ಈ ಪ್ರಯೋಗದಲ್ಲಿ ಹಸಿರು ಬಣ್ಣ ಕಂಡರೆ, ಚಾಲಕರು ವಾಹನ ನಿಲ್ಲಿಸಬೇಕಾಗುತ್ತಿತ್ತು!
ಈ ಪ್ರಯೋಗದಲ್ಲಿ ಹಸಿರು ಬಣ್ಣ ಕಂಡರೆ, ಚಾಲಕರು ವಾಹನ ನಿಲ್ಲಿಸಬೇಕಾಗುತ್ತಿತ್ತು!Image by Walter Knerr from Pixabay

ಹಸಿರು ಬಣ್ಣ ಕಂಡರೆ ವಾಹನ ನಿಲ್ಲಿಸಬೇಕೆ?

ಹಸಿರು ಬಣ್ಣ ಕಂಡಾಗ ಚಾಲಕರಿಗೆ ಕೆಂಪು ಸಿಗ್ನಲ್ ತೋರಿಸುತ್ತಿದ್ದ ಕತೆ, ನಿಮಗೆ ಗೊತ್ತೇ?

‘ಹಸಿರು ಬಣ್ಣದ ಸಂಕೇತ ಕಂಡಾಗ, ವಾಹನಗಳು ಹೊರಡುವುದು ಸಾಮಾನ್ಯ. ಆದರೆ ಹಸಿರು ಬಣ್ಣ ಕಂಡಾಗ ವಾಹನಗಳನ್ನು ನಿಲ್ಲಿಸುವುದು ಯಾವ ದೇಶದಲ್ಲಿ?’ ಎಂದು ತಲೆ ಕೆಡಿಸಿಕೊಳ್ಳಬೇಡಿ. ನಾನು ಹೇಳುತ್ತಿರುವ ವಿಷಯ, ಹಸಿರು ಬಣ್ಣದ ಸಂಚಾರಿ ಸೂಚನೆಯ ಬಗ್ಗೆ ಖಂಡಿತ ಅಲ್ಲ. ಬದಲಾಗಿ, ವಾಹನ ಚಾಲಕ ಮದ್ಯ (Alcohol) ಸೇವನೆ ಮಾಡಿ ವಾಹನ ಚಲಾವಣೆ ಮಾಡುತ್ತಿದ್ದರೆ, ಅದನ್ನು ಪರೀಕ್ಷಿಸಲು ಮಾಡುವ ಪ್ರಯೋಗದ ಬಗ್ಗೆ. ಹೌದು, ಕೆಲ ವರ್ಷಗಳ ಹಿಂದೆ, ವಾಹನ ಚಾಲಕನಿಂದ ಪ್ರಯೋಗ ಕೊಳವೆಗೆ ಗಾಳಿ ಊದಿಸಿದಾಗ, ಅಲ್ಲಿರುವ ರಾಸಾಯನಿಕವು ಹಸಿರು ಬಣ್ಣಕ್ಕೆ ತಿರುಗಿದರೆ, ಮದ್ಯ ಸೇವನೆ ಮಾಡಿದ್ದಾನೆ ಎಂದು ನಿರ್ಧರಿಸುತ್ತಿದ್ದರು. ಹೀಗಾಗಿ ಹಸಿರು ಬಣ್ಣ ಕಂಡರೆ, ಚಾಲಕ ವಾಹನ ನಿಲ್ಲಿಸಬೇಕಾಗಿತ್ತು.

ಮದ್ಯಪಾನೀಯಗಳಲ್ಲಿ ಮುಖ್ಯವಾಗಿರುವ ಮದ್ಯ ಘಟಕ ಎಥೆನಾಲ್. ಮನುಷ್ಯನ ದೇಹ ಸೇರಿದ ಎಥೆನಾಲ್, ಸಣ್ಣ ಕರುಳಿನಲ್ಲಿ ಹೀರಲ್ಪಟ್ಟು ರಕ್ತ ಸೇರುತ್ತದೆ. ಹೀಗೆ ರಕ್ತ ಸೇರಿದ ಎಥೆನಾಲ್ ಒಮ್ಮೆಗೇ ರಾಸಾಯನಿಕವಾಗಿ ಬದಲಾಗುವುದಿಲ್ಲ. ತನ್ನ ಮೂಲ ರೂಪದಲ್ಲೇ ಅದು ರಕ್ತದಲ್ಲಿ ಕೆಲ ಗಂಟೆಗಳ ಕಾಲ ಉಳಿಯಬಲ್ಲದು. ರಕ್ತ ಸೇರಿದ ಮೇಲೆ, ಹೃದಯದ ಮೂಲಕ ಅದು ಶ್ವಾಸಕೊಶಗಳನ್ನೂ ಸೇರುತ್ತದೆ. ಉಸಿರಾಟ ಪ್ರಕ್ರಿಯೆಯಲ್ಲಿ, ಒಂದಿಷ್ಟು ಎಥೆನಾಲ್ ಉಸಿರಿನ ಮೂಲಕ ಹೊರಗೂ ಬರುತ್ತದೆ. ಮದ್ಯ ಸೇವನೆಯಾದ 15-20 ನಿಮಿಷಗಳಲ್ಲಿಯೇ, ಉಸಿರಿನಲ್ಲಿ ಎಥೆನಾಲ್ ನ ಅಂಶವನ್ನು ಕಾಣಬಹುದು. ಅತಿಯಾಗಿ ಮದ್ಯ ಸೇವಿಸಿದವರಲ್ಲಿ, ಚರ್ಮದ ರಂಧ್ರಗಳ ಮೂಲಕವೂ ಎಥೆನಾಲ್ ಆವಿಯಗುತ್ತದೆ. ಮದ್ಯವ್ಯಸನಿಗಳ ಸಮೀಪದಲ್ಲಿ ಬರುವ ಘಾಟು ವಾಸನೆಗೆ, ಹೀಗೆ ಉಸಿರಾಟ ಮತ್ತು ಚರ್ಮದ ಮೂಲಕ ಆವಿಯಾಗುವ ಎಥೆನಾಲ್ ನ ಅಂಶವೇ ಕಾರಣ.

ಉಸಿರನ್ನು ಪರಿಶೀಲಿಸುವ ಎಲ್ಲ ರೀತಿಯ ಯಂತ್ರಗಳೂ ಈ ರೀತಿ ಉಸಿರಾಟದ ಮೂಲಕ ಹೊರಬರುವ ಎಥೆನಾಲ್ ಮಟ್ಟವನ್ನು ಪರೀಕ್ಷಿಸಿ, ಚಾಲಕ ಮದ್ಯ ಸೇವನೆ ಮಾಡಿದ್ದನೋ ಇಲ್ಲವೋ ಎಂದು ಪತ್ತೆಮಾಡುತ್ತವೆ. ಹೀಗೆ ಚಾಲಕರ ಉಸಿರಾಟದಿಂದ ಹೊರಬರಬಹುದಾದ ಎಥೆನಾಲ್ ಮಟ್ಟಕ್ಕೆ ಮಿತಿ ಇರುತ್ತದೆ. ಮಿತಿಮೀರಿದರೆ, ಅದನ್ನು 'ಕುಡಿದು ವಾಹನ ಚಲಾಯಿಸಿದ್ದು' (Drunken Drive) ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಭಾರತದಲ್ಲಿ ಈ ಮಿತಿ ಉಳಿದ ದೇಶಗಳಿಗೆ ಹೋಲಿಸಿದರೆ, ಕಡಿಮೆಯೇ ಇದೆ. ಅಂದರೆ ನಮ್ಮ ದೇಶದಲ್ಲಿ ಸ್ವಲ್ಪವೇ ಮದ್ಯ ಸೇವಿಸಿ ವಾಹನ ಚಲಾಯಿಸುವುದು ಕೂಡ ಅಪರಾಧ!

ನಿಶ್ವಾಸದ ಗಾಳಿಯಲ್ಲಿ ಎಥೆನಾಲ್ ಮಟ್ಟವನ್ನು ಪರೀಕ್ಷಿಸಲು, ಹಿಂದೆ ಸರಳ ರಾಸಾಯನಿಕ ಪ್ರಕ್ರಿಯೆಯನ್ನು ಬಳಸಿಕೊಳ್ಳುತ್ತಿದ್ದರು. ಒಂದು ಗಾಜಿನ ಕೊಳವೆಯ ಮೂಲಕ, ನಿರ್ದಿಷ್ಟ ಪ್ರಮಾಣದ ನಿಶ್ವಾಸದ ಗಾಳಿಯನ್ನು, ನಿರ್ದಿಷ್ಟ ಪ್ರಮಾಣದ ಆಮ್ಲೀಯ ಸೋಡಿಯಂ ಡೈಕ್ರೋಮೇಟ್ ರಾಸಾಯನಿಕಕ್ಕೆ ಹಾಯಿಸುತ್ತಿದ್ದರು. ಈ ರಾಸಾಯನಿಕ, ಎಥೆನಾಲ್ ಅನ್ನು ಉತ್ಕರ್ಷಿಸಿ (Oxidise) ತಾನು ಅಪಕರ್ಷಣೆಯಾಗುವ (Reduce) ಗುಣವನ್ನು ಹೊಂದಿದೆ. ಹೀಗಾಗಿ, ಎಥೆನಾಲ್ ಸಂಪರ್ಕಕ್ಕೆ ಬರುವ ಮೊದಲು, ಕೇಸರಿ-ಹಳದಿ ಬಣ್ಣ ಹೊಂದಿರುವ ರಾಸಾಯನಿಕ, ಎಥೆನಾಲ್ ಜೊತೆ ಪ್ರಕ್ರಿಯೆ ಹೊಂದಿದ ನಂತರ ಹಸಿರು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಬಣ್ಣದಲ್ಲಾಗುವ ಬದಲಾವಣೆಗೆ ಮುಖ್ಯ ಕಾರಣ, ರಾಸಾಯನಿಕದಲ್ಲಿರುವ ಕ್ರೋಮಿಯಂ ಅಯಾನಿನ ಉತ್ಕರ್ಷಣ ಸ್ಥಿತಿಯಲ್ಲಿನ (Oxidation State) ಬದಲಾವಣೆ. ಎಥೆನಾಲ್ ಸಂಪರ್ಕಕ್ಕೆ ಬರುವ ಮೊದಲು, ಆರನೇ ಉತ್ಕರ್ಷಣ ಸ್ಥಿತಿಯಲ್ಲಿರುವ ಕ್ರೋಮಿಯಂ ಅಯಾನು, ಕೇಸರಿ-ಹಳದಿ ಬಣ್ಣಕ್ಕೆ ಕಾರಣವಾಗಿರುತ್ತದೆ. ಆದರೆ ಎಥೆನಾಲ್ ನ ಜೊತೆ ವರ್ತಿಸುವುದರ ಮೂಲಕ, ಮೂರನೇ ಉತ್ಕರ್ಷಣ ಸ್ಥಿತಿಗೆ ಬರುವ ಕ್ರೋಮಿಯಂ ಅಯಾನು, ಹಸಿರು ಬಣ್ಣಕ್ಕೆ ತಿರುಗುತ್ತದೆ.

ಹೀಗಾಗಿ, ಹಿಂದೆ ವಾಹನ ಚಾಲಕರ ಮೇಲೆ ಈ ಪ್ರಯೋಗ ಕೈಗೊಂಡಾಗ, ಎಷ್ಟು ಹೆಚ್ಚು ಹಸಿರು ಬಣ್ಣವೋ, ಉಸಿರಿನಲ್ಲಿ ಅಷ್ಟು ಹೆಚ್ಚು ಎಥೆನಾಲ್ ಇದೆಯೆಂದು ಸಿದ್ಧವಾಗುತ್ತಿತ್ತು. ಅಲ್ಲಿಗೆ ವಾಹನ ಚಾಲಕರು ಮದ್ಯ ಸೇವಿಸಿರುವುದು ಸಾಬೀತಾಗುತ್ತಿತ್ತಾದದರಿಂದ, ಪ್ರಯೋಗದಲ್ಲಿ ಹಸಿರು ಬಣ್ಣ ಕಂಡರೆ, ಚಾಲಕರು ವಾಹನ ನಿಲ್ಲಿಸಬೇಕಾಗುತ್ತಿತ್ತು!

ಉಸಿರಾಟದ ಮೂಲಕ ಹೊರಬರುವ ಎಥೆನಾಲ್ ನ ಮಟ್ಟವನ್ನು ಪರೀಕ್ಷಿಸಲು ಈಗ ಆಧುನಿಕ ಇಲೆಕ್ಟ್ರಾನಿಕ್ ಉಪಕರಣಗಳಿವೆ. ಬೇರೆ ಬೇರೆ ತತ್ವಗಳ ಆಧಾರದ ಮೇಲೆ ಕೆಲಸ ಮಾಡುವ ಆಧುನಿಕ ಉಪಕರಣಗಳು, ನೇರವಾಗಿ ರಕ್ತದಲ್ಲಿನ ಎಥೆನಾಲ್ ಮಟ್ಟವನ್ನು ತಿಳಿಸಬಲ್ಲವು. ನಮ್ಮ ಪೊಲೀಸರು ಬಳಸುವ ಉಪಕರಣಗಳು ಇಂತಹವೇ.

Related Stories

No stories found.
logo
ಇಜ್ಞಾನ Ejnana
www.ejnana.com