ಹಲ್ಲಿಯ ಪಾದದ ವಿಶಿಷ್ಟ ರಚನೆಯಿಂದಾಗಿ ಅದು ಎಲ್ಲಿ ಬೇಕಾದರೂ ಓಡಾಡಬಹುದು
ಹಲ್ಲಿಯ ಪಾದದ ವಿಶಿಷ್ಟ ರಚನೆಯಿಂದಾಗಿ ಅದು ಎಲ್ಲಿ ಬೇಕಾದರೂ ಓಡಾಡಬಹುದುImage by Rudy and Peter Skitterians from Pixabay

ಪುಟಾಣಿ ಇಜ್ಞಾನ: ಪುಟ್ಟನ ಸಿನಿಮಾ ಮತ್ತು ಹಲ್ಲಿಯ ಪಾದ

ಹಲ್ಲಿ ಗೋಡೆಯ ಮೇಲೆ ಅಷ್ಟು ಸುಲಭವಾಗಿ ಓಡಾಡೋದು ಹೇಗೆ?

ಇವತ್ತು ಶಾಲೆಗೆ ರಜೆ. ಪುಟ್ಟ ಪುಟ್ಟಿ ಇಬ್ಬರೂ ಬೆಳಿಗ್ಗೆಯೇ ಸಿನಿಮಾಗೆ ಹೋಗಿಬಂದಿದ್ದರು. ಮನೆಗೆ ಮರಳಿ ರಾತ್ರಿ ಊಟದ ಹೊತ್ತಾದರೂ ಅವರ ತಲೆಯಲ್ಲಿ ಇನ್ನೂ ಸಿನಿಮಾ ದೃಶ್ಯಗಳೇ ಓಡುತ್ತಿದ್ದವು. ಆ ಸಿನಿಮಾದ ನಾಯಕ ಅದ್ಯಾವುದೋ ವಿಶೇಷ ಪಾದರಕ್ಷೆ ತೊಟ್ಟು ಗೋಡೆ ಮೇಲೆಲ್ಲ ಓಡಾಡಿದ್ದನ್ನಂತೂ ಅವರು ಪದೇಪದೇ ನೆನಪಿಸಿಕೊಳ್ಳುತ್ತಿದ್ದರು.

"ಅಮ್ಮಾ, ನಮಗೂ ಆ ಥರಾ ಶೂ ಸಿಗುತ್ತಾ?" ಊಟಕ್ಕೆ ಬಡಿಸುತ್ತಿದ್ದ ಅಮ್ಮನನ್ನು ಪುಟ್ಟ ಕೇಳಿದ. "ನನಗೂ ಬೇಕು!" ಪುಟ್ಟಿ ಹೇಳಿದಳು. "ಮೊದಲು ಊಟ ಮುಗಿಸಿ, ಶೂ ಬಗ್ಗೆ ಆಮೇಲೆ ನೋಡೋಣ" ಎಂದರು ಅಮ್ಮ.

ಸಿನಿಮಾ ಗುಂಗಿನಲ್ಲೇ ಊಟ ಮುಗಿಸಿದ ಪುಟ್ಟ, ತೊಳೆದ ತಟ್ಟೆಯನ್ನು ಅಡುಗೆಮನೆಯಲ್ಲಿ ಇಡಲು ಹೋದ. ಯಾಕೋ ತಲೆ ಎತ್ತಿ ನೋಡಿದವನು "ಅಮ್ಮಾ, ಹಲ್ಲಿ!" ಎಂದು ಕೂಗಿದ. ಅಮ್ಮನಿಗಿಂತ ಮೊದಲು ಓಡಿ ಬಂದ ಪುಟ್ಟಿ ಕೇಳಿದಳು, "ಆ ಸಿನಿಮಾದ ಹೀರೋ ಥರಾನೇ ಓಡಾಡ್ತಾ ಇದೆ ಅಲ್ವಾ ಇದು?"

ಅರೆ, ಹೌದಲ್ಲ ಅನ್ನಿಸಿತು ಪುಟ್ಟನಿಗೆ. ಸಿನಿಮಾದ ನಾಯಕ ಗೋಡೆಯ ಮೇಲೆ ಓಡಾಡಿದರೆ ಈ ಹಲ್ಲಿ ಪೂರ್ತಿ ತಲೆಕೆಳಗಾಗಿ ಸೂರಿನ ಮೇಲೆಯೇ ಓಡಾಡುತ್ತಿದೆ. ಸಿನಿಮಾ ಹೀರೋಗೆ ಇದ್ದಂತೆ ವಿಶೇಷ ಪಾದರಕ್ಷೆ ಇಲ್ಲದೆಯೇ ಹಲ್ಲಿ ಈ ಸಾಹಸ ಮಾಡುತ್ತಿದೆ!

ಸಿನಿಮಾದ ನಾಯಕ ಗೋಡೆಯ ಮೇಲೆ ಓಡಾಡಿದರೆ ಈ ಹಲ್ಲಿ ಪೂರ್ತಿ ತಲೆಕೆಳಗಾಗಿ ಸೂರಿನ ಮೇಲೆಯೇ ಓಡಾಡುತ್ತಿದೆ!
ಸಿನಿಮಾದ ನಾಯಕ ಗೋಡೆಯ ಮೇಲೆ ಓಡಾಡಿದರೆ ಈ ಹಲ್ಲಿ ಪೂರ್ತಿ ತಲೆಕೆಳಗಾಗಿ ಸೂರಿನ ಮೇಲೆಯೇ ಓಡಾಡುತ್ತಿದೆ!Raghupathi Sringeri

"ಅಮ್ಮಾ," ಪುಟ್ಟ ಇನ್ನೊಮ್ಮೆ ಕೂಗಿದ, "ಈ ಹಲ್ಲಿ ಗೋಡೆ ಮೇಲೆ ಅಷ್ಟು ಸುಲಭವಾಗಿ ಓಡಾಡೋದು ಹೇಗೆ?"

"ಅದರ ಪಾದದಲ್ಲಿ ಸ್ಟಿಕರ್ ಥರ ಅಂಟು ಇರುತ್ತಂತೆ ಕಣೋ, ಅದು ಇರೋದ್ರಿಂದಲೇ ಹಲ್ಲಿ ಎಲ್ಲಿ ಬೇಕಾದರೂ ಓಡಾಡಬಹುದು ಅಂತ ಸ್ಕೂಲಲ್ಲಿ ನಮ್ಮ ಅಕ್ಕ ಹೇಳ್ತಿದ್ರು," ಅಮ್ಮನಿಗಿಂತ ಮೊದಲು ಪುಟ್ಟಿಯೇ ಉತ್ತರಿಸಿದಳು.

"ಪಾದದಲ್ಲಿ ಸ್ಟಿಕರ್ ಇದೆಯಾ?" ಪುಟ್ಟ ಕೇಳಿದ, "ನಮಗೂ ಆ ಥರಾ ಸ್ಟಿಕರ್ ಹಾಕಿಬಿಟ್ಟರೆ ನಾವು ನಡೆದಾಡುವುದು ಹೇಗೆ?"

"ಹಲ್ಲಿಯ ಪಾದದ ಅಂಟು, ಸ್ಟಿಕರ್‌ನ ಅಂಟು ಎರಡೂ ಬೇರೆಬೇರೆ ರೀತಿಯವು," ಅಮ್ಮ ಹೇಳಿದರು. ಅವರಿಗೆ ಹಲ್ಲಿ ಕಂಡರೆ ಭಯವಾದರೂ ಜೀವವಿಜ್ಞಾನದ ಬೇಕಾದಷ್ಟು ವಿಷಯಗಳು ಗೊತ್ತಿವೆ. "ಹಲ್ಲಿಯ ಪಾದದ ಅಡಿಯಲ್ಲಿ ಕೂದಲಿಗಿಂತ ತೆಳ್ಳಗಿರುವ setae ಎಂಬ ರಚನೆಗಳಿರುತ್ತವೆ. ಗೋಡೆಗೆ ಅಥವಾ ಸೂರಿಗೆ ಸರಾಗವಾಗಿ ಅಂಟಿಕೊಳ್ಳಲು ಅದಕ್ಕೆ ಈ ರಚನೆಗಳೇ ಸಹಾಯ ಮಾಡುತ್ತವೆ. ಕಾಲು ಎತ್ತಿದರೆ ಅಂಟು ಬಿಡುತ್ತದೆ, ಮತ್ತೆ ಇಟ್ಟ ತಕ್ಷಣ ಅಂಟಿಕೊಂಡುಬಿಡುತ್ತದೆ!"

ಪುಟ್ಟ ಪುಟ್ಟಿ ಇಬ್ಬರೂ ಆಸಕ್ತಿಯಿಂದ ಕೇಳುತ್ತಿದ್ದರು. ಅಷ್ಟರಲ್ಲಿ ಬಚ್ಚಲುಮನೆಯಿಂದ ಅಪ್ಪನ ಧ್ವನಿ ಕೇಳಿಸಿತು, "ಮತ್ತೆಮತ್ತೆ ಸ್ಟಿಕರ್ ಹಾಕಿ ಮೂರು ಸಾರಿ ಅಂಟಿಸಿದ್ದಾಯಿತು, ಈ ಟೂತ್ ಬ್ರಶ್ ಸ್ಟಾಂಡು ನೋಡು ಮತ್ತೆ ಬಿದ್ದುಹೋಗಿದೆ!"

ಪುಟ್ಟನಿಗೊಂದು ಐಡಿಯಾ ಬಂತು. "ಅಪ್ಪಾ, ಹಲ್ಲಿಯ ಪಾದದಲ್ಲಿ ಇದೆಯಂತಲ್ಲ, ಅಂಥದ್ದೇ ಅಂಟಿರುವ ಸ್ಟಿಕರ್ ತೊಗೊಂಡು ಬನ್ನಿ. ಅದನ್ನು ಹಾಕಿ ಅಂಟಿಸಿಬಿಟ್ಟರೆ ಟೂತ್ ಬ್ರಶ್ ಸ್ಟಾಂಡು ಇನ್ನೊಂದು ಸಲ ಬೀಳೋದೇ ಇಲ್ಲ!"

ಹಲ್ಲಿಯ ಪಾದದ ಅಡಿಯಲ್ಲಿ ಕೂದಲಿಗಿಂತ ತೆಳ್ಳಗಿರುವ ರಚನೆಗಳಿರುತ್ತವೆ
ಹಲ್ಲಿಯ ಪಾದದ ಅಡಿಯಲ್ಲಿ ಕೂದಲಿಗಿಂತ ತೆಳ್ಳಗಿರುವ ರಚನೆಗಳಿರುತ್ತವೆAuthor: Autumn, K; Source: How gecko toes stick. American Scientist 94, 124-132. Obtained from en.wikipedia.org under CC BY-SA 3.0

ಬಹುತೇಕ ಸ್ಟಿಕರ್‌ಗಳನ್ನು ಒಂದು ಸಾರಿ ಮಾತ್ರವೇ ಬಳಸಲು ಸಾಧ್ಯ. ಎಷ್ಟೇ ಜೋಪಾನವಾಗಿ ಬಿಡಿಸುತ್ತೇವೆಂದರೂ ಅವನ್ನು ಎರಡನೇ ಬಾರಿ ಬಳಸುವುದು ಕಷ್ಟವೇ. ಈ ಪರಿಸ್ಥಿತಿ ಬದಲಿಸಿ, ಎಷ್ಟು ಸಾರಿ ಬೇಕಾದರೂ ಅಂಟಿಕೊಳ್ಳುವಂತಹ ಸ್ಟಿಕರ್‌ಗಳನ್ನು ತಯಾರಿಸುವ ಪ್ರಯತ್ನದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. ಅವರಿಗೆ ಪ್ರೇರಣೆ ನೀಡಿರುವುದು ಹಲ್ಲಿಗಳು. ಹಲ್ಲಿಯ ಕಾಲಿನಲ್ಲಿರುವ ರಚನೆಯನ್ನೇ ಅನುಸರಿಸಿ ವಿಶಿಷ್ಟ ವಸ್ತುವೊಂದನ್ನು ರೂಪಿಸಿರುವ ವಿಜ್ಞಾನಿಗಳು, ಅದನ್ನು ಎಲ್ಲಿಗೆ ಎಷ್ಟು ಸಾರಿ ಬೇಕಾದರೂ ಅಂಟಿಸುವುದನ್ನು-ಬಿಡಿಸುವುದನ್ನು ಸಾಧ್ಯವಾಗಿಸಿದ್ದಾರೆ. ಹೆಚ್ಚಿನ ಉಷ್ಣತೆ ಹಾಗೂ ಒತ್ತಡದಲ್ಲೂ ಚೆನ್ನಾಗಿ ಕೆಲಸಮಾಡುವ ಈ ಅಂಟನ್ನು ಭೂಮಿಯ ಮೇಲೆ ಮಾತ್ರವಲ್ಲ, ಬಾಹ್ಯಾಕಾಶದಲ್ಲೂ ಬಳಸುವುದು ಸಾಧ್ಯವಂತೆ. ಮುಂದೊಂದು ದಿನ ಈ ತಂತ್ರಜ್ಞಾನ ನಮಗೂ ಸಿಕ್ಕರೆ ಪುಟ್ಟ ನೋಡಿದ ಸಿನಿಮಾದ ನಾಯಕನಂತೆ ನಾವೂ ಗೋಡೆಯ-ಸೂರಿನ ಮೇಲೆಲ್ಲ ನಡೆದಾಡುವುದು ಸಾಧ್ಯವಾಗಬಹುದೋ ಏನೋ!

ಸೆಪ್ಟೆಂಬರ್ ೨೦೧೯ರ ಹಸಿರುವಾಸಿಯಲ್ಲಿ ಪ್ರಕಟವಾದ ಲೇಖನ

Lizards can walk on the walls, and also on the roof. How is it possible? Read and learn about the specialty about their feet in a fun way with this article in Kannada. Specially published for kids and those who are kids at heart.

Related Stories

No stories found.
logo
ಇಜ್ಞಾನ Ejnana
www.ejnana.com