ಪುಟಾಣಿ ಇಜ್ಞಾನ: ಪುಟ್ಟನ ಮನೆ ಮತ್ತು ಗೆದ್ದಲ ಗೂಡು
ಹುತ್ತದ ಥರಾ ಮನೆ ಕಟ್ಟಿಕೊಂಡರೆ ಅದಕ್ಕೆ ಏಸಿ ಹಾಕಿಸುವುದೂ ಬೇಡ, ಕರೆಂಟಿಗಾಗಿ ಕಾಯುವುದೂ ಬೇಡ!Raghupathi Sringeri

ಪುಟಾಣಿ ಇಜ್ಞಾನ: ಪುಟ್ಟನ ಮನೆ ಮತ್ತು ಗೆದ್ದಲ ಗೂಡು

ಮನುಷ್ಯನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರಿಸರದಿಂದ ಪ್ರೇರಣೆ ಪಡೆದುಕೊಳ್ಳುವುದೇ ಬಯೋಮಿಮಿಕ್ರಿ

ಪುಟ್ಟನಿಗೆ ಇವತ್ತು ಖುಷಿಯೋ ಖುಷಿ. ಪಟ್ಟಣದ ಕೆಲಸ ಬಿಟ್ಟು ಹಳ್ಳಿಯಲ್ಲಿ ಕೃಷಿಮಾಡುತ್ತಿದ್ದ ಅವನ ಸೋದರಮಾವ ಈಗಷ್ಟೇ ಪುಟ್ಟನ ಮನೆಗೆ ಬಂದಿದ್ದರು. ಗೃಹಪ್ರವೇಶಕ್ಕೆ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ; ಹಾಗಾಗಿ ತಮ್ಮ ಹೊಸ ಮನೆ ತೋರಿಸುವ ಕೆಲಸವನ್ನು ಪುಟ್ಟನೇ ವಹಿಸಿಕೊಂಡಿದ್ದ.

"ಇದೇ ನೋಡಿ ಮಾವ ನನ್ನ ರೂಮು" ಎಂದ ಪುಟ್ಟ. "ತುಂಬಾ ಚೆನ್ನಾಗಿದೆ ಪುಟ್ಟ" ಎನ್ನುತ್ತಾ ಮಾವ ಬೆವರು ಒರೆಸಿಕೊಂಡರು. "ನನ್ನ ರೂಮಿನಲ್ಲೂ ಏಸಿ ಇದೆ ಮಾವಾ. ಕರೆಂಟು ಬರಲಿ ಇರಿ, ಹಾಕ್ತೀನಿ" ಎಂದು ಹೇಳಿದ ಪುಟ್ಟನ ಮಾತಿಗೆ ಮಾವ ಮುಗುಳ್ನಕ್ಕರು.

ಅಷ್ಟರಲ್ಲಿ ಅಮ್ಮ ಮಾವನನ್ನು ಕಾಫಿಗೆ ಕರೆದರು. ಮಾವನ ಜೊತೆ ಮಾತನಾಡುತ್ತಾ, ಹಳ್ಳಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ ಪುಟ್ಟನಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ.

ಎರಡು ದಿನ ಕಳೆದು ವಾಪಸ್ ಹೊರಟ ಮಾವನ ಜೊತೆಗೆ ಪುಟ್ಟನೂ ಹಳ್ಳಿಗೆ ಹೊರಟ. ಬಸ್ ಪ್ರಯಾಣದುದ್ದಕ್ಕೂ ಹಳ್ಳಿಯಲ್ಲಿ ಏನೇನು ಮಾಡುತ್ತೇನೆ ಎಂದು ವಿವರಿಸುತ್ತಲೇ ಇದ್ದ.

ಬೆಳಿಗ್ಗೆ ಎದ್ದು ಮಾವನ ಜೊತೆ ತೋಟಕ್ಕೆ ಹೊರಟ ಪುಟ್ಟನ ಪ್ಯಾಂಟಿನ ಮೇಲೆ ನಾಲ್ಕಾರು ಕಡೆ ಮುಳ್ಳಿನಂಥದ್ದೇನೋ ಅಂಟಿಕೊಂಡಿತ್ತು. ಅದನ್ನು ಕಿತ್ತುಹಾಕಲು ಪ್ರಯತ್ನಪಡುತ್ತಲೇ "ಇದೇನು ಮಾವ ಒಳ್ಳೆ ನನ್ನ ಶೂಸಿನ ವೆಲ್‌ಕ್ರೋ ಥರಾನೇ ಅಂಟಿಕೊಂಡಿದೆ?" ಎಂದು ಮಾವನನ್ನು ಕೇಳಿದ.

"ಅಲ್ಲಿದೆಯಲ್ಲ ಗಿಡ, ಅದರ ಬೀಜವೇ ಇದು" ಎಂದು ಮಾವ ಹೇಳಿದರು. "ಶೂಸಿನ ವೆಲ್‌‌ಕ್ರೋ ಅಂದೆಯಲ್ಲ, ಇಂಥ ಬೀಜಗಳು ಅಂಟಿಕೊಳ್ಳುವುದನ್ನು ನೋಡಿಯೇ ಅದನ್ನು ತಯಾರಿಸಿದ್ದು!"

"ಏನೇನೋ ಹೇಳ್ತೀರ ನೀವು! ನಮ್ಮೂರಿನ ಫ್ಯಾಕ್ಟರಿಯಲ್ಲಿ ವೆಲ್‌ಕ್ರೋ ತಯಾರಿಸ್ತಾರೆ ಅಂತ ಅಪ್ಪ ಹೇಳ್ತಿದ್ರು. ಅವರು ಕಾಡಿನ ಬೀಜ ನೋಡಲು ಯಾಕೆ ಬರ್ತಾರೆ?" ಎನ್ನುತ್ತ ನಡೆದುಬರುತ್ತಿದ್ದ ಪುಟ್ಟನಿಗೆ ದೊಡ್ಡದೊಂದು ಹುತ್ತ ಕಾಣಿಸಿತು.

"ಇದು ನೋಡು ಹುತ್ತ. ಗೆದ್ದಲುಹುಳುಗಳು ಕಟ್ಟುವ ಈ ಮನೆಯಲ್ಲಿ ಹಾವು ಕೂಡ ವಾಸ ಮಾಡುತ್ತೆ" ಎಂದು ಮಾವ ಹೇಳಿದರು. "ಓ, ಇದು ಹಾವಿನ ಮನೇನಾ? ಇದನ್ನು ನೋಡಿ ಯಾರೂ ಅವರ ಮನೆ ಕಟ್ಟಿಕೊಂಡಿಲ್ವಾ?" ಪುಟ್ಟ ಕೀಟಲೆ ಮಾಡಿದ.

"ಈ ಮನೆಯ ವಿಶೇಷ ಏನು ಗೊತ್ತಾ?" ಮಾವ ಕೇಳಿದರು. "ಇದರೊಳಗಿನ ಉಷ್ಣಾಂಶ ಯಾವಾಗಲೂ ಒಂದೇ ರೀತಿ ಇರುತ್ತೆ. ಬೇಸಿಗೆ ಕಾಲದಲ್ಲಿ ಸೆಕೆ ಜಾಸ್ತಿ, ಚಳಿಗಾಲದಲ್ಲಿ ಚಳಿ ಜಾಸ್ತಿ ಎಂದೆಲ್ಲ ನಾವು ಒದ್ದಾಡುತ್ತೇವಲ್ಲ, ಹುತ್ತದೊಳಗೆ ಆ ಸಮಸ್ಯೆಯೇ ಇರುವುದಿಲ್ಲ."

"ಅಷ್ಟೇ ಅಲ್ಲ. ಹುತ್ತದ ಥರಾ ಮನೆ ಕಟ್ಟಿಕೊಂಡರೆ ಅದಕ್ಕೆ ಏಸಿ ಹಾಕಿಸುವುದೂ ಬೇಡ, ಅದನ್ನು ಬಳಸಲು ಕರೆಂಟಿಗಾಗಿ ಕಾಯುವುದೂ ಬೇಡ!"

ಪುಟ್ಟ ಇದ್ದಕ್ಕಿದ್ದ ಹಾಗೆ ಗಂಭೀರನಾಗಿಬಿಟ್ಟ. "ಮಾವಾ, ನಾನು ದೊಡ್ಡವನಾದ ಮೇಲೆ ಇದೇ ಥರಾ ಮನೆ ಕಟ್ಟಿಸ್ತೀನಿ" ಅಂದ.


ಗಿಡದ ಬೀಜಗಳು ನಮ್ಮ ಬಟ್ಟೆಗೆ ಅಂಟಿಕೊಳ್ಳುವುದನ್ನು ನೋಡಿದ ವಿಜ್ಞಾನಿಗಳು ಅದರಿಂದ ಸ್ಫೂರ್ತಿಪಡೆದು ಬೇಕಾದಾಗ ಅಂಟುವ - ಸಾಕಾದಾಗ ಬಿಡಿಸಿಕೊಳ್ಳಬಹುದಾದ ವೆಲ್‌ಕ್ರೋ ಅನ್ನು ರೂಪಿಸಿದರು
ಗಿಡದ ಬೀಜಗಳು ನಮ್ಮ ಬಟ್ಟೆಗೆ ಅಂಟಿಕೊಳ್ಳುವುದನ್ನು ನೋಡಿದ ವಿಜ್ಞಾನಿಗಳು ಅದರಿಂದ ಸ್ಫೂರ್ತಿಪಡೆದು ಬೇಕಾದಾಗ ಅಂಟುವ - ಸಾಕಾದಾಗ ಬಿಡಿಸಿಕೊಳ್ಳಬಹುದಾದ ವೆಲ್‌ಕ್ರೋ ಅನ್ನು ರೂಪಿಸಿದರುpixnio.com

ಪರಿಸರದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತಲೇ ಇರುವ ನಾವು ಪರಿಸರದಿಂದ ಕಲಿಯಬೇಕಾದ್ದೂ ಬೇಕಾದಷ್ಟಿದೆ. ಬೇಕಾದಾಗ ಅಂಟುವ - ಸಾಕಾದಾಗ ಬಿಡಿಸಿಕೊಳ್ಳಬಹುದಾದ ವೆಲ್‌ಕ್ರೋ‌ಗೆ ಯಾವುದೋ ಗಿಡದ ಬೀಜ ಸ್ಫೂರ್ತಿ ನೀಡಿದಂತೆ, ಇನ್ನೂ ಅನೇಕ ಸಮಸ್ಯೆಗಳಿಗೆ ಬೇಕಾದ ಪರಿಹಾರ ನಮ್ಮ ಸುತ್ತಲಿನ ಪರಿಸರದಲ್ಲೇ ಇದೆ. ಉದಾಹರಣೆಗೆ, ಜೇಡರ ಬಲೆ ಅತಿನೇರಿಳೆ (ಅಲ್ಟ್ರಾವಯಲೆಟ್) ಕಿರಣಗಳನ್ನು ಪ್ರತಿಫಲಿಸುವುದರಿಂದ ಅದು ಹಕ್ಕಿಗಳಿಗೆ ಕಾಣುತ್ತದೆ, ಹಾಗಾಗಿ ಹಕ್ಕಿಗಳು ಅದರ ಕಡೆ ಬರುವುದಿಲ್ಲ. ಕಟ್ಟಡದ ಹೊರಗೆ ಅಳವಡಿಸುವ ಗಾಜಿನಲ್ಲಿ ಇದೇ ರೀತಿಯ ಗುಣವಿದ್ದರೆ ಹಕ್ಕಿಗಳು ಅದಕ್ಕೆ ಡಿಕ್ಕಿಹೊಡೆದು ಸಾಯುವುದನ್ನು ತಪ್ಪಿಸಬಹುದು. ಇನ್ನು ವರ್ಷಪೂರ್ತಿ ಒಂದೇ ಉಷ್ಣಾಂಶ ಕಾಪಾಡಿಕೊಳ್ಳುವ ಹುತ್ತವನ್ನು ನೋಡಿ ವಿನ್ಯಾಸದ ಪಾಠ ಕಲಿತರೆ, ಕಟ್ಟಡಗಳಲ್ಲಿ ಇಂಧನದ ವೆಚ್ಚ ಹಾಗೂ ಪರಿಸರ ಮಾಲಿನ್ಯ ಎರಡೂ ಕಡಿಮೆಯಾಗುತ್ತವೆ. ಹೀಗೆ ಮನುಷ್ಯನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರಿಸರದಿಂದ ಪ್ರೇರಣೆ ಪಡೆದುಕೊಳ್ಳುವುದನ್ನು ಬಯೋಮಿಮೆಟಿಕ್ಸ್ ಅಥವಾ ಬಯೋಮಿಮಿಕ್ರಿ ಎಂದು ಕರೆಯುತ್ತಾರೆ. ಸೂಕ್ಷ್ಮವಾಗಿ ಗಮನಿಸುವ ಕುತೂಹಲ ಹಾಗೂ ಅದರಿಂದ ಕಲಿಯುವ ಶ್ರದ್ಧೆ ಬೆಳೆಸಿಕೊಂಡರೆ ನಾವೂ ಇದರ ಪ್ರಯೋಜನ ಪಡೆದುಕೊಳ್ಳುವುದು ಸಾಧ್ಯ.

ಜುಲೈ ೨೦೧೯ರ ಹಸಿರುವಾಸಿಯಲ್ಲಿ ಪ್ರಕಟವಾದ ಲೇಖನ

Many things in nature have inspired humans to come up with their own creations. Which are the creations that have inspired us? Read and learn about biomimicry in a fun way with this article in Kannada. Specially published for kids and those who are kids at heart.

Related Stories

No stories found.
ಇಜ್ಞಾನ Ejnana
www.ejnana.com