರನ್ನು ಬಲ್ಲೆವು. ಆದರೆ ವೈಯಕ್ತಿಕ ಬದುಕಿನಲ್ಲಿ ಅವರು ಹೇಗಿದ್ದರು? ಜೆಆರ್‌ಎಲ್ ಅವರ ಪುತ್ರ ಶ್ರೀ ಜೆ. ಎಲ್. ಅನಿಲ್ ಕುಮಾರ್ ತಮ್ಮ ಅಣ್ಣನನ್ನು ನೆನಪಿಸಿಕೊಂಡಿರುವುದು ಹೀಗೆ...

ನಾವಾಗ ಶಿವಮೊಗ್ಗೆಯಲ್ಲಿದ್ದೆವು. ಅಣ್ಣ ಅಲ್ಲಿನ ಸಹ್ಯಾದ್ರಿ ಕಾಲೇಜಿನಲ್ಲಿ ರಸಾಯನವಿಜ್ಞಾನದ ಅಧ್ಯಾಪಕರಾಗಿದ್ದರು. ಒಂದು ರಾತ್ರಿ ನಿದ್ರೆಯಿಂದ ಎದ್ದಿದ್ದೆ. ನನ್ನ ನೆನಪಿನಲ್ಲಿ ಅದು ಮಧ್ಯರಾತ್ರಿ, ನಿಜವಾಗಿ ರಾತ್ರಿ ಹತ್ತು - ಹತ್ತೂವರೆ ಇದ್ದಿರಬೇಕು. ನನಗೆ ಕಂಡದ್ದು ಅಣ್ಣ ವೆರಾಂಡದಲ್ಲಿ ಕುಳಿತು ಏನನೋ ಓದುತ್ತಿದ್ದರು. ಮುಂದಿನ ಹಲವಾರು ದಶಕಗಳಲ್ಲಿ ಈ ರೀತಿಯ ದೃಶ್ಯ ಬಹಳ ಪರಿಚಿತವಾದದ್ದು. ಅವರು ಎಷ್ಟು ಓದುತ್ತಿದ್ದರು, ಎಷ್ಟು ಬಗೆಯ ವಿಚಾರಗಳಲ್ಲಿ ಅವರಿಗೆ ಆಳವಾದ ಆಸಕ್ತಿ ಮತ್ತು ತಿಳುವಳಿಕೆಯಿತ್ತು ಎನ್ನುವುದು ನನಗೆ ಮುಂದೆ ಅರ್ಥವಾಗತೊಡಗಿತ್ತು. ನನ್ನ ಮನಸ್ಸಿನಲ್ಲಿ ಅಣ್ಣನ ಮೊದಲ ನೆನಪು ಇದು.

ಯಾವುದೇ ವಿಷಯದ ಬಗ್ಗೆ ಸ್ಥೂಲವಾದ ಮಾಹಿತಿ ಬೇಕಾದಾಗ ವಿಕಿಪೀಡಿಯದಲ್ಲಿ ಹುಡುಕುವುದು ಈಚಿನ ದಿನಗಳಲ್ಲಿ ವಾಡಿಕೆಯಾಗಿದೆ. ನಾನು ಹುಡುಗನಾಗಿದ್ದಾಗ ಅಣ್ಣ ನನ್ನ ವಿಕಿಪೀಡಿಯ ಆಗಿದ್ದರು. ಯಾವುದೇ ಪ್ರಶ್ನೆಯನ್ನು ಕೇಳಿದರೂ ಅದರ ಬಗ್ಗೆ ಬಹಳ ಆಸ್ಥೆಯಿಂದ, ನನ್ನ ವಯಸ್ಸಿಗೆ ತಕ್ಕಭಾಷೆಯಲ್ಲಿ, ತಕ್ಕ ಉದಾಹರಣೆಗಳೊಂದಿಗೆ ವಿವರಿಸುತ್ತಿದ್ದರು. ಅಣ್ಣ ಹೇಳಿದ್ದು ನನಗೆ ಅರ್ಥವಾಗಲಿಲ್ಲ ಎಂದು ನನಗೆ ಎಂದೂ ಅನಿಸಿರಲೇ ಇಲ್ಲ.

ಅವರು ಮೈಸೂರಿನ ದೇವರಾಜ ಮಾರುಕಟ್ಟೆಗೆ ಆಗಾಗ್ಗೆ ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನೋ, ಪುಸ್ತಕಗಳನ್ನೋ ತರುತ್ತಿದ್ದರು. ನಾನೂ ಕೆಲವು ವೇಳೆ ಅವರೊಂದಿಗೆ ಹೋಗುತ್ತಿದ್ದೆ. ಎಲ್ಲ ಕಡೆಯೂ ನಡೆದೇ ಹೋಗುವುದು ವಾಡಿಕೆ. ಅವರ ಬಲಗೈನ ತೋರು ಬೆರಳನ್ನು ಹಿಡಿದು ನಡೆಯುತ್ತಿದ್ದೆ. ದಾರಿಯುದ್ದಕ್ಕೂ ಅವರ ಮೇಲೆ ಪ್ರಶ್ನೆಗಳ ಸುರಿಮಳೆಯಾಗುತ್ತಿತ್ತು. ಎಲ್ಲವಕ್ಕೂ ವಿವರವಾದ ಉತ್ತರ ಸಿಗುತ್ತಿತ್ತು.

ಒಂದು ಬಾರಿಯ ಪ್ರಶ್ನೆ ದೇವರ ಬಗ್ಗೆ. ಅಣ್ಣನಿಗೆ ದೇವರಲ್ಲಿ ನಂಬಿಕೆಯಿಲ್ಲ ಎಂಬ ಅರಿವು ನನಗಾಗಲೇ ಇತ್ತು. ನಾನು ನೋಡಿದವರೆಲ್ಲ ದೇವರಲ್ಲಿ ನಂಬಿಕೆಯುಳ್ಳವರು, ಇವರು ಮಾತ್ರ ಹೀಗೇಕೆ ಅನಿಸಿರಬೇಕು. ನೀವೇಕೆ ದೇವರನ್ನು ನಂಬುವುದಿಲ್ಲ - ಎನ್ನುವ ತರಹದ ಪ್ರಶ್ನೆ ಕೇಳಿದೆ. ಅಣ್ಣ ದೇವರ ಬಗ್ಗೆ ವಿಶದವಾಗಿ ಮಾತನಾಡಿದರು. ನಾವು ಸರಸ್ವತಿಪುರದ ಪ್ರೊಫೆಸರ್ಸ್ ಕ್ವಾರ್ಟರ್ಸಿನ ಬಳಿ ಬರುವ ಹೊತ್ತಿಗೆ ಅವರು ತಮ್ಮ ವಾದಗಳನ್ನು ಸಂಪೂರ್ಣವಾಗಿ ಮಂಡಿಸಿದ್ದರು. ಆಗ ನಾವು ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹಿಂದೊಮ್ಮೆ ವಾಸಿಸುತ್ತಿದ್ದ ಮನೆಯ ಮುಂದೆ ತಲುಪಿದ್ದೆವು. ನಾನು ಆ ಹೊತ್ತಿಗೆ, ಆ ಜಾಗದಲ್ಲಿ ನಾಸ್ತಿಕನಾದೆ ಎಂಬ ಚಿತ್ರ ನನ್ನ ಮನಸ್ಸಿನಲ್ಲಿದೆ. ಮುಖ್ಯ ವಿಷಯವೆಂದರೆ ಅಣ್ಣ ಅವರ ವಾದಗಳನ್ನು ನನ್ನ ಮುಂದಿಟ್ಟರೇ ವಿನಃ ನನ್ನನ್ನು 'ಮತಾಂತರ'ಗೊಳಿಸಲಿಲ್ಲ. ಆಸ್ತಿಕರ ಮೇಲೆ ಅಸಡ್ಡೆಯಾಗಲಿ ಅಥವ ಆಸ್ತಿಕವಾದ ಕೀಳೆಂಬ ಧಾಟಿಯಾಗಲಿ ಅವರ ವಾದಗಳಲ್ಲಿರಲಿಲ್ಲ. ಅದು ಈಗಲೂ ನನಗೆ ಆಶ್ಚರ್ಯ ಉಂಟು ಮಾಡುತ್ತದೆ. ಅವರು ವಾದಗಳನ್ನು ಮುಂದಿಟ್ಟ ರೀತಿಯಿಂದಾಗಿ, ನನ್ನ ನಾಸ್ತಿಕತೆಗೆ ನಾನು ಜವಾಬ್ದಾರನೇ ಹೊರತು ಅಣ್ಣ ಅಲ್ಲ ಎಂಬ ಭಾವನೆ ಅಂದಿನಿಂದ ಇದೆ.

ನೆಂಟರ ಮನೆಯ ಮದುವೆಯೊಂದಕ್ಕೆ ಅಣ್ಣನ ಬೆರಳು ಹಿಡಿದು ಹೋಗಿದ್ದೆ. ಅಲ್ಲಿ ಒಂದು ಕೋಣೆಯಲ್ಲಿ ಹಲವರು ಇಸೀಟಿನ ಇಪ್ಪತ್ತೆಂಟರ ಆಟದಲ್ಲಿ ಮಗ್ನರಾಗಿದ್ದರು. ಅವರಲ್ಲೊಬ್ಬರು, 'ಏನು ಲಕ್ಷ್ಮಣ, ನೀನೂ ಆಡ್ತೀಯಾ?” ಎಂದು ನಕ್ಕರು. ಅಣ್ಣ ಗಂಭೀರ ಸ್ವಭಾವದವರು, ಇಂತಹ ಕ್ಷುಲ್ಲಕ ವಿಷಯದಲ್ಲಿ ತಲೆ ಹಾಕುವುದಿಲ್ಲ ಎಂಬ ಧೋರಣೆ ಅವರ ಮನಸ್ಸಿನಲ್ಲಿ ಇದ್ದಂತಿತ್ತು. ಅಲ್ಲಿದ್ದ ಇನ್ನೊಬ್ಬರು, ಅಣ್ಣನನ್ನು ಇನ್ನೂ ಚೆನ್ನಾಗಿ ಬಲ್ಲವರು, ಮೊದಲು ಪ್ರಶ್ನೆ ಕೇಳಿದವರಿಗೆ ಹೀಗೆಂದರು: "ಯಾಕೆ? ನಿನಗೆ ನಿನ್ನ ದುಡ್ಡಿನ ಮೇಲೆ ಆಸೆ ಇಲ್ವ? ಅವನು ಕೂತರೆ ನಮ್ಮೆಲ್ಲರ ದುಡ್ಡನ್ನೂ ದೋಚಿಕೊಂಡು ಹೋಗ್ತಾನೆ ! ಸುಮ್ನಿರು, ಕರೀಬೇಡ ಅವನನ್ನ"

ಅಣ್ಣನ ಈ ಮುಖ ನನಗೆ ಗೊತ್ತಿರಲೇ ಇಲ್ಲ. ಅಲ್ಲಿಂದ ಹೊರಗೆ ಬಂದಾಗ "ಅವರು ಹೇಳಿದ್ದು ನಿಜವೇ?" ಎಂದು ಅಣ್ಣನನ್ನು ಕೇಳಿದೆ. "ಅವನು ಹೇಳಿದ್ದು ಉತ್ತೇಕ್ಷೆಯ ಮಾತು. ನಾನು ಆಡಬಲ್ಲೆ. ಆದರೆ ದುಡ್ಡು ಕಳೆದಂತೂ ಕಳೆದುಕೊಳ್ಳುವುದಿಲ್ಲ" ಎಂದು ತಳ್ಳಿಹಾಕಿದರು. ಅದಾಗಿ ಹಲವಾರು ವರ್ಷಗಳ ನಂತರ ಅಣ್ಣ ನನಗೆ ಮತ್ತು ನನ್ನ ಅಕ್ಕ ತಂಗಿಯರಿಗೆ ಇಪ್ಪತ್ತೆಂಟರ ಆಟವನ್ನು ಹೇಳಿಕೊಟ್ಟರು. ಅಣ್ಣ ಆಡಿ ಹಣ ದೋಚಿಕೊಂಡು ಹೋದರೆ ಆಶ್ಚರ್ಯವೇನಿಲ್ಲ. ತಮ್ಮ ಜ್ಞಾಪಕ ಶಕ್ತಿ, ತಾರ್ಕಿಕ ಯೋಚನಾ ಶಕ್ತಿ, ಏಕಾಗ್ರತೆಗಳಿಂದಾಗಿ ಜೊತೆಯವರಿಗೆ ಹೆದರಿಕೆ ಹುಟ್ಟಿಸುವಂತಹ ಆಟ ಆಡುತ್ತಿದ್ದಿರಬೇಕು ಅನಿಸಿತ್ತು.

ಕಾರ್ಯಕ್ರಮವೊಂದರಲ್ಲಿ ಪ್ರೊ. ಜೆ. ಆರ್. ಲಕ್ಷ್ಮಣರಾವ್
ಕಾರ್ಯಕ್ರಮವೊಂದರಲ್ಲಿ ಪ್ರೊ. ಜೆ. ಆರ್. ಲಕ್ಷ್ಮಣರಾವ್ಜೆ. ಎಲ್. ಅನಿಲ್ ಕುಮಾರ್

ನಾನು ಏಳನೇ ತರಗತಿಯನ್ನು ಮುಗಿಸಿ ಪ್ರೌಢಶಾಲೆಗೆ ಸೇರಿದಾಗ, ಕನ್ನಡ ಮಾಧ್ಯಮದಲ್ಲೇ ಓದನ್ನು ಮುಂದುವರಿಸುವಂತೆ ನನ್ನ ಮನವೊಲಿಸಲು ಅಣ್ಣ ಪ್ರಯತ್ನಿಸಿದರು. ನಾನು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತೇನೆ ಎಂದು ಹಠಹಿಡಿದೆ. ಕೊನೆಗೆ, ಮನಸ್ಸಿಲ್ಲದ ಮನಸ್ಸಿನಿಂದ ಅಣ್ಣ ಒಪ್ಪಿಗೆ ಕೊಟ್ಟರು. ಪಾಠಗಳು ಪ್ರಾರಂಭವಾದ ಒಂದೆರಡು ವಾರಗಳಲ್ಲೇ ನನಗೆ ಪಾಠಗಳೂ ಅರ್ಥವಾಗುತ್ತಿಲ್ಲ, ಪಠ್ಯಪುಸ್ತಕಗಳನ್ನು ಓದಿದರೆ ಅವೂ ಅರ್ಥವಾಗುತ್ತಿಲ್ಲ ಎಂಬ ಹೆದರಿಕೆ ಪ್ರಾರಂಭವಾಯಿತು. ತಲೆ ತಗ್ಗಿಸಿ ಅಣ್ಣನ ಹತ್ತಿರ ಹೇಳಿಕೊಂಡೆ. "ನಾನು ಹೇಳಿದೆ, ನೀನು ಕೇಳಲಿಲ್ಲ" ಅನ್ನುವ ಮಾತಿನ ಸುಳಿವೇ ಇಲ್ಲದೆ ಅಣ್ಣ ನನಗೆ ಪರಿಹಾರ ನೀಡಿ ಹುರಿದುಂಬಿಸಿದರು. "ಅದೇನೂ ಕಷ್ಟವಲ್ಲ. ಪಠ್ಯೇತರ ಇಂಗ್ಲಿಷ್ ಪುಸ್ತಕಗಳನ್ನು ಓದು, ತಾನಾಗೇ ಅರ್ಥವಾಗುತ್ತದೆ" ಎಂದರು. ಮನೆಯಲ್ಲಿದ್ದ ಪುಸ್ತಕಗಳ ಮೇಲೆ ಕಣ್ಣು ಹಾಯಿಸಿದೆ. ಅವೆಲ್ಲವೂ ಕಬ್ಬಿಣದ ಕಡಲೆಯಂತೆ ಕಂಡವು. ಮತ್ತೆ ಅಣ್ಣನ ಮೊರೆ ಹೊಕ್ಕೆ. ರೆನೆ ದುಬ್ವಾ ಎಂಬ ಲೇಖಕನ ಕೃತಿ, ಲೂಯಿ ಪಾಸ್ತರನ ಜೀವನ ಚರಿತ್ರೆಯನ್ನು ನನಗೆ ಕೊಟ್ಟರು. ಓದಲು ಪ್ರಾರಂಭಿಸಿದೆ. ಮೊದಮೊದಲು ಬಹಳ ಕಷ್ಟವಾಯಿತು. ಮತ್ತೆ ಅಣ್ಣನ ಮೊರೆ ಹೊಕ್ಕೆ. ಅವರು, 'ಅರ್ಥ ಆಗುತ್ತಿದೆಯೋ ಇಲ್ಲವೋ ಅನ್ನುವುದರ ಯೋಚನೆ - ಬಿಟ್ಟು, ಸುಮ್ಮನೆ ಓದುತ್ತಾ ಹೋಗು. ಅರ್ಥವಾಗಲು ಪ್ರಾರಂಭವಾಗುತ್ತದೆ' ಎಂದು ಸಮಾಧಾನ ಮಾಡಿದರು. ಸುಮಾರು ಐವತ್ತು ಪುಟಗಳು ಮುಗಿಯುವ ಹೊತ್ತಿಗೆ, ನಾನು ಓದುತ್ತಿದ್ದೇನೆ ಎಂಬ ಅರಿವೂ ಇಲ್ಲದಂತೆ ಪುಸ್ತಕದಲ್ಲಿ ಮುಳುಗಿ ಹೋಗಿದ್ದೆ. ಮುಂದೆ ಆ ಭಾಷೆಯು ತೊಂದರೆ ಕೊಡಲಿಲ್ಲ.

ಈ ವಿಷಯವನ್ನು ನೆನೆದಾಗಲೆಲ್ಲಾ ಅಣ್ಣನ ಔದಾರ್ಯ, ಚಿಂತನೆ, ಸಕಾರವಾದ, ಅನುಕಂಪ, ಇತ್ಯಾದಿ ಗುಣಗಳು ಆಶ್ಚರ್ಯವನ್ನುಂಟು ಮಾಡುತ್ತವೆ.

ನಮ್ಮ ಮನೆಯಲ್ಲೇ ಸಾವಿರಾರು ಪುಸ್ತಕಗಳಿದ್ದು, ಹತ್ತಾರು ಪತ್ರಿಕೆಗಳು ಮನೆಗೆ ಬರುತ್ತಿದ್ದವು. ಆದರೆ ಯುವರಾಜ ಕಾಲೇಜಿನ ಗ್ರಂಥ ಭಂಡಾರ ಮತ್ತು ಮೈಸೂರು ವಿಶ್ವವಿದ್ಯಾಲಯದ ಗ್ರಂಥ ಭಂಡಾರಗಳಿಂದ ಅನೇಕ ಪುಸ್ತಕಗಳನ್ನು ಅಣ್ಣ ಮನೆಗೆ ತರುತ್ತಿದ್ದರು. ಅವರೇ ಅವನ್ನು ಓದುವ ಯೋಚನೆ ಇಲ್ಲದಿದ್ದರೂ ನಮ್ಮ ಅಮ್ಮ ಮತ್ತು ನಾವುಗಳು ಓದಲಿ ಎಂದೇ ಅವರ ಉದ್ದೇಶ.

ಮೊದಲೇ ಹೇಳಿದಂತೆ ಅಣ್ಣ ಓದುತ್ತ ಕುಳಿತಿರುವುದು ಸರ್ವೇಸಾಮಾನ್ಯ ದೃಶ್ಯವಾಗಿತ್ತು. ಅವರ ಬರವಣಿಗೆ ಹೆಚ್ಚಿದಂತೆಲ್ಲ ಅವರ ಓದು ಕಡಿಮೆಯಾಯ್ತು. ಓದುವುದೇನಿದ್ದರೂ ಯಾವುದೋ ವಿಷಯವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಸೀಮಿತವಾಯಿತು. "ನೀವು ಎಷ್ಟು ಓದುತ್ತಿದ್ದಿರಿ. ಈಗ ಅದಕ್ಕೆ ಸಮಯವೇ ಇಲ್ಲವಲ್ಲ', ಎಂದು ನಾನೊಮ್ಮೆ ಅವರನ್ನು ಕೇಳಿದೆ. "ಅದು ಸರಿ. ಆದರೆ ಈ ಕೆಲಸಗಳು ಬಹಳ ಮುಖ್ಯ", ಎಂದು ಅವರು ಹೇಳಿದರು. ಅದರಲ್ಲಿ ವಾಸ್ತವಿಕತೆ ಇತ್ತೇ ಹೊರತು ದುಃಖ, ಅಸಮಾಧಾನದ ಛಾಯೆಯೂ ಇರಲಿಲ್ಲ. “ಸಮಾಜದಿಂದ ನಾವು ಪಡೆಯುವುದು ಹೆಚ್ಚು, ಅದಕ್ಕೆ ಪ್ರತಿಯಾಗಿ ಕೊಡುವುದು ಕಡಿಮೆ. ಅವುಗಳ ನಡುವಿನ ಅಂತರವನ್ನು ಸ್ವಲ್ಪವಾದರೂ ಕಡಿಮೆ ಮಾಡುವ ಪ್ರಯತ್ನ ಮಾಡಬೇಕು" ಎನ್ನುವ ಅವರ ಮನೋಭಾವವೇ ಅದಕ್ಕೆ ಕಾರಣವಿರಬೇಕು ಅನಿಸುತ್ತದೆ.

ಒಂದು ಬಾರಿ, ನಾನಿರುವುದೇ ಹೀಗೆ, ನಾನೇನು ಮಾಡಲಿ ಎನ್ನುವ ಮಾತಾಡಿದೆ. ಅಣ್ಣನಿಗೆ ಕೋಪವೇ ಬಂದಿತು. ಆದರೆ ಆ ಕೋಪ ನನ್ನ ವಾದದ ಮೇಲೆ ಹೊರತು ನನ್ನ ಮೇಲಲ್ಲ ಅನಿಸುತ್ತದೆ. ಅದನ್ನು ಅವರು ಹೇಗೆ ನನಗೆ ಗೊತ್ತಾಗುವಂತೆ ಮಾಡಿದರೋ ನನಗೆ ಗೊತ್ತಿಲ್ಲ. ಅಂತಹ ಮೂರ್ಖತನದ ಮಾತನಾಡಿದ್ದರೂ ನೀನು ಮೂರ್ಖನಲ್ಲ ಅನ್ನುವಂತೆ ಅವರು ನಡೆದುಕೊಂಡರು. ಅದು ಬರಿಯ ವಾದವಲ್ಲ. ನನಗೆ ತಿಳಿದಂತೆಯೇ ಅವರೂ ತಮ್ಮನ್ನು ತಾವೇ ಬದಲಿಸಿಕೊಂಡಿದ್ದರು. ಲಕ್ಷ್ಮಣ ಎನ್ನುವ ಹೆಸರಿಗೆ ತಕ್ಕಂತೆ ಅವರಿಗೆ ಮುಂಗೋಪವಿತ್ತಂತೆ. ಅವರ ಮಕ್ಕಳು ಅದನ್ನು ನೋಡೇ ಇಲ್ಲ.

ಬೆಳಿಗ್ಗೆ ಎದ್ದ ಸ್ವಲ್ಪ ಹೊತ್ತಿನಲ್ಲೇ ನೀರು ಕುಡಿದರೆ ಒಳ್ಳೆಯದು ಎಂದು ಓದಿದ್ದು ಅದಕ್ಕೆ ಇರಬಹುದಾದ ಕಾರಣಗಳನ್ನು ತೂಕ ಹಾಕಿ, ಅದು ಸಾಧ್ಯ ಎನಿಸಿದ ಮೇಲೆ, ಅದನ್ನು ಅಭ್ಯಾಸ ಮಾಡಿಕೊಂಡರು, ಅಣ್ಣ. ಅಂತೆಯೇ ದಿನವೂ ತಣ್ಣೀರು ಸ್ನಾನ ಮಾಡಿದರೆ ನೆಗಡಿ ಬರುವುದು ಕಡಿಮೆಯಾಗುತ್ತದೆ ಎನ್ನುವುದನ್ನು ಓದಿದ ಅವರು, ತಮ್ಮ ಐವತ್ತನೆಯ ವಯಸ್ಸಿನಲ್ಲಿ ಅದನ್ನು ಅಭ್ಯಾಸ ಮಾಡಿಕೊಂಡರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ - ಕನ್ನಡ ನಿಘಂಟಿನ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಅವರು ತಮ್ಮ ಕೈಬರಹವನ್ನು ಉತ್ತಮಗೊಳಿಸಿಕೊಂಡರು. ಅವರೇ ಹೇಳಿದ ಕಾರಣ ಇದು: "ನಾನು ಬರೆದದ್ದು ಸ್ಪಷ್ಟವಿಲ್ಲದಿದ್ದರೆ ಮುಂದೆ ಅದರಮೇಲೆ ಕೆಲಸ ಮಾಡುವವರಿಗೆ ಬಹಳ ಕಷ್ಟವಾಗುತ್ತದೆ. ಆದ್ದರಿಂದ ನನ್ನ ಕೈಬರಹವನ್ನು ಉತ್ತಮಗೊಳಿಸುವುದು ಒಳ್ಳೆಯದು. ಆದ್ದರಿಂದ ಮಾಡಿಕೊಂಡೆ."

ಆರೋಗ್ಯವಾಗಿರಲು ವಿಶಿಷ್ಟವಾಗಿ ವ್ಯಾಯಾಮ ಮಾಡುವುದು ಅನಗತ್ಯ ಎನ್ನುವುದು ಅಣ್ಣನ ನಂಬಿಕೆ. ಅದರ ಬದಲು ದಿನಪೂರ್ತಿ ಏನಾದರೂ ಕೆಲಸದಲ್ಲಿ ತೊಡಗಿಸಿಕೊಂಡರೆ ಸಾಕು ಎನ್ನುವುದು ಅವರ ಅನಿಸಿಕೆ. ವೈಜ್ಞಾನಿಕ ಆಧಾರಗಳ ಮೇಲೇ ಅವರು ಈ ನಿರ್ಧಾರಕ್ಕೆ ಬಂದಿದ್ದಿರಬೇಕು. ಯುವರಾಜ ಕಾಲೇಜು, ಪ್ರಸಾರಾಂಗಗಳಿಗೆ ಕೆಲಸಕ್ಕೆ ಅಣ್ಣ ನಡೆದೇ ಹೋಗುತ್ತಿದ್ದರು. ಬ್ಯಾಂಕು, ಅಂಚೆ ಕಛೇರಿ, ಅಕ್ಕಪಕ್ಕದ ದಿನಸಿ ಅಂಗಡಿ, ಕ್ಸೆರಾಕ್ಸ್ ಅಂಗಡಿ, ಎಲ್ಲವಕ್ಕೂ ನಡಿಗೆಯೇ. ತಮ್ಮ ಬಟ್ಟೆಗಳನ್ನು ತಾವೇ ಒಗೆದು ಒಪ್ಪವಾಗಿ ಒಣಹಾಕುವುದು, ಬರವಣಿಗೆ, ಎಲ್ಲವೂ ಅವರ ದೃಷ್ಟಿಯಲ್ಲಿ ವ್ಯಾಯಾಮವೇ. ಹಾಗೆಂದ ಮಾತ್ರಕ್ಕೆ ವ್ಯಾಯಾಮ ಅಂದರೆ ಅಸಡ್ಡೆ ಇರಲಿಲ್ಲ. ಕೆಲವು ದಶಕಗಳ ಹಿಂದೆ ಕುತ್ತಿಗೆ ನೋವು ಅವರನ್ನು ಬಾಧಿಸತೊಡಗಿತು. ಕುತ್ತಿಗೆಗೆ ಕಾಲರ್ ಹಾಕಿಕೊಳ್ಳಬೇಕು ಮತ್ತು ಕತ್ತಿನ ಮತ್ತು ಅದರ ಬಳಿಯ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ಮಾಡಬೇಕೆಂದು ವೈದ್ಯರು ಸಲಹೆ ಇತ್ತರು. ವೈದ್ಯರು ಹೇಳಿ ಕೊಟ್ಟ ವ್ಯಾಯಾಮಗಳನ್ನು ಒಂದು ದಿವಸವೂ ತಪ್ಪಿಸದಂತೆ ಕೊನೆಯ ದಿನಗಳವರೆಗೂ ಮಾಡುತ್ತಿದ್ದರು. ಕಾಲರನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಉಪಯೋಗಿಸಿ ನಂತರ ಅದರ ಉಪಯೋಗವನ್ನು ನಿಲ್ಲಿಸಿಬಿಡುವುದು ಅವರಿಗೆ ಸಾಧ್ಯವಾಯಿತು. ಸೋಮಾರಿತನ ಮೈಗಳ್ಳತನ ಅವರಿಗೆ ಗೊತ್ತೇ ಇರಲಿಲ್ಲವೇನೋ!

ಹೀಗೆ ಬರೆಯುತ್ತಾ ಹೋದರೆ ಬಹಳ ವಿಷಯಗಳಿವೆ. ಅವರು ಎಷ್ಟು ದೊಡ್ಡ ವ್ಯಕ್ತಿ ಎನ್ನುವುದನ್ನು ಸಾರುವುದಾಗಲೀ, ಅವರು ನಮ್ಮ ತಂದೆ ಎಂದು ಹೆಮ್ಮೆ ಪಡುವುದಾಗಲೀ (ಅವೆರಡು ನಿಜವಾದರೂ) ಈ ಬರಹದ ಉದ್ದೇಶವಲ್ಲ. ಅವರು ಮೈಗೂಡಿಸಿಕೊಂಡಿದ್ದ ಹಲವಾರು ವಿಷಯಗಳು, ಧೋರಣೆಗಳು ಅನುಕರಣೀಯ. ಇದನ್ನು ಓದುವವರು ಅವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡಬಹುದು. ಹಾಗಾದಲ್ಲಿ, ಸಮಾಜಕ್ಕೆ ಸಾಧ್ಯವಾದಷ್ಟೂ ಹಿಂದಿರುಗಿಸಬೇಕೆಂಬ ಅಣ್ಣನ ಇಷ್ಟವು ನೆರವೇರಲು ನನ್ನಿಂದಲೂ ಸ್ವಲ್ಪ ಸಹಾಯವಾಗಲಿ ಎನ್ನುವುದು ಮಾತ್ರ ಇದರ ಉದ್ದೇಶ.

Related Stories

No stories found.
logo
ಇಜ್ಞಾನ Ejnana
www.ejnana.com