ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿ
ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿkai Stachowiak / publicdomainpictures.net

ಮಹಿಳಾದಿನ ವಿಶೇಷ: ಆಸಕ್ತಿಯೊಂದಿದ್ದರೆ ಯಾವುದಕ್ಕಾದರೂ ಸಮಯ ಕೊಡಬಹುದು

ಸಾಧಕ ಬಾಧಕಗಳೆರಡೂ ಇರುವ ತಂತ್ರಜ್ಞಾನವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳುವುದು ನಮ್ಮಲ್ಲೇ ಇರಬೇಕಾದ ಜಾಣತನ ಎನ್ನುತ್ತಾರೆ ಮಂಡಲ ಕಲಾವಿದೆ ಮತ್ತು ತಂತ್ರಜ್ಞೆ ಸೌಮ್ಯ ಬೀನಾ

ಇಂದಿನ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ವಿಜ್ಞಾನ ಮತ್ತು ತಂತ್ರಜ್ಞಾನ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಆವಿಷ್ಕಾರಗೊಳ್ಳುತ್ತಿರುವ ಹೊಸ ತಂತ್ರಜ್ಞಾನಗಳಿಗೆ ನಾವೂ ಕೂಡ ಒಗ್ಗಿಕೊಳ್ಳುತ್ತಿದ್ದೇವೆ.

ಮಗುವನ್ನು ಸಂಭಾಳಿಸಿಕೊಂಡು ಮನೆಯಿಂದಲೇ ಕೆಲಸ ಮಾಡುವ ನನ್ನಂತಹವರಿಗೆ ತಂತ್ರಜ್ಞಾನದ ಅನೇಕ ಸವಲತ್ತುಗಳು ಸಹಾಯ ಮಾಡುತ್ತವೆ. ಉದಾಹರಣೆಗೆ, ಫ್ರೀಲ್ಯಾನ್ಸ್ ಡೆವೆಲಪಮೆಂಟ್ ವೃತ್ತಿಗೆ ಬೇಕಾದ ವಿಷಯಗಳ ಕಲಿಕೆಗೆ ಆನ್ಲೈನ್ ತರಬೇತಿ ಕಾರ್ಯಕ್ರಮಗಳು, ಕೋಡಿಂಗ್ ಮಾಡಲು ಬೇಕಾದಷ್ಟು ಫ್ರೀ ಮತ್ತು ಓಪನ್ ಸೋರ್ಸ್ ತಂತ್ರಾಂಶಗಳು, ಇತರರೊಂದಿಗೆ ಚರ್ಚಿಸಲು ಸುಲಭ ಸಂವಹನ ಮಾಧ್ಯಮಗಳೇ ಮುಂತಾದ ಇಂಟರ್ನೆಟ್ ಆಧಾರಿತ ನೆಲೆಗಳಿಂದಾಗಿ, ಅನಾವಶ್ಯಕವಾಗಿ ವ್ಯಯವಾಗುವ ಸಮಯ ಮತ್ತು ಶ್ರಮವನ್ನು ಉಳಿಸಬಹುದಾಗಿದೆ.

ಮಂಡಲ ಕಲೆಯನ್ನೂ ಹವ್ಯಾಸವಾಗಿ ಬೆಳೆಸಿಕೊಂಡಿರುವ ನಾನು, ನನ್ನ ಚಿತ್ರರಚನೆ ಮತ್ತು ಮಾಹಿತಿಯನ್ನು ಜನರಿಗೆ ತಲುಪಿಸಲು ಫೇಸ್ಬುಕ್, ಇನ್ಸ್‌ಟಾಗ್ರಾಮ್, ವಾಟ್ಸಾಪ್, ಪಿನ್‌ಟರೆಸ್ಟ್‌ನಂತಹ ತಾಣಗಳನ್ನು ಬಳಸುತ್ತಿದ್ದೇನೆ. ಇದಕ್ಕಾಗಿ ಡಿಎಸ್‌ಎಲ್ಆರ್ ಕ್ಯಾಮೆರಾ ಹಾಗೂ ಫೋಟೋಶಾಪ್ ಮತ್ತಿತರ ತಂತ್ರಾಂಶಗಳನ್ನು ಬಳಸಿ ನನ್ನ ರಚನೆಗಳನ್ನು ಆಕರ್ಷಕವಾಗಿ ಪ್ರಸ್ತುತಪಡಿಸುವುದನ್ನೂ ಕಲಿತಿದ್ದೇನೆ. ಇದೆಲ್ಲದರ ಪರಿಣಾಮವಾಗಿ ಮಂಡಲ ಆರ್ಟ್ ಕುರಿತು ಇದೀಗ ಸಾಕಷ್ಟು ಜನರಲ್ಲಿ ಆಸಕ್ತಿ ಮೂಡಿದೆ. ತಯಾರಿಸಿದ ಮಂಡಲ ಕಲಾಕೃತಿಗಳನ್ನು ಇ-ಕಾಮರ್ಸ್ ತಾಣಗಳ ಮೂಲಕ ಮಾರಾಟ ಮಾಡುವುದು ಕೂಡ ಸಾಧ್ಯವಿದೆ. ನನ್ನ ಕಲೆಗೆ ಬೇಕಾದ ಸಾಮಗ್ರಿಗಳನ್ನು ಇಂತಹುದೇ ತಾಣಗಳಲ್ಲಿ ಕೊಳ್ಳುವಾಗ, ನನ್ನ ಆಯ್ಕೆಯ ವಸ್ತುಗಳ ಜೊತೆಗೆ ಇನ್ನಿತರ ಯಾವ ಸಾಮಗ್ರಿಗಳು ಜನಪ್ರಿಯವಾಗಿವೆ ಎನ್ನುವ ಸೂಚನೆಗಳು ನನಗೆ ಹೊಸತನ್ನು ಅನ್ವೇಷಿಸಿ ಪ್ರಯತ್ನಿಸಲು ಸಹಾಯಕಾರಿಯಾಗಿವೆ.

facebook.com/Srishticraftedwidluv

ಆಸಕ್ತಿಯೊಂದಿದ್ದರೆ ಯಾವುದಕ್ಕಾದರೂ ಸಮಯ ಕೊಡಬಹುದು. ಫೋಟೋಗ್ರಫಿಗೆ ಎಲ್ಲಾ ಸಮಯದಲ್ಲೂ ಡಿಎಸ್‌ಎಲ್‌ಆರ್ ಹಿಡಿದು ಓಡಾಡಲಾಗದಿದ್ದರೂ, ಉತ್ತಮ ಕ್ಯಾಮೆರಾ ಇರುವ ನನ್ನ ಮೊಬೈಲ್ ನನಗೆ ಅಚ್ಚುಮೆಚ್ಚು. ಅದನ್ನು ಬಳಸಿ ಮಾನ್ಯುಯಲ್ ಮೋಡಿನಲ್ಲಿ ಫೋಟೋ ಕ್ಲಿಕ್ಕಿಸುವ ನನ್ನ ಹವ್ಯಾಸವನ್ನು ಸಾಕಷ್ಟು ಎಂಜಾಯ್ ಮಾಡುತ್ತೇನೆ. ಇ-ಪುಸ್ತಕಗಳನ್ನು ಓದುವ ಜೊತೆಗೆ ಪ್ರಯಾಣದ ಸಂದರ್ಭದಲ್ಲಿ ಆಡಿಯೋ ಪುಸ್ತಕಗಳನ್ನು ಕೇಳುತ್ತಿರುವುದರಿಂದ ನನ್ನ ಸಮಯದ ಸದುಪಯೋಗವೂ ಆಗುತ್ತಿದೆ.

ಗೂಗಲ್ ಆಲ್ಬಮ್‌ಗೆ ಫೋಟೋಗಳನ್ನು ತುಂಬಿಡುವುದು ನನ್ನ ಇನ್ನೊಂದು ಖಯಾಲಿ. ಈಚೆಗೊಂದು ದಿನ ನನ್ನ ಮಗು ಮತ್ತು ಅಕ್ಕನ ಮಕ್ಕಳು ಒಟ್ಟಿಗಿದ್ದ ಫೋಟೋವನ್ನು ಗೂಗಲ್ ಆಲ್ಬಮ್‌ಗೆ ಸೇರಿಸಿದೆ. ಸ್ವಲ್ಪ ಸಮಯದಲ್ಲಿಯೇ, ೪ ವರ್ಷಗಳ ಹಿಂದೆ, ಇವೇ ಮೂರು ಮಕ್ಕಳು ಪಾಪುಗಳಾಗಿದ್ದಾಗ ತೆಗೆದ ಚಿತ್ರದ ಜೊತೆ, 'ದೆನ್ ಅಂಡ್ ನೌ' ಎಂಬ ಶೀರ್ಷಿಕೆಯ ಕೊಲಾಜ್ ಆಗಿ ಕಾಣಿಸಿಕೊಂಡಾಗ, ಆದ ಸಂತೋಷ ಹೇಳತೀರದು. ಹಳೆಯ ಚಿತ್ರಗಳನ್ನು ನೆನಪಿಸುವ ಸೌಲಭ್ಯವಂತೂ ಬಹಳಷ್ಟು ಸಂತೋಷದ ಕ್ಷಣಗಳು ಮರಳುವಂತೆ ಮಾಡುತ್ತದೆ.

ತಂತ್ರಜ್ಞಾನದ ಬೆಳವಣಿಗೆ ನಿರಂತರ. ಅದನ್ನು ಬಳಸಬಹುದಾದ ಮಾರ್ಗಗಳ ಪಟ್ಟಿಯೂ ಹೀಗೆಯೇ ಮುಂದುವರೆಯುತ್ತ ಹೋಗುತ್ತದೆ. ಸಾಧಕ ಬಾಧಕಗಳೆರಡೂ ಇರುವ ಈ ವರದಾನವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳುವುದು ಮಾತ್ರ ನಮ್ಮಲ್ಲೇ ಇರಬೇಕಾದ ಜಾಣತನ.

- ಸೌಮ್ಯ ಬೀನಾ ಮಂಡಲ ಕಲಾವಿದೆ ಮತ್ತು ತಂತ್ರಜ್ಞೆ

ಸರ್ವವ್ಯಾಪಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಸವಲತ್ತುಗಳನ್ನು ವಿವಿಧ ಕ್ಷೇತ್ರಗಳ ಮಹಿಳೆಯರು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಈ ನಿಟ್ಟಿನಲ್ಲಿ ವಿಚಾರವಿನಿಮಯ ಸಾಧ್ಯವಾಗಿಸುವುದು ಮಹಿಳಾದಿನದ ಅಂಗವಾಗಿ ಪ್ರಕಟವಾಗುತ್ತಿರುವ ಈ ಸರಣಿಯ ಉದ್ದೇಶ. ಇದೇ ವಿಷಯದ ಬಗ್ಗೆ ನಿಮ್ಮ ಅನುಭವವನ್ನೂ ಹಂಚಿಕೊಳ್ಳುವ ಆಸಕ್ತಿಯಿದ್ದರೆ ದಯಮಾಡಿ ನಮ್ಮ ಫೇಸ್‌ಬುಕ್ ಪುಟಕ್ಕೆ ಬನ್ನಿ!

Related Stories

No stories found.
logo
ಇಜ್ಞಾನ Ejnana
www.ejnana.com