ಶಿಕ್ಷಣದ ತಿಜೋರಿಗೆ ತಂತ್ರಜ್ಞಾನದ ಕೀಲಿಕೈ
Image by Nino Carè from Pixabay

ಶಿಕ್ಷಣದ ತಿಜೋರಿಗೆ ತಂತ್ರಜ್ಞಾನದ ಕೀಲಿಕೈ

ಜನವರಿ ೨೪ ಅಂತಾರಾಷ್ಟ್ರೀಯ ಶಿಕ್ಷಣ ದಿನ
Published on

ಶಿಕ್ಷಣ ಪಡೆಯುವುದು ಒಂದು ನಿಧಿಯನ್ನೇ ಪಡೆದಹಾಗಂತೆ. ನಿಧಿ ಸಿಕ್ಕಿದೆ ಎಂದಮೇಲೆ ಅದನ್ನು ಎಲ್ಲೋ ಇಟ್ಟು ಜೋಪಾನಮಾಡಲು ತಲೆಕೆಡಿಸಿಕೊಳ್ಳಬೇಕೇ? ಹಾಗೇನಿಲ್ಲ, ಶಿಕ್ಷಣದ ನಿಧಿ ತಾನೇ ನಮ್ಮನ್ನು ಎಲ್ಲೆಡೆಯೂ ಹಿಂಬಾಲಿಸುತ್ತದೆ ಎಂದು ಚೀನಾದ ಗಾದೆಯೊಂದು ಹೇಳುತ್ತದೆ.

ಶಿಕ್ಷಣದ ಮಹತ್ವವೇ ಅಂತಹುದು. ವ್ಯಕ್ತಿತ್ವದ ನಿರ್ಮಾಣದಲ್ಲಷ್ಟೇ ಅಲ್ಲ, ಶಾಂತಿ ಹಾಗೂ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವಲ್ಲೂ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಈ ಅಂಶಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದಲೇ ವಿಶ್ವಸಂಸ್ಥೆ ಜನವರಿ ೨೪ನೇ ತಾರೀಕನ್ನು ಅಂತಾರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುತ್ತದೆ.

ಶಿಕ್ಷಣವೆನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು, ಹಾಗೂ ಅದನ್ನು ಒದಗಿಸುವುದು ಸಮಾಜದ ಜವಾಬ್ದಾರಿ ಎಂದು ವಿಶ್ವಸಂಸ್ಥೆ ಹೇಳಿದೆ. ಸುಸ್ಥಿರ ಅಭಿವೃದ್ಧಿಗಾಗಿ ಗುರುತಿಸಲಾಗಿರುವ ಜಾಗತಿಕ ಧ್ಯೇಯಗಳಲ್ಲೂ (ಸಸ್ಟೇನಬಲ್ ಡೆವೆಲಪ್‌ಮೆಂಟ್ ಗೋಲ್ಸ್) ಗುಣಮಟ್ಟದ ಶಿಕ್ಷಣಕ್ಕೆ ಸ್ಥಾನವಿದೆ.

ಶಿಕ್ಷಣ ಎಂದಾಗ ನಮಗೆ ಶಾಲೆ-ಕಾಲೇಜುಗಳಷ್ಟೇ ನೆನಪಾಗುತ್ತವಲ್ಲ, ತಂತ್ರಜ್ಞಾನದ ಬೆಳವಣಿಗೆಯಿಂದ ಶಿಕ್ಷಣದ ಪರಿಕಲ್ಪನೆ ಗಮನಾರ್ಹವಾಗಿ ಬದಲಾಗುತ್ತಿದೆ. ಶಿಕ್ಷಣದ ನಿಧಿ ಎಲ್ಲರಿಗೂ ದೊರಕುವಂತಾಗುವಲ್ಲಿ ತಂತ್ರಜ್ಞಾನ ಇದೀಗ ಪ್ರಮುಖ ಪಾತ್ರ ವಹಿಸುತ್ತಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನ ಕ್ಷಿಪ್ರ ವಿಕಾಸವೂ ಈ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿದೆ.

ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ತಂದ ಬದಲಾವಣೆ ನಮಗೆಲ್ಲ ತಿಳಿದೇ ಇದೆ. ಕೋವಿಡ್ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಪರಿಚಯವಾದ ಆನ್‌ಲೈನ್ ಕ್ಲಾಸುಗಳಷ್ಟೇ ಅಲ್ಲ, ಗುಣಮಟ್ಟದ ಶಿಕ್ಷಣ ಒದಗಿಸುವ ಹಲವು ಡಿಜಿಟಲ್ ವೇದಿಕೆಗಳನ್ನೂ ನಾವೀಗ ಬಳಸುತ್ತಿದ್ದೇವೆ. ಮನೆಯಲ್ಲೇ ಕುಳಿತು ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಪಠ್ಯಕ್ರಮವನ್ನು ಅಭ್ಯಾಸಮಾಡುವುದು ಇದರಿಂದ ಸಾಧ್ಯವಾಗಿದೆ.

ಭಾಷೆಯ ಅಡೆತಡೆಗಳನ್ನು ನಿವಾರಿಸುವಲ್ಲಿಯೂ ತಂತ್ರಜ್ಞಾನ ಸಹಕಾರಿ. ಅನುವಾದ ತಂತ್ರಾಂಶಗಳ ನೆರವಿನಿಂದ ಸಂಕೀರ್ಣವಾದ ವಿಷಯಗಳನ್ನೂ ನಮ್ಮ ಭಾಷೆಯಲ್ಲೇ ಓದುವುದು, ಅರ್ಥಮಾಡಿಕೊಳ್ಳುವುದು ಇದೀಗ ಸಾಧ್ಯವಾಗುತ್ತಿದೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ವೇಗ ಮತ್ತು ಕಲಿಯುವ ವಿಧಾನ ಬೇರೆಬೇರೆಯಾಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಅಗತ್ಯವನ್ನೂ ಅರ್ಥೈಸಿಕೊಂಡು, ಅವರಿಗೆ ಸೂಕ್ತವಾದ ಶಿಕ್ಷಣ ಒದಗಿಸುವುದು ಎಐ ತಂತ್ರಜ್ಞಾನದ ಬಳಕೆಯಿಂದಾಗಿ ಸಾಧ್ಯವಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿಯುವುದರ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದಕ್ಕೂ ಇಂತಹ ವಿಧಾನಗಳು ನೆರವಾಗಲಿವೆ. ಬೋಧನೆಯಲ್ಲಿ ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಬಳಸಿಕೊಳ್ಳುವ ಅವಕಾಶ ಶಿಕ್ಷಕರ ಪಾಲಿಗೂ ದೊರೆತಿದೆ.

ತಂತ್ರಜ್ಞಾನ ಹಿಂದೆಂದಿಗಿಂತ ಹೆಚ್ಚು ವೇಗದಲ್ಲಿ ಮುನ್ನಡೆದಿರುವ ಕಾಲ ಇದು. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ಜೊತೆಗೆ ತಂತ್ರಜ್ಞಾನ ಶಿಕ್ಷಣವೂ ಇಂದಿನ ಅಗತ್ಯವೇ ಆಗಿದೆ. ಓದು-ಬರಹದ ಸಾಕ್ಷರತೆಯ ಜೊತೆಗೆ ಡಿಜಿಟಲ್ ಸಾಕ್ಷರತೆಯೂ ಎಲ್ಲರನ್ನೂ ತಲುಪಬೇಕಿದೆ. ಶಿಕ್ಷಣದ ನಿಧಿಯಿರುವ ತಿಜೋರಿಯನ್ನು ತಂತ್ರಜ್ಞಾನದ ಕೀಲಿಕೈ ತೆರೆಯಬೇಕಿದೆ.

logo
ಇಜ್ಞಾನ Ejnana
www.ejnana.com