ಶುದ್ಧ ನೀರು ಪಡೆಯಲು ಮನೆಗಳಲ್ಲಿ ಆರ್. ಓ. ವಿಧಾನ ಬಳಸುವುದು ಈಗ ಸಾಮಾನ್ಯ
ಶುದ್ಧ ನೀರು ಪಡೆಯಲು ಮನೆಗಳಲ್ಲಿ ಆರ್. ಓ. ವಿಧಾನ ಬಳಸುವುದು ಈಗ ಸಾಮಾನ್ಯ

ಆರ್. ಓ. ನೀರು ಎಷ್ಟು ಸುರಕ್ಷಿತ?

ಆರ್. ಓ. ವಿಧಾನ ಶುದ್ಧವಾದ ನೀರು ಕೊಡುವುದೇನೋ ಸರಿ, ಆದರೆ ಈ ನೀರು ಸುರಕ್ಷಿತವೇ?

‘ಆರ್.ಓ. ವಿಧಾನದಲ್ಲಿ ಶುದ್ಧೀಕರಿಸಿದ ನೀರು’ ಎಂಬ ಪದಪುಂಜವನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಶುದ್ಧ ನೀರನ್ನು ಪಡೆಯಲು ಅನೇಕರ ಮನೆಗಳಲ್ಲಿ ಈ ವಿಧಾನವನ್ನು ಬಳಸುವುದು ಈಗ ಅತ್ಯಂತ ಸಾಮಾನ್ಯವಾಗಿದೆ. ಮನೆಗಳಲ್ಲಷ್ಟೇ ಅಲ್ಲ, ಶುದ್ಧನೀರನ್ನು ಕ್ಯಾನ್‌ಗಳಿಗೆ ತುಂಬಿ ಮಾರುವವರೂ ಇದೇ ತಂತ್ರಜ್ಞಾನ ಬಳಸುತ್ತಾರೆ. ಇತ್ತೀಚಿಗೆ ಹಲವು ಸಂಘ ಸಂಸ್ಥೆಗಳು ಶುದ್ಧೀಕರಣ ಘಟಕ ಸ್ಥಾಪಿಸಿ, ಉಚಿತವಾಗಿ ಅಥವಾ ಅತಿ ಕಡಿಮೆ ಬೆಲೆಗೆ, ಆರ್.ಓ. ವಿಧಾನದಲ್ಲಿ ಶುದ್ಧೀಕರಿಸಿದ ನೀರನ್ನು ಸಾರ್ವಜನಿಕರಿಗೆ ಒದಗಿಸುತ್ತಿವೆ.

ಈ ಆರ್.ಓ. ಅತ್ಯಂತ ಶುದ್ಧವಾದ ನೀರನ್ನೇನೋ ಕೊಡುತ್ತದೆ. ಆದರೆ, ಈ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿದ ನೀರು ನಿಜವಾಗಿಯೂ ಎಷ್ಟು ಸುರಕ್ಷಿತ? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಇತ್ತೀಚಿನ ವರದಿಯಲ್ಲಿ ಬೆಳಕು ಚೆಲ್ಲಿದೆ.

ಆರ್.ಓ. ವಿಧಾನದಿಂದ ಶುದ್ಧೀಕರಿಸಿದ ನೀರು ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು, ಈ ಆರ್.ಓ. ತಂತ್ರಜ್ಞಾನ ಎಂದರೇನು ಮತ್ತು ಅದು ನೀರನ್ನು ಹೀಗೆ ಶುದ್ಧಿಕರಿಸುತ್ತದೆ, ಎಂಬುದನ್ನು ತಿಳಿದುಕೊಳ್ಳುವುದು ಅತೀ ಅವಶ್ಯಕ. ಆರ್.ಓ. ಎಂಬುದು, Reverse Osmosis ಎಂಬುದರ ಹೃಸ್ವ ರೂಪ. ಕನ್ನಡದಲ್ಲಾದರೆ, ‘ಹಿಮ್ಮುಖ ಅಭಿಸರಣಿ’ ಎನ್ನಬಹುದು. ಈ ವಿಧಾನದಲ್ಲಿ ನೀರನ್ನು ಶುದ್ಧಿಕರಿಸುವಾಗ, ನೀರನ್ನು ಅತಿ ಸೂಕ್ಷ್ಮ ರಂಧ್ರಗಳಿರುವ ಪೊರೆಯ ಮೂಲಕ ಹೆಚ್ಚಿನ ಒತ್ತಡದಲ್ಲಿ ಹಾಯಿಸಲಾಗುತ್ತದೆ. ಈ ಆರ್.ಓ. ಪ್ರಕ್ರಿಯೆಯಲ್ಲಿ ಪೊರೆಯೇ ಮುಖ್ಯವಾಗಿದ್ದು, ಅದನ್ನು ಸೂಕ್ತ ರಾಸಾಯನಿಕದ ಪಾಲಿಮರೀಕರಣದಿಂದ ತಯಾರಿಸಿರುತ್ತಾರೆ. ಈ ಪೊರೆ ಅಶುದ್ಧ ಅಥವಾ ಲವಣಯುಕ್ತ ನೀರಿಗೆ ಅರೆಪಾರದರ್ಶಕವಾಗಿ ವರ್ತಿಸುತ್ತದೆ. ಅಂದರೆ, ಈ ಪೊರೆಯಲ್ಲಿರುವ ರಂಧ್ರಗಳು ಅತ್ಯಂತ ಸೂಕ್ಷ್ಮವಾಗಿದ್ದು, ಅವು ತಮ್ಮ ಮೂಲಕ ಅತ್ಯಂತ ಸಣ್ಣ ಅಣುಗಳನ್ನು ಮಾತ್ರ ದಾಟಗೊಡುತ್ತವೆ. ಹೀಗಾಗಿ, ಇಂತಹ ಪೊರೆಗಳ ಮೂಲಕ, ಲವಣಯುಕ್ತ ನೀರನ್ನು ಹೆಚ್ಚಿನ ಒತ್ತಡದಲ್ಲಿ ಹಾಯಿಸಿದಾಗ, ಅದು ನೀರಿನ ಅಣುಗಳನ್ನು ಮಾತ್ರ (ಅವು ಅತ್ಯಂತ ಸಣ್ಣ ಗಾತ್ರ ಹೊಂದಿರುವುದರಿಂದ) ತನ್ನ ಮೂಲಕ ಹರಿಯಗೊಡುತ್ತದೆ. ಆದರೆ, ನೀರಿನಲ್ಲಿರುವ ಇತರ ದೊಡ್ಡ ಅಣುಗಳ ಘಟಕಗಳನ್ನು, ಅಂದರೆ ಸಾವಯವ ವಸ್ತುಗಳನ್ನು, ಸೂಕ್ಷ್ಮ ಜೀವಿಗಳನ್ನು, ಕರಗಿದ ಮಾರಕ ಭಾರ ಧಾತುಗಳ ಆಯಾನುಗಳನ್ನು (ಸೀಸ, ಪಾದರಸ, ಆರ್ಸೆನಿಕ್ ಇತ್ಯಾದಿ), ಇತರ ಲವಣಗಳ ಆಯಾನುಗಳನ್ನು (ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕ್ಲೋರೈಡ್, ಫ್ಲೋರೈಡ್, ನೈಟ್ರೇಟ್ ಇತ್ಯಾದಿ) ತನ್ನ ಮೂಲಕ ಹರಿಯಗೊಡುವುದಿಲ್ಲ. ಹೀಗಾಗಿ, ಆರ್.ಓ. ವಿಧಾನದಿಂದ ಶುದ್ಧಿಕರಿಸಿದ ನೀರಿನಲ್ಲಿ, ನೀರಿನ ಅಣುಗಳ ಹೊರತಾಗಿ, ಬೇರೆ ರಾಸಾಯನಿಕದ ಅಣುಗಳಿರುವ ಸಂಭವ ಬಹಳ ಕಡಿಮೆ. ಆದ್ದರಿಂದ, ಆರ್.ಓ. ವಿಧಾನದಲ್ಲಿ ಶುದ್ಧೀಕರಿಸಿದ ನೀರು ಅತ್ಯಂತ ಶುದ್ಧ.

ಆರ್.ಓ. ವಿಧಾನದಲ್ಲಿ ಅತ್ಯಂತ ಶುದ್ಧ ನೀರು ದೊರೆಯುವಂತಾದರೆ, ಒಳ್ಳೆಯದೇ ಆಯಿತಲ್ಲ!? ಇಲ್ಲ! ಅತಿ ಶುದ್ಧ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ (ಅತೀಂ ಸರ್ವತ್ರ ವರ್ಜ್ಯಮ್) ಎನ್ನುವುದೇ, WHO ದ ಕಾಳಜಿ. ಕುಡಿಯಲು ಯೋಗ್ಯವಾದ ನೀರಿನಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಕರಗಿದ ಲವಣಗಳಿರುವುದು ಹೇಗೆ ಉಚಿತವಲ್ಲವೋ, ಹಾಗೆಯೇ ಲವಣದ ಅಂಶಗಳೇ ಇರದಿರುವುದೂ ಕೂಡ ಅಪಾಯಕಾರಿ. WHO ನ ಮಾನದಂಡಗಳ ಪ್ರಕಾರ, ನೀರು ಕುಡಿಯಲು ಯೋಗ್ಯವಾಗಬೇಕಾದರೆ, ಒಂದು ಲೀಟರ್ ನೀರಿನಲ್ಲಿ, ಕನಿಷ್ಟ 100 ಮಿ.ಗ್ರಾಂ ನಷ್ಟಾದರೂ ಕರಗಿದ ಲವಣಗಳಿರಬೇಕು (Total Dissolved Salts-TDS). ಆದರೆ, ಆರ್.ಓ. ನೀರಿನಲ್ಲಿ TDS ನ ಪ್ರಮಾಣ, 50 ಮಿ.ಗ್ರಾಂಗಿಂತ ಕಡಿಮೆ ಇರುತ್ತದೆ. ಆದ್ದರಿಂದ, ಆರ್.ಓ. ನೀರು ಕುಡಿಯಲು ಅಷ್ಟು ಯೋಗ್ಯವಲ್ಲ ಎಂಬುದು, WHO ದ ಆತಂಕ.

ಈ ಆತಂಕಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ಆರ್.ಓ. ನೀರಿನಿಂದ ದೇಹಕ್ಕೆ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಖನಿಜಾಂಶಗಳ ಕೊರತೆಯಾಗುತ್ತಿದೆ ಎಂಬುದು. ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಖನಿಜಾಂಶಗಳ ಒಂದು ಪ್ರಮುಖ ಮೂಲ ಕುಡಿಯುವ ನೀರು. ಒಂದು ಲೀಟರ್ ಕುಡಿಯುವ ನೀರಿನಲ್ಲಿ, ಕನಿಷ್ಟ 30 ಮಿ.ಗ್ರಾಂನಷ್ಟು ಕ್ಯಾಲ್ಸಿಯಂ ಮತ್ತು 10 ಮಿ.ಗ್ರಾಂನಷ್ಟು ಮೆಗ್ನೀಷಿಯಂ ಇರುವುದು ಒಳ್ಳೆಯದು. ಆದರೆ, ಆರ್.ಓ. ನೀರಿನಲ್ಲಿ ಎಲ್ಲ ರೀತಿಯ ಲವಣಗಳ ಅಂಶಗಳೇ ಕಡಿಮೆ ಇರುವುದರಿಂದ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂಗಳ ಪ್ರಮಾಣವೂ ಕಡಿಮೆ ಇರುತ್ತದೆ. ಆದ್ದರಿಂದ ಆರ್.ಓ. ನೀರನ್ನು ಬಹುಕಾಲದವರೆಗೆ ಉಪಯೋಗಿಸುವುದರಿಂದ, ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಪೋಷಕಾಂಶಗಳ ಕೊರತೆ ಉಂಟಾಗಬಹುದು. ಇದು ಹಲವು ತೊಂದರೆಗಳಿಗೆ ಕಾರಣವೂ ಆಗಬಹುದು.

ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನ ಆಯಾನುಗಳು, ಕೇವಲ ಪೋಷಕಾಂಶದ ದೃಷ್ಟಿಯಿಂದಷ್ಟೇ ಅಲ್ಲ, ನೀರಿನ ಆಮ್ಲೀಯತೆಯನ್ನು (acidity) ನಿಯಂತ್ರಿಸುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಕರಗಿರುವ ಇಂಗಾಲದ ಡಯಾಕ್ಸೈಡ್ (CO2) ನಿಂದಾಗಿ ನೀರಿಗೆ ಬರುವ ಆಮ್ಲೀಯತೆಯನ್ನು ನಿವಾರಿಸಲು ಸಹಾಯ ಮಾಡುವುದು, ಇದೇ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನ ಅಯಾನುಗಳು. ಆಮ್ಲೀಯತೆಯನ್ನು ನಿವಾರಿಸುವುದರ ಜೊತೆಗೆ, ಸ್ವಲ್ಪ ಮಟ್ಟಿಗೆ ಕ್ಷಾರೀಯತೆಯನ್ನು ತಂದು ಕೊಡುವಷ್ಟು ಪ್ರಮಾಣದಲ್ಲಿ, ಕುಡಿಯುವ ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಆಯಾನುಗಳ ಅವಶ್ಯಕತೆ ಇರುತ್ತದೆ. ಆದರೆ, ಆರ್.ಓ. ಪ್ರಕ್ರಿಯೆಯಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಆಯಾನುಗಳು ನೀರಿನಿಂದ ಬೇರ್ಪಡುತ್ತವೆ. ಆದರೆ CO2 ಅಣುಗಳು, ಅವುಗಳ ಸಣ್ಣ ಗಾತ್ರದ ಕಾರಣದಿಂದ ಸುಲಭವಾಗಿ ಅರೆಪಾರದರ್ಶಕ ಪೊರೆಯನ್ನು ದಾಟಿ, ಶುದ್ಧೀಕರಿಸಿದ ನೀರಿನೊಟ್ಟಿಗಿರುತ್ತವೆ. ಈ ಎರಡೂ ಕಾರಣದಿಂದ, ಆರ್.ಓ. ನೀರು ಆಮ್ಲೀಯ ಗುಣಗಳನ್ನು ಹೊಂದಿರುತ್ತದೆ. ಹೀಗೆ ಆಮ್ಲೀಯ ಗುಣಗಳನ್ನು ಹೊಂದಿರುವ ನೀರು ಸೇವನೆಗೆ ಯೋಗ್ಯವಲ್ಲ.

ಇದು ಆರ್.ಓ. ನೀರಿನ ಬಳಕೆಯ ಔಚಿತ್ಯದ ಬಗ್ಗೆ ಆಯಿತು. ಆರ್.ಓ. ನೀರನ್ನು ಬಳಸುವಾಗ, ನಮಗೆ ಅದನ್ನು ತಯಾರಿಸುವಲ್ಲಿ ವ್ಯರ್ಥವಾಗುವ ನೀರಿನ ಬಗ್ಗೆಯೂ ಮಾಹಿತಿ ಇರಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಆರ್.ಓ. ನೀರು ತಯಾರಾಗುವಾಗ ಒಂದು ಲೀಟರ್ ಆರ್.ಓ. ಶುದ್ಧ ನೀರು ತಯಾರಿಸಲು, ಸುಮಾರು ಆರು ಲೀಟರ್ ನಷ್ಟು ನೀರು ಖರ್ಚಾಗುತ್ತದೆ. ಅಂದರೆ ಒಂದು ಲೀಟರ್ ಶುದ್ಧ ನೀರು ಪಡೆಯಲು, ಐದು ಲೀಟರ್ ನೀರನ್ನು ಚೆಲ್ಲಬೇಕಾಗುತ್ತದೆ. ಆರ್.ಓ. ಪೊರೆಯಲ್ಲಿ ಸೇರಿರುವ ಕಲ್ಮಶಗಳನ್ನು ತೊಳೆಯಲು, ಇದು ಅವಶ್ಯಕ ಕೂಡ. ಕುಡಿಯುವ ನೀರಿನ ಕೊರತೆಯಿಂದ, ಸಾವು-ನೋವುಗಳು ಸಂಭವಿಸುತ್ತಿರುವ ಪರಿಸ್ಥಿತಿಯಲ್ಲಿ ಈ ಲೆಕ್ಕಾಚಾರ ಅತ್ಯಂತ ಮಹತ್ವದ್ದು. ಹೀಗೆ ವ್ಯರ್ಥವಾಗುವ ನೀರಿನಲ್ಲಿ TDS ನ ಪ್ರಮಾಣ ಹೆಚ್ಚಿರುವುದರಿಂದ, ಅದು ಕುಡಿಯಲು ಅಥವಾ ಸೇವಿಸಲು ಸರ್ವಥಾ ಯೋಗ್ಯವಲ್ಲ. ಹೀಗೆ ವ್ಯರ್ಥವಾಗುವ ನೀರನ್ನು ಸಂಗ್ರಹಿಸಿ, ಅದನ್ನು ಇತರೆ ಕೆಲಸಗಳಿಗೆ ಉಪಯೋಗಿಸಬಹುದಾದರೂ, ಇದರಲ್ಲಿ ಕರಗಿದ ಲವಣಗಳ ಪ್ರಮಾಣ, ಸಾಮಾನ್ಯ ನೀರಿಗಿಂತಲೂ ಹೆಚ್ಚಾಗಿರುತ್ತದೆ. ಹೀಗಾಗಿ, ಹೆಚ್ಚಿನ ಆರ್.ಓ. ಘಟಕಗಳಲ್ಲಿ, ಈ ನೀರನ್ನು ಸಂಗ್ರಹಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಸಂಗ್ರಹಿಸಲು ಹೋಗುವುದೇ ಆದರೂ, ಅದಕ್ಕೆ ಹೆಚ್ಚಿನ ವ್ಯವಸ್ಥೆ ಮತ್ತು ಸ್ಥಳಾವಕಾಶ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಆರ್.ಓ. ದಿಂದ ಶುದ್ಧ ನೀರು ತಯಾರಾಗುವಾಗ, ಒಂದಕ್ಕೆ ಐದರಷ್ಟು ನೀರು ಪೋಲಾಗುವುದು ಅತ್ಯಂತ ಸಾಮಾನ್ಯ. ತಾಂತ್ರಿಕತೆ ಬೆಳೆದಂತೆ, ಹೀಗೆ ವ್ಯರ್ಥವಾಗುವ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿರುವುದು, ಸ್ವಲ್ಪ ಸಮಧಾನಕರ ವಿಷಯ.

ಒಟ್ಟಿನಲ್ಲಿ ಹೇಳುವುದಾದರೆ, ನೀರನ್ನು ಕುದಿಸಿ ಅಥವಾ ಬೇರೆ ವಿಧಾನದಿಂದ ತೆಗೆಯಲಾಗದ ಮಾರಕ ಆಯಾನುಗಳನ್ನು (ಭಾರಧಾತುಗಳ ಆಯಾನುಗಳು, ಫ್ಲೋರೈಡ್, ನೈಟ್ರೇಟ್ ಇತ್ಯಾದಿ) ತೆಗೆಯಲು ಆರ್.ಓ. ಅತ್ಯಂತ ಸಹಾಯಕವಾದರೂ, ಅದರ ಜೊತೆಗೆ ಅವಶ್ಯಕವಾದ ಇತರ ಖನಿಜಾಂಶಗಳನ್ನೂ ತೆಗೆಯುವುದರ ಮೂಲಕ ಮತ್ತು ಒಂದಕ್ಕೆ ಐದರಷ್ಟು ನೀರನ್ನು ಪೋಲು ಮಾಡುವುದರ ಮೂಲಕ, ಆರ್.ಓ. ಮಾರಕವಾಗುತ್ತದೆ. ಆದ್ದರಿಂದ, ನೀರಿನಲ್ಲಿ ಮಾರಕ ಆಯಾನುಗಳು ಇರುವೆಡೆಗಳಲ್ಲಿ, ಆರ್.ಓ. ಬಳಕೆ ಅವಶ್ಯಕವೇ ಹೊರತು ಬೇರೆಡೆಗಳಲ್ಲಿ ಖಂಡಿತ ಅಲ್ಲ. ಆರ್.ಓ. ಬಳಕೆ ಮಾಡುವುದೇ ಆಗಿದ್ದಲ್ಲಿ, ಆರ್.ಓ. ವಿಧಾನದಿಂದ ಶುದ್ಧೀಕರಿಸಿದ ನೀರಿಗೆ ಖನಿಜಾಂಶಗಳನ್ನು ಸೂಕ್ತ ಪ್ರಮಾಣದಲ್ಲಿ ಮರು ಪೂರಣ ಮಾಡಿಕೊಂಡು, ಬಳಕೆ ಮಾಡಿಕೊಳ್ಳುವುದು, ಹಾಗೆಯೇ ಪೋಲಾಗುವ ನೀರಿನ ಪ್ರಮಾಣವನ್ನು ತಗ್ಗಿಸುವ ತಂತ್ರ ಜ್ಞಾನವನ್ನು ಬಳಸಿಕೊಳ್ಳುವುದು ಅತ್ಯವಶ್ಯಕ.

Related Stories

No stories found.
logo
ಇಜ್ಞಾನ Ejnana
www.ejnana.com