ಅಂದಿನ ಕಾಲದ ಸರ್ಚ್ ಇಂಜಿನ್ - ಜ್ಞಾನ ಗಂಗೋತ್ರಿ
'ಜ್ಞಾನಗಂಗೋತ್ರಿ' ಕಿರಿಯರ ವಿಶ್ವಕೋಶSrinidhi T G / ejnana.com

ಅಂದಿನ ಕಾಲದ ಸರ್ಚ್ ಇಂಜಿನ್ - ಜ್ಞಾನ ಗಂಗೋತ್ರಿ

ಜ್ಞಾನ ಗಂಗೋತ್ರಿ ಕುರಿತು ನಿರಂಜನರಿಗಿದ್ದ ಕನಸು ೫೦ ವರ್ಷ ಕಳೆದರೂ ನನಸಾಗಿಲ್ಲದಿರುವ ವಿಷಯ ನಮ್ಮನ್ನು ಚಿಂತನೆಗೆ ಹಚ್ಚಬೇಕಿದೆ; ವಿಶ್ವದ ಮಾಹಿತಿಯೆಲ್ಲ ಅಂಗೈಯಲ್ಲೇ ಇರುವ ಈ ಕಾಲದಲ್ಲಾದರೂ ಅದನ್ನೆಲ್ಲ ಕನ್ನಡಕ್ಕೆ ತರುವಂತೆ ಪ್ರೇರೇಪಿಸಬೇಕಿದೆ.

ನಮ್ಮ ತಾಯ್ನುಡಿಯಲ್ಲಿ ನಡೆಯುವ ಯಾವುದೇ ಜ್ಞಾನಶಾಖೆಯ ಅಧ್ಯಯನ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಶಾಲಾಕಾಲೇಜುಗಳ ಪಠ್ಯದ ಜೊತೆಗೆ ಅದಕ್ಕೆ ಪೂರಕವಾದ ಮಾಹಿತಿಯೂ ನಮ್ಮ ತಾಯ್ನುಡಿಯಲ್ಲೇ ಸಿಕ್ಕರೆ, ನಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಸಹಕಾರಿಯಾಗಬಲ್ಲದು. ಇಂಗ್ಲಿಷಿನಲ್ಲಿ ಸಿಗುವಷ್ಟು ಮಾಹಿತಿ ಬಹುತೇಕ ಇತರ ಭಾಷೆಗಳಲ್ಲಿ ಸಿಕ್ಕದಿರುವ ಕೊರತೆಯೂ ಸಾಧ್ಯವಾದ ಮಟ್ಟಿಗೆ ಕಡಿಮೆಯಾಗಬಲ್ಲದು.

ಕನ್ನಡದ ವಿಷಯಕ್ಕೆ ಬಂದಾಗ ಈ ನಿಟ್ಟಿನಲ್ಲಿ ಆಗಿರುವ ಕೆಲಸ ಸಾಲದು, ನಾವು ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿ ಕೇಳಸಿಗುತ್ತದೆ. ಆದರೂ, ನಾವು ಸಾಗಿಬಂದಿರುವ ದಾರಿಯ ಕಡೆಗೊಮ್ಮೆ ಹಿಂತಿರುಗಿ ನೋಡಿದರೆ ಅತ್ಯದ್ಭುತವೆನಿಸುವ ಕೆಲವು ಸಾಧನೆಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಇಷ್ಟೆಲ್ಲ ಮಾಡುವುದು ಅದು ಹೇಗೆ ಸಾಧ್ಯವಾಯಿತೋ ಎಂದು ಕಣ್ಣರಳಿಸುವಂತೆ ಮಾಡುತ್ತವೆ.

ಅಂತಹ ಸಾಧನೆಗಳಲ್ಲೊಂದು 'ಜ್ಞಾನ ಗಂಗೋತ್ರಿ' ಕಿರಿಯರ ವಿಶ್ವಕೋಶ. ೧೯೭೦ರಿಂದ ೧೯೭೪ರ ನಡುವೆ ಒಟ್ಟು ಏಳು ಸಂಪುಟಗಳಲ್ಲಿ ಪ್ರಕಟವಾದ ತಲಾ ಸುಮಾರು ಏಳೆಂಟು ನೂರು ಪುಟಗಳ ಗ್ರಂಥಗಳು ಪ್ರಪಂಚದೆಲ್ಲೆಡೆಯ ಮಾಹಿತಿಯನ್ನು ಕನ್ನಡದ ಮಕ್ಕಳಿಗಾಗಿ ತುಂಬಿಕೊಟ್ಟಿದ್ದವು. ಅಂತರಜಾಲ-ವಿಶ್ವವ್ಯಾಪಿ ಜಾಲಗಳೊಂದೂ ಇಲ್ಲದ ದಿನಗಳಲ್ಲಿ ಈ ವಿಶ್ವಕೋಶದ ಸಂಪುಟಗಳು ವಿದ್ಯಾರ್ಥಿಗಳ ಪಾಲಿನ ಸರ್ಚ್ ಇಂಜಿನ್‌ಗಳಂತೆ ಇದ್ದವು. ಶಾಲಾಕಾಲೇಜಿನ ಮನೆಗೆಲಸಕ್ಕೆ, ಪ್ರಬಂಧ-ಭಾಷಣ ಸ್ಪರ್ಧೆಗಳ ಸಿದ್ಧತೆಗೆ ಜ್ಞಾನಗಂಗೋತ್ರಿಯನ್ನು ಆಕರದಂತೆ ಬಳಸಿಕೊಂಡಿದ್ದನ್ನು ಅನೇಕರು ಆಪ್ತವಾಗಿ ನೆನಪಿಸಿಕೊಳ್ಳುತ್ತಾರೆ.

ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರದಿಂದ ಪ್ರಕಟವಾದ ಜ್ಞಾನ ಗಂಗೋತ್ರಿ ಸಂಪುಟಗಳ ಪ್ರಧಾನ ಸಂಪಾದಕರಾಗಿದ್ದವರು ಖ್ಯಾತ ಲೇಖಕ ನಿರಂಜನ. ಎಲ್. ಎಸ್. ಶೇಷಗಿರಿ ರಾವ್, ವರದರಾಜ ಹುಯಿಲಗೋಳ, ಚಿ. ನ. ಮಂಗಳ, ಪು. ನ. ಅಲಮೇಲು, ಅಡ್ಯನಡ್ಕ ಕೃಷ್ಣಭಟ್, ಅರುಣ ನಾರಾಯಣ, ಮಾ. ನಾ. ಚೌಡಪ್ಪ, ರಾಜಾ ಶೈಲೇಶಚಂದ್ರ ಗುಪ್ತ, ಶ್ರೀಮತಿ ಹರಿಪ್ರಸಾದ್ ಮುಂತಾದ ಹಲವು ಮಹನೀಯರು ಜ್ಞಾನಗಂಗೋತ್ರಿ ತಂಡದಲ್ಲಿ ಸೇವೆಸಲ್ಲಿಸಿದ್ದರು.

ಸರಕಾರ ಹಾಗೂ ಸಾರ್ವಜನಿಕ ಸಹಯೋಗಕ್ಕೆ ಅತ್ಯುತ್ತಮ ಉದಾಹರಣೆಯಂತಿದ್ದ ಜ್ಞಾನ ಗಂಗೋತ್ರಿ ಯೋಜನೆಗೆ ಕರ್ನಾಟಕ ಸರಕಾರ ಹಲವು ಹಂತಗಳಲ್ಲಿ ನೆರವಾಗಿತ್ತು. ಯೋಜನೆಗೆ ಅಗತ್ಯವಿದ್ದ ಹಣವನ್ನು ಬಡ್ಡಿರಹಿತ ಸಾಲದ ಮೂಲಕ ನೀಡಿದ್ದು, ಕಾಗದ ಹಾಗೂ ಮುದ್ರಣಾಲಯದ ವ್ಯವಸ್ಥೆ ಮಾಡಿಕೊಟ್ಟಿದ್ದು, ಪ್ರಕಟವಾದ ಸಂಪುಟಗಳಲ್ಲಿ ಒಂದಷ್ಟನ್ನು ಶಾಲಾಕಾಲೇಜುಗಳಿಗಾಗಿ ಖರೀದಿಸಿದ್ದು - ಹೀಗೆ ಸರಕಾರದಿಂದ ದೊರಕಿದ ನೆರವನ್ನು ನಿರಂಜನರು ವಿವಿಧ ಸಂಪುಟಗಳಿಗೆ ಬರೆದ ತಮ್ಮ ಪ್ರಸ್ತಾವನೆಗಳಲ್ಲಿ ನೆನಪಿಸಿಕೊಂಡಿದ್ದಾರೆ.

'ಮನುಕುಲದ ಕಥೆ', 'ಜೀವಜಗತ್ತು', 'ಭೌತಜಗತ್ತು', 'ಯಂತ್ರಜಗತ್ತು', 'ಕಲೆ, ಸಾಹಿತ್ಯ', 'ಕ್ರೀಡೆ, ಮನೋಲ್ಲಾಸ' ಹಾಗೂ 'ಭಾರತದ ಕಥೆ' - ಇವು ಜ್ಞಾನ ಗಂಗೋತ್ರಿಯ ಏಳು ಸಂಪುಟಗಳು. ಮೊದಲಿಗೆ ಆರು ವರ್ಷಗಳಿಗೆಂದು ಯೋಜಿಸಲಾಗಿದ್ದ ಈ ಅಷ್ಟೂ ಸಂಪುಟಗಳ ಪ್ರಕಟಣೆಯನ್ನು ನಿರ್ಧರಿಸಿದ್ದ ಅವಧಿಗಿಂತ ಮುಂಚೆಯೇ - ಕೇವಲ ನಾಲ್ಕು ವರ್ಷ ಒಂಬತ್ತು ತಿಂಗಳುಗಳಲ್ಲಿ - ಪೂರ್ಣಗೊಳಿಸಿದ್ದು ಒಂದು ಅಪೂರ್ವ ದಾಖಲೆ. ಜ್ಞಾನ ಗಂಗೋತ್ರಿಯ ಮೊದಲ ಸಂಪುಟ ಪ್ರಕಟವಾದ ೧೯೭೦ರಿಂದ ಇಲ್ಲಿಯವರೆಗೂ ಅದರಷ್ಟು ವಿಸ್ತೃತವಾದ ಇನ್ನೊಂದು ಕನ್ನಡ ವಿಶ್ವಕೋಶ ಅದರಷ್ಟು ಕ್ಷಿಪ್ರವಾಗಿ ಸಿದ್ಧವಾಗಿಲ್ಲ ಎನ್ನುವುದು ಆ ಯೋಜನೆಯ ಹಿರಿಮೆಗೆ ಸಾಕ್ಷಿ.

ಜ್ಞಾನಗಂಗೆ ಹರಿಯುತ್ತಲೇ ಇರುತ್ತದೆ. ಪ್ರತಿ ವರ್ಷ ಏಳು ಸಂಪುಟಗಳಿಗೆ ಸಂಬಂಧಿಸಿದಂತೆ ಏಳು ಅಧ್ಯಾಯಗಳಿರುವ 'ಜ್ಞಾನ ಗಂಗೋತ್ರಿ ಅನುಬಂಧ' ಅಚ್ಚಾದರೆ, ಈ ಅನುಬಂಧಗಳ ಆಧಾರದ ಮೇಲೆ ಹತ್ತು ವರ್ಷಗಳಿಗೊಮ್ಮೆ 'ಜ್ಞಾನ ಗಂಗೋತ್ರಿ'ಯ ಪರಿಷ್ಕೃತ ಆವೃತ್ತಿ ಸಿದ್ಧವಾದರೆ, ಚೆನ್ನು. ಈ ಒಳ್ಳೆಯ ಕೆಲಸ ಯಾರಿಂದಲಾದರೂ ಆದೀತು ಎಂಬ ನಂಬುಗೆ ನನಗಿದೆ.
ನಿರಂಜನ, 'ಜ್ಞಾನ ಗಂಗೋತ್ರಿ'ಯ ಪ್ರಧಾನ ಸಂಪಾದಕರು (೧೯೭೪)

ಪ್ರಾಚೀನ ಇತಿಹಾಸದಿಂದ (ಅಂದಿನ) ಆಧುನಿಕ ತಂತ್ರಜ್ಞಾನದವರೆಗೆ ಎಲ್ಲ ವಿಷಯಗಳನ್ನೂ ಒಳಗೊಂಡಿದ್ದದ್ದು ಜ್ಞಾನ ಗಂಗೋತ್ರಿಯ ವೈಶಿಷ್ಟ್ಯ. ಪೂರ್ತಿ ಮೂರು ಸಂಪುಟಗಳು ವಿಜ್ಞಾನ-ತಂತ್ರಜ್ಞಾನಗಳಿಗೇ ಮೀಸಲಾಗಿದ್ದು ಕೂಡ ವಿಶೇಷವೇ. ಕೇವಲ ಪಠ್ಯರೂಪದ ಮಾಹಿತಿಯಷ್ಟೇ ಅಲ್ಲದೆ ಛಾಯಾಚಿತ್ರ ಹಾಗೂ ನಕ್ಷೆಗಳನ್ನೂ ಅದರಲ್ಲಿ ಮುದ್ರಿಸಲಾಗಿತ್ತು. ಹಲವು ವರ್ಣಚಿತ್ರಗಳಿದ್ದ ವಿಶೇಷ ಪುಟಗಳು ಪ್ರತಿ ಸಂಪುಟದಲ್ಲೂ ಇದ್ದದ್ದು ಇನ್ನೊಂದು ವಿಶೇಷ. ಇಷ್ಟೆಲ್ಲ ಇದ್ದ ಸಂಪುಟಗಳಿಗೆ ತಲಾ ಐವತ್ತು ರೂಪಾಯಿಗಳ ಬೆಲೆ ನಿಗದಿಪಡಿಸಲಾಗಿತ್ತು. ಆ ಹಣಕ್ಕೆ ಬ್ಯಾಂಕ್ ಸಾಲದ ವ್ಯವಸ್ಥೆಯೂ ಇತ್ತು!

ಜ್ಞಾನ ಗಂಗೋತ್ರಿಯ ಮುದ್ರಣದ ಬಗ್ಗೆ ಮಾತಾಡುವಾಗ ಇದರಲ್ಲಿ ಹೆಚ್ಚು ದಿನ ಬಾಳಿಕೆ ಬಾರದ ಕಾಗದವನ್ನೇ ಬಳಸಬೇಕೆಂದು ನಿರಂಜನ ಹೇಳಿದ್ದರಂತೆ. ಮುದ್ರಣಕ್ಕೆ ಬಳಸುವ ಕಾಗದ "ನೋಡೊಕೆ ಚೆನ್ನಾಗಿದ್ದು ಎಲ್ರೂ ಮುಟ್ಟಿ ಮುಟ್ಟಿ ... ಹತ್ತೇ ವರ್ಷಗಳಲ್ಲಿ ಹಾಳಾಗಿ ಹೋಗ್ಬೇಕು. ಪ್ರತಿಗಳು ಸಿಗಬಾರ್‍ದು. ಆಗ ಈ ಸಂಪುಟಗಳ ಪರಿಷ್ಕೃತ ಆವೃತ್ತಿ ಬರುತ್ತೆ. ಅಥವಾ, ಇನ್ನೊಂದು ತಂಡ ಬಂದು, ಇದಕ್ಕಿಂತಲೂ ಉತ್ತಮವಾದ ಕಿರಿಯರ ವಿಶ್ವಕೋಶ ತಯಾರಿಸುತ್ತೆ..." ಎಂದು ಹೇಳಿದ್ದನ್ನು ಅವರು ಕಡೆಯ ಸಂಪುಟದಲ್ಲಿ ನೆನಪಿಸಿಕೊಂಡಿದ್ದಾರೆ.

ಆದರೆ, ಇಷ್ಟು ವರ್ಷಗಳು ಕಳೆದರೂ ಆ ಹೊತ್ತಿಗೆಗಳ ಪುಟಗಳು ಪುಡಿಯಾಗುತ್ತಿಲ್ಲ. ಹಾಗೆಯೇ ಅವರ ಇನ್ನೊಂದು ಕನಸೂ ನನಸಾಗಿಲ್ಲ. ಜ್ಞಾನ ಗಂಗೋತ್ರಿ ಸಂಪುಟಗಳನ್ನು ಪರಿಷ್ಕರಿಸುವ ಹಾಗೂ ಇಂತಹ ಮತ್ತೊಂದು ಸಾರ್ಥಕ ಪ್ರಯತ್ನ ನಡೆಸುವ ಮನಸ್ಸುಗಳು ಇನ್ನೂ ತಯಾರಾಗಿಲ್ಲ.

ಈ ಲೇಖನದ ಸಂಕ್ಷಿಪ್ತ ರೂಪ 'ಕುತೂಹಲಿ' ಆನ್‌ಲೈನ್ ಪತ್ರಿಕೆಯ ಮೇ ೨೦೨೧ ಸಂಚಿಕೆಯಲ್ಲಿ ಪ್ರಕಟವಾಗಿದೆ

Related Stories

No stories found.
ಇಜ್ಞಾನ Ejnana
www.ejnana.com