ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿ
ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿ|kai Stachowiak / publicdomainpictures.net
ವೈವಿಧ್ಯ

ಮಹಿಳಾದಿನ ವಿಶೇಷ: ಇಷ್ಟದ ಹವ್ಯಾಸವನ್ನೇ ಕೆಲಸವನ್ನಾಗಿ ಪರಿವರ್ತಿಸಿಕೊಳ್ಳಬಹುದು!

ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿಕೊಂಡು ನನ್ನ ಇಷ್ಟದ ಚಿತ್ರಕಲೆ ಹಾಗೂ ಓದಿನ ಹವ್ಯಾಸವನ್ನೇ ಕೆಲಸವನ್ನಾಗಿ ಪರಿವರ್ತಿಸಿಕೊಂಡೆ ಎನ್ನುತ್ತಾರೆ ಮುಖಪುಟ ವಿನ್ಯಾಸಕಿ ಸೌಮ್ಯ ಕಲ್ಯಾಣಕರ್

ಇಜ್ಞಾನ ತಂಡ

ನಾನು ಮುಖಪುಟ ವಿನ್ಯಾಸಗಾರ್ತಿಯಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. ನನ್ನಿಷ್ಟದ ಕೆಲಸವನ್ನು ನನ್ನದೇ ಸಮಯದಲ್ಲಿ ಮಾಡುವಂಥ ಅನುಕೂಲ ನನಗಿದೆ. ಎಂಸಿಎ ಕಲಿತ ನಾನು, ಮಗ ಹುಟ್ಟಿದ ಮೇಲೆ ನಾ ಮಾಡುತ್ತಿದ್ದ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳಬೇಕಾಯ್ತು. ಪ್ರೋಗ್ರಾಮಿಂಗ್ ಆಗಲಿ, ಆಫೀಸಿಗೆ ಹೋಗುವುದನ್ನಾಗಲೀ ಮೊದಲಿನಿಂದಲೂ ಇಷ್ಟಪಡದ ನಾನು, ಬೇರೆ ಅವಕಾಶಗಳು ಏನಿವೆ ಎಂದು ಹುಡುಕಾಡತೊಡಗಿದೆ. ಆವಾಗಷ್ಟೇ ಆದ ಮಾಹಿತಿ ತಂತ್ರಜ್ಞಾನ ಹಾಗೂ ಇಂಟರ್ನೆಟ್ ಕ್ರಾಂತಿ ನನ್ನ ಹುಡುಕಾಟಕ್ಕೆ ಹೊಸ ದಾರಿ ಕೊಟ್ಟಿತು. ನನ್ನ ಇಷ್ಟದ ಚಿತ್ರಕಲೆ ಹಾಗೂ ಓದಿನ ಹವ್ಯಾಸವನ್ನೇ ಕೆಲಸವನ್ನಾಗಿ ಪರಿವರ್ತಿಸಬಹುದು ಎಂದು ಹೊಳೆಯಿತು.

ಡಿಜಿಟಲ್ ಚಿತ್ರಕಲೆ ಶುರುವಾದ ಹೊಸತು, ಮೌಸ್ ಹಿಡಿದು ಚಿತ್ರ ಬರೆಯುವುದು ತುಂಬಾ ಕಷ್ಟ ಅನಿಸಿದಾಗ ಗ್ರಾಫಿಕ್ ಟಾಬ್ಲೆಟ್/ ಪೆನ್‌ಗಳ ಪರಿಚಯವಾಯಿತು. ಆದರೆ ಅಷ್ಟರಲ್ಲೇ ಮಾರುಕಟೆಗೆ ಬಂದ ಐ ಪ್ಯಾಡ್ ಪ್ರೋ ಮತ್ತು ಆಪಲ್ ಪೆನ್ಸಿಲ್ ನನ್ನ ಕೆಲಸಕ್ಕೆ ಸಂಗಾತಿಗಳಾದರು. ಐ ಪ್ಯಾಡ್ ಪ್ರೋ ಅದರ ಮೊದಲು ಬಂದ ಐ ಪ್ಯಾಡುಗಳಿಗಿಂತ ಗಾತ್ರದಲ್ಲಿ ದೊಡ್ಡದು, ಹಾಗಾಗಿ ಬರೆಯಲು ದೊಡ್ಡ ಕ್ಯಾನ್‌ವಾಸ್ ಸಿಗುತ್ತದೆ. ಪ್ರೆಶರ್ ಸೆನ್ಸಿಟಿವಿಟಿ ಇರುವ ಆಪಲ್ ಪೆನ್ಸಿಲ್ ಐ ಪ್ಯಾಡ್‌ಗೆ ಬ್ಲೂ ಟೂತ್ ಮೂಲಕ ಕನೆಕ್ಟ್ ಆಗಿ ಚಿತ್ರ ಬರೆಯುವುದನ್ನು ಇನ್ನಷ್ಟು ನೈಜವೆನಿಸುತ್ತದೆ. ಐ ಪ್ಯಾಡ್ ಪ್ರೋಕ್ಕಾಗಿ ಪ್ರೋ ಕ್ರಿಯೇಟ್, ಅಫಿನಿಟಿ ಫೋಟೋ, ಪೇಪರ್ ೫೩, ಆರ್ಟ್ ರೇಜ್, ಆರ್ಟ್ ಸೆಟ್ ಮೊದಲಾದ ಆಪ್‌ಗಳಿವೆ. ಇವೆಲ್ಲವೂ ಬೇಕಾದ ರೀತಿಯಲ್ಲಿ ಚಿತ್ರ ಬಿಡಿಸಲು ಕ್ಯಾನ್‌ವಾಸ್ ಮತ್ತು ಲೆಕ್ಕವಿಲ್ಲದಷ್ಟು ಬ್ರಶ್ಶುಗಳನ್ನು ಒದಗಿಸುತ್ತವೆ. ಆಪ್ ಕೊಡುವ ಬ್ರಶ್‌ಗಳಲ್ಲದೇ ಆನ್‌ಲೈನ್ ಮುಖಾಂತರವೂ ಬಗೆಬಗೆ ಬ್ರಶ್‌ಗಳನ್ನು ಖರೀದಿಸಬಹುದು.

ಕೇವಲ ಯೂಟ್ಯೂಬ್ ಅಲ್ಲದೇ ಬೇರೆ ಬೇರೆ ಫೋರಮ್‌ಗಳಲ್ಲಿ ಸಿಗುವ ಟುಟ್ಯೋರಿಯಲ್‌ಗಳು ಆಪ್ ಅನ್ನು ಬಳಸಿ ನಮ್ಮಿಷ್ಟದ ಆಯಿಲ್, ಜಲವರ್ಣ ಅಥವಾ ಡೂಡಲ್ ಏನೇ ಪ್ರಕಾರಗಳಿದ್ದರೂ ಕಲಿಯುವ ಅವಕಾಶಗಳನ್ನು ಒದಗಿಸುತ್ತವೆ. ಸೋಷಿಯಲ್ ಮೀಡಿಯಾ ಅಂದರೆ ಮೂಗು ಮೂರಿಯುವವರೇ ಸಾಕಷ್ಟು ಜನ. ಆದರೆ ಅಲ್ಲಿ ಸಿಗುವ ಚಿತ್ರಕಲೆಗೆ ಸಂಬಂಧಿಸಿದ ಪೇಜ್‌ಗಳು ಇನ್ನಷ್ಟು ಕಲಿಯುವ ಉತ್ಸಾಹ ಹೆಚ್ಚಿಸುತ್ತವೆ. ಪ್ರಪಂಚದ ಮೂಲೆ ಮೂಲೆಗಳ ಕಲಾವಿದರ ಆರ್ಟ್‌ವರ್ಕ್ ನೋಡುವುದೇ ಒಂದು ಖುಷಿ! ಪಿಂಟ್‌ರೆಸ್ಟ್ ಎಂಬುದು ಐಡಿಯಾಗಳ / ಆರ್ಟಿಸ್ಟುಗಳ ಭಂಡಾರ. ಅಲ್ಲಿಂದ ಬೇಕಾದಷ್ಟು ಕಲಿಯಬಹುದು. ನನ್ನ ಕೆಲಸಗಳನ್ನು ಜನರಿಗೆ ಪರಿಚಯಿಸಿ ಅದರಿಂದ ಇನ್ನಷ್ಟು ಕೆಲಸಗಳು ನನಗೆ ಬರಲು ಸಹಾಯ ಮಾಡಿದ್ದು ಇದೇ ಸೋಷಿಯಲ್ ಮೀಡಿಯಾ. ಎಷ್ಟು ಬಾರಿ ಬೇಕಾದರೂ ಬದಲಾಯಿಸಿ ಬರೆಯುವ ಸ್ವಾತಂತ್ರ್ಯ, ದೊಡ್ಡ ಪೋಸ್ಟರ್ ಅನ್ನು ಪ್ರಿಂಟ್ ಹಾಕಬಹುದಾದಷ್ಟು ರೆಸಲ್ಯೂಷನ್ ಮತ್ತು ಫಿಸಿಕಲ್ ಸ್ಟೋರೇಜಿನ ತಲೆಬಿಸಿ ಇಲ್ಲದೇ ಇರುವುದು ಈ ಡಿಜಿಟಲ್ ಚಿತ್ರಕಲೆಯ ಸೌಕರ್ಯಗಳು.

ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ನನ್ನ ಇಷ್ಟದ ಚಿತ್ರಕಲೆಯನ್ನೇ ಕೆಲಸವನ್ನಾಗಿ ಪರಿವರ್ತಿಸಿಕೊಂಡೆ
ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ನನ್ನ ಇಷ್ಟದ ಚಿತ್ರಕಲೆಯನ್ನೇ ಕೆಲಸವನ್ನಾಗಿ ಪರಿವರ್ತಿಸಿಕೊಂಡೆಸೌಮ್ಯ ಕಲ್ಯಾಣಕರ್

ನನ್ನ ಬದುಕಿನ ಅವಿಭಾಜ್ಯ ಅಂಗವಾದ ಓದು ನನ್ನ ಕೆಲಸದ ಇನ್ನೊಂದು ಭಾಗವೂ ಹೌದು.

ಪ್ರಕಾಶಕರು ನನಗೆ ಈ ಮೇಲ್ ಮೂಲಕವೇ ಪುಸ್ತಕದ ಎಲ್ಲಾ ವಿವರಗಳನ್ನು ಕಳುಹಿಸಿಕೊಡುತ್ತಾರೆ, ಫೋನ್ ಮೂಲಕ ಸಂದೇಹಗಳ ನಿವಾರಿಸಿಕೊಳ್ಳುತ್ತೇನೆ. ಪುಸ್ತಕವನ್ನು ಬಿಡುಗಡೆಗೂ ಮೊದಲೇ ಓದುವ ಖುಷಿ ನನ್ನದು. ಓದಿದ ನಂತರ ಅದಕ್ಕೆ ಹೊಂದುವ ಚಿತ್ರ ಬಿಡಿಸುತ್ತೇನೆ. ಇನ್ನು ವಿನ್ಯಾಸಕ್ಕಾಗಿ, ನಾ ಬರೆದ ಚಿತ್ರಗಳನ್ನು ಮೇಲ್ ಮೂಲಕ ನನ್ನ ಡೆಸ್ಕ್‌ಟಾಪಿಗೆ ತಂದು ಫೋಟೋಶಾಪ್ ಅಲ್ಲಿ ಬೇಕಾದ ಸೈಜ್ ಹಾಗೂ ರೆಸಲ್ಯೂಶನ್ನಿಗೆ ಎಡಿಟ್ ಮಾಡುತ್ತೇನೆ. ಮಾಡಿದ ಫೈಲ್ ಅನ್ನು ಡ್ರಾಪ್‌ಬಾಕ್ಸ್ ಅನ್ನುವ ಆನ್‌ಲೈನ್ ಸ್ಟೋರೇಜ್‌ಸ್ಪೇಸಿಗೆ (ಅಂತರ್ಜಾಲದಲ್ಲಿರುವ ಉಗ್ರಾಣ!) ಹಾಕಿ ಅದರ ಲಿಂಕ್ ಅನ್ನು ಸಂಬಂಧಪಟ್ಟವರಿಗೆ ಕಳುಹಿಸಿದರೆ ಅವರು ಅದರ ಮೂಲ ಕಡತವನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಅಲ್ಲಿಂದ ಅದು ಪ್ರಿಂಟಿಗೆ ಹೋಗುತ್ತದೆ. ಏನೇ ಸಣ್ಣ ಪುಟ್ಟ ಬದಲಾವಣೆಗಳಿದ್ದರೂ ಡ್ರಾಪ್ ಬಾಕ್ಸಿನಲ್ಲಿ ನಾನು ಬದಲಾಯಿಸಿದರೆ ಸಾಕಾಗುತ್ತದೆ. ಇದಲ್ಲದೇ, ನನ್ನ ಕ್ಯಾಮೆರಾ ಹಾಗೂ ಫೋನ್ ಮೂಲಕ ತೆಗೆದ ಚಿತ್ರಗಳೂ ಕೆಲವು ಮುಖಪುಟಗಳಾಗಿವೆ. ಹಾಗಾಗಿ ಛಾಯಾಚಿತ್ರಗ್ರಹಣವೂ ನನ್ನ ಕೆಲಸಕ್ಕೆ ಸಹಾಯ ಮಾಡಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಇದೇ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ಮುಖ ನೋಡದ / ಎಂದೂ ಭೇಟಿಯಾಗದ ಜನರೊಂದಿಗೆ ನಾ ಕೆಲಸ ಮಾಡುವುದು ಕೇವಲ ಈ ತಂತ್ರಜ್ಞಾನದ ಸಹಾಯದಿಂದ ಮಾತ್ರ. ಶಿವಮೊಗ್ಗ, ಮಂಗಳೂರು, ಹೊಸಪೇಟೆ, ಧಾರವಾಡ ಹೀಗೆ ಬೇರೆ ಬೇರೆ ಊರುಗಳಲ್ಲಿರುವ ಪ್ರಕಾಶನ ಸಂಸ್ಥೆಗಳಿಗೆ ನಾನು ವಿನ್ಯಾಸ ಮಾಡಿದ್ದೇನೆ. ಕಾಶ್ಮೀರದ ಉರ್ದು ಕವಿಯೊಬ್ಬನ ಕವಿತಾ ಸಂಗ್ರಹಕ್ಕೂ ನನ್ನ ಮುಖಪುಟವಿದೆ. ಕಾಕತಾಳೀಯವಾಗಿ ನಾನೀಗ ಬೆಂಗಳೂರಿನಲ್ಲಿದ್ದೇನೆ, ಸರಿಯಾದ ಇಂಟರ್ನೆಟ್ ನೆಟ್‌ವರ್ಕ್ ಇರುವ ಯಾವುದೇ ಊರಿನಲ್ಲಿ ಕೂತು ಕೆಲಸ ಮಾಡಬಹುದು.

ಇನ್ನು ನನ್ನ ಕೆಲಸಕ್ಕೆ ಹಣವೂ ನನ್ನ ಅಕೌಂಟಿಗೆ ಬಂದು ಬೀಳುತ್ತದೆ. ಥ್ಯಾಂಕ್ಸ್ ಟು ಆನ್ ಲೈನ್ ಟ್ರಾನ್ಸ್‌ಫರ್ ಮೆಥಡ್ಸ್!

- ಸೌಮ್ಯ ಕಲ್ಯಾಣಕರ್ ಮುಖಪುಟ ವಿನ್ಯಾಸಕಿ ಮತ್ತು ಚಿತ್ರಕಲಾವಿದೆ

ಸರ್ವವ್ಯಾಪಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಸವಲತ್ತುಗಳನ್ನು ವಿವಿಧ ಕ್ಷೇತ್ರಗಳ ಮಹಿಳೆಯರು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಈ ನಿಟ್ಟಿನಲ್ಲಿ ವಿಚಾರವಿನಿಮಯ ಸಾಧ್ಯವಾಗಿಸುವುದು ಮಹಿಳಾದಿನದ ಅಂಗವಾಗಿ ಪ್ರಕಟವಾಗುತ್ತಿರುವ ಈ ಸರಣಿಯ ಉದ್ದೇಶ. ಇದೇ ವಿಷಯದ ಬಗ್ಗೆ ನಿಮ್ಮ ಅನುಭವವನ್ನೂ ಹಂಚಿಕೊಳ್ಳುವ ಆಸಕ್ತಿಯಿದ್ದರೆ ದಯಮಾಡಿ ನಮ್ಮ ಫೇಸ್‌ಬುಕ್ ಪುಟಕ್ಕೆ ಬನ್ನಿ!
ಇಜ್ಞಾನ Ejnana
www.ejnana.com