ಮಿಥೋಸ್ ‌ಪುಸ್ತಕದಲ್ಲಿ ಸ್ಟೀಫನ್ ‌ಫ್ರೈ ಜೇನ್ನೊಣಗಳು ಹೇಗೆ ಸಮಾಜ ಜೀವಿಗಳಾದುವು. ಜೇನ್ನೊಣಕ್ಕೆ ಕುಟುಕುವ ಮುಳ್ಳು ಇರುವುದೇಕೆ ಎನ್ನುವುದಕ್ಕೆ ಒಂದು ಆಶ್ಚರ್ಯಕರವಾದ ಕಥೆ ಹೇಳುತ್ತಾನೆ.
ಮಿಥೋಸ್ ‌ಪುಸ್ತಕದಲ್ಲಿ ಸ್ಟೀಫನ್ ‌ಫ್ರೈ ಜೇನ್ನೊಣಗಳು ಹೇಗೆ ಸಮಾಜ ಜೀವಿಗಳಾದುವು. ಜೇನ್ನೊಣಕ್ಕೆ ಕುಟುಕುವ ಮುಳ್ಳು ಇರುವುದೇಕೆ ಎನ್ನುವುದಕ್ಕೆ ಒಂದು ಆಶ್ಚರ್ಯಕರವಾದ ಕಥೆ ಹೇಳುತ್ತಾನೆ.Image by PollyDot from Pixabay

ಜೇನ್ನೊಣಗಳು, ಗ್ರೀಕ್‌ಪುರಾಣ, ವಿಜ್ಞಾನ ಹಾಗೂ ಸ್ಟೀಫನ್‌ಫ್ರೈ

ಪ್ರೊ. ರಾಘವೇಂದ್ರ ಗದಗಕರ್ ಬರೆಯುವ 'ವಿಸ್ಮಯಕ್ಕಿಂತ ವಿಸ್ಮಯ' ಸರಣಿಯಲ್ಲಿ ಇನ್ನೊಂದು ಬರಹ

ಸರ್‌ ನೀಲ್‌ ಪಿಯರ್ಸ್‌ ಕೊವರ್ಡ್‌ ಎಂಬ ಇಂಗ್ಲೀಷ್‌ ನಾಟಕಕಾರ, ಸಂಗೀತಕಾರ, ನಿರ್ದೇಶಕ, ನಟ ಮತ್ತು ಗಾಯಕ, “ಕಾಯಕ ಎನ್ನುವುದು ಖುಷಿಗಿಂತಲೂ ಖುಷಿಯ ವಿಷಯ,” ಎಂದಿದ್ದಾನೆ. ಇದು ವಿಜ್ಞಾನದ ಮಟ್ಟಿಗೂ ನಿಜ, ನಿಜವಿರಬೇಕು ಎನ್ನುವುದು ನನ್ನ ಅನಿಸಿಕೆ. ಆದರೆ ಜನಸಾಮಾನ್ಯರಿಗಾಗಲಿ, ಬಹಳಷ್ಟು ವಿಜ್ಞಾನಿಗಳಿಗೂ ಹಾಗೆ ತೋರುವುದಿಲ್ಲ ಎನ್ನುವುದು ನಿರಾಶೆಯ ವಿಷಯ. ಹೀಗೇಕೆ? ಬಹುಶಃ ನಾವು ವಿಜ್ಞಾನವನ್ನು ಹಾಗೂ ವಿಜ್ಞಾನಿಗಳನ್ನು ಬಹಳ ಸೀಮಿತ ಅರ್ಥದಲ್ಲಿ ವ್ಯಾಖ್ಯಾನಿಸುವುದರಿಂದ ಇರಬಹುದೇ? ಅಥವಾ ವಿಜ್ಞಾನದಲ್ಲಿ ಯಾರು ತೊಡಗಿಕೊಳ್ಳಬೇಕು, ಏತಕ್ಕಾಗಿ ತೊಡಗಿಕೊಳ್ಳಬೇಕು ಎನ್ನುವ ಬಗ್ಗೆ ನಮಗೆ ಇರುವ ಸಂಕುಚಿತ ಭಾವನೆಯೇ? ವಿಜ್ಞಾನ ಹಾಗೂ ವಿಜ್ಞಾನಿಗಳ ಬಗ್ಗೆ ನಾವು ಇನ್ನೂ ಸ್ವಲ್ಪ ವಿಶಾಲವಾಗಿ ಚಿಂತಿಸಿದರೆ, ವಿಜ್ಞಾನ ಎಷ್ಟೊಂದು ಖುಷಿಯ ವಿಷಯ. ಖುಷಿಗಿಂತಲೂ ಖುಷಿಯ ವಿಷಯ ಎನಿಸಬಹುದು. ಇದು ಆಗಬೇಕಾದರೆ ವಿಜ್ಞಾನಿಗಳು ಇನ್ನಷ್ಟು ವಿಶಾಲವಾಗಿ ಯೋಚಿಸಬೇಕು. ವಿಜ್ಞಾನದ ಸೀಮಿತ ವಲಯವನ್ನು ಬಿಟ್ಟು ಹೊರಬರಬೇಕು. ಹೊರಗೆ ಇರುವ ಅಪಾರವಾದ ಜ್ಞಾನ ಹಾಗೂ ಅರಿವಿನಿಂದ ಪ್ರೇರಣೆ ಪಡೆಯಬೇಕು.

ಇದು ಹೇಳಿದಷ್ಟು ಸುಲಭವಲ್ಲ ಬಿಡಿ. ಉದಾಹರಣೆಗೆ ನಾನು ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆಯಲ್ಲಿ ಬರುವ ಪುಸ್ತಕಗಳ ವಿಮರ್ಶೆಯ ಧ್ವನಿಪತ್ರಿಕೆಯನ್ನು ತಪ್ಪದೇ ಕೇಳುತ್ತೇನೆ. ಸ್ವಲ್ಪ ದಿನಗಳ ಹಿಂದೆ ಅದರಲ್ಲಿ ಸ್ಟೀಫನ್‌ಫ್ರೈ ಹೇಳಿದ ಒಂದು ಮಾತು ನನ್ನನ್ನು ಅಚ್ಚರಿಗೊಳಿಸಿತು. ಮತ್ತೊಮ್ಮೆ ಅವನು ಹೇಳಿದ ಹಲವು ಆಡಿಯೋ ಪುಸ್ತಕಗಳತ್ತ ಗಮನ ಸೆಳೇಯಿತು. ಅದರಲ್ಲೂ ಅವನು ಹೇಳಿದ ಎರಡು ವಿಷಯಗಳು ಗಾಢವಾಗಿ ತಟ್ಟಿದವು. ಮೊದಲಿಗೆ ಫ್ರೈ, ಸ್ಟೀಫನ್‌ಕಿಂಗ್‌ಎಂಬಾತ ಬರೆದ ಆನ್‌ರೈಟಿಂಗ್‌ ಎಂಬ ಪುಸ್ತಕದಲ್ಲಿ ಇದ್ದ ಸಲಹೆಯ ಬಗ್ಗೆ ಹೇಳಿದ್ದ. ಬರೆಯುವಾಗ ಎಲ್ಲ ಬಗೆಯ ವಿಶೇಷಣಗಳನ್ನೂ ಕಿತ್ತೊಗೆಯಿರಿ ಎಂದು ಅದರಲ್ಲಿ ಕಿಂಗ್‌ ಬರೆದಿದ್ದ. “ನಾನೂ ಹಾಗೆ ಮಾಡಲು ಪ್ರಯತ್ನಿಸಿದ್ದೇನೆ. ಆದರೆ ಅದು ಚೆನ್ನಾಗಿರುವುದಿಲ್ಲ. ನಾನೊಬ್ಬ ಬರಹಗಾರ. ನಾನು ಬರೆದದ್ದು ಅತಿಯಾಯಿತು ಎಂದು ಜನ ಭಾವಿಸಬಹುದು. ಹಾಗೆ ಇದ್ದರೆ, ಅವರು ಅದನ್ನು ಓದದೆಯೇ ಬೇರೆ ಪುಸ್ತಕವನ್ನು ಓದುತ್ತಾರೆ ಅಷ್ಟೆ.”

“ಯಾವ ಕಲಾವಿದನೂ ಜನಮೆಚ್ಚುಗೆಯನ್ನು ನಿರೀಕ್ಷಿಸುವುದಿಲ್ಲ. ಹಾಗೆಯೇ ಆತ್ಮ ಸಮರ್ಥನೆಯಲ್ಲಿಯೂ ಆತನಿಗೆ ಆಸಕ್ತಿ ಇರುವುದಿಲ್ಲ. ಏನಿದ್ದರೂ ಸ್ವವಿಮರ್ಶೆ ಮಾಡಿಕೊಳ್ಳಬಹುದೇ ಹೊರತು ಆತ್ಮಸಮರ್ಥನೆಯಲ್ಲ. ಕಲಾವಿದರು ಸ್ವಭಾವತಃ ಧೃಢಮನಸ್ಸಿನವರೂ, ಅಪಾಯಕಾರಿ ಹಾಗೂ ಕ್ಲಿಷ್ಟ ವಿಚಾರಗಳಿರುವ ಮನಸ್ಸಿನವರು.” ಎಂದು ತನ್ನ ಜೀವನಚರಿತ್ರೆಯ ಎರಡನೆಯ ಅಧ್ಯಾಯವನ್ನು ಕಿಂಗ್ ಹೀಗೆ ಆರಂಭಿಸಿದ್ದರಲ್ಲಿ ಅಚ್ಚರಿ ಪಡಬೇಕಿಲ್ಲ.

ಒಂದು ದಿನ ಟೆಲಿವಿಷನ್ನಿನಲ್ಲಿ ನಾನು ಸಿಮಿ ಗರೆವಾಲ್‌ ರಾಜಕಪೂರರನ್ನು ಸಂದರ್ಶಿಸುವುದನ್ನು ನೋಡಿದೆ. ನಿಮ್ಮ ಚಲನಚಿತ್ರಗಳಲ್ಲಿ ನಿಮಗೆ ಅತಿ ಪ್ರಿಯವಾದದ್ದು ಯಾವುದು ಎಂದು ಆಕೆ ಕೇಳಿದಾಗ, ತುಸು ಹಿಂಜರಿದ ರಾಜ್‌ಕಪೂರ್‌ಕೊನೆಗೆ ‌ರಲ್ಲಿ ತೆರೆ ಕಂಡ ಮೇರಾ ನಾಮ್‌ ಜೋಕರ್‌ ಎಂದು ಹೇಳಿದರು. “ಆದರೆ ಅದು ಫ್ಲಾಪ್‌ ಚಿತ್ರವಲ್ಲವೇ?” ಎಂದು ಗರೆವಾಲ್‌ಕೇಳಿದಾಗ ರಾಜಕಪೂರ್‌ನಕ್ಕು ಹೇಳಿದರು. ನನ್ನ ಎಲ್ಲ ಚಿತ್ರಗಳೂ ನನಗೆ ನನ್ನ ಮಕ್ಕಳಂತೆ, ಎಲ್ಲವನ್ನೂ ನಾನು ಪ್ರೀತಿಸುತ್ತೇನೆ. ಆದರೆ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಾದಾಗ, ಕಷ್ಟದಲ್ಲಿರುವವನನ್ನೇ ಆಯ್ಕೆ ಮಾಡುತ್ತೇವಲ್ಲವೇ?” ಎಂದ.

ಇತ್ತೀಚೆಗೆ ನಾನು ಡಿಸ್ಟಿಂಗ್ವಿಷ್ಡ್ ಸಿಟಿಜೆನ್‌ ಎನ್ನುವ ಅರ್ಜೇಂಟೀನಾದ ಒಂದು ಅದ್ಭುತ ಫಿಲ್ಮನ್ನು ನೋಡಿದ್ದೆ. ಅದರಲ್ಲಿ ಸಾಹಿತ್ಯದ ನೋಬೆಲ್‌ಪ್ರಶಸ್ತಿಯನ್ನು ಸ್ವೀಕರಿಸುವ ನಾಯಕ ಹೀಗೊಂದು ಮಾತು ಹೇಳುತ್ತಾನೆ. “ಹೀಗೆ ಒಮ್ಮತದಿಂದ ನೀಡುವ ಸನ್ಮಾನಗಳು ನಿಶ್ಚಯವಾಗಿ ಕಲಾವಿದನ ಅಳಿವಿಗೆ ಹಾದಿಯಾಗುತ್ತವೆ. ಈ ಪ್ರಶಸ್ತಿ, ನನ್ನ ಕೆಲಸ ತೀರ್ಪುಗಾರರ, ಪರಿಣತರ, ವಿದ್ವಾಂಸರ ಹಾಗೂ ರಾಜರ ರುಚಿಗೆ ಹಾಗೂ ಅವಶ್ಯಕತೆಗೆ ಒಪ್ಪುವಂತಿವೆ ಎಂದು ನಿರೂಪಿಸುತ್ತದೆ. ನಿಮಗೆಲ್ಲ ಹಿತವಾದ ಕಲಾವಿದ ನಾನು ಎನ್ನುವುದು ಸ್ಪಷ್ಟ. ಈ ಹಿತವಿದೆಯಲ್ಲ, ಅದಕ್ಕೂ ಕಲಾಕೃತಿಯ ಆತ್ಮಕ್ಕೂ ಸಂಬಂದವಿಲ್ಲ. ಕಲಾವಿದರು ಪ್ರಶ್ನೆ ಕೇಳುವವರಾಗಬೇಕು. ಆಘಾತಕಾರಿಯಾಗಿರಬೇಕು. ಕಲಾವಿದನಾಗಿ ನನ್ನನ್ನು ಹೀಗೆ ವೈಭವೀಕರಿಸುವುದರ ಬಗ್ಗೆ ನನಗೆ ಖೇದವೆನಿಸುತ್ತದೆ. ವಿಪರ್ಯಾಸ ಎಂದರೆ ಕಲಾವಿದರಲ್ಲಿರುವ ಈ ಅಹಂಭಾವವೇ, ನೀವು ಹೀಗೆ, ಈ ಪ್ರಶಸ್ತಿಯ ಮೂಲಕ, ನನ್ನ ಕ್ರಿಯಾತ್ಮಕ ಚಟುವಟಿಕೆಯನ್ನು ಕೊನೆಗಾಣಿಸುತ್ತಿರುವುದಕ್ಕೆ ಧನ್ಯವಾದ ಹೇಳಿಸಿ ಆಷಾಢಭೂತಿಯನ್ನಾಗಿ ಮಾಡಿದೆ.”

ಇಂತಹ ಆತ್ಮವಿಶ್ವಾಸ ಹಾಗೂ ವಿನಯ ಸ್ವಭಾವಗಳು ಬೆರೆತ ಭಾವವನ್ನೇ ನಾನು ಶೂನ್ಯ ಆಷಾಢಭೂತಿತನ ಅಥವಾ Zero Hypocrasy ಎನ್ನುತ್ತೇನೆ. ವಿಜ್ಞಾನಿಗಳು ಇದನ್ನು ರೂಢಿಸಿಕೊಳ್ಳಬೇಕಿದೆ.

ಸ್ಟೀಫನ್‌ಫ್ರೈ ನನ್ನನ್ನು ಪ್ರಭಾವಿಸಿದ್ದಕ್ಕೆ ಎರಡನೆಯ ಕಾರಣವೂ ಇದೆ. ಆತ ಗ್ರೀಕ್ ‌ಪುರಾಣಗಳನ್ನು ತಾನು ಮತ್ತೆ ಹೇಳುತ್ತಿರುವ ಬಗ್ಗೆ ಹೇಳಿದ. 2017ರಲ್ಲಿ ಆತ ಪ್ರಕಟಿಸಿದ ಮಿಥೋಸ್‌ ಎಂಬ ಪುಸ್ತಕವನ್ನು ಓದಲು ಇದು ಪ್ರೇರೇಪಿಸಿತು. ನಾನು, ಇರುವೆ, ಜೇನ್ನೊಣ ಹಾಗೂ ಕಣಜಗಳ ಸಾಮಾಜಿಕ ಬದುಕನ್ನು ಅಧ್ಯಯನ ಮಾಡುತ್ತೇನೆ. ಹೀಗಾಗಿ ಇವುಗಳ ಹೆಸರನ್ನು ಕೇಳಿದರೇ ಎಚ್ಚರವಾಗಿಬಿಡುತ್ತದೆ. ಮಿಥೋಸ್ ‌ಪುಸ್ತಕದಲ್ಲಿ ಸ್ಟೀಫನ್ ‌ಫ್ರೈ ಜೇನ್ನೊಣಗಳು ಹೇಗೆ ಸಮಾಜ ಜೀವಿಗಳಾದುವು. ಜೇನ್ನೊಣಕ್ಕೆ ಕುಟುಕುವ ಮುಳ್ಳು ಇರುವುದೇಕೆ ಎನ್ನುವುದಕ್ಕೆ ಒಂದು ಆಶ್ಚರ್ಯಕರವಾದ ಕಥೆ ಹೇಳುತ್ತಾನೆ. ಗ್ರೀಕ್‌ದೊರೆ ಜಿಯೂಸ್ ‌ಹೇರಾಳ ಜೊತೆಗೆ ಮದುವೆಯಾಗುವ ಸಂದರ್ಭ. ಒಂದು ಸವಾಲನ್ನು ಹಾಕುತ್ತಾನೆ. ತನ್ನ ಮದುವೆಯಲ್ಲಿ ಅತಿ ವಿಶಿಷ್ಟವಾದ ಅಡುಗೆಯನ್ನು ಬಡಿಸುವವರಿಗೆ ಯಾವುದೇ ವರ ಬೇಕಿದ್ದರೂ ಕೊಡುವೆ ಎನ್ನುತ್ತಾನೆ. ಈ ಸವಾಲನ್ನು ಮೆಲಿಸಾ ಎನ್ನುವ ಒಂದು ಸಂಕೋಚ ಸ್ವಭಾವದ ಪ್ರಾಣಿ ಗೆಲ್ಲುತ್ತದೆ. ಅದು ಮಾಡಿದ ಅಡುಗೆಯೇ ಜೇನು. ಇದಕ್ಕೆ ಜಿಯೂಸ್‌ ಕೊಟ್ಟ ಪ್ರಶಸ್ತಿ? “ಈ ಕ್ಷಣದಿಂದ ನೀನು ಒಬ್ಬಳೇ ಜೇನು ತಯಾರಿಸಲು ಶ್ರಮ ಪಡಬೇಕಿಲ್ಲ. ನೀನು ನಿನ್ನ ಕುಲದ ರಾಣಿಯಾಗಿರು. ನಿನ್ನ ಪ್ರಜೆಗಳೇ ನಿನಗಾಗಿ ಜೇನು ತಯಾರಿಸುವರು. ಅಷ್ಟೇ ಅಲ್ಲ. ನಾನು ನಿನಗೆ ಒಂದು ಮುಳ್ಳನ್ನೂ ವರವಾಗಿ ಕೊಡುತ್ತಿದ್ದೇನೆ. ನೀನು ಕುಟುಕಿದವರಿಗೆ ಅದು ಅಪಾರ ನೋವುಂಟು ಮಾಡುತ್ತದೆ. ಆದರೆ ಎಚ್ಚರ. ಅದು ನಿನಗೂ ನಿನ್ನ ಕುಟುಂಬಕ್ಕೂ ಸಾವನ್ನೂ ತರುತ್ತದೆ.”

ಈ ಕಥೆ ಹೇಳಿದ ಫ್ರೈ ಮುಂದುವರೆದು ಇದನ್ನೂ ವಿವರಿಸಿದ. ಜೇನ್ನೊಣವನ್ನು ಗ್ರೀಕ್ ‌ಭಾಷೆಯಲ್ಲಿ ಈಗಲೂ ಮೆಲಿಸಾ ಎಂದೇ ಕರೆಯುತ್ತಾರೆ. ಅಲ್ಲದೆ ಈ ಕೀಟಗಳ ಕುಲವನ್ನು ವಿಜ್ಞಾನಿಗಳು ಹೈಮೆನಾಪ್ಟೆರಾ ಎನ್ನುತ್ತಾರೆ. ಹಾಗೆಂದರೆ ಮದುವೆಯ ರೆಕ್ಕೆಗಳು ಎಂದರ್ಥ. ಹೀಗೆ ಹಲವಾರು ಗಿಡ, ಪ್ರಾಣಿಗಳು ಮತ್ತು ಆಕಾಶಕಾಯಗಳ ಹೆಸರುಗಳು ಗ್ರೀಕ್‌ಪುರಾಣದಿಂದ ಬಂದಿರುವುದು ನನಗೆ ಅಚ್ಚರಿಯ ವಿಷಯ.

ಜೇನ್ನೊಣಗಳ ಬಗ್ಗೆ ವಿಜ್ಞಾನ ಈಗ ಸಾಕಷ್ಟು ತಿಳಿದುಕೊಂಡಿದೆ. ಜೇನ್ನೊಣಗಳು ಹೇಗೆ ಅಸಂಖ್ಯ ಹೂವುಗಳಿಂದ ಮಕರಂದವನ್ನು ಸಂಗ್ರಹಿಸುತ್ತವೆ, ಅದನ್ನು ಹೇಗೆ ಜೇನನ್ನಾಗಿ ಮಾಡುತ್ತವೆ, ಆಹಾರ ಹುಡುಕಲು ಹೋದ ನೊಣಗಳು ನೃತ್ಯದ ಮೂಲಕ ಹೇಗೆ ಬೇರೆ ನೊಣಗಳಿಗೆ ತಿಳಿಸುತ್ತವೆ, ಎಂಬ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ. ಹೂವನ್ನು ಅರಸಿಕೊಂಡು ಹೋದ ಜೇನ್ನೊಣಗಳು ಹಾದಿ ತಪ್ಪಿಸಿಕೊಳ್ಳದೆ ಮರಳಿ ಗೂಡಿಗೆ ಬರುವುದು ಹೇಗೆಂಬುದರ ಗುಟ್ಟನ್ನೂ ರಟ್ಟು ಮಾಡಿದ್ದೇವೆ. ಒಟ್ಟಾಗಿ ಸಂಘಟಿತವಾಗಿದ್ದರೂ ಅವು ಹೇಗೆ ತಮ್ಮ ಹೊಣೆಗಾರಿಕೆಗಳನ್ನು ಹಂಚಿಕೊಂಡು, ಒಬ್ಬ ವ್ಯಕ್ತಿ ಇಲ್ಲವೇ ಒಂದು ದುಂಬಿಗೆ ಸಾಧ್ಯವಾದದ್ದನ್ನೂ ಮೀರಿ ಕೆಲಸ ಮಾಡುತ್ತವೆ ಎಂಬುದನ್ನೂ ಅರ್ಥ ಮಾಡಿಕೊಂಡಿದ್ದೇವೆ. ಜೇನುತುಪ್ಪದಲ್ಲೇನಿದೆ, ಅದರ ವೈದ್ಯಕೀಯ ಗುಣಗಳ ಬಗ್ಗೆಯೂ ಸಾಕಷ್ಟು ಅರಿವು ಗಳಿಸಿದ್ದೇವೆ. ಜೇನ್ನೊಣದ ಮುಳ್ಳಿನಲ್ಲಿ ಹಿಂಬದಿಗೆ ಚಾಚಿಕೊಂಡಿರುವ ಕೊಂಡಿಗಳಿವೆ ಎಂದೂ, ಇದರಿಂದಾಗಿ ಒಮ್ಮೆ ಕುಟುಕಿದ ಮುಳ್ಳನ್ನು ಮತ್ತೆ ಹಿಂದೆ ಸೆಳೆಯಲಾಗದು ಎಂದೂ ತಿಳಿದಿದೆ. ಹೀಗಾಗಿ ಪ್ರತೀ ಮುಳ್ಳಿನ ಕುಟುಕೂ ಆತ್ಮಹತ್ಯೆ ಮಾಡಿಕೊಂಡಂತೆಯೇ ಸರಿ. ಈ ರೀತಿಯಲ್ಲಿ ಅನಾನುಕೂಲಿ ಎನ್ನಿಸುವಂತಹ ನಡವಳಿಕೆಯನ್ನು ನಿಸರ್ಗ ವಿಕಾಸಗೊಳ್ಳಲು ಏಕೆ ಬಿಟ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲೆಂದೇ ಬೃಹತ್‌ಉದ್ಯಮವೊಂದನ್ನು ಸೃಷ್ಟಿ ಮಾಡಿಯೂ ಇದ್ದೇವೆ.

ಇಷ್ಟೆಲ್ಲಾ ಇರುವಾಗ ಜೇನಿನ ಬಗ್ಗೆ ಇರುವ ಗ್ರೀಕ್‌ಪುರಾಣದ, ಗ್ರೀಕ್‌ಯಾಕೆ ಯಾವುದೇ ಪುರಾಣ ಕಥೆ ಏಕೆ ಬೇಕು ಎನ್ನಬಹುದು. ಆದರೆ ಗ್ರೀಕರಿಗೂ, ಅಂತಹ ಇತರೆ ನಮ್ಮ ಪೂರ್ವಜರಿಗೂ ಜೇನ್ನೊಣಗಳ ಬಗ್ಗೆ ಅರಿವಿತ್ತು. ಕೆಲವನ್ನು ಅವರೂ ಊಹಿಸಿದ್ದಿರಬಹುದು. ಉದಾಹರಣೆಗೆ, ಪೂರ್ವಜರ ಮಟ್ಟಿಗೆ ಜೇನ್ನೊಣದ ರಾಣಿ ರಾಣಿಯಾಗಿರಲಿಲ್ಲ. ರಾಜ ಎಂದುಕೊಂಡಿದ್ದರು. ನಮ್ಮ ಸಂಶೋಧನೆಗಳು ಹೇಗೆ ಕೆಲವೊಮ್ಮೆ ತಪ್ಪಾಗಿರುತ್ತವೆಯೋ ಹಾಗೆಯೇ ಅವರ ಇಂತಹ ಕೆಲವು ಊಹೆಗಳೂ ತಪ್ಪಾಗಿದ್ದಿರಬಹುದು. ಆದರೆ ಇವನ್ನು ತಿಳಿದಲ್ಲದೆ ನಮ್ಮ ಅರಿವು ಪರಿಪೂರ್ಣ ಎನಿಸುವುದಿಲ್ಲ. ಇದೊಂದು ವಿಸ್ಮಯವೂ, ರಂಜನೆಯೂ ಕೂಡ. ಹಾಗಂತ ನಾವು ಹಾದಿ ತಪ್ಪುವ ಅಪಾಯವೂ ಉಂಟು ಎನ್ನಿ. ಏಕೆಂದರೆ ನಮ್ಮ ಪುರಾಣಗಳನ್ನು ಪದಶಃ ಅರ್ಥೈಸಿ, ನಮ್ಮ ಇತಿಹಾಸವನ್ನು ವೈಭವೀಕರಿಸುವುದು ಈಗ ನಿತ್ಯವಿಧಿ ಆಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ಟೀಫನ್‌ಫ್ರೈ ಗ್ರೀಕ್‌ಪುರಾಣಗಳ ಬಗ್ಗೆ ಏನು ಹೇಳಿದ್ದ ಎಂದು ನೋಡೋಣ.

“ಮರಳಿನ ಕಣದ ಸುತ್ತಲೂ ಹೇಗೆ ಮುತ್ತು ಕಟ್ಟುತ್ತದೆಯೋ ಹಾಗೆಯೇ ಕಥೆ, ಪುರಾಣಗಳೂ ಯಾವುದೋ ಸತ್ಯಾಂಶದ ಸುತ್ತಲೂ ಕಟ್ಟಿಕೊಂಡಿರುತ್ತವೆ. ಕಥೆಗಳು ಕಾಲ್ಪನಿಕ, ಸಾಂಕೇತಿಕವಷ್ಟೆ. ಹೇಫಿಸ್ಟಸ್‌ ಇದ್ದನೆಂದು ಯಾರೂ ನಂಬಿಲ್ಲ. ಆತ ಕೇವಲ ಲೋಹಗಾರಿಕೆ ಹಾಗೂ ಕುಶಲ ಕೈಗಾರಿಕೆಗಳ ಸಂಕೇತವಷ್ಟೆ. ಹೀಗೆ ಪುರಾಣ ಹಾಗೂ ಪೌರಾಣಿಕ ಪಾತ್ರಗಳನ್ನು ಚಾರಿತ್ರಿಕವೆನ್ನುವುದಕ್ಕಿಂತಲೂ ಸಾಂಕೇತಿಕ ಎನ್ನಬಹುದು. ಇವೆಲ್ಲ ಕಥೆಗಳೂ ಪುನರ್ರಚನೆಯಾಗಿ ಬಂದಿರುವಂಥವು. ಇವುಗಳನ್ನು ಹೇಳುವವರಿಗೂ ಎಲ್ಲೋ ಒಂದೆಡೆ ಇವು ಕಾಲ್ಪನಿಕ ಎನ್ನುವ ಪ್ರಜ್ಞೆ ಇದ್ದೇ ಇರುತ್ತದೆ.”

ಹಾಗಿದ್ದರೂ ಅವರು ಇವನ್ನು ಏಕೆ ಹೇಳಿದರು? ಈ ಕಥೆಗಳ ಉದ್ದೇಶವೇನು? ಅವು ಇಂದು ನಾವು ಹೇಳುವ ಇದೇ ಕಥೆಗಳ ಉದ್ದೇಶವೇ ಆಗಿದ್ದುವೇ? ಈ ಕಥೆಗಳಲ್ಲಿ ಸತ್ಯ ಮಿಥ್ಯೆಗಳ ಜೊತೆಗೆ ಬೆರೆತದ್ದಾದರೂ ಹೇಗೆ? ವಿಜ್ಞಾನ, ಆಗುವುದೆಲ್ಲ ಒಳ್ಳೆಯದಕ್ಕೇ ಎನ್ನುತ್ತದೆ. ಹಾಗೆಯೇ ಇದೂ ಕೂಡ ಒಳ್ಳೆಯದಕ್ಕೇ. ಏಕೆಂದರೆ ಜರ್ಮನ್ನರು ವಿಜ್ಞಾನಕ್ಕೆ ಹೇಳುವ ಹಾಗೆ ಇದು ಕೊನೆಗೆ “ಜ್ಞಾನ”. ಅಷ್ಟೆ.

ಮೂಲ: ಪ್ರೊಫೆಸರ್‌ ರಾಘವೇಂದ್ರ ಗದಗಕರ್; ‌ಅನುವಾದ: ಕೊಳ್ಳೇಗಾಲ ಶರ್ಮ; ಈ ಲೇಖನದ ಆಂಗ್ಲ ಮೂಲ ದಿ ವೈರ್‌ ಸೈನ್ಸ್‌ ಜಾಲಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಲೇಖನವನ್ನು ಕೇಳಲು ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ!

Related Stories

No stories found.
logo
ಇಜ್ಞಾನ Ejnana
www.ejnana.com