ಪ್ರೊ. ಜಿ. ವೆಂಕಟಸುಬ್ಬಯ್ಯ
ಪ್ರೊ. ಜಿ. ವೆಂಕಟಸುಬ್ಬಯ್ಯejnana.com

ವಿಜ್ಞಾನಯುಗದ 'ಕಲಾವಿಜ್ಞಾನಿ' ಪ್ರೊ. ಜಿ. ವೆಂಕಟಸುಬ್ಬಯ್ಯ

ವಿಜ್ಞಾನ ಸಂವಹನದಲ್ಲಿ ತೊಡಗಿಕೊಂಡಿದ್ದಷ್ಟೇ ಅಲ್ಲ. ಹೊಸ ವಿಜ್ಞಾನ ಸಂವಹನಕಾರರನ್ನು ರೂಪಿಸುವ ಕೆಲಸವನ್ನೂ ವೆಂಕಟಸುಬ್ಬಯ್ಯನವರು ಮಾಡಿದ್ದರು. ವಿಜ್ಞಾನ ಬರೆಯುವುದು ಹೇಗೆ ಎನ್ನುವ ಬಗ್ಗೆ ತರಬೇತಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು!

'ಜಿ.ವಿ.' ಎಂದೇ ಜನಪ್ರಿಯರಾಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಹೆಸರು ಕೇಳಿದ ಕೂಡಲೇ ನಮಗೆ ನೆನಪಾಗುವುದು ಅವರ 'ಇಗೋ ಕನ್ನಡ' ಅಂಕಣ. ಅವರನ್ನು ಹತ್ತಿರದಿಂದ ಕಂಡವರು ವೆಂಕಟಸುಬ್ಬಯ್ಯನವರ ಸರಳತೆ ಹಾಗೂ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ಗುಣವನ್ನು ಮರೆಯುವುದೇ ಸಾಧ್ಯವಿಲ್ಲ. ಆದರೆ ವಿಜ್ಞಾನ ಸಾಹಿತ್ಯ ಕ್ಷೇತ್ರದೊಂದಿಗೆ ಅವರಿಗಿದ್ದ ನಂಟಿನ ಬಗ್ಗೆ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ವಿಜ್ಞಾನ ವಿಷಯಗಳನ್ನು ಬರೆದದ್ದು ಮಾತ್ರವಲ್ಲ, ಅವರು ವಿಜ್ಞಾನ ಪುಸ್ತಕವೊಂದರ ಪ್ರಕಾಶಕರೂ ಆಗಿದ್ದರು ಎನ್ನುವುದು ಇನ್ನೂ ವಿಶೇಷವಾದ ಸಂಗತಿ.

'ಮಿ. ಟಾಂಪ್‌ಕಿನ್ಸ್ ಇನ್ ವಂಡರ್‌ಲ್ಯಾಂಡ್' ಎನ್ನುವುದು ಖ್ಯಾತ ವಿಜ್ಞಾನಿ ಡಾ. ಜಾರ್ಜ್ ಗ್ಯಾಮೋ ಬರೆದ ಜನಪ್ರಿಯ ವಿಜ್ಞಾನ ಕೃತಿ. ಭೌತವಿಜ್ಞಾನದ ಬಗ್ಗೆ ತಿಳಿಯಲು ಹೊರಟ ಮಿ. ಟಾಂಪ್‌ಕಿನ್ಸ್ ಎಂಬ ಬ್ಯಾಂಕ್ ಗುಮಾಸ್ತೆಯ ಈ ಕತೆಯ ಕನ್ನಡಾನುವಾದ 'ವಿಚಿತ್ರ ಲೋಕದಲ್ಲಿ ವಿದ್ಯಾಲಂಕಾರ' ಕೃತಿಯನ್ನು ೧೯೫೧ರಷ್ಟು ಹಿಂದೆಯೇ ಪ್ರಕಟಿಸಿದವರು ಪ್ರೊ. ಜಿ. ವೆಂಕಟಸುಬ್ಬಯ್ಯನವರು. ವಿಜ್ಞಾನದ ಪುಸ್ತಕಗಳು ಕನ್ನಡದಲ್ಲಿ ಹೆಚ್ಚುಹೆಚ್ಚಾಗಿ ಪ್ರಕಟವಾಗಬೇಕು ಎನ್ನುವುದು ಅವರ ಅಭಿಲಾಷೆಯಾಗಿತ್ತು. ಈ ಅಭಿಲಾಷೆಯಿಂದಾಗಿಯೇ ಅವರು ವಿಜಯ ಕಾಲೇಜಿನಲ್ಲಿ ತಮ್ಮ ಸಹೋದ್ಯೋಗಿಯಾಗಿದ್ದ, ಮುಂದೆ ವಿಜ್ಞಾನದ ಇತಿಹಾಸಕಾರರಾಗಿ ವಿಖ್ಯಾತರಾದ ಡಾ. ಬಿ. ವಿ. ಸುಬ್ಬರಾಯಪ್ಪನವರನ್ನು ಈ ಪುಸ್ತಕ ಸಿದ್ಧಪಡಿಸುವಂತೆ ಪ್ರೋತ್ಸಾಹಿಸಿದರು, ಭಾಷೆಯ ದೃಷ್ಟಿಯಿಂದ ಸಲಹೆ-ಸೂಚನೆಗಳನ್ನೂ ನೀಡಿದರು, ತಮ್ಮದೇ ಸಂಸ್ಥೆ 'ಪ್ರತಿಭಾ ಪ್ರಕಟನ ಮಂದಿರ'ದಿಂದ ಅದನ್ನು ಪ್ರಕಟಿಸಿದರು. "ನಮ್ಮ ಕನ್ನಡಿಗರು ಆಧುನಿಕ ವಿಜ್ಞಾನದ ತತ್ವಗಳನ್ನು ಬೇಗ ಬೇಗ ಅರಿತು ಮುಂದೆ ಬರಲೆಂಬ ಆಕಾಂಕ್ಷೆಯ ಸಾಫಲ್ಯಕ್ಕೋಸ್ಕರವಲ್ಲದೆ ಅವರ ಈ ಶ್ರಮ ವೈಯಕ್ತಿಕವಾದುದು ಎಂದರೆ ಅದು ಹೊಟ್ಟೆಕಿಚ್ಚಿನ ಮಾತಾದೀತು," ಎಂದು ಸುಬ್ಬರಾಯಪ್ಪನವರು ವೆಂಕಟಸುಬ್ಬಯ್ಯನವರ ಕೆಲಸದ ಬಗ್ಗೆ ಪುಸ್ತಕದ ಅರಿಕೆಯಲ್ಲಿ ತಿಳಿಸಿದ್ದಾರೆ.

ಈ ಪುಸ್ತಕದಲ್ಲಿ ಇನ್ನೊಂದು ವೈಶಿಷ್ಟ್ಯವೂ ಇತ್ತು. ತಮ್ಮ ಕೃತಿಯ ಕನ್ನಡ ಭಾಷಾಂತರ ಪ್ರಕಟವಾಗುತ್ತಿರುವುದು ಬಹಳ ಆನಂದದ ವಿಷಯ ಎಂದು ಸ್ವತಃ ಜಾರ್ಜ್ ಗ್ಯಾಮೋ ಕನ್ನಡದಲ್ಲಿ ಬರೆದ ಸಂದೇಶ - ಅವರದೇ ಹಸ್ತಾಕ್ಷರದಲ್ಲಿ - ಈ ಪುಸ್ತಕದಲ್ಲಿ ಮುದ್ರಿತವಾಗಿತ್ತು. ಅವರಿಂದ ಕನ್ನಡದ ಈ ಸಂದೇಶ ಬರೆಸಿದವರು ವೆಂಕಟಸುಬ್ಬಯ್ಯನವರು! ಇನ್ನು ಈ ಕೃತಿಯಲ್ಲಿ ಬಳಸಲಾದ ಕನ್ನಡ ಪಾರಿಭಾಷಿಕ ಪದಗಳ ಪಟ್ಟಿಯನ್ನು ಅವುಗಳ ಇಂಗ್ಲಿಷ್ ಅರ್ಥದ ಜೊತೆಯಲ್ಲಿ ಪ್ರಕಟಿಸಿದ್ದಂತೂ "ವಿಜ್ಞಾನದ ಆಧುನಿಕ ತತ್ವಗಳನ್ನು ಕನ್ನಡ ಜನ ಸಾಮಾನ್ಯದ ಬಳಕೆಗೆ ತರುವ ಹಿರಿಯಾಸೆಯಿಂದ" ಸ್ಥಾಪಿತವಾಗಿದ್ದ ಪ್ರತಿಭಾ ಪ್ರಕಟನ ಮಂದಿರದ ಆಶಯವನ್ನು ಪ್ರತಿಬಿಂಬಿಸುವಂತಿತ್ತು.

ಖ್ಯಾತ ವಿಜ್ಞಾನಿ ಡಾ. ಜಾರ್ಜ್ ಗ್ಯಾಮೋ ಕನ್ನಡದಲ್ಲಿ ಬರೆದ ಸಂದೇಶ
ಖ್ಯಾತ ವಿಜ್ಞಾನಿ ಡಾ. ಜಾರ್ಜ್ ಗ್ಯಾಮೋ ಕನ್ನಡದಲ್ಲಿ ಬರೆದ ಸಂದೇಶarchive.org

ವಿಜ್ಞಾನ ಸಂವಹನಕ್ಕೆ ಸಂಬಂಧಪಟ್ಟಂತೆ ವೆಂಕಟಸುಬ್ಬಯ್ಯನವರು ಹಾಗೂ ಸುಬ್ಬರಾಯಪ್ಪನವರ ಒಡನಾಟ ಇದೊಂದು ಪುಸ್ತಕಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ. ೧೯೫೦ರ ದಶಕದಲ್ಲಿ ಕೆಲಸಮಯ ಪ್ರಕಟವಾದ 'ವಿಜ್ಞಾನಯುಗ' ಪತ್ರಿಕೆಯಲ್ಲೂ ಅವರು ಜೊತೆಯಾಗಿ ಕೆಲಸಮಾಡಿದ್ದರು. ಸುಬ್ಬರಾಯಪ್ಪನವರು ಸಂಪಾದಕರಾಗಿದ್ದ ಈ ಪತ್ರಿಕೆಗೆ ವೆಂಕಟಸುಬ್ಬಯ್ಯನವರು 'ಕಲಾವಿಜ್ಞಾನಿ'ಯೆಂಬ ಹೆಸರಿನಲ್ಲಿ ಅಂಕಣವನ್ನೂ ಬರೆಯುತ್ತಿದ್ದದ್ದು ವಿಶೇಷ. 'ಪ್ರಸಿದ್ಧ ವಿಜ್ಞಾನಿಗಳು' ಎಂಬ ಈ ಅಂಕಣದಲ್ಲಿ ಅವರು ಚಾರ್ಲ್ಸ್ ಡಾರ್ವಿನ್, ಲೂಯಿ ಪಾಶ್ಚರ್, ಕೊಪರ್ನಿಕಸ್, ಮೈಕೆಲ್ ಫ್ಯಾರಡೆ ಮುಂತಾದವರ ಪರಿಚಯ ಮಾಡಿಕೊಟ್ಟಿದ್ದರು. ವೈಜ್ಞಾನಿಕ ಸಾಧನೆಗಳ ವಿವರಣೆಗೆ ಮಾತ್ರ ಸೀಮಿತವಾಗದೆ ವಿಜ್ಞಾನಿಗಳ ಬದುಕಿನ ವಿವರಗಳನ್ನೂ ಸರಳವಾಗಿ, ಸೊಗಸಾಗಿ ಕಟ್ಟಿಕೊಟ್ಟದ್ದು ಅವರ ಬರಹದ ಹೆಗ್ಗಳಿಕೆ. ಸ್ವತಃ ವಿಜ್ಞಾನ ಕ್ಷೇತ್ರದವರಲ್ಲದ ಲೇಖಕರು ಕೂಡ ಜನಪ್ರಿಯ ವಿಜ್ಞಾನ ಬರವಣಿಗೆಯಲ್ಲಿ ಹೇಗೆ ತಮ್ಮದೇ ಆದ ಛಾಪು ಮೂಡಿಸಬಲ್ಲರು ಎನ್ನುವುದಕ್ಕೆ ವೆಂಕಟಸುಬ್ಬಯ್ಯನವರ ಈ ಅಂಕಣ ಅತ್ಯುತ್ತಮ ಉದಾಹರಣೆ.

'ವಿಜ್ಞಾನಯುಗ' ಪತ್ರಿಕೆಯಲ್ಲಿ ವೆಂಕಟಸುಬ್ಬಯ್ಯನವರು ಬರೆಯುತ್ತಿದ್ದ ಅಂಕಣ
'ವಿಜ್ಞಾನಯುಗ' ಪತ್ರಿಕೆಯಲ್ಲಿ ವೆಂಕಟಸುಬ್ಬಯ್ಯನವರು ಬರೆಯುತ್ತಿದ್ದ ಅಂಕಣಶ್ರೀ ಜಿ. ವಿ. ಅರುಣ ಅವರ ಸಂಗ್ರಹದಿಂದ

ಸುಬ್ಬರಾಯಪ್ಪನವರಿಗೆ ಬೆಂಬಲವಾಗಿ ನಿಂತಿದ್ದು, ಸ್ವತಃ ವಿಜ್ಞಾನ ಸಂವಹನದಲ್ಲಿ ತೊಡಗಿಕೊಂಡಿದ್ದು ಮಾತ್ರವೇ ಅಲ್ಲ. ಕನ್ನಡದಲ್ಲಿ ಹೊಸ ವಿಜ್ಞಾನ ಸಂವಹನಕಾರರನ್ನು ರೂಪಿಸುವ ಕೆಲಸವನ್ನೂ ವೆಂಕಟಸುಬ್ಬಯ್ಯನವರು ಮಾಡಿದ್ದರು. ಅರವತ್ತರ ದಶಕದಲ್ಲಿ ಅವರು ಕನ್ನಡದಲ್ಲಿ ವಿಜ್ಞಾನ ಬರೆಯುವುದು ಹೇಗೆ ಎನ್ನುವ ಬಗ್ಗೆ ಆಸಕ್ತರಿಗಾಗಿ ತರಬೇತಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು ಎಂದು ಅವರ ಪುತ್ರ ಶ್ರೀ ಜಿ. ವಿ. ಅರುಣ ನೆನಪಿಸಿಕೊಳ್ಳುತ್ತಾರೆ. ವಿಜ್ಞಾನ ಸಂವಹನಕ್ಕೆ ವೆಂಕಟಸುಬ್ಬಯ್ಯನವರು ನೀಡಿದ ಕೊಡುಗೆಗಳಿಗಾಗಿ ಕನ್ನಡ ವಿಜ್ಞಾನ ಪರಿಷತ್ತು ತನ್ನ ರಜತ ಮಹೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು.

ನಿಘಂಟುತಜ್ಞರಾಗಿದ್ದ ವೆಂಕಟಸುಬ್ಬಯ್ಯನವರಿಗೆ ವಿಜ್ಞಾನ-ತಂತ್ರಜ್ಞಾನದ ಪಾರಿಭಾಷಿಕ ಪದಗಳು ಹೇಗಿರಬೇಕು ಎನ್ನುವುದರ ಬಗೆಗೂ ಸ್ಪಷ್ಟ ಕಲ್ಪನೆ ಇತ್ತು. ಈ ಕುರಿತು ಅವರು ತಮ್ಮ 'ಶಬ್ದ ಮತ್ತು ಅರ್ಥ' ಕೃತಿಯಲ್ಲಿ "ವಿಜ್ಞಾನಿಗೆ ಮತ್ತು ವೇದಾಂತಿಗೆ ನಿರ್ದುಷ್ಟವಾದ ಮತ್ತು ನಿಸ್ಸಂದಿಗ್ಧವಾದ ಶಬ್ದಗಳೇ ಬೇಕು. ಕವಿಗೆ ಮತ್ತು ಲೇಖಕನಿಗೆ ತಾನು ನೇಯುವ ಕಲ್ಪನೆಗೆ ಇರುವ ಶಬ್ದಗಳ ಸಂದಿಗ್ಧತೆಯೇ ಅಗತ್ಯವಾದ ಸಾಧನವಾಗುತ್ತದೆ" ಎಂದು ಹೇಳಿದ್ದರು. ಅವರು ಪ್ರಜಾವಾಣಿ ಪತ್ರಿಕೆಗಾಗಿ ಬರೆದ 'ಇಗೋ ಕನ್ನಡ' ಅಂಕಣದಲ್ಲೂ ವಿಜ್ಞಾನದ ವಿಷಯಗಳು ಬಹಳಷ್ಟು ಬಾರಿ ಪ್ರಸ್ತಾಪವಾಗಿದ್ದವು. ಕನ್ನಡದ ವಿಜ್ಞಾನ ಪಾರಿಭಾಷಿಕ ಪದಗಳ ಬಗ್ಗೆ ಅವರ ವಿವರಣೆ ಹಾಗೂ ಅವುಗಳನ್ನು ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಗಳು ನಿಜಕ್ಕೂ ಗಮನಾರ್ಹವಾಗಿವೆ. ವ್ಯಾಕರಣದ ರೀತಿಯಲ್ಲಿ 'ಅರಿವಳಿಕೆ' ಎನ್ನುವ ಶಬ್ದ ತಪ್ಪು ಎಂದು ವಿವರಿಸುವಾಗ ಅವರು ಹೇಳಿರುವ ಮಾತುಗಳು ಇವು: "ಎಲ್ಲ ಭಾಷೆಗಳಲ್ಲಿಯೂ ಎಲ್ಲ ಭಾವನೆಗಳಿಗೂ ವಸ್ತುಸ್ಥಿತಿಗಳಿಗೂ ಸರಿಯಾದ ಶಬ್ದವಿರುವುದಿಲ್ಲ. ಜ್ಞಾನಪ್ರಸಾರದ ಕ್ರಮವನ್ನು ಒಂದು ಭಾಷೆಯ ವಿದ್ವಾಂಸರು ಕೈಗೊಂಡಾಗ ಭಾಷೆಯ ಬೆಳವಣಿಗೆಗಾಗಿ ಹೊಸ ಶಬ್ದಗಳನ್ನು ನಿರ್ಮಾಣ ಮಾಡುತ್ತಾರೆ. ಆ ಶಬ್ದವು ತಪ್ಪಾಗಿದ್ದರೂ ಅವು ಅದೇ ಅರ್ಥದಲ್ಲಿ ಉಳಿದುಬಿಡುತ್ತವೆ. ಸೂಕ್ತವಾದ ಮತ್ತೊಂದು ಶಬ್ದ ದೊರೆತಾಗ ಅವು ನಿರುಪಯುಕ್ತವಾಗುತ್ತವೆ."

ಕಂಪ್ಯೂಟರ್, ಹಾರ್ಡ್‌ವೇರ್, ಸಾಫ್ಟ್‌ವೇರ್ ಮುಂತಾದವುಗಳಿಗೆ ಕನ್ನಡದ ಪದಗಳನ್ನು ರೂಪಿಸುವ ಬಗ್ಗೆ ಕೆಲ ದಶಕಗಳ ಹಿಂದೆ ಚರ್ಚೆ ನಡೆದಿತ್ತು. ಈ ಪದಗಳ ಬಗ್ಗೆ 'ಇಗೋ ಕನ್ನಡ'ದಲ್ಲಿ ಪ್ರಸ್ತಾಪಿಸಿದ್ದ ವೆಂಕಟಸುಬ್ಬಯ್ಯನವರು "ಈಗತಾನೇ ಪ್ರಚಾರವಾಗುತ್ತಿರುವ ಈ ಇಂಗ್ಲಿಷ್ ಶಬ್ದಗಳನ್ನು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬದಲಾಯಿಸಿ ಅವುಗಳನ್ನೇ ಉಪಯೋಗಿಸುವುದು ತುಂಬ ಉತ್ತಮವಾದ ಮಾರ್ಗ. ಕಂಪ್ಯೂಟರು, ಸಾಫ್ಟ್‌ವೇರು, ಹಾರ್ಡ್‌ವೇರು." ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು. ತಾವು ಕಂಪ್ಯೂಟರ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಿದ್ದ ಅವರಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ, ಭಾಷೆಗೆ ಸಂಬಂಧಿಸಿದಂತೆ ಅನಾವರಣಗೊಳ್ಳುತ್ತಿರುವ ಹೊಸ ಸಾಧ್ಯತೆಗಳ ಬಗ್ಗೆ ಕೊನೆಯವರೆಗೂ ಅಪಾರ ಕುತೂಹಲ ಇತ್ತು. ಇಜ್ಞಾನ ಟ್ರಸ್ಟ್ ಸಿದ್ಧಪಡಿಸಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ೨೦೧೭ರಲ್ಲಿ ಪ್ರಕಟವಾದ 'ಕಂಪ್ಯೂಟರ್ - ತಂತ್ರಜ್ಞಾನ ಪದವಿವರಣ ಕೋಶ'ವನ್ನು ಪೂರ್ತಿಯಾಗಿ ಗಮನಿಸಿದ್ದ ವೆಂಕಟಸುಬ್ಬಯ್ಯನವರು, ಬಹು ಅಗತ್ಯವಾಗಿ ಪ್ರಕಟವಾಗಬೇಕಾಗಿದ್ದ ನಿಘಂಟುಕೋಶವೆಂದು ಅದನ್ನು ಮೆಚ್ಚಿಕೊಂಡಿದ್ದರು.

ಭಾಷಾ ಪರಿಣತರಾದ ವೆಂಕಟಸುಬ್ಬಯ್ಯನವರು ವಿಜ್ಞಾನದ ಬಗೆಗೂ ಆಸಕ್ತಿ ಬೆಳೆಸಿಕೊಂಡು ಆ ಕ್ಷೇತ್ರದಲ್ಲೂ ವಿಶಿಷ್ಟ ಸಾಧನೆಗಳನ್ನು ಮಾಡಿದ್ದು, ಅಗತ್ಯವೆಂದು ತೋರಿದಾಗ ಪ್ರಕಾಶನದಂತಹ ಜವಾಬ್ದಾರಿಗಳನ್ನೂ ಹೊತ್ತುಕೊಂಡಿದ್ದು ಅವರ ಬಹುಮುಖ ಪ್ರತಿಭೆ ಹಾಗೂ ಬದ್ಧತೆಯ ಒಂದು ಉದಾಹರಣೆ ಮಾತ್ರ. ಹಲವು ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವ, ನಮ್ಮ ಸುತ್ತಲಿನ ಆಗುಹೋಗುಗಳ ಬಗ್ಗೆ ಕುತೂಹಲ ಉಳಿಸಿಕೊಳ್ಳುವ ವಿಷಯಗಳಲ್ಲಿ ಅವರು ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ.

ಡಿಸೆಂಬರ್ ೨೦೨೧ರ 'ಕುತೂಹಲಿ'ಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com